ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಿಸ್‌ ಒಪ್ಪಂದ: ಅಮೆರಿಕ ಹೊರಕ್ಕೆ

Last Updated 3 ಜೂನ್ 2017, 3:51 IST
ಅಕ್ಷರ ಗಾತ್ರ

ವಾಷಿಂಗ್ಟನ್‌ : ಹವಾಮಾನ ಬದಲಾವಣೆಯನ್ನು ತಡೆಯುವುದಕ್ಕಾಗಿ ಜಾಗತಿಕ ಮಟ್ಟದಲ್ಲಿ 2015ರಲ್ಲಿ ಮಾಡಲಾದ ಮಹತ್ವದ ಪ್ಯಾರಿಸ್‌ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿದೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ.

ಭಾರತ ಮತ್ತು ಚೀನಾದಂತಹ ದೇಶಗಳಿಗೆ ಲಾಭಕರವಾಗಿರುವ ಈ  ಕ್ರೂರ ಒಪ್ಪಂದ ಅಮೆರಿಕಕ್ಕೆ ಅನ್ಯಾಯ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ಆದರೆ ಟ್ರಂಪ್‌ ಅವರ ಈ ನಿರ್ಧಾರಕ್ಕೆ ಜಾಗತಿಕ ರಾಜಕೀಯ  ಮತ್ತು ಉದ್ಯಮ ನಾಯಕರಿಂದ ಭಾರಿ ಆಕ್ರೋಶ ಮತ್ತು ಖಂಡನೆ ವ್ಯಕ್ತವಾಗಿದೆ.

ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದಾಗ ಟ್ರಂಪ್‌ ಅವರು ‘ಅಮೆರಿಕವೇ ಮೊದಲು’ ಎಂಬ ಸಂದೇಶ ನೀಡಿದ್ದರು. ಈ ನಿರ್ಧಾರ ಅದರ  ಮುಂದುವರಿದ ಭಾಗವಾಗಿದೆ. ಜತೆಗೆ ಇದು ಅವರ ಚುನಾವಣಾ ಭರವಸೆಯೂ ಹೌದು.

‘ಪ್ಯಾರಿಸ್‌ ಒಪ್ಪಂದವು ಅಮೆರಿಕದ ಅರ್ಥವ್ಯವಸ್ಥೆಗೆ ಮಾರಕವಾಗಿದೆ.  ಉದ್ಯೋಗಾವಕಾಶಗಳನ್ನು ಕಡಿಮೆ ಮಾಡುತ್ತದೆ. ಅಮೆರಿಕದ ಸಾರ್ವಭೌಮತ್ವವನ್ನು ದುರ್ಬಲಗೊಳಿಸುತ್ತದೆ’ ಎಂದು ಟ್ರಂಪ್ ವಾದಿಸಿದ್ದಾರೆ.

ಜಗತ್ತಿನ ಇತರ ದೇಶಗಳ ಮುಂದೆ ಅಮೆರಿಕವನ್ನು ಶಾಶ್ವತವಾಗಿ ದುರ್ಬಲಗೊಳಿಸುತ್ತದೆ ಎಂದೂ ಅವರು ಹೇಳಿದ್ದಾರೆ.

‘ಹವಾಮಾನ ಬದಲಾವಣೆ ಎಂಬುದು ಒಂದು ವಂಚನೆ. ಅಮೆರಿಕದ ಪಾಲಿಗೆ ನ್ಯಾಯಯುತವಾಗಿರುವ ರೀತಿಯಲ್ಲಿ ಪ್ಯಾರಿಸ್‌ ಒಪ್ಪಂದದ ಮರುಸಂಧಾನಕ್ಕೆ ಸಿದ್ಧ. ಅದಿಲ್ಲದಿದ್ದರೆ ಹೊಸ ಒಪ್ಪಂದ ಮಾಡಿಕೊಳ್ಳಲೂ ಸಿದ್ಧ’ ಎಂದು ಅವರು ತಿಳಿಸಿದ್ದಾರೆ.

ವಿದ್ಯುತ್‌ ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಗೆ ಹಿಂದಿನ ಬರಾಕ್‌ ಒಬಾಮ ಸರ್ಕಾರ ನೀಡಿದ್ದ ಭಾರಿ ಹೊಡೆತವನ್ನು ಟ್ರಂಪ್‌ ಸರಿಪಡಿಸಿದ್ದಾರೆ ಎಂದು ರಿಪಬ್ಲಿಕನ್ ಪಕ್ಷದ ಸಂಸದ ಮಿಚ್‌ ಮೆಕ್‌ಕಾನೆಲ್‌ ಹೇಳಿದ್ದಾರೆ.

ಒಬ್ಬಂಟಿ ಅಮೆರಿಕ: ಆದರೆ, ಜಗತ್ತಿನ ಎಲ್ಲ ಪ್ರಮುಖ ದೇಶಗಳ ಮುಖ್ಯಸ್ಥರು ಟ್ರಂಪ್‌ ನಿರ್ಧಾರವನ್ನು ವಿರೋಧಿಸಿದ್ದಾರೆ. ಹಾಗಾಗಿ ಈಗ ಈ ವಿಚಾರದಲ್ಲಿ ಅಮೆರಿಕ ಒಬ್ಬಂಟಿ ಆದಂತಾಗಿದೆ.

‘ಮನುಕುಲದ ವಿವೇಕಕ್ಕೆ ಬೆನ್ನು ಹಾಕುವಂತಹ ನಿರ್ಧಾರವನ್ನು ಟ್ರಂಪ್‌ ಕೈಗೊಂಡಿದ್ದಾರೆ. ನನಗೆ ಭಾರಿ ನಿರಾಶೆ ಮಾತ್ರವಲ್ಲ ಸಿಟ್ಟು ಕೂಡ ಬಂದಿದೆ’ ಎಂದು ಜಪಾನ್‌ ಪರಿಸರ ಸಚಿವ ಕೊಯಿಚಿ ಯಮಮೊಟೊ ಹೇಳಿದ್ದಾರೆ.

ಜರ್ಮನಿಯ ಚಾನ್ಸೆಲರ್‌ ಏಂಜೆಲಾ ಮರ್ಕೆಲ್‌, ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುವೆಲ್‌ ಮ್ಯಾಕ್ರೊನ್‌ ಮತ್ತು ಇಟಲಿ ಪ್ರಧಾನಿ ಪಾವ್ಲೊ ಜೆಂಟಿಲೊನಿ ಅವರು ಜಂಟಿ ಹೇಳಿಕೆ ನೀಡಿ ಒಪ್ಪಂದದ ಮರು ಚರ್ಚೆ ಸಾಧ್ಯವೇ ಇಲ್ಲ. ಹವಾಮಾನ ಬದಲಾವಣೆಗೆ ಎಲ್ಲ ದೇಶಗಳೂ ಪ್ರಯತ್ನಗಳನ್ನು ತ್ವರಿತಗೊಳಿಸಬೇಕು ಎಂದು ಕರೆ ನೀಡಿದ್ದಾರೆ.

ಒಪ್ಪಂದ ಏನು?
ಕೈಗಾರಿಕೀಕರಣದ ದಿನಗಳಲ್ಲಿ ಇದ್ದುದಕ್ಕಿಂತ ಜಾಗತಿಕ ತಾಪಮಾನ  ಶೇ 2 ಡಿಗ್ರಿ ಸೆಲ್ಸಿಯಸ್‌ಗಿಂತ ಏರಿಕೆ ಆಗದಂತೆ ನೋಡಿಕೊಳ್ಳಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ಏರಿಕೆಯನ್ನು ಶೇ 1.5 ಡಿಗ್ರಿ ಸೆಲ್ಸಿಯಸ್‌ನೊಳಗೇ ಇರಿಸುವುದು ಒಪ್ಪಂದದ ಗುರಿಯಾಗಿದೆ.

ಇತರ ನಾಯಕರು ಮತ್ತು ಇತರ ದೇಶಗಳು ನಮ್ಮನ್ನು ನೋಡಿ ಇನ್ನು ಮುಂದೆ ನಗುವುದು ಬೇಡ. ಇನ್ನು ಅವರು ನಗಲಾರರು ಕೂಡ
ಡೊನಾಲ್ಡ್‌ ಟ್ರಂಪ್‌, ಅಮೆರಿಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT