ಸರ್ದಾರ್‌ ಪಟೇಲರಿಗೆ ಪ್ರಶ್ನೆ ಕೇಳ ಬನ್ನಿ

7

ಸರ್ದಾರ್‌ ಪಟೇಲರಿಗೆ ಪ್ರಶ್ನೆ ಕೇಳ ಬನ್ನಿ

Published:
Updated:
ಸರ್ದಾರ್‌ ಪಟೇಲರಿಗೆ ಪ್ರಶ್ನೆ ಕೇಳ ಬನ್ನಿ

ಬೆಂಗಳೂರು: ಸ್ವಾತಂತ್ರ್ಯ ಗಳಿಸಿದಾಗ ದೇಶದಲ್ಲಿನ ಪರಿಸ್ಥಿತಿ, ಅಂದಿದ್ದ 565 ಸಂಸ್ಥಾನಗಳನ್ನು ಒಟ್ಟುಗೂಡಿಸಿ ಭವ್ಯ ಭಾರತ ನಿರ್ಮಾಣ ಮಾಡಲು ಮಹನೀಯರು ವಹಿಸಿದ ಶ್ರಮ, ಈ ಸವಾಲನ್ನು ಮೆಟ್ಟಿ ನಿಲ್ಲಲು ಅವರು ಎದುರಿಸಿದ ಕಷ್ಟ–ನಷ್ಟಗಳು...

ಇವನ್ನೆಲ್ಲಾ 3ಡಿ ಚಿತ್ರಿಕೆಯಲ್ಲಿ ನೋಡಬಹುದು. ಮಾಹಿತಿಯುಕ್ತ ಧ್ವನಿಮುದ್ರಿಕೆಗಳನ್ನು ಆಲಿಸಬಹುದು. ಸಂಸ್ಥಾನಗಳನ್ನು ಒಟ್ಟುಗೂಡಿಸುವ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್‌ ವಲ್ಲಭಭಾಯಿ ಪಟೇಲರಿಗೆ ನೀವು ಪ್ರಶ್ನೆ ಯನ್ನೂ (ಹಾಲೊಗ್ರಾಫಿಕ್‌ ಪ್ರೊಜೆಕ್ಷನ್‌ನಲ್ಲಿ) ಕೇಳಬಹುದು. 

ನಗರದ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕಾ ವಸ್ತುಸಂಗ್ರಹಾಲಯ (ವಿಐಟಿಎಂ) ಏರ್ಪಡಿಸಿರುವ  ‘ಒಂದಾದ ಭಾರತ–ಸರ್ದಾರ್‌ ಪಟೇಲ್‌’ ಎಂಬ ಡಿಜಿಟಲ್‌ ಪ್ರದರ್ಶನ ಇಂತಹದ್ದೊಂದು ಅಪೂರ್ವ ಅವಕಾಶವನ್ನು ಒದಗಿಸಿದೆ. 

ರಾಜ್ಯಪಾಲ ವಜುಭಾಯಿ ವಾಲಾ ಅವರು ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಿದರು.

ಪಟೇಲರ ಜೀವನ, ಸಾಧನೆ ಮತ್ತು ವ್ಯಕ್ತಿತ್ವ, ಸಂಸ್ಥಾನಗಳನ್ನು ವಿಲೀನಗೊಳಿಸಲು ಅವರಿಗೆ ಎದುರಾದ ಸವಾಲುಗಳು ಮತ್ತು ಪ್ರಜಾಸತ್ತಾತ್ಮಕ ಸರ್ಕಾರ ರಚನೆಯ ಹಂತಗಳನ್ನು ತಂತ್ರಜ್ಞಾನದ ಸಹಾಯದಿಂದ ಜನರ ಮನಮುಟ್ಟಿಸುವಂತೆ ತೋರಿಸುವ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದ.

ಟಿ.ವಿ.ಪರದೆಯಲ್ಲಿ ಪಟೇಲರೊಂದಿಗೆ ಕಾಣಿಸಿಕೊಳ್ಳುವ, ಸೆಲ್ಫಿಯನ್ನೂ ಕ್ಲಿಕ್ಕಿಸಿಕೊಳ್ಳುವ ಮತ್ತು 1950ರ ದಶಕದಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ವ್ಯಂಗ್ಯಚಿತ್ರಗಳನ್ನು 3ಡಿ ಚಿತ್ರಿಕೆಯಲ್ಲಿ ನೋಡುವ ಅವಕಾಶವೂ ಇಲ್ಲಿದೆ.

ಮೌರ್ಯರ, ಮೊಘಲರ ಮತ್ತು ಬ್ರಿಟಿಷರ ಆಳ್ವಿಕೆ ಕಾಲದ ಭೂಪ್ರದೇಶ, ಸ್ವಾತಂತ್ರ್ಯ ಚಳವಳಿಯ ಹಂತಗಳು, ದೇಶ ವಿಭಜನೆಯ ಕಾಲದ ನೋವುಗಳು, ಭಾರತ ಗಣರಾಜ್ಯಕ್ಕೆ ಸೇರಲು ಸಂಸ್ಥಾನಗಳ ರಾಜರನ್ನು ಪಟೇಲರು ಮನವೊಲಿಸಿದ ಪರಿ, ಒಪ್ಪದಿದ್ದಾಗ ಸೇನಾ ದಾಳಿ ನಡೆಸುವ ಮೂಲಕ ಪ್ರಾಂತ್ಯಗಳನ್ನು ಒಗ್ಗೂಡಿಸಿ ರಾಷ್ಟ್ರವನ್ನು ಕಟ್ಟಿದ  ಬಗೆ ಹಾಗೂ  ದೇಶದಲ್ಲಿ ಇಂದು ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರಗಳ ಮಾಹಿತಿಯನ್ನು ಇಲ್ಲಿ ಚಿತ್ರ, ಧ್ವನಿ ಮತ್ತು ಚಿತ್ರಿಕೆಗಳ ಮೂಲಕ ತಿಳಿಸಲಾಗುತ್ತಿದೆ.

ಸ್ವಾತಂತ್ರ್ಯ ನಂತರದಲ್ಲಿ ಮಾಡಿಕೊಂಡಿರುವ ಪ್ರಮುಖ ಒಪ್ಪಂದಗಳ ಅಪರೂಪದ ದಾಖಲೆಗಳ ಪ್ರತಿಗಳನ್ನು ಈ ಪ್ರದರ್ಶನದಲ್ಲಿವೆ.

‘ನಮ್ಮ ದೇಶ ಕಟ್ಟಲು ಪಟೇಲರು ಎಷ್ಟೆಲ್ಲಾ ಕಷ್ಟಪಟ್ಟಿದ್ದಾರೆಂದು  ಪ್ರದರ್ಶನದಿಂದ ತಿಳಿಯಿತು. ಇತಿಹಾಸದ ಪುಸ್ತಕದಲ್ಲಿರುವುದಕ್ಕಿಂತ ಹೆಚ್ಚಿನ ಮಾಹಿತಿ ಇಲ್ಲಿದೆ’ ಎಂದು ವಿಶ್ವಪ್ರಜ್ಞಾ ಅಕಾಡೆಮಿಯ ವಿದ್ಯಾರ್ಥಿನಿ ಬೃಂದಾ ತಿಳಿಸಿದಳು.

ಪ್ರದರ್ಶನದ ಪರಿಕಲ್ಪನೆಯನ್ನು ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ ರೂಪಿಸಿದೆ. ವಿವಿಧ ನಗರಗಳಲ್ಲಿ ಈ ಪ್ರದರ್ಶನ ನಡೆಯಲಿದೆ.

**

ಡಿಜಿಟಲ್‌ ಪ್ರದರ್ಶನ ಜೂನ್‌ 30ರವರೆಗೆ ಇರಲಿದೆ. ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವವರು ಪ್ರದರ್ಶನ ವೀಕ್ಷಿಸಬಹುದು

–ಕೆ.ಮದನ್‌ ಗೋಪಾಲ್‌, ನಿರ್ದೇಶಕ, ವಿಐಟಿಎಂ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry