ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯೋಮಿತಿ: ಶಾಲೆ ದಾಖಲಾತಿ ಇಳಿಕೆ ಸಾಧ್ಯತೆ

Last Updated 3 ಜೂನ್ 2017, 5:07 IST
ಅಕ್ಷರ ಗಾತ್ರ

ಚಿತ್ರದುರ್ಗ: ಸರ್ಕಾರಿ ಶಾಲೆ ಉಳಿಯಬೇಕು. ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಸರ್ಕಾರದ ಸೇವೆಯಲ್ಲಿರುವವರೆಲ್ಲ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಶುಕ್ರವಾರ ಜಿಲ್ಲಾ ಪಂಚಾಯ್ತಿ ವಿಶೇಷ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.

2017–18ನೇ ಸಾಲಿಗೆ ವೇತನ ಮತ್ತು ವೇತನೇತರ ಕಾರ್ಯಕ್ರಮಗಳ ತಾಲ್ಲೂಕುವಾರು ಹಂಚಿಕೆ ಮಾಡಿರುವ ಅನುದಾನಕ್ಕೆ ಕ್ರಿಯಾ ಯೋಜನೆ ರೂಪಿಸುವ ಪೂರ್ವಭಾವಿ ಸಭೆಯಲ್ಲಿ ಈ ಚರ್ಚೆ ನಡೆಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರೇವಣಸಿದ್ದಪ್ಪ ಶೈಕ್ಷಣಿಕ ಇಲಾಖೆಯ ಕ್ರಿಯಾ ಯೋಜನೆ ಮಂಡಿಸುವ ವೇಳೆ, ಸರ್ಕಾರ ಎಲ್‌ಕೆಜಿ ಸೇರಿಸುವ ಮಕ್ಕಳಿಗೆ 3 ವರ್ಷ 10 ತಿಂಗಳು, ಯುಕೆಜಿಗೆ 4 ವರ್ಷ 10 ತಿಂಗಳು ಹಾಗೂ ಒಂದನೇ ತರಗತಿಗೆ ಸೇರಿಸುವುದಕ್ಕೆ 5 ವರ್ಷದ 10 ತಿಂಗಳು ವಯಸ್ಸಾಗಿರಬೇಕೆಂದು ಸುತ್ತೋಲೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಈ ಬಾರಿ ದಾಖಲಾತಿ ಕಡಿಮೆಯಾಗಬಹುದು’ ಎಂದು ಅಭಿಪ್ರಾಯಪಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಗುರುಮೂರ್ತಿ, ಅನಂತ್‌ ಮತ್ತಿತರ ಸದಸ್ಯರು, ‘ಸರ್ಕಾರಿ ಶಾಲೆಗಳಲ್ಲೂ ಯುಕೆಜಿ. ಎಲ್‌ಕೆಜಿ, ಇಂಗ್ಲಿಷ್ ಮಾಧ್ಯಮ ಆರಂಭಿಸಿ. ಇದಕ್ಕೆ ನಾವೆಲ್ಲ ಆಂದೋಲನದ ರೀತಿ ಕೈ ಜೋಡಿಸೋಣ’ ಎಂದು ಸಲಹೆ ನೀಡಿದರು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಗೆ ಉತ್ತಮ ಸಂಬಳವಿದೆ. ಮಕ್ಕಳಿಗೆ ಸೌಲಭ್ಯಗಳಿವೆ. ಶಿಕ್ಷಕರು ಆಸಕ್ತಿಯಿಂದ ಪಾಠ ಮಾಡಿದರೆ, ಶಾಲೆಗಳಿಗೆ ಮಕ್ಕಳು ಬರುತ್ತಾರೆ’ ಎಂದರು. ಈ ಮಾತಿಗೆ ಪೂರಕವಾಗಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ‘ಗುತ್ತಿನಾಡು ಸರ್ಕಾರಿ ಶಾಲೆಯಲ್ಲಿ 40 ಮಕ್ಕಳು ಪ್ರವೇಶ ಪಡೆದಿವೆ’ ಎಂದು ಉದಾಹರಣೆ ನೀಡಿದರು.

ಸರ್ಕಾರಿ ಶಾಲೆಗಳ ಸುತ್ತ ಚರ್ಚೆ ಗಿರಕಿ ಹೊಡೆಯುತ್ತಿದ್ದಾಗ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಸರ್ಕಾರಿ ಶಾಲೆಯ ಗತವೈಭವನ್ನು ಸ್ಮರಿಸುತ್ತಾ, ‘ಈಗಲೂ ಆ ಶಾಲೆಗಳನ್ನು ಉಳಿಸುವ ಅವಕಾಶವಿದೆ ಎಂದರು. ‘ಎಲ್ಲ ಸದಸ್ಯರು, ಸರ್ಕಾರಿ ಅಧಿಕಾರಿಗಳು, ಸರ್ಕಾರದ ಸೇವೆಯಲ್ಲಿರುವವರೆಲ್ಲರೂ ತಮ್ಮ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದಾದರೆ, ಮುಂದಿನ ವರ್ಷದಿಂದ ನನ್ನ ಎರಡು ಮಕ್ಕಳನ್ನು ಸೇರಿಸುತ್ತೇನೆ’ಎಂದು ಪ್ರಕಟಿಸಿದರು.

‘ಸರ್ಕಾರಿ ಶಾಲೆಗಳೆಂದರೆ, ತಮ್ಮ ಸಂಬಳಕ್ಕಾಗಿ ಬಡವರ ಮಕ್ಕಳನ್ನು ಬಳಸಿಕೊಳ್ಳುವುದು’ಎನ್ನುವಂತಾಗಿರುವ ಕಾಲಘಟ್ಟದಲ್ಲಿ, ಶಿಕ್ಷಕರು ಕೂಡ ಸರಿಯಾದ ಸಮಯಕ್ಕೆ ಶಾಲೆಗೆ ಹೋಗಿ, ಮಕ್ಕಳಿಗೆ ಪಾಠ ಮಾಡಿ, ನಮ್ಮ ಶಾಲೆಗಳೂ ಉತ್ತಮವಾಗಿವೆ ಎಂದು ಸಾಬೀತುಪಡಿಸುವ ವಾತಾವರಣ ನಿರ್ಮಿಸಬೇಕು’ ಎಂಬ ಸಲಹೆ ವ್ಯಕ್ತವಾಯಿತು.

ರ್ಕಾರಿ ಉಳಿಸುವ ಕುರಿತ ಚರ್ಚೆ ಮೂಲಸೌಲಭ್ಯಗಳತ್ತ ಹೊರಳಿತು. ‘ಹಿರಿಯೂರು ತಾಲ್ಲೂಕಿನ ಸೂರನಹಳ್ಳಿ, ಬೀರಾವರ ಗ್ರಾಮಗಳ ಶಾಲೆಗಳಿಗೆ ಕಟ್ಟಡಗಳಿಲ್ಲ. ಮೊಳಕಾಲ್ಮೂರು ಗಡಿ ಭಾಗದ ಶಾಲೆಗಳಲ್ಲಿ ಶಿಕ್ಷಕರಿಲ್ಲ. ಅನೇಕ ಶಾಲೆಗಳಿಗೆ ಶೌಚಾಲಯಗಳಿಲ್ಲ’ ಎಂದು ಸದಸ್ಯರು ಆಕ್ಷೇಪಿಸಿದರು. ಶಾಲೆಗಳಲ್ಲಿ ಮೂಲ ಸೌಲಭ್ಯ ಕೊರತೆಯಿದ್ದಾಗ ಮಕ್ಕಳಾದರೂ ಹೇಗೆ ಬರುತ್ತವೆ’ ಎಂದು ಪ್ರಶ್ನಿಸಿದರು.

ಡಿಡಿಪಿಐ ಮಾತನಾಡಿ, ‘ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಶಿಕ್ಷಕರ ನೇಮಕ ಕುರಿತು ಜಂಟಿ ನಿರ್ದೇಶಕರು ತಿಳಿಸಿದ್ದಾರೆ. ಶೀಘ್ರದಲ್ಲೇ ಎಲ್ಲ ಕಡೆಗೂ ಶಿಕ್ಷಕರು ಮತ್ತು ಕಟ್ಟಡಗಳನ್ನು ನೀಡಲಾಗುತ್ತದೆ’ ಎಂದು ಭರವಸೆ ನೀಡಿದರು.

ಸ್ಚಚ್ಛ ಭಾರತ್ ಯೋಜನೆಯಡಿ ಪ್ರತಿ ಶಾಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ₹2 ಲಕ್ಷ ಹಣ ನೀಡಲಾಗುತ್ತಿದೆ. ಜತೆಗೆ ಗ್ರಾಮ ಪಂಚಾಯ್ತಿಯಿಂದ ಒಂದಷ್ಟು ಹಣ ಸೇರಿಸಿ, ಎಲ್ಲ ಶಾಲೆಗಳಲ್ಲೂ ಶೌಚಾಲಯ ನಿರ್ಮಾಣಕ್ಕೆ ಅಧ್ಯಕ್ಷೆ ಸಲಹೆ ನೀಡಿದರು. ಸದಸ್ಯೆ ಗೀತಾ, ‘₹2 ಲಕ್ಷ ಸಾಕಾಗುವುದಿಲ್ಲ. ₹5 ಲಕ್ಷ ಕೊಟ್ಟರೆ ಶೌಚಾಲಯದ ಜತೆಗೆ ಕೊಳವೆಬಾವಿಯನ್ನೂ ಕೊರೆಸಬಹುದು’ ಎಂದರು. ಶಶಿಕಲಾ ಸುರೇಶ್‌ಬಾಬು ‘ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಅಡಿ ಸೀಟ್‌ ಕೊಡುತ್ತಿಲ್ಲ. ಅಂಥ ಶಾಲೆಗಳ ಮಾನ್ಯತೆ ರದ್ದು ಮಾಡಿ’ ಎಂದು ಒತ್ತಾಯಿಸಿದರು.

**

‘ಮಲ್ಲೇಹರವಿ ಶಾಲೆ: ಪ್ರಜಾವಾಣಿ ವರದಿ ಉಲ್ಲೇಖ’

‘ಜಾಗೀರಬುಡ್ಡೇನಹಳ್ಳಿ ಗ್ರಾಮ ಪಂಚಾಯ್ತಿಯ ಮಲ್ಲೇಹರವಿ ಶಾಲೆಯಲ್ಲಿ ಈ ವರ್ಷ ಶಾಲೆ ಆರಂಭವಾದಾಗಿನಿಂದ ಶಿಕ್ಷಕರೇ ಬಂದಿಲ್ಲ’  ಎಂದು ಪ್ರಜಾವಾಣಿಯಲ್ಲಿ ವರದಿಯಾಗಿದೆ. ಯಾಕೆ ಅಲ್ಲಿಗೆ ಶಿಕ್ಷಕರನ್ನು ಕೊಟ್ಟಿಲ್ಲ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ್ ಬಾಬು ಸಭೆಯಲ್ಲಿ ಪ್ರಸ್ತಾಪಿಸಿದರು.

‘ಈ ಶಾಲೆಗೆ ಕಾಯಂ ಶಿಕ್ಷಕರೇ ಇಲ್ಲವಂತೆ. ಅತಿಥಿ ಶಿಕ್ಷಕರೂ ಶಾಲೆಗೆ ಸರಿಯಾಗಿ ಬಂದಿಲ್ಲವಂತೆ’ ಏಕೆ ಹೀಗೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಿಡಿಪಿಐ ಮತ್ತು ಬಿಇಒ ‘ಪಕ್ಕದ ವೀರಾಪುರದಿಂದ ಒಬ್ಬ ಶಿಕ್ಷಕರನ್ನು ನಿಯೋಜಿಸಿದ್ದೇವೆ. ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಶಿಕ್ಷಕರನ್ನು ನೇಮಿಸುತ್ತೇವೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT