ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ: ಈ ವರ್ಷದ ಪರೀಕ್ಷೆಗೂ ಹಿಂದಿನ ವರ್ಷದ್ದೇ ಪ್ರಶ್ನೆಪತ್ರಿಕೆ

Last Updated 2 ಜೂನ್ 2017, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಇತ್ತೀಚೆಗೆ ನಡೆಸಿದ ತಾಂತ್ರಿಕ ಪರಿಸರ ಎಂಜಿನಿಯರ್‌ ಹುದ್ದೆಯ ಪರೀಕ್ಷೆಗೆ ಕಳೆದ ವರ್ಷ ನೀಡಿದ್ದ ಪ್ರಶ್ನೆಪತ್ರಿಕೆಯನ್ನೇ ನೀಡಿದೆ.

ಪ್ರಶ್ನೆಗಳ ಸಂಖ್ಯೆ ಹಾಗೂ ಪುಟ ಸಂಖ್ಯೆ ಬದಲಾಯಿಸಿ ಈ ಬಾರಿಯೂ ಹಳೆಯ ಪ್ರಶ್ನೆ ಪತ್ರಿಕೆಯನ್ನೇ ನೀಡಲಾಗಿದೆ. ಎಲ್ಲಾ 100 ಪ್ರಶ್ನೆಗಳು ಪುನರಾವರ್ತನೆಯಾಗಿರುವುದು ಅಭ್ಯರ್ಥಿಗಳಲ್ಲಿ ಅಚ್ಚರಿ ಮೂಡಿಸಿದೆ.

ಒಟ್ಟು 200 ಅಂಕಗಳ ಪರೀಕ್ಷೆ ಇದಾಗಿದ್ದು, ಪ್ರತಿ ಪ್ರಶ್ನೆಗೂ ನಾಲ್ಕು ಉತ್ತರಗಳಿರುತ್ತವೆ. ಪ್ರಶ್ನೆ ಹಾಗೂ ಉತ್ತರಗಳಲ್ಲಿ ಒಂದಕ್ಷರವನ್ನೂ ಬದಲಾವಣೆ ಮಾಡಿಲ್ಲ. ನಗರಾಭಿವೃದ್ಧಿ ಇಲಾಖೆಯ ಸ್ಥಳೀಯ ಸಂಸ್ಥೆಗಳಲ್ಲಿ (ಪುರಸಭೆ, ನಗರಸಭೆ) ಖಾಲಿ ಇರುವ 35, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿರುವ 15 ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿದ್ದ 10 ಪರಿಸರ ಎಂಜಿನಿಯರ್‌ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು.

‘2016ರ ಜನವರಿಯಲ್ಲಿ ನಡೆದ ಪರೀಕ್ಷೆಯಲ್ಲಿ ನೀಡಲಾಗಿದ್ದ ಪ್ರಶ್ನೆ ಪತ್ರಿಕೆಯನ್ನೇ ಈ ವರ್ಷ ಮೇ 26ರಂದು ನಡೆದ ಪರೀಕ್ಷೆಗೂ ನೀಡಲಾಗಿದೆ. ಈ ಬಗ್ಗೆ ಆಯೋಗದ ಕಚೇರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದೇನೆ. ಅಂಚೆ ಮೂಲಕ ಆಕ್ಷೇಪಣೆಯನ್ನು ಸಲ್ಲಿಸಿದ್ದೇನೆ. ಬೆಂಗಳೂರಿಗೆ ಬಂದು ಖುದ್ದಾಗಿ ದೂರು ನೀಡುವಂತೆ ಆಯೋಗದ ಅಧಿಕಾರಿಗಳು ತಿಳಿಸಿದ್ದು, ಶೀಘ್ರದಲ್ಲಿ ಖುದ್ದಾಗಿಯೂ ದೂರು ಸಲ್ಲಿಸಲಿದ್ದೇನೆ’ ಎಂದು ಹೆಸರು ಹೇಳಲು ಬಯಸದ ಅಭ್ಯರ್ಥಿ ಹೇಳಿದರು.

**

ಮರು ಪರೀಕ್ಷೆ

‘ತಾಂತ್ರಿಕ ಪರಿಸರ ಎಂಜಿನಿಯರ್‌ ಹುದ್ದೆಯ ಪರೀಕ್ಷೆಗೆ ಕಳೆದ ವರ್ಷ ನೀಡಿದ್ದ ಪ್ರಶ್ನೆಪತ್ರಿಕೆ ಪುನರಾವರ್ತನೆ ಆಗಿರುವುದು ನಿಜ. ಪ್ರಶ್ನೆಪತ್ರಿಕೆ ತಯಾರಿಸುವ ಸಂದರ್ಭದಲ್ಲಿ ಈ ಲೋಪ ಸಂಭವಿಸಿದೆ’ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಪ್ರಸನ್ನಕುಮಾರ್‌ ತಿಳಿಸಿದರು.

‘ಹಲವು ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಗಳನ್ನು ಆಯೋಗ ನಡೆಸುತ್ತಿದೆ. ಈ ಎಲ್ಲ ಪರೀಕ್ಷೆಗಳಿಗೆ ಪ್ರಶ್ನೆಪತ್ರಿಕೆ ತಯಾರಿಸುವ ಸಂದರ್ಭದಲ್ಲಿ ಪರೀಕ್ಷಾ ಕಂಟೋಲರ್‌ ಮತ್ತು ಮುದ್ರಣದ ಸಂದರ್ಭದಲ್ಲಿ ಉಂಟಾಗಿರುವ ಸಂವಹನ ಕೊರತೆಯಿಂದ ಈ ಅಚಾತುರ್ಯ ಆಗಿದೆ. ಈ ವಿಷಯವನ್ನು ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲಾಗುವುದು’ ಎಂದರು.

‘ಸುಮಾರು 600 ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದಾರೆ. ಅವರಿಗೆಲ್ಲ ಮರುಪರೀಕ್ಷೆ ನಡೆಸಲಾಗುವುದು. ಶೀಘ್ರದಲ್ಲೆ ಪರೀಕ್ಷೆ ದಿನಾಂಕ ತಿಳಿಸಲಾಗುವುದು’ ಎಂದೂ ಅವರು ತಿಳಿಸಿದರು.

**

‌ನಿರಂತರ ನೇಮಕಾತಿ ಪರೀಕ್ಷೆಗಳಿದ್ದುದರಿಂದ ಪ್ರಶ್ನೆಪತ್ರಿಕೆ ತಯಾರಿಸುವ ಒತ್ತಡದಲ್ಲಿ ಈ ಅಚಾತುರ್ಯ ಉಂಟಾಗಿದೆ. ಇದಕ್ಕೆ ವಿಷಾದಿಸುತ್ತೇನೆ.

–ಪ್ರಸನ್ನ ಕುಮಾರ್‌
ಕೆಪಿಎಸ್‌ಸಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT