ಪ್ರೌಢಶಾಲೆಗೆ ಡಿಜಿಟಲ್‌ ಲೈಬ್ರರಿ: ಭರವಸೆ

7
ಶಾಲಾ ಪ್ರಾರಂಭೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ

ಪ್ರೌಢಶಾಲೆಗೆ ಡಿಜಿಟಲ್‌ ಲೈಬ್ರರಿ: ಭರವಸೆ

Published:
Updated:
ಪ್ರೌಢಶಾಲೆಗೆ ಡಿಜಿಟಲ್‌ ಲೈಬ್ರರಿ: ಭರವಸೆ

ದಾವಣಗೆರೆ: ಮಹಾತ್ಮ ಗಾಂಧೀಜಿ ಭೇಟಿ ನೀಡಿದ್ದ ಈ ಪ್ರೌಢಶಾಲೆಯಲ್ಲಿ ಡಿಜಿಟಲ್ ಲೈಬ್ರರಿ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.

ಮಲ್ಲಿಕಾರ್ಜುನ ಭರವಸೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ ಸಂಯುಕ್ತವಾಗಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ) ಶುಕ್ರವಾರ ಏರ್ಪಡಿಸಿದ್ದ ಶಾಲಾ ಪ್ರಾರಂಭೋತ್ಸವ ಹಾಗೂ 2017–18ನೇ ಸಾಲಿನ ಶಾಲಾ ಚಟುವಟಿಕೆಗಳ ಆರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಹಿಂದುಳಿಯದಂತೆ, ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುವ ರೀತಿಯಲ್ಲಿ ತಯಾರು ಮಾಡಬೇಕಾಗಿದೆ. ಸರ್ಕಾರಿ ಶಾಲೆಗಳಿಗೆ  ಎಲ್ಲಾ ರೀತಿಯ ಸೌಲಭ್ಯಗಳನ್ನು ಸರ್ಕಾರ ನೀಡಿದೆ. ಇಂದು ಉದ್ಘಾಟನೆಗೊಂಡ ಕಂಪ್ಯೂಟರ್ ಕೊಠಡಿ, ಲೈಬ್ರರಿ ಕೊಠಡಿಗಳೇ ಅದಕ್ಕೆ ಉದಾಹರಣೆ ಎಂದು ಹೇಳಿದರು.

ಒಂದು ಕಾಲದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ದಾವಣಗೆರೆ ಜಿಲ್ಲೆ ಪ್ರಥಮ ಹತ್ತರ ಸ್ಥಾನದಲ್ಲಿರುತ್ತಿತ್ತು. ಕಳೆದ ವರ್ಷ 17ನೇ ಸ್ಥಾನಕ್ಕೆ ಕುಸಿದಿದ್ದ ಫಲಿತಾಂಶ ಈ ಸಾಲಿನಲ್ಲಿ 14ನೇ ಸ್ಥಾನಕ್ಕೆ ಜಿಗಿದಿರುವುದು ಸ್ವಲ್ಪ ಮಟ್ಟಿನ ಸಮಾಧಾನ ತಂದಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಶಾಲೆಯ ಶಿಕ್ಷಕರು ಅರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಿ ಫಲಿತಾಂಶದಲ್ಲಿ ಸುಧಾರಣೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕ ಮಾತಾಡಿದ ಡಿಡಿಪಿಐ ಎಚ್.ಎಂ.ಪ್ರೇಮಾ, ಜಿಲ್ಲೆಯಲ್ಲಿ ಒಟ್ಟು 302 ಶಾಲೆಗಳು ಶೇ 80 ರಷ್ಟು ಫಲಿತಾಂಶ ದಾಖಲಿಸಿವೆ. 1,500 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಶೇಕಡ ನೂರರಷ್ಟು ಫಲಿತಾಂಶ ಪಡೆದಿರುವ ಶಾಲೆಗಳ ಮುಖ್ಯೋಪಾಧ್ಯಾಯರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಸವಂತಪ್ಪ, ಜಿ.ಸಿ.ನಿಂಗಪ್ಪ, ಓಬಳೇಶ್, ಶೈಲಜಾ ಬಸವರಾಜ್, ‘ದೂಡಾ’ ಅಧ್ಯಕ್ಷ ರಾಮಚಂದ್ರಪ್ಪ, ಎಪಿಎಂಸಿ ಅಧ್ಯಕ್ಷ ಮುದೇಗೌಡ್ರ ಗಿರೀಶ್, ಪಾಲಿಕೆ ಸದಸ್ಯರಾದ ದಿನೇಶ್ ಕೆ.ಶೆಟ್ಟಿ, ಕಾಲೇಜಿನ ಪ್ರಾಚಾರ್ಯ ಹಬೀಬ್ ಅವರೂ ಉಪಸ್ಥಿತರಿದ್ದರು. ದಾವಣಗೆರೆ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ.ಸಿದ್ದಪ್ಪ ಸ್ವಾಗತಿಸಿದರು.

**

ಗಾಂಧೀಜಿ ಭೇಟಿ ನೀಡಿದ್ದ ಶಾಲೆ

‘1941–42ರಲ್ಲಿ ಆರಂಭವಾದ ಈ ಶಾಲೆಯಲ್ಲಿ ಹಲವಾರು ಪ್ರತಿಭಾವಂತರು ವ್ಯಾಸಂಗ ಮಾಡಿದ್ದಾರೆ. ಮಹಾತ್ಮಾ ಗಾಂಧಿ ಅವರು ದಾವಣಗೆರೆಗೆ ಬಂದಾಗ ಇದೇ ಶಾಲಾ ಮೈದಾನದಲ್ಲಿ ಭಾಷಣ ಮಾಡಿದ್ದರು’ ಎಂದು ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ ಸ್ಮರಿಸಿದರು.

**

ಈ ಬಾರಿ ಶೈಕ್ಷಣಿಕ ವರ್ಷದ ಆರಂಭದಲ್ಲೇ ಸರ್ಕಾರ ಸೈಕಲ್ ನೀಡಿರುವುದು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮೂಡಿಸಿದೆ.

-ಎಚ್.ಎಂ.ಪ್ರೇಮಾ

ಡಿಡಿಪಿಐ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry