ವಿದ್ಯುತ್‌ ಪೂರೈಕೆ ವ್ಯತ್ಯಯ ಹರಿಹಾಯ್ದ ಸಚಿವ ಡಿಕೆಶಿ

7

ವಿದ್ಯುತ್‌ ಪೂರೈಕೆ ವ್ಯತ್ಯಯ ಹರಿಹಾಯ್ದ ಸಚಿವ ಡಿಕೆಶಿ

Published:
Updated:
ವಿದ್ಯುತ್‌ ಪೂರೈಕೆ ವ್ಯತ್ಯಯ ಹರಿಹಾಯ್ದ ಸಚಿವ ಡಿಕೆಶಿ

ಬೆಂಗಳೂರು: ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾದಾಗ ತಕ್ಷಣವೇ ಪರಿಹಾರ ಒದಗಿಸದೇ, ಉದಾಸೀನ ತೋರಿದ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಬೆಸ್ಕಾಂ) ಅಧಿಕಾರಿಗಳನ್ನು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಕಳೆದ 15 ದಿನಗಳಿಂದೀಚೆಗೆ ಬೆಂಗಳೂರು ನಗರ ಮತ್ತು ಆಸುಪಾಸಿನ ಜಿಲ್ಲೆಗಳಲ್ಲಿ  ಅನೇಕ ಗಂಟೆಗಳ ಕಾಲ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತ್ತು. ಗ್ರಾಹಕರು ಕರೆಯನ್ನು ಬೆಸ್ಕಾಂ ಸಿಬ್ಬಂದಿ ಸ್ವೀಕರಿಸದೇ ನಿರ್ಲಕ್ಷ್ಯ ತೋರಿದ್ದರು.

ಶುಕ್ರವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ಸಭೆ ನಡೆಸಿದ ಶಿವಕುಮಾರ್‌, ‘ಮುಂಗಾರು ಮಳೆ ಆರಂಭವಾಗುತ್ತದೆ. ಮರಗಳು ಬಿದ್ದು ವಿದ್ಯುತ್‌ ಪೂರೈಕೆ ನಿಂತು ಹೋಗುತ್ತದೆ ಎಂಬ ಕನಿಷ್ಠ ತಿಳಿವಳಿಕೆ ಇರಲಿಲ್ಲವೇ. ನೀವು ಕೆಲಸ ಮಾಡಲಿಕ್ಕೆ ಇಲಾಖೆಯಲ್ಲಿ ಇದ್ದೀರಾ ಅಥವಾ ನನ್ನ ಮರ್ಯಾದೆ ಹರಾಜು ಹಾಕುವುದಕ್ಕೆ ಇಲಾಖೆಯಲ್ಲಿ ಇದ್ದೀರಾ’ ಎಂದು ಏರಿದ ಧ್ವನಿಯಲ್ಲಿ ರೇಗಿದರು.

‘ಗ್ರಾಹಕರು ದೂರು ಸಲ್ಲಿಸಿದ ಆರು ಗಂಟೆಯೊಳಗೆ ಸಮಸ್ಯೆ ಪರಿಹಾರವಾಗಬೇಕು. ದೂರನ್ನೇ ಸ್ವೀಕರಿಸುತ್ತಿಲ್ಲ ಎಂಬ ಗಂಭೀರ ಆಪಾದನೆ ಇದೆ. ಯಾರ್ಯಾರು ಎಷ್ಟೆಷ್ಟು ದೂರು ಸ್ವೀಕರಿಸಿದ್ದೀರಿ ಎಂಬ ಮಾಹಿತಿ ಕೊಡಿ. ಕರೆ ಸ್ವೀಕರಿಸುತ್ತೀರೊ, ಇಲ್ಲವೋ ಎಂಬುದನ್ನು ಪರಿಶೀಲಿಸಲು ನಾನೇ ಕರೆಮಾಡುತ್ತೇನೆ. ಯಾವ ಅಧಿಕಾರಿ, ಸಿಬ್ಬಂದಿ ಕರೆ ಸ್ವೀಕರಿಸುವುದಿಲ್ಲವೋ ಅಂತಹವರನ್ನು ಕೂಡಲೇ ಅಮಾನತು ಮಾಡುತ್ತೇನೆ’ ಎಂದು ಗದರಿದರು.

‘ಗೌರವ ಹೋಯ್ತು’: ಕಾಂಗ್ರೆಸ್‌ ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್‌,  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಕಚೇರಿಯಲ್ಲಿ ಇತ್ತೀಚೆಗೆ ಮಾಧ್ಯಮ ಗೋಷ್ಠಿ ನಡೆಸಿದ ವೇಳೆ ವಿದ್ಯುತ್‌ ಕೈಕೊಟ್ಟು ಆಭಾಸವಾಗಿತ್ತು. ಇದರಿಂದ ಪಕ್ಷದ ನಾಯಕರು ಮುಜುಗರ ಅನುಭವಿಸಿದ್ದರು.

ಇದನ್ನು ನೆನಪಿಸಿಕೊಂಡ  ಶಿವಕುಮಾರ್‌, ‘ನಿಮ್ಮಂತಹ ಅಧಿಕಾರಿಗಳನ್ನು ಕಟ್ಟಿಕೊಂಡಿದ್ದಕ್ಕೆ ಪಕ್ಷದಲ್ಲಿ ನನ್ನ ಗೌರವವೇ ಹಾಳಾಗಿ ಹೋಯ್ತು. ಇದೇ ಕೊನೆ ಎಚ್ಚರಿಕೆ. ಇಂತಹಘಟನೆ ಮರುಕಳಿಸಿದರೆ ಶಿಸ್ತುಕ್ರಮ ಖಚಿತ’ ಎಂದೂ ಎಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry