ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಷ್ಟು ಬಾರ್ ಅಂಡ್‌ ರೆಸ್ಟೊರೆಂಟ್‌ ಮುಚ್ಚಿದ್ದೀರಿ?

Last Updated 2 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಳ್ಳಂದೂರು ಕೆರೆಗೆ ಹೊಂದಿಕೊಂಡ ಪ್ರದೇಶದಲ್ಲಿ ಎಷ್ಟು ಬಾರ್ ಅಂಡ್‌ ರೆಸ್ಟೊರೆಂಟ್‌ಗಳನ್ನು ಮುಚ್ಚಿದ್ದೀರಿ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು (ಕೆಎಸ್‌ಪಿಸಿಬಿ) ಹೈಕೋರ್ಟ್‌ ಪ್ರಶ್ನಿಸಿದೆ.

ಬೆಳ್ಳಂದೂರು ಕೆರೆಗೆ ತ್ಯಾಜ್ಯ ಹರಿಬಿಡುತ್ತಿರುವ ಆಕ್ಷೇಪಣೆಗೆ ಸಂಬಂಧಿಸಿದಂತೆ ಕೆಎಸ್‌ಪಿಸಿಬಿ ನೀಡಿದ್ದ ನೋಟಿಸ್ ಪ್ರಶ್ನಿಸಿ ಕೋರಮಂಗಲದಲ್ಲಿರುವ  ಮೈಕ್ರೊ ಬ್ರಿವರಿ (ಮದ್ಯ ತಯಾರಿಕಾ ಘಟಕ) ಪಬ್‌ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಈ ವೇಳೆ ಕೆಎಸ್‌ಪಿಸಿಬಿ ವಕೀಲ ಗುರುರಾಜ ಜೋಷಿ, ‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶದ ಅನುಸಾರ ಬ್ರಿವರಿಯ ವಾಣಿಜ್ಯ ಚಟುವಟಿಕೆಯನ್ನು ನಿಯಂತ್ರಿಸಲಾಗಿದೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖರ್ಜಿ, ‘ಅರ್ಜಿದಾರರು, ತಮ್ಮದೊಂದೇ ಬ್ರಿವರಿಯನ್ನು ಗುರಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಹಾಗಾದರೆ ಬೆಳ್ಳಂದೂರು ಕೆರೆಗೆ ಹೊಂದಿಕೊಂಡ ಪ್ರದೇಶಗಳ ಎಲ್ಲ ಬಾರ್ ಅಂಡ್‌ ರೆಸ್ಟೋರೆಂಟ್‌ಗಳ ಮೇಲೂ ನೀವು ಕ್ರಮ ಕೈಗೊಂಡಿದ್ದೀರಾ’ ಎಂದು ಮೌಖಿಕವಾಗಿ ಪ್ರಶ್ನಿಸಿದರು.

ತಾತ್ಕಾಲಿಕ ನಿರ್ಬಂಧ: ‘ಈ ಅರ್ಜಿ ವಿಚಾರಣೆ ಮುಕ್ತಾಯಗೊಳ್ಳುವವರೆಗೂ ಮೈಕ್ರೊ ಬ್ರಿವರಿ ತಯಾರಿಕಾ ಘಟಕ ವಾಣಿಜ್ಯ ಚಟುವಟಿಕೆ ನಡೆಸಬಾರದು’ ಎಂದು ನ್ಯಾಯಪೀಠ ಇದೇ ವೇಳೆ ತಾತ್ಕಾಲಿಕ ನಿರ್ಬಂಧ ಹೇರಿದೆ.

ಆದರೆ, ‘ಒಂದು, ಎರಡು ಮತ್ತು ಮೂರನೇ ಮಹಡಿಯಲ್ಲಿನ ಬಾರ್‌ ಅಂಡ್‌ ರೆಸ್ಟೋರೆಂಟ್ ನಡೆಸಬಹುದು’ ಎಂದು ತಿಳಿಸಿದೆ. ಈ ಕಟ್ಟಡಕ್ಕೆ ಸ್ಥಗಿತಗೊಳಿಸಿರುವ ವಿದ್ಯುಚ್ಛಕ್ತಿಯನ್ನು ಮರು ಸರಬರಾಜು ಮಾಡುವಂತೆಯೂ ಬೆಸ್ಕಾಂಗೆ ನಿರ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT