ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ತನಿಖೆ ತಪ್ಪಿಸಲು ಬಾಲ್ಯವಿವಾಹ

ಅಮೆರಿಕವನ್ನೂ ಕಾಡುತ್ತಿರುವ ‘ಬಾಲ್ಯ ವಿವಾಹ’; ಅನಿಷ್ಟ ಪದ್ಧತಿ ನಿಷೇಧಕ್ಕೆ ಭಾರೀ ಅಭಿಯಾನ
ಅಕ್ಷರ ಗಾತ್ರ

ಶೆರಿ ಜಾನ್ಸನ್ ಎಂಬ 11 ವರ್ಷದ ಬಾಲಕಿಗೆ ಒಂದು ದಿನ ಇನ್ನೇನು ತನ್ನ ಮದುವೆಯಾಗಲಿದೆ ಎಂಬುದು ತಿಳಿಯಿತು. ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ 20 ವರ್ಷದ ಯುವಕ ವರ.

‘ಬಲವಂತದಿಂದ ಮದುವೆ ಮಾಡಲಾಯಿತು’ ಎಂಬುದನ್ನು ಶೆರಿ ನೆನಪಿಸಿಕೊಳ್ಳುತ್ತಾರೆ. ಆಕೆ ಆಗ ಗರ್ಭಿಣಿಯಾಗಿದ್ದಳು. ಮಕ್ಕಳ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು. ಆದರೆ, ಗೋಜಲುಗಳಿಂದ ಕೂಡಿದ ಅಪರಾಧ ಪ್ರಕರಣದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಆಕೆಯ ಮನೆಯವರು ಮತ್ತು ಇಗರ್ಜಿಯವರು ಸೇರಿ ಮದುವೆಯ ಸರಳ ಪರಿಹಾರ ಕಂಡುಕೊಂಡಿದ್ದರು.

‘ಮದುವೆಯಾಗಲು ಇಷ್ಟ ಇದೆಯೇ’ ಎಂದು  ಅಮ್ಮ ಕೇಳಿದ್ದಳು. ‘ನನಗೆ ಗೊತ್ತಿಲ್ಲ, ಮದುವೆ ಎಂದರೆ ಏನು? ಹೆಂಡತಿಯಂತೆ ನಾನು ವರ್ತಿಸುವುದು ಹೇಗೆ’ ಎಂದು ಅಮ್ಮನನ್ನು ಕೇಳಿದ್ದೆ. ‘ಹೌದು, ಇನ್ನೇನು ನೀನು ಮದುವೆಯಾಗಲಿದ್ದೀಯಾ ಎಂದು ಅಮ್ಮ ಆಗ ಹೇಳಿದ್ದಳು’ ಎಂದು ಆ ದಿನಗಳನ್ನು ಶೆರಿ ವಿವರಿಸುತ್ತಾರೆ.

ಅಮ್ಮ ಹೇಳಿದ ಹಾಗೆಯೇ ಮದುವೆ ಆಯಿತು. ಆದರೆ ಫ್ಲಾರಿಡಾದ ಟಂಪಾದಲ್ಲಿರುವ ಸರ್ಕಾರಿ ಕ್ಲರ್ಕ್, 11 ವರ್ಷದ ಬಾಲಕಿಯ ಮದುವೆಯನ್ನು ನೋಂದಣಿ ಮಾಡಲು ಒಪ್ಪಲಿಲ್ಲ. ಫ್ಲಾರಿಡಾ ರಾಜ್ಯದಲ್ಲಿ 11 ವರ್ಷದ ಬಾಲಕಿಗೆ ಮದುವೆ ಮಾಡುವುದು ಕಾನೂನುಬಾಹಿರ ಅಲ್ಲದಿದ್ದರೂ ಕ್ಲರ್ಕ್ ನಿರಾಕರಿಸಿದ್ದರು. ಹಾಗಾಗಿ ಹತ್ತಿರದ ಪಿನೆಲ್ಲಾಸ್ ಕೌಂಟಿಯಲ್ಲಿ ಮದುವೆಯನ್ನು ನೋಂದಣಿ ಮಾಡಲಾಯಿತು. ಪ್ರಮಾಣಪತ್ರದಲ್ಲಿ ಶೆರಿಯ ವಯಸ್ಸನ್ನು ಸರಿಯಾಗಿಯೇ ನಮೂದಿಸಲಾಗಿತ್ತು. ಅಂದರೆ ಮದುವೆಯನ್ನು ನೋಂದಣಿ ಮಾಡಿದ ಅಧಿಕಾರಿಗೆ ಶೆರಿಯ ವಯಸ್ಸಿನ ಬಗ್ಗೆ ಯಾವ ಅನುಮಾನವೂ ಇರಲಿಲ್ಲ.

ಈ ಮದುವೆ ಹೆಚ್ಚು ಬಾಳಿಕೆ ಬರಲಿಲ್ಲ ಎಂಬುದು ಆಶ್ಚರ್ಯದ ವಿಷಯವೇನೂ ಅಲ್ಲ. ಒಂದು ಅಧ್ಯಯನದ ಪ್ರಕಾರ, ಸಣ್ಣ ವಯಸ್ಸಿನ ಬಾಲಕಿಯರಿಗೆ ಮಾಡುವ ಮದುವೆಗಳಲ್ಲಿ ಮೂರನೇ ಎರಡಷ್ಟು ಮುರಿದು ಬೀಳುತ್ತವೆ. ಆದರೆ ಶೆರಿ ಶಾಲೆಗೆ ಹೋಗುವುದಕ್ಕೆ ಮದುವೆ ತೊಡಕಾಯಿತು. ಬಾಲ್ಯ ವಿವಾಹವನ್ನು ನಿಷೇಧಿಸುವ ಕಾನೂನು ರೂಪಿಸಬೇಕು ಎಂದು ಇಂದು ಅವರು ಅಭಿಯಾನ ನಡೆಸುತ್ತಿದ್ದಾರೆ. ಅಮೆರಿಕದಲ್ಲಿ ಬಾಲ್ಯ ವಿವಾಹವನ್ನು ನಿಲ್ಲಿಸುವ ರಾಷ್ಟ್ರವ್ಯಾಪಿ ಅಭಿಯಾನದ ಒಂದು ಭಾಗ ಇದು. ಫ್ಲಾರಿಡಾದಲ್ಲಿ ಇಂದಿಗೂ 16 ವರ್ಷದ ಒಳಗಿನ ಬಾಲಕಿಯರ ಮದುವೆ ನಿರಾತಂಕವಾಗಿ ನಡೆಯುತ್ತಿದೆ.

‘ಬಾಲ್ಯ ವಿವಾಹ? ಅಮೆರಿಕದಲ್ಲಿ... ಇಲ್ಲ ಸಾಧ್ಯವೇ ಇಲ್ಲ, ಇದು ಬಾಂಗ್ಲಾದೇಶ ಅಥವಾ ತಾಂಜಾನಿಯಾದ ಕತೆ ಆಗಿರಬಹುದು’ ಎಂದು ನೀವು ಯೋಚಿಸುತ್ತಿರಬಹುದು.

ಅಮೆರಿಕದ 38 ರಾಜ್ಯಗಳಲ್ಲಿ 2000ದಿಂದ 2010ರ ನಡುವಣ ಅವಧಿಯಲ್ಲಿ 17 ವರ್ಷದೊಳಗಿನ 1.67 ಲಕ್ಷ ಬಾಲಕಿಯರಿಗೆ ಮದುವೆ ಆಗಿದೆ ಎಂಬುದನ್ನು  ಲಭ್ಯ ಇರುವ ವಿವಾಹ ನೋಂದಣಿ ದಾಖಲೆ ತೋರಿಸಿಕೊಡುತ್ತದೆ. ಬಾಲ್ಯ ವಿವಾಹ ನಿಷೇಧಕ್ಕಾಗಿ ಕೆಲಸ ಮಾಡುವ ‘ಅನ್‌ಚೈನ್ಡ್ ಅಟ್ ಲಾಸ್ಟ್’ ಎಂಬ ಸಂಸ್ಥೆ ಈ ಮಾಹಿತಿ ಕಲೆ ಹಾಕಿದೆ. ಅಲಾಸ್ಕ, ಲೂಸಿಯಾನಾ ಮತ್ತು ಸೌಥ್ ಕೆರೊಲಿನಾದಲ್ಲಿ 12 ವರ್ಷಕ್ಕೆ ಮದುವೆಯಾದ ಬಾಲಕಿಯರ ಪ್ರಕರಣಗಳತ್ತ ಈ ಸಂಸ್ಥೆ ಬೆಳಕು ಚೆಲ್ಲಿದೆ. ಉಳಿದ ರಾಜ್ಯಗಳಲ್ಲಿಯೂ 14 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರು ಮದುವೆ ಆಗಿದ್ದಾರೆ ಮತ್ತು ಆಗುತ್ತಿದ್ದಾರೆ ಎಂದು ಸಂಸ್ಥೆ ಹೇಳಿದೆ.

ಆದರೆ ಇತರ ರಾಜ್ಯಗಳ ನಿಖರ ಮಾಹಿತಿ ಸಂಗ್ರಹ ಸಾಧ್ಯವಾಗಿಲ್ಲ ಎಂದು ‘ಅನ್‌ಚೈನ್ಡ್ ಅಟ್ ಲಾಸ್ಟ್’ ಹೇಳಿದೆ. ಆದರೆ ಇಡೀ ದೇಶದಲ್ಲಿ 2000ದಿಂದ 2010ರ ಅವಧಿಯಲ್ಲಿ ಕನಿಷ್ಠ 2.5 ಲಕ್ಷ ಬಾಲ್ಯ ವಿವಾಹ ನಡೆದಿದೆ ಎಂದು ಅಂದಾಜಿಸಲಾಗಿದೆ. ಅಮೆರಿಕದ ಜನಗಣತಿ ವರದಿ ಕೂಡ ಇದನ್ನು ಸಮರ್ಥಿಸುತ್ತದೆ. 2014ರಲ್ಲಿ 57,800 ಬಾಲ್ಯ ವಿವಾಹ ಪ್ರಕರಣಗಳು ನಡೆದಿವೆ ಎಂದು ಗಣತಿ ಹೇಳಿದೆ.

ಅತಿ ಹೆಚ್ಚು ಬಾಲ್ಯ ವಿವಾಹ ನಡೆಯುವ ರಾಜ್ಯಗಳೆಂದರೆ ಅರ್ಕಾನ್ಸಸ್, ಇಡಾಹೊ ಮತ್ತು ಕೆಂಟಕಿ. ಅಮೆರಿಕದಲ್ಲಿ ಬಾಲ್ಯ ವಿವಾಹದ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ ಎಲ್ಲ ರಾಜ್ಯಗಳಲ್ಲಿಯೂ ಹೆತ್ತವರು, ನ್ಯಾಯಾಧೀಶ ಅಥವಾ ಈ ಇಬ್ಬರ ಸಮ್ಮತಿಯೊಂದಿಗೆ ಬಾಲ್ಯವಿವಾಹಕ್ಕೆ ಅವಕಾಶ ಇದೆ. 27 ರಾಜ್ಯಗಳಲ್ಲಿ ವಿವಾಹಕ್ಕೆ ಕನಿಷ್ಠ ವಯಸ್ಸು ನಿಗದಿ ಮಾಡಿರುವ ಕಾನೂನೇ ಇಲ್ಲ ಎಂದು ತಹಿರೀಹ್ ಜಸ್ಟಿಸ್ ಸೆಂಟರ್ ಎಂಬ ಸಂಸ್ಥೆ ಹೇಳಿದೆ.

ಬಾಲ್ಯ ವಿವಾಹದ ಬಹುಸಂಖ್ಯಾತ ಪ್ರಕರಣಗಳಲ್ಲಿ ವಧು ಬಾಲಕಿಯಾಗಿದ್ದರೆ ವರ ಪ್ರೌಢನಾಗಿರುತ್ತಾನೆ. ಈ ಇಬ್ಬರ ನಡುವಣ ಲೈಂಗಿಕ ಸಂಬಂಧವನ್ನು ಅತ್ಯಾಚಾರ ಎಂದು ಕಾನೂನು ಪರಿಗಣಿಸುತ್ತದೆ. ಆದರೆ ಮದುವೆ ಆಗುವುದರಿಂದಾಗಿ ಇದು ಕಾನೂನುಬದ್ಧ ಆಗಿಬಿಡುತ್ತದೆ. ನ್ಯೂ ಹ್ಯಾಂಪ್‌ಶೈರ್‌ನ ಸ್ಕೌಟ್‌ ಹುಡುಗಿ ಕ್ಯಾಸಂಡ್ರಾ ಲೆವೆಸ್ಕೆಗೆ ತನ್ನ ರಾಜ್ಯದಲ್ಲಿ ಹುಡುಗಿಯರು 13 ವರ್ಷಕ್ಕೇ ಮದುವೆ ಆಗಬಹುದು ಎಂಬ ವಿಚಾರ ಇತ್ತೀಚೆಗೆ ತಿಳಿಯಿತು. ಈ ಕಾನೂನನ್ನು ಬದಲಾಯಿಸಬೇಕು ಎಂಬ ಹೋರಾಟವನ್ನು ಈ ಹುಡುಗಿ ಆರಂಭಿಸಿದ್ದಾಳೆ. ಕ್ಯಾಸಂಡ್ರಾ ಮಂಡಿಸಿರುವ ವಿವಾಹದ ವಯಸ್ಸನ್ನು 18ಕ್ಕೆ ಏರಿಸುವ ಮಸೂದೆಯನ್ನು ಶಾಸಕರೊಬ್ಬರು ಪ್ರಾಯೋಜಿಸಿದ್ದಾರೆ. ಆದರೆ ಈ ಉಪಕ್ರಮಕ್ಕೆ ರಾಜಕಾರಣಿಗಳಿಂದ ವಿರೋಧ ಇದೆ. ಇತ್ತೀಚೆಗೆ ನ್ಯೂ ಹ್ಯಾಂಪ್‌ಶೈರ್‌ನಲ್ಲಿ 15 ವರ್ಷದ ಇಬ್ಬರು ಮತ್ತು 13 ವರ್ಷದ ಒಬ್ಬ ಬಾಲಕಿಯ ಮದುವೆ ಆಗಿದೆ.

ರಿಪಬ್ಲಿಕನ್‌ ಪಕ್ಷ ಬಹುಮತ ಹೊಂದಿರುವ ಸದನದಲ್ಲಿ ಕ್ಯಾಸಂಡ್ರಾ ಮೂಲಕ ಮಂಡನೆಯಾದ ಮಸೂದೆ ಬಿದ್ದು ಹೋಯಿತು. ವಿವಾಹದ ಕನಿಷ್ಠ ವಯಸ್ಸು 13 ವರ್ಷವಾಗಿಯೇ ಉಳಿಯಿತು. 18 ವರ್ಷದೊಳಗಿನವರ ಮದುವೆಯನ್ನು ನಿಷೇಧಿಸುವ ಮಸೂದೆಯನ್ನು ಅಂಗೀಕರಿಸಿದ ಅಮೆರಿಕದ ಮೊದಲ ರಾಜ್ಯ ನ್ಯೂಜೆರ್ಸಿ. ಆದರೆ ಗವರ್ನರ್‌ ಕ್ರಿಸ್‌ ಕ್ರಿಸ್ಟಿ ಈ ಮಸೂದೆಯನ್ನು ತಡೆ ಹಿಡಿದಿದ್ದಾರೆ. ವಿವಾಹದ ಕನಿಷ್ಠ ವಯಸ್ಸನ್ನು ಈಗಿನ 14ರಿಂದ 17ಕ್ಕೆ ಏರಿಸಲು ನ್ಯೂಯಾರ್ಕ್‌ನ ಶಾಸಕರು ಚಿಂತಿಸುತ್ತಿದ್ದಾರೆ. ಇದಕ್ಕೆ ಗವರ್ನರ್‌ ಆಂಡ್ರ್ಯೂ ಕುಮೊ ಅವರ ಬೆಂಬಲ ಇದೆ.

ಇದರಿಂದಾಗಿ ಅವಿವಾಹಿತ ಬಾಲಕಿಯರಿಗೆ ಜನಿಸುವ ಮಕ್ಕಳ ಸಂಖ್ಯೆ ಹೆಚ್ಚುತ್ತದೆ. ಅಲ್ಲದೆ ಬಾಲ್ಯ ವಿವಾಹ ಪರಸ್ಪರ ಸಹಮತದಿಂದಲೇ ನಡೆಯುತ್ತದೆ ಎಂಬುದು ಮಸೂದೆಯ ವಿರೋಧಿಗಳ ವಾದ.

‘ಸೇವ್‌ ದ ಚಿಲ್ಡ್ರನ್‌’ ಸಂಸ್ಥೆಯ ಅಂದಾಜು ಪ್ರಕಾರ, ಜಾಗತಿಕವಾಗಿ ಪ್ರತಿ ಏಳು ಸೆಕೆಂಡ್‌ಗೆ 15 ವರ್ಷದೊಳಗಿನ ಒಬ್ಬ ಬಾಲಕಿಯ ಮದುವೆ ಆಗುತ್ತದೆ. ಆಫ್ರಿಕಾ ಮತ್ತು ಏಷ್ಯಾದ ದೇಶಗಳ ಹಾಗೆಯೇ ಅಮೆರಿಕದಲ್ಲಿ ಕೂಡ ಬಾಲ್ಯ ವಿವಾಹಕ್ಕೆ ಮುಖ್ಯ ಕಾರಣ ಸಾಂಸ್ಕೃತಿಕ ಮತ್ತು ಧಾರ್ಮಿಕ ಅಂಶಗಳು. ಅಮೆರಿಕದ ಕುಟುಂಬಗಳು ಸಂಪ್ರದಾಯವಾದಿ ಕ್ರೈಸ್ತ, ಮುಸ್ಲಿಂ ಅಥವಾ ಯೆಹೂದಿ ಧರ್ಮಗಳನ್ನು ಅನುಸರಿಸುತ್ತವೆ. ಬಾಲ್ಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿ ಇತರರ ಸಂಸ್ಕೃತಿಯಲ್ಲಿ ಮಧ್ಯಪ್ರವೇಶಿಸಬಾರದು ಎಂದು ನ್ಯಾಯಾಧೀಶರು ಭಾವಿಸುತ್ತಾರೆ.

(ನಿಕೋಲಸ್‌ ಕ್ರಿಸ್ಟೋಫ್‌)

ಫ್ಲಾರಿಡಾದಲ್ಲಿ ವಿವಾಹದ ಕನಿಷ್ಠ ವಯಸ್ಸನ್ನು ನಿಗದಿಪಡಿಸುವ ಕಾನೂನು ಇರಬೇಕು ಎಂದು ಶೆರಿ ಈಗ ಹೋರಾಟ ನಡೆಸುತ್ತಿದ್ದಾರೆ. ತಮಗೆ ಮದುವೆ ಮಾಡಲಾದ ವಯಸ್ಸಿನಲ್ಲಿಯೇ ಆಗಾಗ ಇತರ ಹುಡುಗಿಯರಿಗೂ ಮದುವೆ ಮಾಡಲಾಗಿದೆ ಎಂದು ಅವರು ಹೇಳುತ್ತಾರೆ. ಅತ್ಯಾಚಾರ ಪ್ರಕರಣಗಳನ್ನು ಮುಚ್ಚಿಡುವುದಕ್ಕಾಗಿ ಚರ್ಚ್‌ನ ಹಿರಿಯರು ಇಂತಹ ಮದುವೆ ಏರ್ಪಡಿಸುತ್ತಾರೆ ಎಂದು ಶೆರಿ ಆರೋಪಿಸುತ್ತಾರೆ.

ತಮ್ಮದೇ ಅನುಭವವನ್ನು ಬಿಚ್ಚಿಡುವ ಅವರು, ಬಾಲಕಿಯಾಗಿದ್ದಾಗ ಒಬ್ಬ ಸಚಿವ ಮತ್ತು ಇನ್ನೊಬ್ಬ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಒಳಗಾಗಿದ್ದೆ ಎಂಬ ವಿಚಾರವನ್ನು ತಿಳಿಸುತ್ತಾರೆ. ‘ಕೇವಲ ಹತ್ತು ವರ್ಷದವಳಿದ್ದಾಗ ಹೆಣ್ಣು ಮಗುವಿಗೆ ಜನ್ಮವಿತ್ತೆ’ ಎಂದು ಅವರು ಹೇಳುತ್ತಾರೆ (ಅವರ ಜನನ ಪ್ರಮಾಣಪತ್ರ ಅದನ್ನು ದೃಢಪಡಿಸುತ್ತದೆ). ಅತ್ಯಾಚಾರ ತನಿಖೆಯನ್ನು ಕೊನೆಗೊಳಿಸುವುದಕ್ಕಾಗಿ ಮದುವೆ ಆಗುವಂತೆ ಶೆರಿಗೆ ನ್ಯಾಯಾಧೀಶರು ಸೂಚಿಸುತ್ತಾರೆ. ಮಗುವಿನ ಲಾಲನೆ ಪಾಲನೆ ಮಾಡುವ ಸ್ವಲ್ಪ ದೊಡ್ಡ ಮಗುವಾಗಿ ಕಳೆದ ಆ ಜೀವನ ‘ಭಯಾನಕವಾಗಿತ್ತು’ ಎಂದು ಶೆರಿ ನೆನಪಿಸಿಕೊಳ್ಳುತ್ತಾರೆ. ಆಕೆ ಶಾಲೆ ಕಳೆದುಕೊಳ್ಳಬೇಕಾಯಿತು. ಬಾಲ್ಯವನ್ನು ತನ್ನ ಮಗುವಿನ ಡಯಾಪರ್ ಬದಲಾಯಿಸುತ್ತಾ ಕಳೆಯಬೇಕಾಯಿತು. ಗಂಡನ ಜತೆ ದಿನವೂ ಜಗಳದೊಂದಿಗೆ ನಿತ್ಯದ ಖರ್ಚಿಗೂ ತತ್ವಾರ ಇತ್ತು. ಗರ್ಭಧಾರಣೆಯ ನಂತರ ಗರ್ಭಧಾರಣೆಯಾಗಿ ಒಂಬತ್ತು ಮಕ್ಕಳಾದವು. ಈ ಮಧ್ಯದಲ್ಲಿ ಗಂಡನೂ ಆಕೆಯನ್ನು ಬಿಟ್ಟು ಹೋದ.

‘ಕೈಕೋಳ ತೊಡಿಸಬೇಕಿದ್ದ ಆತನನ್ನು ಅವರೆಲ್ಲರೂ ಸೇರಿ ಕೈಕೋಳದಿಂದ ರಕ್ಷಿಸಿದರು’ ಎಂದು ಶೆರಿ ಹೇಳುತ್ತಾರೆ. ‘ಮದುವೆ ಎಂದರೆ ಏನೆಂದೇ ಗೊತ್ತಿಲ್ಲದ ನನಗೆ ಮದುವೆ ಮಾಡಿ ನನಗೆ ಅವರು ಕೈಕೋಳ ತೊಡಿಸಿದರು. ನೀವು ಕೆಲಸ ಪಡೆಯುವಂತಿಲ್ಲ, ಕಾರು ಖರೀದಿಸುವಂತಿಲ್ಲ, ಚಾಲನಾ ಪರವಾನಗಿ ಪಡೆಯುವಂತಿಲ್ಲ, ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕುವಂತಿಲ್ಲ. ಅಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಮದುವೆ ಆಗುವುದಕ್ಕೆ ಮಾತ್ರ ನೀವು ಯಾಕೆ ಒಪ್ಪಿಗೆ ಕೊಡುತ್ತೀರಿ’ ಎಂದು ಶೆರಿ ಪ್ರಶ್ನಿಸುತ್ತಾರೆ.

17 ವರ್ಷದ ಬಾಲಕಿಯರಿಗೆ ಮದುವೆ ಮಾಡುವುದು ಕೂಡ ಸಮಸ್ಯಾತ್ಮಕವೇ ಆಗುವುದಕ್ಕೆ ಇವೇ ಕಾರಣಗಳು ಎಂದು ಅನ್‌ಚೈನ್ಡ್ ಅಟ್ ಲಾಸ್ಟ್ ಸಂಸ್ಥೆಯ ಸ್ಥಾಪಕಿ ಫ್ರೈಡೆ ರೀಸ್ ಹೇಳುತ್ತಾರೆ. ಮದುವೆ ಆಗುವಂತೆ ಹೆತ್ತವರು ಮಾಡುವ ದೌರ್ಜನ್ಯದಿಂದಾಗಿ ಬಾಲಕಿಯರು ಅದನ್ನು ನಿರಾಕರಿಸುವ ಶಕ್ತಿಯನ್ನೇ ಕಳೆದುಕೊಳ್ಳುತ್ತಾರೆ. ಮದುವೆ ಆಗುವುದಕ್ಕೆ ಇಷ್ಟ ಇಲ್ಲ ಎಂದು ನ್ಯಾಯಾಧೀಶರ ಮುಂದೆ ಹೇಳಲು ಭಯಪಡುತ್ತಾರೆ. ಇಂತಹ ದೌರ್ಜನ್ಯದ ವಿವಾಹದಿಂದ ತಪ್ಪಿಸಿಕೊಳ್ಳಲು ಮನೆ ಬಿಟ್ಟು ಓಡಿ ಹೋದರೆ ಅನಾಥಾಶ್ರಮಗಳಲ್ಲಿ ಅವರಿಗೆ ಆಶ್ರಯ ನಿರಾಕರಿಸಲಾಗುತ್ತದೆ ಮತ್ತು ಅವರನ್ನು ಮನೆಯಿಂದ ತಪ್ಪಿಸಿಕೊಂಡು ಬಂದವರು ಎಂದಷ್ಟೇ ಪರಿಗಣಿಸಲಾಗುತ್ತದೆ ಎಂದು ಫ್ರೈಡೆ ಹೇಳುತ್ತಾರೆ.

ಹೀಗೆ ಮದುವೆ ಆಗುವ ಬಹುತೇಕ ಎಲ್ಲರಿಗೂ ದೊರೆಯುವುದು ‘ಮದುವೆಯ ರಾತ್ರಿ ಮತ್ತು ನಂತರ ನಿರಂತರವಾಗಿ ನಡೆಯುವ ಅತ್ಯಾಚಾರ ಮಾತ್ರ’ ಎಂದು 42ರ ಫ್ರೈಡೆ ಹೇಳುತ್ತಾರೆ. ಅವರಿಗೆ ಅವರ ಅತ್ಯಂತ ಸಂಪ್ರದಾಯವಾದಿ ಯೆಹೂದಿ ಕುಟುಂಬ 19ನೇ ವಯಸ್ಸಿನಲ್ಲಿಯೇ ಬಲವಂತದಿಂದ ಮದುವೆ ಮಾಡಿಸಿತ್ತು.
ಈಗ ಟೆಕ್ಸಾಸ್‌ನಲ್ಲಿ ಶಾಲಾ ಕೌನ್ಸೆಲರ್ ಆಗಿರುವ ಲಿಂಡ್ಸೆ ಡ್ಯೂಯೆಟ್ ಅವರಿಗೆ 17ನೇ ವಯಸ್ಸಿನಲ್ಲಿಯೇ ಬಲವಂತದಿಂದ ಮದುವೆ ಮಾಡಲಾಗಿದೆ.

ಸಂಪ್ರದಾಯವಾದಿ ಕ್ರೈಸ್ತ ಕುಟುಂಬ ಯುವಕನೊಬ್ಬನನ್ನು ಮನೆಗೆ ಸೇರಿಸಿಕೊಂಡಿತ್ತು. ಲಿಂಡ್ಸೆಗೆ 14 ವರ್ಷವಿದ್ದಾಗ ಆತ ಅತ್ಯಾಚಾರ ಮಾಡಲು ಆರಂಭಿಸಿದ್ದ. ಗೊಂದಲ, ಅಪಮಾನ ಮತ್ತು ಅಸಹಾಯಕಳಾಗಿದ್ದ ಲಿಂಡ್ಸೆ ಈ ಬಗ್ಗೆ ಮೌನವಾಗಿದ್ದರೆ ಅತ್ಯಾಚಾರಿಯೇ ಇದನ್ನು ಬಹಿರಂಗ ಮಾಡಿದ್ದ.

‘ಮದುವೆ ಮಾಡಿ ಕೊಡುವಂತೆ ಆತ ನನ್ನ ಹೆತ್ತವರನ್ನು ಕೇಳಿದ್ದ. ನನ್ನ ತಾಯಿಗೆ ಎಷ್ಟು ಸಂತೋಷವಾಗಿತ್ತು ಎಂದರೆ ಅವಳ ಕಣ್ಣುಗಳಲ್ಲಿ ಆನಂದಾಶ್ರು ಸುರಿದಿತ್ತು’ ಎಂದು ಆ ದಿನಗಳನ್ನು ಲಿಂಡ್ಸೆ ವಿವರಿಸುತ್ತಾರೆ. ಹೆತ್ತವರ ಒತ್ತಡಕ್ಕೆ ಪ್ರತಿರೋಧ ಒಡ್ಡುವಷ್ಟು ಶಕ್ತಿ ಲಿಂಡ್ಸೆಗೆ ಇರಲಿಲ್ಲ. ಆದರೆ ವಿವಾಹವಾಗಿ ಎಂಟು ವರ್ಷ ಬಳಿಕ ಗಂಡ ಗರಗಸದಿಂದ ಕತ್ತರಿಸಿ ಹಾಕುತ್ತೇನೆ ಎಂದು ಬೆದರಿಸಿದ್ದ. ಆಗ ಮನೆ ಬಿಟ್ಟು ಪರಾರಿಯಾದ ಲಿಂಡ್ಸೆ ಕಾಲೇಜು ಸೇರಿಕೊಂಡು ಕಾಲೇಜಿಗೇ ಮೊದಲಿಗರಾಗಿ ಪದವಿ ಪಡೆದುಕೊಳ್ಳುತ್ತಾರೆ.

‘ನಮ್ಮಲ್ಲಿಗೆ ಬರುವ ಹೆಚ್ಚಿನ ಹುಡುಗಿಯರು ತಮ್ಮ ಕುಟುಂಬವನ್ನು ಪ್ರೀತಿಸುತ್ತಾರೆ. ಮನೆಯವರು ಕಷ್ಟಕ್ಕೆ ಸಿಕ್ಕಿಕೊಳ್ಳಬಾರದು ಎಂಬುದೇ ಅವರ ಆದ್ಯತೆ ಆಗಿರುತ್ತದೆ’ ಎಂದು ಲಿಂಡ್ಸೆ ತಿಳಿಸುತ್ತಾರೆ.

ಬೇರೆ ದೇಶಗಳಲ್ಲಿ ನಡೆಯುವ ಬಾಲ್ಯ ವಿವಾಹ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತದೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯ ಕಳೆದ ವರ್ಷ ಬಿಡುಗಡೆ ಮಾಡಿದ ದಾಖಲೆಯೊಂದು ಹೇಳುತ್ತದೆ. ಈಗ ನಾವು ನಮ್ಮೊಳಗನ್ನು ಆಲಿಸಬೇಕು. ನಿಗರ್ ಮತ್ತು ಆಫ್ಘಾನಿಸ್ತಾನದಲ್ಲಿ ಬಾಲ್ಯ ವಿವಾಹ ಹೇಗೆ ವಿನಾಶಕಾರಿಯೋ ನ್ಯೂಯಾರ್ಕ್ ಮತ್ತು ಫ್ಲಾರಿಡಾದಲ್ಲಿಯೂ ಹಾಗೆಯೇ ಎಂಬುದನ್ನು ಅಮೆರಿಕದ ನೀತಿ ನಿರೂಪಕರು ಅರ್ಥ ಮಾಡಿಕೊಳ್ಳಬೇಕು. ಅಮೆರಿಕದಲ್ಲಿ ಬಾಲ್ಯ ವಿವಾಹ ನಿಷೇಧಿಸಬೇಕಾದ ಕಾಲ ಎಂದೋ ಕಳೆದು ಹೋಗಿದೆ.
ದಿ ನ್ಯೂಯಾರ್ಕ್ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT