ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷತಾ ಪರೀಕ್ಷೆಯಲ್ಲಿ ‘ನಮ್ಮ ಮೆಟ್ರೊ’ ಉತ್ತೀರ್ಣ

Last Updated 2 ಜೂನ್ 2017, 19:56 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಮೊದಲ ಹಂತದ ಉತ್ತರ–ದಕ್ಷಿಣ ಕಾರಿಡಾರ್‌ನ ಯಲಚೇನಹಳ್ಳಿ– ಸಂಪಿಗೆ ರಸ್ತೆ ಮಾರ್ಗ ಸುರಕ್ಷತಾ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದೆ.  ಈ ಮಾರ್ಗದ ತಪಾಸಣೆ ಪೂರ್ಣಗೊಳಿಸಿರುವ ರೈಲು ಸುರಕ್ಷತಾ ಆಯುಕ್ತ ಕೆ.ಎ.ಮನೋಹರನ್‌ ಅವರು ಮುಂದಿನ ವಾರವೇ ಸುರಕ್ಷತಾ ಪ್ರಮಾಣಪತ್ರ ಸಲ್ಲಿಸುವ ನಿರೀಕ್ಷೆ ಇದೆ.

‘ನಾವು ನಾಲ್ಕೂವರೆ ದಿನಗಳ ಕಾಲ ಈ ಮಾರ್ಗದ ತಪಾಸಣೆ ನಡೆಸಿದ್ದೇವೆ. ಎಲ್ಲ ರೀತಿಯ ಪರೀಕ್ಷೆಗಳು ಗುರುವಾರ ಪೂರ್ಣಗೊಂಡಿವೆ. ಈ ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಮುನ್ನ  ಮಹತ್ತರ ಬದಲಾವಣೆ ಮಾಡಬೇಕಾದ ಅಗತ್ಯ ಕಂಡುಬಂದಿಲ್ಲ’ ಎಂದು  ಕೆ.ಎ.ಮನೋಹರನ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತಪಾಸಣೆ ವೇಳೆ ಕಲೆ ಹಾಕಿರುವ ಕೆಲವು ದಾಖಲೆಗಳ ವಿಶ್ಲೇಷಣೆ ನಡೆಸುತ್ತಿದ್ದೇವೆ. ಈ ಕಾರ್ಯ ಪೂರ್ಣಗೊಳಿಸಿ ವರದಿ ಸಿದ್ಧಪಡಿಸಲು ನಾಲ್ಕೈದು ದಿನಗಳು ತಗಲುತ್ತವೆ. ನಿರೀಕ್ಷೆಯಂತೆ ಎಲ್ಲವೂ ನಡೆದರೆ ಈ ಮಾರ್ಗದ ಸುರಕ್ಷತಾ ತಪಾಸಣೆಯ ವರದಿಯನ್ನು ಮುಂದಿನವಾರವೇ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) ಸಲ್ಲಿಸಲಿದ್ದೇವೆ’ ಎಂದು ಅವರು ತಿಳಿಸಿದರು.

ಸಂಪಿಗೆ ರಸ್ತೆಯಿಂದ ನ್ಯಾಷನಲ್‌ ಕಾಲೇಜು ಮೈದಾನದವರೆಗೆ ಸುರಂಗ ಮಾರ್ಗವನ್ನು ಹೊಂದಿರುವ ಈ ಮಾರ್ಗವು ಅಲ್ಲಿಂದ ಯಲಚೇನಹಳ್ಳಿವರೆಗೆ ಎತ್ತರಿಸಿದ ಮಾರ್ಗವನ್ನು ಹೊಂದಿದೆ.

‘ಎತ್ತರಿಸಿದ ಮಾರ್ಗದಲ್ಲಿ ಬಹುತೇಕ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿವೆ. ಅವುಗಳಲ್ಲಿ ಯಾವುದೇ ಪ್ರಮುಖ ದೋಷಗಳು ಕಂಡು ಬಂದಿಲ್ಲ. ಸುರಂಗ ಮಾರ್ಗದಲ್ಲಿ ಸಣ್ಣ ಪುಟ್ಟ ಕೆಲಸಗಳು ಬಾಕಿ ಇವೆ. ಸುರಂಗ ಮಾರ್ಗದ ನಿಲ್ದಾಣಗಳಲ್ಲಿ ಕೆಲವು ಕೆಲಸಗಳು ಅಂತಿಮ ಹಂತದಲ್ಲಿವೆ. ಮಾರ್ಗದ ಕಾರ್ಯನಿರ್ವಹಣೆಗೆ ಸಂಬಂಧಿಸಿದ  ಕೆಲವು ತಂತ್ರಾಂಶಗಳನ್ನು  ಅಳವಡಿಸುವುದು ಬಾಕಿ ಇವೆ. ಇವುಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವುದಾಗಿ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲ ಭರವಸೆ ನೀಡಿದ್ದಾರೆ’ ಎಂದರು.

ಈ ಮಾರ್ಗವು ಜೂನ್‌ ಅಂತ್ಯದೊಳಗೆ ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗಬಹುದೇ ಎಂಬ ಪ್ರಶ್ನೆಗೆ, ‘ಇದಕ್ಕೆ  ನೀವು ಬಿಎಂಆರ್‌ಸಿಎಲ್‌ ಅಧಿಕಾರಿಗಳಿಂದಲೇ ಉತ್ತರ ಪಡೆಯಬೇಕು. ನಾನು ಇಷ್ಟನ್ನು ಮಾತ್ರ ಹೇಳಬಲ್ಲೆ, ನಿಗಮದವರು ಜೂನ್‌ ತಿಂಗಳಲ್ಲೇ ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭಿಸುವ ಉದ್ದೇಶ ಹೊಂದಿದ್ದರೆ, ಅದಕ್ಕೆ ನಮ್ಮಿಂದಾಗಿ ಯಾವುದೇ ಅಡ್ಡಿ ಆಗದು’ ಎಂದು ಅವರು ಸ್ಪಷ್ಟಪಡಿಸಿದರು.

ಈ ತಿಂಗಳೇ ಉದ್ಘಾಟನೆ?: ‘ಉದ್ಘಾಟನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರನ್ನು ಆಹ್ವಾನಿಸಲಾಗಿದೆ. ಅವರು ಈ ಸಂಭ್ರಮದಲ್ಲಿ  ಭಾಗಿಯಾಗಲು ಒಪ್ಪಿಗೆಯನ್ನೂ ಸೂಚಿಸಿದ್ದಾರೆ. ಅವರಿಗೆ ಹೊಂದಾಣಿಕೆ ಆಗುವ  ದಿನಾಂಕವನ್ನು ನೋಡಿಕೊಂಡು ಈ ತಿಂಗಳ  ಎರಡನೇ ವಾರ ಅಥವಾ ಮೂರನೇ ವಾರ ಕಾರ್ಯಕ್ರಮಕ್ಕೆ ದಿನಾಂಕವನ್ನು ನಿಗದಿಪಡಿಸುವ ಚಿಂತನೆ ಇದೆ’ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ರೈಲು ಸುರಕ್ಷತಾ ಆಯುಕ್ತರ ವರದಿಯ ನಿರೀಕ್ಷೆಯಲ್ಲಿರುವ ಬಿಎಂಆರ್‌ಸಿಎಲ್‌, ಬಾಕಿ ಉಳಿದಿರುವ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಮೊದಲ ಹಂತವನ್ನು ಲೋಕಾರ್ಪಣೆ ಮಾಡಲು ಸಿದ್ಧತೆ ನಡೆಸುತ್ತಿದೆ.

ಈ ಮಾರ್ಗವು ಮೆಜೆಸ್ಟಿಕ್‌  ಇಂಟರ್‌ಚೇಂಜ್‌ ನಿಲ್ದಾಣದಲ್ಲಿ ಪೂರ್ವ ಪಶ್ಚಿಮ ಕಾರಿಡಾರ್‌ನ ಮಾರ್ಗದ ಕೆಳಗಿನ ಅಂತಸ್ತಿನ ಮೂಲಕ ಹಾದುಹೋಗುತ್ತದೆ. ಇಲ್ಲಿಗೆ ಕಾನ್‌ಕೋರ್ಸ್‌ ಹಂತದಿಂದ ಹಾಗೂ ಪೂರ್ವ–ಪಶ್ಚಿಮ ಕಾರಿಡಾರ್‌ನಿಂದ ಸಂಪರ್ಕ ಕಲ್ಪಿಸುವ ಬಹುತೇಕ ಕೆಲಸ ಪೂರ್ಣಗೊಂಡಿದೆ. ಸುಣ್ಣ ಬಣ್ಣ ಬಳಿಯುವ ಕೆಲಸಗಳಷ್ಟೇ ಬಾಕಿ ಇವೆ.

ನಾಲ್ಕೂ ದಿಕ್ಕಿಗೂ ಮೆಟ್ರೊ ಸಂಪರ್ಕ: ಸದ್ಯ ಪೂರ್ವ– ಪಶ್ಚಿಮ ಕಾರಿಡಾರ್‌ನಲ್ಲಿ ಮೈಸೂರು ರಸ್ತೆ– ಬೈಯಪ್ಪನಹಳ್ಳಿ ಮಾರ್ಗದಲ್ಲಿ ಹಾಗೂ ಉತ್ತರ– ದಕ್ಷಿಣ ಕಾರಿಡಾರ್‌ನಲ್ಲಿ ನಾಗಸಂದ್ರ– ಸಂಪಿಗೆರಸ್ತೆ ನಡುವೆ  ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಯಲಚೇನಹಳ್ಳಿ– ಹಾಗೂ ಸಂಪಿಗೆರಸ್ತೆ ನಡುವಿನ ಹಾದಿ ಬೆಸೆದ ಬಳಿಕ ನಾಲ್ಕೂ ದಿಕ್ಕುಗಳಿಗೂ ಮೆಟ್ರೊ ಮೂಲಕ ಪ್ರಯಾಣಿಸುವ ಅವಕಾಶ ನಗರದ ಜನತೆಗೆ ಸಿಗಲಿದೆ.

**

ದುಪ್ಪಟ್ಟಾಗಲಿದೆ ಪ್ರಯಾಣಿಕರ ಸಂಖ್ಯೆ

‘ಸದ್ಯ ದಿನವೊಂದಕ್ಕೆ ಸರಾಸರಿ 2.40 ಲಕ್ಷ ಪ್ರಯಾಣಿಕರು ಮೆಟ್ರೊ ಬಳಸುತ್ತಿದ್ದಾರೆ. ಉತ್ತರ–ದಕ್ಷಿಣ ಹಾಗೂ ಪೂರ್ವ–ಪಶ್ಚಿಮ ಕಾರಿಡಾರ್‌ಗಳ ನಡುವೆ ಮೆಟ್ರೊ ನೇರ ಸಂಪರ್ಕ ಸಾಧ್ಯವಾದ ಬಳಿಕ ಪ್ರಯಾಣಿಕರ ಸಂಖ್ಯೆ 5 ಲಕ್ಷ ದಾಟಲಿದೆ’ ಎಂದು ನಿಗಮದ ಮೂಲಗಳು ತಿಳಿಸಿವೆ.

‘ಇಷ್ಟೊಂದು ಪ್ರಯಾಣಿಕರಿಗೆ ಸೇವೆ ಒದಗಿಸುವುದು ನಮ್ಮ ಪಾಲಿಗೂ ಸವಾಲಿನ ವಿಷಯ. ಪ್ರತಿ ಮೂರು ನಿಮಿಷಕ್ಕೊಂದು ರೈಲನ್ನು ಹೊರಡಿಸುವ ಸಾಮರ್ಥ್ಯವನ್ನು  ಹೊಂದಿದ್ದೇವೆ. ಅಷ್ಟಾಗಿಯೂ ಪ್ರಯಾಣಿಕರ ದಟ್ಟಣೆ ಹೆಚ್ಚು ಇದ್ದರೆ, ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸಬೇಕಾಗುತ್ತದೆ. ಒಂದು ರೈಲಿನಲ್ಲಿ ಗರಿಷ್ಠ ಆರು ಬೋಗಿಗಳನ್ನು ಹೊಂದಲು ಅವಕಾಶವಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

150 ಬೋಗಿಗಳ ಖರೀದಿಗೆ ನಿಗಮವು ಬಿಎಂಇಎಲ್‌ ಜೊತೆ ಒಪ್ಪಂದ ಮಾಡಿಕೊಂಡಿದೆ. ಆದರೆ, 2018ರ ಜೂನ್ ಬಳಿಕವಷ್ಟೇ ಈ ಬೋಗಿಗಳು ಪೂರೈಕೆ ಆಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT