ಐಐಟಿ ಶಂಕುಸ್ಥಾಪನೆ: ಮೋದಿಗೆ ಆಹ್ವಾನ

7
‘ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ’ ಕುರಿತು ಪ್ರಚಾರ ಅಭಿಯಾನ: ಸಂಸದ ಪ್ರಹ್ಲಾದ ಜೋಶಿ ಹೇಳಿಕೆ

ಐಐಟಿ ಶಂಕುಸ್ಥಾಪನೆ: ಮೋದಿಗೆ ಆಹ್ವಾನ

Published:
Updated:
ಐಐಟಿ ಶಂಕುಸ್ಥಾಪನೆ: ಮೋದಿಗೆ ಆಹ್ವಾನ

ಹುಬ್ಬಳ್ಳಿ: ‘ಧಾರವಾಡದಲ್ಲಿ ನಿರ್ಮಾಣವಾಗಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐ.ಐ.ಟಿ)ಯ ಕಟ್ಟಡ ನಿರ್ಮಾಣ ಶಂಕುಸ್ಥಾಪನೆಗೆ ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಆಹ್ವಾನಿಸುವ ಉದ್ದೇಶವಿದೆ’ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

ನಗರದ ನೆಹರೂ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ‘ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ’ (ಎಂ.ಒ.ಡಿ.ಐ) ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಕೇಂದ್ರ ಸರ್ಕಾರ ಅವಳಿ ನಗರ ಸೇರಿದಂತೆ, ರಾಜ್ಯಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಿದೆ. ರಾಜ್ಯ ಸರ್ಕಾರದ ದುರಾಡಳಿತದಿಂದ ಅದು ಜನರಿಗೆ ತಲುಪುತ್ತಿಲ್ಲ’ ಎಂದು ಟೀಕಿಸಿದರು.

‘ರಾಜ್ಯದಲ್ಲಿ ರಸ್ತೆಗಳನ್ನು ಉನ್ನತ ದರ್ಜೆಗೇರಿಸಲು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ₹3,500 ಕೋಟಿ ನೀಡಿದ್ದಾರೆ. ಈ ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡಿದರೆ, ಇನ್ನೂ ₹1,000 ಕೋಟಿ ನೀಡುವುದಾಗಿಯೂ ಅವರು ಹೇಳಿದ್ದಾರೆ. ಆದರೆ, ಮೊದಲು ನೀಡಲಾಗಿರುವ ಅನುದಾನವನ್ನೇ ರಾಜ್ಯ ಸರ್ಕಾರ ಖರ್ಚು ಮಾಡಿಲ್ಲ’ ಎಂದು ಜೋಶಿ ಹೇಳಿದರು.

‘ಕೇಂದ್ರ ಸರ್ಕಾರ ಮೂರು ವರ್ಷ ಪೂರೈಸಿದ ನಿಮಿತ್ತ ಈ ಎಂ.ಓ.ಡಿ.ಐ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ನಮ್ಮ ದೇಶ ಅಭಿವೃದ್ಧಿ ರಾಷ್ಟ್ರವಾಗುವ ಎಲ್ಲ ಅರ್ಹತೆಯನ್ನೂ ಹೊಂದಿದ್ದರು, ಯು.ಪಿ.ಎ ಸರ್ಕಾರದ ಹತ್ತು ವರ್ಷಗಳ ದುರಾಡಳಿತ ಪರಿಣಾಮ ಇನ್ನೂ ಅಭಿವೃದ್ಧಿಶೀಲ ರಾಷ್ಟ್ರ ಎನಿಸಿದೆ. ಕೇಂದ್ರದಲ್ಲಿ ಕಾಂಗ್ರೆಸ್‌ ಆಡಳಿತ ನಡೆಸುತ್ತಿದ್ದಾಗ, ಸರ್ಕಾರ ಇದೆಯೋ ಇಲ್ಲವೋ ಎಂಬ ಭಾವನೆ ಇತ್ತು. ಆದರೆ ಈಗ, ಕೇಂದ್ರದಲ್ಲಿ ಸರ್ಕಾರ ಇದೆ, ಕೆಲಸವೂ ನಡೆಯುತ್ತಿದೆ ಎಂಬ ಭಾವನೆ ಜನರಲ್ಲಿದೆ’ ಎಂದು ಅಭಿಪ್ರಾಯಪಟ್ಟರು.

‘ಭ್ರಷ್ಟಾಚಾರಮುಕ್ತ ಆಡಳಿತವನ್ನು ಬಿಜೆಪಿ ಸರ್ಕಾರ ನೀಡುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ವರ್ಚಸ್ಸು ವೃದ್ಧಿಸುತ್ತಿದ್ದು, ಜಾಗತಿಕ ಸಾಲ ಪ್ರಮಾಣವೂ ಕಡಿಮೆಯಾಗಿದೆ’ ಎಂದರು.

ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌ ಮಾತನಾಡಿ, ‘ದೇಶಕ್ಕೆ ಈಗ ಪ್ರಬಲ ನಾಯಕತ್ವ ಸಿಕ್ಕಿದೆ. 2 ಕೋಟಿ ಬಡವರಿಗೆ ಉಚಿತ ಅಡುಗೆ ಅನಿಲ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ’ ಎಂದರು.

‘ಕೇಂದ್ರ ಸರ್ಕಾರ ಬೆಳೆ ಪರಿಹಾರ ನೀಡಿದ್ದರೂ, ಅದನ್ನು ರಾಜ್ಯದ ರೈತರ ಖಾತೆಗೆ ಜಮಾ ಮಾಡಲು ಆಗಿಲ್ಲ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರೇ ಹೇಳಿದ್ದಾರೆ. ರಾಜ್ಯದ ದುರಾಡಳಿತಕ್ಕೆ ಇದು ಸಾಕ್ಷಿ’ ಎಂದು ಅವರು ಟೀಕಿಸಿದರು.

ಕೇಂದ್ರ ಸರ್ಕಾರದ 40 ಯೋಜನೆಗಳ ಬಗ್ಗೆ ವಿವರ ಹೊಂದಿರುವ ವಿಡಿಯೊವನ್ನು ಪ್ರದರ್ಶಿಸಲಾಯಿತು. 6 ಮಳಿಗೆಗಳಲ್ಲಿ ಸರ್ಕಾರದ ಯೋಜನೆಗಳ ವಿವರಗಳ ಭಿತ್ತಿಪತ್ರಗಳನ್ನು ಹಾಕಲಾಗಿತ್ತು. ನಾಗರಿಕರಿಗೆ ಕೇಂದ್ರಸರ್ಕಾರ ನೀಡುವ ಸಾಲಸೌಲಭ್ಯದ ಬಗ್ಗೆ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದ ಸಂಚಾಲಕ ಕಿರಣ ಉಪ್ಪಾರ ಸ್ವಾಗತಿಸಿದರು. ಸುಲೇಮಾನ್‌ ಕರಿ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಶನಿವಾರ ಮತ್ತು ಭಾನುವಾರವೂ ಕಾರ್ಯಕ್ರಮ ನಡೆಯಲಿದ್ದು, ನಾಗರಿಕರು ನೆಹರೂ ಮೈದಾನಕ್ಕೆ ಭೇಟಿ ನೀಡಬಹುದಾಗಿದೆ ಎಂದು ಬಿಜೆಪಿ ನಾಯಕರು ಹೇಳಿದರು.

**

‘ಪರಿಹಾರ ಸಿಕ್ಕಿಲ್ರೀ...’

ಕಾರ್ಯಕ್ರಮದಲ್ಲಿ ಸಂಸದ ಪ್ರಹ್ಲಾದ ಜೋಶಿ ಮಾತನಾಡುವ ವೇಳೆ, ಬ್ಯಾಹಟ್ಟಿಯ ರೈತ ಮಲ್ಲಯ್ಯ ವಿರೂಪಾಕ್ಷಯ್ಯ ಪೂಜಾರ ಎದ್ದು ನಿಂತು, ‘ನಮ್ಗ ಪರಿಹಾರಾನ ಸಿಕ್ಕಿಲ್ರೀ.. ಬ್ಯಾಂಕ್‌ನವರು ಮೂರು ತಿಂಗಳಿಂದ ತಿರುಗಾಡಸಾಕ್ಹತ್ತಾರ.. ಆಧಾರ್‌ ಕಾರ್ಡ್‌ ಕೇಳ್ತಾರ.. ಅದನ್ನ ಕೊಟ್ರೂ ಪರಿಹಾರ ಕೊಡವಲ್ರು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜೋಶಿ, ‘ಕೇಂದ್ರ ಸರ್ಕಾರ ಪರಿಹಾರ ಮಂಜೂರು ಮಾಡಿದೆ. ಆದರೆ, ರಾಜ್ಯಸರ್ಕಾರ ಅದನ್ನು ರೈತರಿಗೆ ತಲುಪಿಸಿಲ್ಲ. ನಿಮ್ಮ ಮಾಹಿತಿ ಕೊಡಿ, ಹುಬ್ಬಳ್ಳಿ ತಹಶೀಲ್ದಾರ್‌ಗೆ ಈ ಬಗ್ಗೆ ಸೂಚನೆ ನೀಡುತ್ತೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry