ಭೋಗ್ಯದ ಷರತ್ತು ಉಲ್ಲಂಘನೆ ಭೂಮಿ ಸ್ವಾಧೀನಕ್ಕೆ ಆದೇಶ

7

ಭೋಗ್ಯದ ಷರತ್ತು ಉಲ್ಲಂಘನೆ ಭೂಮಿ ಸ್ವಾಧೀನಕ್ಕೆ ಆದೇಶ

Published:
Updated:
ಭೋಗ್ಯದ ಷರತ್ತು ಉಲ್ಲಂಘನೆ ಭೂಮಿ ಸ್ವಾಧೀನಕ್ಕೆ ಆದೇಶ

ಬೆಂಗಳೂರು: ಭೋಗ್ಯದ (ಲೀಸ್‌) ಷರತ್ತು ಉಲ್ಲಂಘಿಸಿದ ಕಾರಣಕ್ಕೆ ಮಾರತಹಳ್ಳಿ ಸಮೀಪದ ಮುನ್ನೇಕೊಳಾಲ್‌ನ ‘ನವಜೀವನ ಟ್ರಸ್ಟ್‌’ನ 9 ಎಕರೆ 18 ಗುಂಟೆ ಜಾಗವನ್ನು ಸ್ವಾಧೀನಕ್ಕೆ ಪಡೆಯಲು ನಗರ ಜಿಲ್ಲಾಧಿಕಾರಿ ವಿ.ಶಂಕರ್‌ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಈ ಗ್ರಾಮದಲ್ಲಿ ಚದರ ಅಡಿಗೆ ₹15,000 ಮೌಲ್ಯ ಇದ್ದು, ಈ ಜಾಗದ ಒಟ್ಟು ಮೌಲ್ಯ ₹550 ಕೋಟಿ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಆದೇಶದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಕುಷ್ಠ ರೋಗಿಗಳ ಪುನರ್ವಸತಿ ಚಟುವಟಿಕೆಗಳನ್ನು ನಡೆಸಲು ಟ್ರಸ್ಟ್‌ಗೆ 9 ಎಕರೆ 20 ಗುಂಟೆ ಜಾಗವನ್ನು ಕಂದಾಯ ಇಲಾಖೆ ಮಂಜೂರು ಮಾಡಿತ್ತು. 2 ಗುಂಟೆ ಜಾಗವನ್ನಷ್ಟೇ ಕುಷ್ಠ ರೋಗಿಗಳ ಪುನವರ್ಸತಿ ಕೇಂದ್ರದ ಚಟುವಟಿಕೆಗೆ ಬಳಸಲಾಗುತ್ತಿದೆ. ಉಳಿದ ಜಾಗದಲ್ಲಿ ಟ್ರಸ್ಟ್‌ 12 ವರ್ಷಗಳ ಹಿಂದೆ ಸಿಬಿಎಸ್‌ಇ ಶಾಲೆಯೊಂದನ್ನು ಆರಂಭಿಸಿತ್ತು. ಶಾಲೆಯಲ್ಲಿ ಸದ್ಯ 1,008 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 80 ಬೋಧಕ– ಬೋಧಕೇತರ ಸಿಬ್ಬಂದಿ ಇದ್ದಾರೆ. ಸದ್ಯ ಇಲ್ಲಿ ಒಂದರಿಂದ 11ನೇ ತರಗತಿಯವರೆಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ.

ಷರತ್ತು ಉಲ್ಲಂಘಿಸಿದ ಕಾರಣಕ್ಕೆ ಕೆಲವು ದಿನಗಳ ಹಿಂದೆ ಜಿಲ್ಲಾಡಳಿತ ಟ್ರಸ್ಟ್‌ಗೆ ನೋಟಿಸ್‌ ಜಾರಿ ಮಾಡಿತ್ತು. ತಮ್ಮಿಂದ ಲೋಪ ಆಗಿದೆ ಎಂದು ಟ್ರಸ್ಟ್ ಒಪ್ಪಿಕೊಂಡಿದೆ.

‘ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಇಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಲಾಗಿದೆ. ಈ ಜಾಗವನ್ನು ವಶಪಡಿಸಿಕೊಳ್ಳುವುದಕ್ಕೆ ನಮ್ಮ ಅಭ್ಯಂತರ ಇಲ್ಲ. ಏಕಾಏಕಿ ತರಗತಿಗಳನ್ನು ಸ್ಥಗಿತಗೊಳಿಸಬಾರದು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ   ಮುಂದಿನ ವರ್ಷದವರೆಗೆ ತರಗತಿಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಟ್ರಸ್ಟ್‌ ಮನವಿ ಮಾಡಿಕೊಂಡಿದೆ. 2018ಕ್ಕೆ ಭೋಗ್ಯದ ಅವಧಿ ಮುಕ್ತಾಯಗೊಳ್ಳಲಿದೆ.

‘ಶನಿವಾರ ಈ ಜಾಗವನ್ನು ವಶಕ್ಕೆ ಪಡೆದು ಫಲಕ ಹಾಕುತ್ತೇವೆ. ಬಳಿಕ ಜಿಲ್ಲಾಡಳಿತವೇ ಶಾಲೆಯನ್ನು ನಡೆಸಲಿದೆ. ತಹಶೀಲ್ದಾರ್‌ ಅವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗುತ್ತದೆ’ ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಂದಿನ ವರ್ಷ ಸಿಬಿಎಸ್‌ಇಯ ಮೊದಲ ತಂಡ ದ್ವಿತೀಯ ಪಿಯುಸಿ ಶಿಕ್ಷಣ ಪೂರ್ಣಗೊಳಿಸಲಿದೆ. ಆ ಬಳಿಕವೂ ಒಂದನೇ ತರಗತಿಗೆ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಬೇಕೇ ಎಂಬ ಬಗ್ಗೆ ಸ್ಪಷ್ಟೀಕರಣ ಕೋರಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಹಾಗೂ ಶಿಕ್ಷಣ ಇಲಾಖೆಗೆ ಪತ್ರ ಬರೆಯುತ್ತೇವೆ’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry