ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುವೆ ನಿರ್ಮಿಸದಿದ್ದರೂ ಹಣ ಪಾವತಿ; ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ದೂರು

Last Updated 3 ಜೂನ್ 2017, 5:53 IST
ಅಕ್ಷರ ಗಾತ್ರ

ಜಾಲಹಳ್ಳಿ: ನಾರಾಯಣಪುರ ಬಲದಂಡೆ ಕಾಲುವೆ ವ್ಯಾಪ್ತಿಯ 9ಎ ಕಾಲುವೆಯ ಅಡಿಯಲ್ಲಿ ಬರುವ ಹೊಲಗಾಲುವೆಗಳಿಗೆ ಶುಕ್ರವಾರ ಕೃಷ್ಣ ಭಾಗ್ಯ ಜಲ ನಿಗಮದ ಕಾಡಾ ಅಧ್ಯಕ್ಷ ಜಕ್ಕಪ್ಪ ಮಾಗಿ ಅವರು ಕಾಲುವೆ ನಿರ್ಮಾಣ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಅವರು, ‘9ಎ ಕಾಲುವೆ ವ್ಯಾಪ್ತಿಗೆ ಬರುವ 1ರಿಂದ 3ನೇ ಲ್ಯಾಟ್ರಲ್‌ನಲ್ಲಿ ಕಳೆದ 2013–14ನೇ ಸಾಲಿನಲ್ಲಿ ಹೊಲಗಾಲುವೆ ನಿರ್ಮಾಣಕ್ಕೆ ಸುಮಾರು ₹40 ಲಕ್ಷ ವೆಚ್ಚದಲ್ಲಿ ಟೆಂಡರ್‌ ಕರೆಯಲಾಗಿತ್ತು. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೇರಿ ರೈತರ ಜಮೀನುಗಳಲ್ಲಿ ಕಳಪೆ ಮಟ್ಟದ ಕಾಮಗಾರಿ ಮಾಡಲಾಗಿದೆ. ಅಲ್ಲದೇ ಹೊಲಗಾಲುವೆ ನಿರ್ಮಿಸದೇ ಸಂಪೂರ್ಣ ಹಣ ಪಾವತಿಸಲಾಗಿದೆ. ಸಂಬಂಧಿಸಿದ ಎಂಜಿನಿಯರ್‌ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ಪತ್ರ ಬರೆಯುತ್ತೇನೆ’ ಎಂದು ತಿಳಿಸಿದರು.

ಸ್ಥಳದಲ್ಲಿದ್ದ ಕಾರ್ಯನಿರ್ವಾಹಕ ಎಂಜಿನಿಯರ್‌ ಕಲ್ಯಾಣ ಶೆಟ್ಟಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಆಗ ಶೆಟ್ಟಿ ಅವರು ‘ಈ ಕಾಮಗಾರಿ ನಡೆಯುವಾಗ ನಾನು ಬೇರೆ ವಿಭಾಗದಲ್ಲಿ ಕಾರ್ಯ ನಿರ್ವಾಹಿಸುತ್ತಿದ್ದೆ’ ಎಂದು ತಿಳಿಸಿದರು.

‘ತಕ್ಷಣವೇ ರೈತರ ಜಮೀನುಗಳಿಗೆ ನೀರು ಹಾಯಿಸುವ ಕೆಲಸ ಮಾಡಿ, ಅವರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಜಕ್ಕಪ್ಪ ತಾಕೀತು ಮಾಡಿದರು.

ಸಹಾಯಕ ಎಂಜಿನಿಯರುಗಳಾದ ಗಂಗನಗೌಡ, ಅಜೀಜ್‌ ಅಹ್ಮದ್‌, ರಾಯಪ್ಪ, ಶಿವಪ್ಪ  ಹಾಗೂ ಪಲಕನಮರಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಪ್ರಾಂತ ರೈತ ಸಂಘದ ತಾಲ್ಲೂಕು ಸಮಿತಿ ಅಧ್ಯಕ್ಷ ನರಸಣ್ಣ ನಾಯಕ, ಕಾಲುವೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ಬಸವರಾಜ ನರೇಗಲ್‌, ರಂಗಣ್ಣ ಕೋಲ್ಕಾರ್‌, ಭೀಮಣ್ಣ ಗುಮೇದಾರ, ಶಬ್ಬೀರ್‌ ಅಹ್ಮದ್‌, ಬಸವರಾಜ ನಾಯಕ ವಂದಲಿ, ಶ್ರೀನಿವಾಸ ನಾಯಕ ಇದ್ದರು.

**

ಪ್ರತಿಭಟನೆ

ಜೂನ್‌ 5ರಂದು ನೀರು ಬಳಕೆದಾರರ ಸಂಘ ಹಾಗೂ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಜಾಲಹಳ್ಳಿ ಉಪ ತಹಶೀಲ್ದಾರ್‌ ಕಚೇರಿ ಮುಂದೆ ಈ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಬೇಕು, ನಾರಾಯಣಪುರ ಬಲದಂಡೆ ಕಾಲುವೆಯ ದುರಸ್ತಿ ಹಾಗೂ ಕಾಲುವೆಯಲ್ಲಿ ಹೂಳು ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT