ಪಿಯುಸಿ: ಕಟ್ಆಫ್ ಅಂಕ ಇಳಿಕೆ

7
2016ನೇ ಸಾಲಿಗೆ ಹೋಲಿಸಿದರೆ ಶೇ 7.24ರಷ್ಟು ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತ

ಪಿಯುಸಿ: ಕಟ್ಆಫ್ ಅಂಕ ಇಳಿಕೆ

Published:
Updated:
ಪಿಯುಸಿ: ಕಟ್ಆಫ್ ಅಂಕ ಇಳಿಕೆ

ಬೆಂಗಳೂರು: 2016ನೇ ಸಾಲಿಗೆ ಹೋಲಿಸಿದರೆ ಶೇ 7.24ರಷ್ಟು ಎಸ್ಸೆಸ್ಸೆಲ್ಸಿ ಫಲಿತಾಂಶ ಇಳಿಕೆಯಾಗಿದ್ದು, ಇದರಿಂದ ಬಹುತೇಕ ಪದವಿಪೂರ್ವ ಕಾಲೇಜುಗಳ ಕಟ್ ಆಫ್ ಅಂಕ ಶೇ 5ರಷ್ಟು  ಕಡಿಮೆಯಾಗಿದೆ.

ಶೇಷಾದ್ರಿಪುರ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ನಾರಾಯಣಸ್ವಾಮಿ, ‘ಕಟ್‌ ಆಫ್‌ ಅಂಕಗಳನ್ನು ನಾವು ನಿಗದಿ ಮಾಡುವುದಿಲ್ಲ. ಅದು ಅಂಕಗಳ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಕಳೆದ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಬಂದಿದ್ದರಿಂದ ವಿಜ್ಞಾನ ವಿಭಾಗದಲ್ಲಿ ಶೇ 90 ಕಟ್‌್ ಆಫ್‌ ಅಂಕ ಇತ್ತು. ಆದರೆ, ಈ ಬಾರಿ ಅದು ಶೇ 84.48 ರಷ್ಟಿದೆ’ ಎಂದು ಹೇಳಿದರು.

‘ಒಂದು ಸಂಯೋಜನೆಗೆ 80 ಸೀಟುಗಳನ್ನು ತೆಗೆದುಕೊಳ್ಳುತ್ತೇವೆ. ಇದರಲ್ಲಿ ಬಾಲಕ, ಬಾಲಕಿಯರಿಗೆ ಸಮನಾಗಿ ಸೀಟು ಹಂಚಿಕೆ ಮಾಡುತ್ತೇವೆ. ಬಾಲಕಿಯರು ಹೆಚ್ಚು ಅಂಕ ಗಳಿಸಿದ್ದರೆ ಅವರ ಕಟ್‌ ಆಫ್‌ ಅಂಕ ಹೆಚ್ಚಿರುತ್ತದೆ. ಒಂದು ವೇಳೆ ಹೆಚ್ಚು ಬಾಲಕರು ಅರ್ಜಿ ಸಲ್ಲಿಸಿ ಅವರ ಅಂಕ ಹೆಚ್ಚಿದ್ದರೆ, ಕಟ್‌ ಆಫ್‌ ಅಂಕವೂ ಹೆಚ್ಚಾಗುತ್ತದೆ’ ಎಂದು ವಿವರಿಸಿದರು.

‘ಈ ಬಾರಿ ಸುಮಾರು 3,500 ಪ್ರವೇಶ ಅರ್ಜಿಗಳನ್ನು ಸ್ವೀಕರಿಸಿದ್ದೇವೆ. ಒಟ್ಟು 800 ಸೀಟುಗಳು ಇವೆ. ವಾಣಿಜ್ಯ ವಿಭಾಗದಲ್ಲಿ ಶೇ 85ರಷ್ಟು ಕಟ್‌ ಆಫ್‌ ಅಂಕ ನಿಂತಿದೆ. ಈ ವರ್ಷ ಪಿಯುಸಿಯಲ್ಲಿ ವಾಣಿಜ್ಯ ವಿಭಾಗಕ್ಕೆ ಬೇಡಿಕೆ ಹೆಚ್ಚಿದೆ’ ಎಂದು ತಿಳಿಸಿದರು.

ಎನ್‌ಎಂಕೆಆರ್‌ವಿ ಕಾಲೇಜಿನ ಪ್ರಾಂಶುಪಾಲರಾದ ಸ್ನೇಹಲತಾ ನಾಡಿಗೇರ್‌, ‘ನಮ್ಮ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ 240 ಸೀಟುಗಳಿವೆ. ಯಾವುದೇ ರೀತಿ ಕಟ್‌ ಆಫ್‌ ಅಂಕ ಇಲ್ಲ. ಶೇ 60 ಪಡೆದ ವಿದ್ಯಾರ್ಥಿಗಳಿಗೆ ಸೀಟು ನೀಡುತ್ತೇವೆ’ ಎಂದು ತಿಳಿಸಿದರು.

ಪಿಇಎಸ್‌ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ಎ.ವಿ. ಚಂದ್ರಶೇಖರ್, ‘ಈ ವರ್ಷ ವಿಜ್ಞಾನ, ವಾಣಿಜ್ಯ ವಿಷಯಕ್ಕೆ ವಿದ್ಯಾರ್ಥಿಗಳು ಸಮಾನ ಒಲವು ತೋರಿದ್ದಾರೆ. ಉದ್ಯೋಗಾವಕಾಶಗಳು ಹೆಚ್ಚಿರುವ ಕೋರ್ಸ್‌ಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 3,900 ಅರ್ಜಿ ಸ್ವೀಕರಿಸಿದ್ದೇವೆ’ ಎಂದು ಹೇಳಿದರು.

‘ಮಲ್ಲೇಶ್ವರದ ಎಂಇಎಸ್ ಕಾಲೇಜು 10,000 ಅರ್ಜಿಗಳನ್ನು ಸ್ವೀಕರಿಸಿದೆ. ವಿಜ್ಞಾನ ವಿಭಾಗದಲ್ಲಿ ಶೇ 97ರಷ್ಟು ಕಟ್‌ ಆಫ್‌ ಅಂಕ ಇದೆ. ವಾಣಿಜ್ಯ ವಿಭಾಗದಲ್ಲಿ ಶೇ 94ರಷ್ಟು ಹಾಗೂ ಕಲಾ ವಿಭಾಗದಲ್ಲಿ ಶೇ 80 ಕಟ್‌ ಆಫ್‌ ಅಂಕವಿದೆ. ಕಳೆದ ಬಾರಿಗಿಂತ ಬಹಳ ವ್ಯತ್ಯಾಸವಿಲ್ಲದಿದ್ದರೂ ಈ ಬಾರಿ ಕಟ್‌ ಆಫ್‌ ಅಂಕ ಇಳಿಕೆಯಾಗಿದೆ’ ಎಂದು ಎಂಇಎಸ್‌ ಕಾಲೇಜಿನ ಸಿಬ್ಬಂದಿಯೊಬ್ಬರು ಹೇಳಿದರು.

ಸುರಾನ ಕಾಲೇಜು ಪ್ರಾಂಶುಪಾಲ ಬಿ.ಆರ್‌. ಚಂದ್ರಶೇಖರಪ್ಪ, ‘ನಮ್ಮಲ್ಲಿ ಒಟ್ಟು 500 ಸೀಟುಗಳಿದ್ದು, ಇದಕ್ಕೆ 1800 ಅರ್ಜಿಗಳನ್ನು ಸ್ವೀಕರಿಸಿದ್ದೇವೆ. ಮೊದಲ ಪಟ್ಟಿ ಪ್ರಕಟಿಸಿದ್ದು, ವಿಜ್ಞಾನಕ್ಕೆ ಶೇ 80, ವಾಣಿಜ್ಯ ಶೇ 69 ಹಾಗೂ ಕಲಾ ವಿಭಾಗದಲ್ಲಿ ಶೇ 50 ಕಟ್‌ ಆಫ್‌ ಅಂಕವಿದೆ’ ಎಂದು ತಿಳಿಸಿದರು.

ಪ್ರವೇಶ ಶುಲ್ಕ ನಿಗದಿ: 2017-18ನೇ ಸಾಲಿಗೆ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳಲ್ಲಿನ ಕೋರ್ಸ್​ಗಳ ಪ್ರವೇಶಕ್ಕೆ ಶಿಕ್ಷಣ ಇಲಾಖೆ ಶುಲ್ಕ ನಿಗದಿ ಮಾಡಿದೆ. ಆ ಪ್ರಕಾರವಾಗಿ ಅರ್ಜಿ, ಪ್ರವೇಶ, ಪಾಠ ಶುಲ್ಕ ಸೇರಿ ₹1,920 ಇರುತ್ತದೆ. ನೋಂದಣಿ, ಪರೀಕ್ಷಾ ಮತ್ತು ಕ್ರೀಡಾಭಿವೃದ್ಧಿ ಶುಲ್ಕವನ್ನು ಆಯಾ ವಿಶ್ವವಿದ್ಯಾಲಯಗಳು ನಿಗದಿಪಡಿಸಿರುವಂತೆ ಪಡೆಯಬೇಕೆಂದು ಇಲಾಖೆ ಸೂಚಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry