34 ತೊಗರಿ ಖರೀದಿ ಕೇಂದ್ರ ಆರಂಭಿಸಿ

7
ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಸೂಚನೆ

34 ತೊಗರಿ ಖರೀದಿ ಕೇಂದ್ರ ಆರಂಭಿಸಿ

Published:
Updated:
34 ತೊಗರಿ ಖರೀದಿ ಕೇಂದ್ರ ಆರಂಭಿಸಿ

ಕಲಬುರ್ಗಿ: ಜಿಲ್ಲೆಯಲ್ಲಿ 34 ತೊಗರಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ತುರ್ತು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ರೈತರಿಂದ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸಲು ಕೇವಲ 8 ದಿನಗಳ ಅವಕಾಶವಿದ್ದು, ತೊಗರಿ ಖರೀದಿ ಕೇಂದ್ರಗಳಲ್ಲಿ ಪ್ರತಿದಿನ ಕನಿಷ್ಠ ಸುಮಾರು 1000 ಕ್ವಿಂಟಲ್ ಖರೀದಿಯಾಗುವಂತೆ ಕ್ರಮ ಜರುಗಿಸಬೇಕು. ಬೆಳಿಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ತೊಗರಿ ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಈಗಾಗಲೇ 27 ತೊಗರಿ ಖರೀದಿ ಕೇಂದ್ರಗಳು ಪ್ರಾರಂಭವಾಗಿವೆ. ಪ್ರತಿ ತೊಗರಿ ಖರೀದಿ ಕೇಂದ್ರಕ್ಕೆ ಸುಮಾರು 2000 ಚೀಲಗಳನ್ನು ವಿತರಿಸಲಾಗಿದೆ. ಇಂದು 10 ಕೇಂದ್ರಗಳಲ್ಲಿ ತೊಗರಿ ಖರೀದಿ ಪ್ರಾರಂಭವಾಗಿದ್ದು, ಪ್ರತಿ ಕೇಂದ್ರದಲ್ಲಿ ಸುಮಾರು 2000 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಜಿಲಾನಿ ಎಚ್. ಮೊಕಾಶಿ ಮಾಹಿತಿ ನೀಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕಾಮಗಾರಿ ಪ್ರಾರಂಭಿಸುವ ಮೊದಲು ಜಲಮೂಲಗಳನ್ನು ನಿರ್ಧರಿಸಬೇಕು ಎಂದು ಹೇಳಿದರು.

ಗ್ರಾಮೀಣ ಮತಕ್ಷೇತ್ರದ ಕಾಳಮಂದರಗಿ, ನಾಗೂರ, ಭೀಮನಾಳ, ಅಷ್ಟಗಾ, ಗಣಜಲಖೇಡ, ಹರಸೂರ ವಾರ್ಡ್‌ ನಂ. 1 ಮತ್ತು 2, ಜೇವಣಗಿ, ಬೇಲೂರ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಇದ್ದು, ಈ ಗ್ರಾಮಗಳಲ್ಲಿ ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮಾತನಾಡಿ, ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 4.6 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಗ್ರಾಮೀಣ ಮತಕ್ಷೇತ್ರದಲ್ಲಿ 61 ಸಾವಿರ ಮಾನವ ದಿನಗಳನ್ನು  ಸೃಷ್ಟಿಸಲಾಗಿದೆ. ಜಿಲ್ಲೆಯಲ್ಲಿ ಮೇ 1ರಿಂದ 10ರ ವರೆಗೆ ಶೌಚಾಲಯ ನಿರ್ಮಿಸುವ ಉದ್ದೇಶದಿಂದ ಸಮೀಕ್ಷೆ ನಡೆಸಲಾಗಿತ್ತು. ಶೇ 91ರಷ್ಟು ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಸ್ಥಳಾವಕಾಶದ ಲಭ್ಯತೆ ಇರುವುದು ಕಂಡು ಬಂದಿದೆ. ಎಲ್ಲ ಗ್ರಾಮಗಳಲ್ಲಿ ಗರ್ಭಿಣಿಯರಿಗಾಗಿ ಕನಿಷ್ಠ 40 ಶೌಚಾಲಯಗಳನ್ನು ನಿರ್ಮಿಸುವ ಗುರಿ ನೀಡಲಾಗಿದೆ ಎಂದರು.

ಶಾಸಕ ಜಿ. ರಾಮಕೃಷ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಿವರಾಜ ಸಜ್ಜನ, ಜಿಲ್ಲಾಧಿಕಾರಿ ಉಜ್ವಲ್‌ಕುಮಾರ ಘೋಷ್ ಇದ್ದರು.

**

ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವುದು, ಕೃಷಿ ಹೊಂಡ, ಬದು ನಿರ್ಮಾಣ, ಅರಣ್ಯೀಕರಣ ಕಾಮಗಾರಿಗಳನ್ನು ಆದ್ಯತೆಯಲ್ಲಿ ಕೈಗೊಳ್ಳಬೇಕು.

-ಡಾ. ಶರಣಪ್ರಕಾಶ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry