ಹೆಂಡತಿಯನ್ನು ವೇಶ್ಯೆ ಮಾಡು ಎಂದಿದ್ದಕ್ಕೆ ಹತ್ಯೆ

7

ಹೆಂಡತಿಯನ್ನು ವೇಶ್ಯೆ ಮಾಡು ಎಂದಿದ್ದಕ್ಕೆ ಹತ್ಯೆ

Published:
Updated:
ಹೆಂಡತಿಯನ್ನು ವೇಶ್ಯೆ ಮಾಡು ಎಂದಿದ್ದಕ್ಕೆ ಹತ್ಯೆ

ಬೆಂಗಳೂರು: ‘ನಿನ್ನ ಹೆಂಡತಿ ಸುಂದರವಾಗಿದ್ದಾಳೆ. ಆಕೆಯನ್ನು ನನ್ನ ಜತೆ ಕಳುಹಿಸಿದರೆ ತಿಂಗಳಿಗೆ ₹ 10 ಸಾವಿರ ಕೊಡುತ್ತೇನೆ....’

ಹೊಸೂರಿನ ಪ್ರಿಯಾ ಅಲಿಯಾಸ್ ಹೊನ್ನಮ್ಮ (26) ಅವರು ತಮ್ಮ ಸಂಬಂಧಿ ಮಾದೇಶ್‌ ಮುಂದೆ ಆಡಿದ ಈ ಮಾತುಗಳೇ, ಅವರ ಹತ್ಯೆಗೆ ಕಾರಣವಾದವು.

ಈಜೀಪುರ 20ನೇ ಅಡ್ಡರಸ್ತೆ ಮನೆಯೊಂದರಲ್ಲಿ ಮೇ 21ರಂದು ಪ್ರಿಯಾ ಅವರನ್ನು ಕುತ್ತಿಗೆ ಸೀಳಿ ಕೊಲೆಗೈದಿದ್ದ ಮಾದೇಶ್, ಕೃತ್ಯದ ಹಿಂದಿನ ಕತೆಯನ್ನು ಪೊಲೀಸರೆದುರು ಬಿಚ್ಚಿಟ್ಟಿದ್ದಾನೆ.

‘ಪತ್ನಿ ನಡತೆಯ ವಿಚಾರ’: ‘ಹೊಸೂರಿನ ನಂಜಾಪುರ ಗ್ರಾಮ ಪಂಚಾಯ್ತಿ ಸದಸ್ಯನಾಗಿದ್ದ ನಾನು, 2012ರಲ್ಲಿ ಪ್ರಿಯಾಳನ್ನು ನಗರಕ್ಕೆ ಕರೆದುಕೊಂಡು ಬಂದು ಅತ್ತಿಬೆಲೆಯ ಅಕ್ಕನ ಮನೆಯಲ್ಲಿ ಬಿಟ್ಟಿದ್ದೆ. ನನಗೆ ಮದುವೆಯಾಗಿದ್ದರೂ, ಆಕೆ ಮೇಲೆ ಅತಿಯಾದ ವ್ಯಾಮೋಹವಿತ್ತು. ಪತ್ನಿಯನ್ನು ತೊರೆದು ಆಕೆಯನ್ನು ವಿವಾಹವಾಗುವುದಕ್ಕೂ ನಿರ್ಧರಿಸಿದ್ದೆ’ ಎಂದು ಆರೋಪಿ ವಿಚಾರಣೆ ವೇಳೆ ಹೇಳಿದ್ದಾನೆ.

‘ಆದರೆ, ಆಕೆಯನ್ನು ನನ್ನ ಅಕ್ಕ ವೇಶ್ಯಾವಾಟಿಕೆಗೆ ದೂಡಿದಳು. ಈ ಮಧ್ಯೆ ಪ್ರಿಯಾಗೆ ಖಾಸಗಿ ಕಂಪೆನಿಯೊಂದರ ಉದ್ಯೋಗಿ ಜತೆ ವಿವಾಹವಾಯಿತು. ದಂಪತಿ ಕೆ.ಆರ್.ಪುರದಲ್ಲಿ ನೆಲೆಸಿದ್ದರು. ಮದುವೆಯಾದರೂ ಆಕೆ ವೇಶ್ಯಾವಾಟಿಕೆ ಬಿಡಲಿಲ್ಲ. ನನ್ನ ಜತೆಗಿನ ಸಲುಗೆಯನ್ನೂ ಹಾಗೆಯೇ ಮುಂದುವರಿಸಿದ್ದಳು.’

‘2016ರಲ್ಲಿ ಪತಿ ಬಿಟ್ಟು ಹೋದ ಬಳಿಕ ಆಕೆ ನೆರವು ಬಯಸಿ ನನ್ನ ಬಳಿ ಬಂದಳು. ರಾಮಮೂರ್ತಿನಗರದಲ್ಲಿ ಬಾಡಿಗೆ ಮನೆ ಮಾಡಿಕೊಟ್ಟಿದ್ದೆ. ಕೆಲಸ ಕೊಡಿಸುವುದಾಗಿ ದೂರದ ಸಂಬಂಧಿಯೊಬ್ಬಳನ್ನು ನಗರಕ್ಕೆ ಕರೆದುಕೊಂಡು ಬಂದ ಪ್ರಿಯಾ, ಆಕೆಯನ್ನೂ ವೇಶ್ಯಾವಾಟಿಕೆಗೆ ದೂಡಿದಳು.’

‘ಈ ನಡುವೆ ಪ್ರಿಯಾ ನನ್ನಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಳು. ಬೇರೆ ಗಂಡಸರ ಸಹವಾಸ ಹೆಚ್ಚಾಗಿತ್ತು. ಈ ಬಗ್ಗೆ ವಿಚಾರಿಸಲು ಮೇ ಮೊದಲ ವಾರದಲ್ಲಿ  ಮನೆಗೆ ಹೋಗಿದ್ದೆ. ಇಬ್ಬರ ನಡುವೆ ಜೋರು ವಾಗ್ವಾದ ನಡೆದಿತ್ತು. ಈ ಸಂದರ್ಭದಲ್ಲಿ, ‘ನಿನ್ನ ಹೆಂಡತಿ ನೋಡಲು ಚೆನ್ನಾಗಿದ್ದಾಳೆ. ನನ್ನ ಮನೆಯಲ್ಲಿ ಬಿಡು. ತಿಂಗಳಿಗೆ ₹ 10 ಸಾವಿರ ಕೊಡುತ್ತೇನೆ. ನಿನಗೂ ಅಗತ್ಯವಿದ್ದಾಗ ಆಕೆಯನ್ನೇ ಬಳಸಿಕೊಳ್ಳಬಹುದು’ ಎಂದಿದ್ದಳು. ಆ ಮಾತುಗಳು ಬಹಳ ಕಾಡಿದವು. ಅಂದು ಬೇರೆನೂ ಮಾತನಾಡದೆ ಮನೆಯಿಂದ ಹೊರಟು ಬಂದಿದ್ದೆ.’

‘ನನ್ನ ಪತ್ನಿಯ ನಡತೆ ಬಗ್ಗೆ ಮಾತನಾಡಿದ್ದನ್ನು ಸಹಿಸಲು ಆಗಲಿಲ್ಲ. ಪ್ರಿಯಾಳನ್ನು ಮುಗಿಸಲು ನಿರ್ಧರಿಸಿದೆ. ಅವರಿಬ್ಬರೂ ರಾಮಮೂರ್ತಿನಗರದಿಂದ ಈಜೀಪುರಕ್ಕೆ ವಾಸ್ತವ್ಯ ಬದಲಿಸಿದ ವಿಷಯ ತಿಳಿಯಿತು. ಮೇ 21ರ ಬೆಳಿಗ್ಗೆ ಅಲ್ಲಿಗೆ ಹೋಗಿ ಮನೆಯನ್ನು ಗುರುತಿಸಿದೆ. ನಂತರ ಅದೇ ದಿನ ರಾತ್ರಿ ಚಾಕುವಿನೊಂದಿಗೆ ಮನೆಗೆ ಹೋಗಿದ್ದೆ.’

‘ಗಿರಾಕಿ ಜತೆ ಹೋಗಿದ್ದಾಳೆ’: ‘ಮನೆಯಲ್ಲಿ ಪ್ರಿಯಾ ಒಬ್ಬಳೇ ಇದ್ದಳು. ಸಂಬಂಧಿ ಬಗ್ಗೆ ವಿಚಾರಿಸಿದಾಗ, ‘₹ 10,000ಕ್ಕೆ ಗಿರಾಕಿಯೊಬ್ಬನ ಜತೆ ಕಳುಹಿಸಿದ್ದೇನೆ. ಒಂದು ವಾರ ಆಕೆ ಮನೆಗೆ ಬರುವುದಿಲ್ಲ’ ಎಂದಳು. ರಾತ್ರಿ ಆಕೆಯ ಊಟ ಬಡಿಸಿದಳು. ನಂತರ ಎರಡು ಸಲ ಲೈಂಗಿಕ ಕ್ರಿಯೆಯನ್ನೂ ನಡೆಸಿದೆ. ಬೆಳಗಿನ ಜಾವ 3.30ರ ಸುಮಾರಿಗೆ ಆಕೆ ನಿದ್ರೆಗೆ ಜಾರಿದಳು. ಆಗ ಕುತ್ತಿಗೆ ಸೀಳಿ ಹತ್ಯೆಗೈದು ಮನೆಯಿಂದ ಹೊರನಡೆದಿದ್ದೆ’ ಎಂದು ಮಾದೇಶ್ ತನ್ನ ಕೃತ್ಯವನ್ನು ವಿವರಿಸಿದ್ದಾನೆ.

ಮೇ 24ರಂದು ಮನೆಯಿಂದ ದುರ್ವಾಸನೆ ಬರುತ್ತಿದ್ದರಿಂದ ಸ್ಥಳೀಯರು ಮನೆಯೊಳಗೆ ಹೋಗಿದ್ದರು. ಆಗ ಪ್ರಿಯಾ ಕೊಲೆ ಪ್ರಕರಣ ಬಯಲಾಗಿತ್ತು. ಆದರೆ, ಅವರ ಜತೆಗಿದ್ದ ಯುವತಿ ಕಾಣೆಯಾಗಿದ್ದರಿಂದ ಕೃತ್ಯದಲ್ಲಿ ಅವರ ಪಾತ್ರವಿರುವ ಬಗ್ಗೆ ಬಲವಾದ ಶಂಕೆ ವ್ಯಕ್ತವಾಗಿತ್ತು.

ಕೊನೆಗೂ ಸಿಕ್ಕ ಸಂಬಂಧಿ: ಈ ನಿಗೂಢ ಕೊಲೆ ಪ್ರಕರಣ ಭೇದಿಸಲು ಕಾರ್ಯಾಚರಣೆ ಪ್ರಾರಂಭಿಸಿದ ಪೊಲೀಸರು, ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ಮೇ 27ರಂದು  ಬಾಗಲೂರಿನಲ್ಲಿ ಮಾದೇಶ್‌ನನ್ನು ಪತ್ತೆ ಮಾಡಿದ್ದರು. ಆತನನ್ನು ವಿಚಾರಣೆಗೆ ಒಳಪಡಿಸಿದಾಗ, ಪ್ರಿಯಾ ಜತೆಗಿದ್ದ ಯುವತಿಯನ್ನು ಮುರುಗನ್ ಎಂಬಾತ ಕರೆದುಕೊಂಡು ಹೋಗಿರುವ ವಿಚಾರ ಗೊತ್ತಾಗಿತ್ತು.

‘ಮುರುಗನ್‌ಗೆ ಯುವತಿಯೊಬ್ಬಳ ಮೂಲಕ ಕರೆ ಮಾಡಿಸಿ, ‘ನಾನು ಕೆಲಸ ಅರಸಿ ನಗರಕ್ಕೆ ಬಂದಿದ್ದೇನೆ. ಮಾದೇಶ್ ಅವರು ನಿಮ್ಮನ್ನು ಸಂಪರ್ಕಿಸುವಂತೆ ಮೊಬೈಲ್ ಸಂಖ್ಯೆ ಕೊಟ್ಟರು’ ಎಂದು ಹೇಳಿಸಿದೆವು. ಆಗ ಆತ, ಹಲಸೂರು ಗೇಟ್‌ಗೆ ಬರುವಂತೆ ತಿಳಿಸಿದ. ಯುವತಿಯನ್ನು ಕರೆದುಕೊಂಡು ಅಲ್ಲಿಗೆ ಹೋಗಿ ಮುರುಗನ್‌ನನ್ನು ವಶಕ್ಕೆ ಪಡೆದೆವು. ಆದರೆ, ಆತ ಪ್ರಿಯಾಳ ಸಂಬಂಧಿಯನ್ನು ಸಿದ್ಧಾರ್ಥ ಎಂಬಾತನ ಜತೆ ಮಡಿಕೇರಿಗೆ ಕಳುಹಿಸಿದ್ದ’ ಎಂದು ತನಿಖಾಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುರುಗನ್‌ನಿಂದ ಕರೆ ಮಾಡಿಸಿ ಸುರೇಂದ್ರ ಹಾಗೂ ಯುವತಿಯನ್ನು ಕರೆಸಿಕೊಂಡೆವು. ಪ್ರಿಯಾ ಹತ್ಯೆಯಲ್ಲಿ ಇವರ ಪಾತ್ರವಿಲ್ಲ ಎಂಬುದು  ಖಚಿತವಾಯಿತು.  ಆದರೆ, ವೇಶ್ಯಾವಾಟಿಕೆ ಆರೋಪದಡಿ  ಮುರುಗನ್ ಹಾಗೂ ಸುರೇಂದ್ರ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದೇವೆ. ಈ ಪ್ರಕರಣದಲ್ಲಿ ಪ್ರಿಯಾ ಅವರನ್ನೇ 1ನೇ ಆರೋಪಿಯನ್ನಾಗಿ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.

**

ಅಲ್ಲಿ ಟಿ.ವಿ ಇರಲಿಲ್ಲ

‘ಮುರುಗಣ್ಣ ಹೇಳಿದಂತೆ ಸುರೇಂದ್ರ ಜತೆ ಮಡಿಕೇರಿಗೆ ಹೋಗಿದ್ದೆ. ಒಂದು ವಾರ ನನ್ನನ್ನು ಹೋಟೆಲ್‌ನ ಕೋಣೆಯೊಂದರಲ್ಲಿ ಕೂಡಿಟ್ಟಿದ್ದರು. ಅಲ್ಲಿ ಟಿ.ವಿಯೂ ಇರಲಿಲ್ಲ. ಮೊಬೈಲ್ ಕೂಡ ತೆಗೆದುಕೊಂಡು ಹೋಗಿರಲಿಲ್ಲ. ಹೀಗಾಗಿ, ಪ್ರಿಯಾ ಕೊಲೆಯಾಗಿರುವ ವಿಚಾರ ನನಗೆ ಗೊತ್ತಿರಲಿಲ್ಲ’ ಎಂದು ಆ ಯುವತಿ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ, ಬುದ್ಧಿ ಹೇಳಿ ಬಿಟ್ಟು ಕಳುಹಿಸಿದ್ದೇವೆ ಎಂದು ತನಿಖಾಧಿಕಾರಿಗಳು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry