ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ನಾತ ಬೀರುವ ಹಳ್ಳಿಗಳು; ತಿಪ್ಪೆಯಾದ ಬೀದಿಗಳು

ರಸ್ತೆ, ಚರಂಡಿ ನಿರ್ಮಾಣಕ್ಕಷ್ಟೇ ಅನುದಾನ ಬಳಕೆ; ಅನುಷ್ಠಾನವಾಗದ ನಂಜುಂಡಪ್ಪ ವರದಿ
Last Updated 3 ಜೂನ್ 2017, 5:46 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಬಹುತೇಕ ಗ್ರಾಮ ಪಂಚಾಯಿತಿಗಳು ಹಳ್ಳಿಗಳ ನೈರ್ಮಲ್ಯ ನಿರ್ಲಕ್ಷಿಸಿರುವ ಕಾರಣ ಜಿಲ್ಲೆಯಲ್ಲಿನ ಬಹುತೇಕ ಹಳ್ಳಿಗಳು ರೋಗಗ್ರಸ್ಥ ವಾತಾವರಣದಿಂದ ನಲುಗಿವೆ. ಇದರಿಂದ ಗ್ರಾಮೀಣ ಅಭಿವೃ ದ್ಧಿಗೆ ತೀರಾ ಹಿನ್ನಡೆಯಾಗಿದೆ. ಜಿಲ್ಲೆಯ ಯಾವುದೇ ಹಳ್ಳಿಗೆ ಭೇಟಿ ನೀಡಿದರೂ ದುರ್ನಾತ ಸೂಸುವ ಚರಂಡಿಗಳು, ಕಸದ ರಾಶಿ ಕಂಡುಬರುತ್ತದೆ.

ಯಾದಗಿರಿ, ಶಹಾಪುರ, ಸುರಪುರ ತಾಲ್ಲೂಕುಗಳಲ್ಲಿ ಒಟ್ಟು 16 ಹೋಬಳಿ ಗಳಿವೆ. ಅವುಗಳ ವ್ಯಾಪ್ತಿಯಲ್ಲಿ ಒಟ್ಟು 123 ಗ್ರಾಮ ಪಂಚಾಯಿತಿಗಳಿವೆ. ಅವುಗ ಳಲ್ಲಿ 519 ಗ್ರಾಮಗಳಿವೆ. ಒಟ್ಟು 2,342 ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. 2011ರ ಜನಗಣತಿ ಪ್ರಕಾರ, ಜಿಲ್ಲೆಯ ಒಟ್ಟು ಜನಸಂಖ್ಯೆ 11.74ಲಕ್ಷ ಇದೆ. ಅದರಲ್ಲಿ 5.90 ಲಕ್ಷ ಪುರುಷರು ಮತ್ತು 5.83 ಲಕ್ಷ ಮಹಿಳೆಯರಿದ್ದಾರೆ. ಆದರೆ, 123 ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯ 519 ಗ್ರಾಮಗಳಲ್ಲಿ ಕನಿಷ್ಠ ಸ್ವಚ್ಛತೆ ಕಾಪಾಡು ವುದು ಮರೆತಿವೆ ಎಂದು ವರ್ಕ್‌ನಹಳ್ಳಿ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಕೊಯಿಲೂರು ಗ್ರಾಮಸ್ಥರಾದ ಮಂಜುನಾಥ, ಶಶಿ ಕುಮಾರ ಆರೋಪಿಸುತ್ತಾರೆ.

‘ಚರಂಡಿ ನಿರ್ಮಾಣ ಕಾಮಗಾರಿಗಳ ಬಗ್ಗೆ ಮಾತ್ರ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಗಮನ ಹರಿಸುತ್ತಾರೆ. ಆದರೆ, ಚರಂಡಿ, ಬೀದಿ ರಸ್ತೆ, ನೀರಿನ ಟ್ಯಾಂಕ್‌ಗಳ ಸ್ವಚ್ಛತೆ ಕಡೆ ಕನಿಷ್ಠ ಗಮನ ನೀಡುವುದಿಲ್ಲ. ಇದರಿಂದ ಹಳ್ಳಿಗಳು ರೋಗರುಜಿನಗಳಿಂದ ಮುಕ್ತವಾಗಿಲ್ಲ. ಖಾತ್ರಿ ಕಾಮಗಾರಿಗಳ ಮೇಲಷ್ಟೇ ಗ್ರಾಮ ಪಂಚಾಯಿತಿ ಸದಸ್ಯರು ಕಣ್ಣು ನೆಟ್ಟಿರುವುದರಿಂದ ಹಳ್ಳಿಗಳ ನೈರ್ಮಲ್ಯ ಕಾರ್ಯ ಸ್ಥಗಿತಗೊಂಡಿವೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ನಂಜುಂಡಪ್ಪ ವರದಿಗೆ ಕಿಮ್ಮತ್ತಿಲ್ಲ: ನಂಜುಂಡಪ್ಪ ವರದಿ ಪ್ರಕಾರ, ಯಾದಗಿರಿ ಜಿಲ್ಲೆ ಮಾನವ ಅಭಿವೃದ್ಧಿ ಯಲ್ಲಿ ಕೊನೆಯ ಸ್ಥಾನ ಹೊಂದಿದೆ. ಹಾಗಾಗಿ, ಜಿಲ್ಲೆಯ ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ, ನೈರ್ಮಲ್ಯ, ಕುಡಿಯುವ ನೀರು, ವಸತಿ, ಶಿಕ್ಷಣ ಒದಗಿಸುವುದು ಜಿಲ್ಲಾಡಳಿತ ಪ್ರಮುಖ ಕಾರ್ಯಸೂಚಿ ಹಾಗೂ ಗುರಿ. ಆದರೆ, ಜಿಲ್ಲಾಡಳಿತ ಹಳ್ಳಿಗಳತ್ತ ಕಣ್ಣು ಹಾಯಿಸಿಲ್ಲ. ಇದರಿಂದ ಗ್ರಾಮ ಪಂಚಾ ಯಿತಿಗಳು ಆರ್ಥಿಕ ಸಬಲೀಕರಣ ಸಾಧಿಸಲು ಸಾಧ್ಯವಾಗದೇ ಇರುವುದ ರಿಂದ ಉತ್ತಮ ಜೀವನ ಜನರಿಗೆ ಮರೀಚಿಕೆಯಾಗಿದೆ’ ಎನ್ನುತ್ತಾರೆ ಎಐಡಿಎಸ್‌ಒ ಸಂಘಟನೆಯ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಸೋಮಶೇಖರ್ ಹೇಳುತ್ತಾರೆ.

‘ನಂಜುಂಡಪ್ಪ ವರದಿ ಅನುಷ್ಠಾನ ಗೊಂಡು ಎಷ್ಟು ವರ್ಷಗಳಾದವು? ಇದುವರೆಗೂ ಅನುದಾನ ಹಂಚಿಕೆ ಆಗಿಲ್ಲ. ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ಸರ್ಕಾರ ನಂಜುಂಡಪ್ಪ ವರದಿಗೆ ಕಿಮ್ಮತ್ತು ನೀಡಿಲ್ಲ. ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಸದೃಢ ವಾಗದ ಹೊರತು ಜನಜೀವನಮಟ್ಟ ಸುಧಾರಣೆ ಅಸಾಧ್ಯ’ ಎಂಬುದು ಅವರ ಅಭಿಪ್ರಾಯ.

ಬದಲಾಗದ ಪರಿಶಿಷ್ಟರ ಬದುಕು: ಹಳ್ಳಿಗಳಲ್ಲಿ ಪರಿಶಿಷ್ಟ ವರ್ಗದವರ ಬದುಕು ಮತ್ತಷ್ಟೂ ಹೀನಾಯವಾಗಿದೆ. ಮಾನವ ಅಭಿವೃದ್ಧಿ ಸೂಚ್ಯಂಕ ವರದಿ ಪ್ರಕಾರ, ಶೇ 88ರಷ್ಟು ಪರಿಶಿಷ್ಟ ವರ್ಗದವರು ಗ್ರಾಮೀಣ ಭಾಗದಲ್ಲಿ ವಾಸವಿದ್ದಾರೆ. ಅವರಿಗೆ ಸರ್ಕಾರ ₹15 ಸಾವಿರ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿಕೊಟ್ಟಿವೆ. ಕುಡಿಯುವ ನೀರಿಗಾಗಿ ಹಾಹಾಕಾರ ಪಡುವ ಪರಿಶಿಷ್ಟ ವರ್ಗದವರು ಶೌಚಾಲಯಗಳ ನಿರ್ವಹಣೆ ಮಾಡಲು ಸಾಧ್ಯವೇ’ ಎಂದು ಮುದ್ನಾಳ ದೊಡ್ಡ ತಾಂಡಾದ ಸಂತೋಷ್ ರಾಥೋಡ್ ಮತ್ತು ಚಂದ್ರು ರಾಥೋಡ್‌ ಪ್ರಶ್ನಿಸುತ್ತಾರೆ.

‘ಮಾನವ ಅಭಿವೃದ್ಧಿ ಸೂಚ್ಯಂಕ ವರದಿ ಪ್ರಕಾರ, ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಶೇ 2.14ರಷ್ಟು ಮನೆಗಳು ಸುರಕ್ಷಿತ ಮೋರಿಗಳನ್ನು ಒಳಗೊಂಡಿವೆ. ಶೇ 23.19ರಷ್ಟು ಮನೆಗಳು ತೆರೆದ ಮೋರಿ ವ್ಯವಸ್ಥೆ ಒಳಗೊಂಡಿದ್ದರೆ, ಶೇ 75ರಷ್ಟು ಪರಿಶಿಷ್ಟ ಜಾತಿಯ ಮನೆಗಳಿಗೆ ಕನಿಷ್ಠ ತೆರೆದ ಮೋರಿಯ ಸಂಪರ್ಕ ಇಲ್ಲ. ಶೇ 6.4ರಷ್ಟು ಪರಿಶಿಷ್ಟ ಜಾತಿಯ ಮನೆಗಳು ಸಾರ್ವಜನಿಕ ಶೌಚಾಲಯ ಸೌಲಭ್ಯ ಪಡೆದಿವೆ. ಉಳಿದಂತೆ ಶೇ 93.6ರಷ್ಟು ಮನೆಗಳು ಮಾನವ ತ್ಯಾಜ್ಯ ವಿಲೇವಾರಿಗಾಗಿ ತೆರೆದ ಸ್ಥಳಗಳನ್ನೇ ಅವಲಂಬಿಸಿವೆ. ಪರಿಸ್ಥಿತಿ ಇಷ್ಟು ನಿಕೃಷ್ಟ ವಾಗಿದ್ದರೂ, ಅವರ ಏಳ್ಗೆಗೆ ಸರ್ಕಾರ ಮಂಜೂರು ಮಾಡುವ ಅನುದಾನ ಎಲ್ಲಿ ವಿನಿಯೋಗವಾಗುತ್ತಿದೆ’ ಎಂದು ಸ್ಲಂ ಜನಾಂದೋಲನದ ಜಿಲ್ಲಾ ಸಂಚಾಲಕಿ ರೇಣುಕಾ ಸಡರಗಿ ಪ್ರಶ್ನಿಸುತ್ತಾರೆ.

**

ಅನುದಾನಕ್ಕೆ ಮನವಿ...
ಮಳೆಗಾಲದಲ್ಲಿ ಚರಂಡಿಗಳು ತುಂಬಿ ಮನೆಗಳಿಗೆ ನುಗ್ಗುವುದರಿಂದ ಇಡೀ ಗ್ರಾಮಗಳಲ್ಲಿನ ಜನರು ರೋಗಗಳಿಂದ ನರಳುತ್ತಾರೆ. ಮೋರಿಗಳ ಸ್ವಚ್ಛತೆ ಇಲ್ಲದಿರುವುದೇ ಇದಕ್ಕೆ ಕಾರಣ. ಕನಿಷ್ಠ ಆದಾಯಗಳಿಲ್ಲದ ಹಲವು ಗ್ರಾಮ ಪಂಚಾಯಿತಿಗಳು ನಮ್ಮಲ್ಲಿವೆ. ಗ್ರಾಮಗಳಲ್ಲಿ ನೈರ್ಮಲ್ಯ ಕಾಪಾಡಲು ವಿಶೇಷ ಅನುದಾನ ಮೀಸಲಿಡುವುದು ಅಗತ್ಯ ಇದೆ. ಜೂನ್‌ 6ರಂದು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ನಡೆಯಲಿದ್ದು, ನೈರ್ಮಲ್ಯಕ್ಕಾಗಿ ವಿಶೇಷ ಅನುದಾನ ನೀಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ಒತ್ತಾಯಿಸುತ್ತೇನೆ ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಸ್ವತಿ ಸುಭಾಷಚಂದ್ರ ‘ಪ್ರಜಾವಾಣಿ’ ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT