500 ಮರಗಳ ಸ್ಥಳಾಂತರಕ್ಕೆ ಯೋಜನೆ

7
ಆಲ, ಅರಳಿ, ಬೇವು, ಬನ್ನಿ, ಹುಣಸೆ, ತಪಸಿ, ಗೋಣಿ, ಬಸರಿ, ಬಕುಳ ಸೇರಿದಂತೆ 25 ಜಾತಿಯ 130 ಮರಗಳ ತೆರವು

500 ಮರಗಳ ಸ್ಥಳಾಂತರಕ್ಕೆ ಯೋಜನೆ

Published:
Updated:
500 ಮರಗಳ ಸ್ಥಳಾಂತರಕ್ಕೆ ಯೋಜನೆ

ಗದಗ: ಹುಬ್ಬಳ್ಳಿ–ಗದಗ ರಸ್ತೆ ವಿಸ್ತರಣೆಗಾಗಿ ತೆರವುಗೊಳಿಸಬೇಕಾಗಿರುವ ಸಾವಿರಕ್ಕೂ ಹೆಚ್ಚು ಮರಗಳ ಪೈಕಿ 7 ಮರಗಳನ್ನು 12 ಕಿ.ಮೀ ದೂರದಲ್ಲಿರುವ ಭೀಷ್ಮಕೆರೆ ಆವರಣಕ್ಕೆ ಸ್ಥಳಾಂತರಿಸುವ ಕಾರ್ಯವನ್ನು ಜಿಲ್ಲಾಡಳಿತದ ನೆರವಿನೊಂದಿಗೆ ಅರಣ್ಯ ಇಲಾಖೆಯು ಗುರುವಾರದಿಂದ ಕೈಗೆತ್ತಿಕೊಂಡಿದೆ.

‘ಪ್ರಾಯೋಗಿಕವಾಗಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಪ್ರಯತ್ನ ಯಶಸ್ವಿಯಾದರೆ ಇನ್ನಷ್ಟು ಮರಗಳನ್ನು ಹಂತ ಹಂತವಾಗಿ ಸ್ಥಳಾಂತರ ಮಾಡುವ  ಪ್ರಕ್ರಿಯೆ ಆರಂಭಿಸುತ್ತೇವೆ. ಗರಿಷ್ಠ ಸಂಖ್ಯೆಯಲ್ಲಿ ಮರಗಳನ್ನು ಸ್ಥಳಾಂತರ ಮಾಡಬೇಕು ಎಂಬುದು ನಮ್ಮ ಆಶಯ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ ಹೇಳಿದರು.

ಪಟ್ಟಿಯಲ್ಲಿ 25 ಜಾತಿಯ 1301 ಮರಗಳು: ಹುಬ್ಬಳ್ಳಿ–ಗದಗ ರಸ್ತೆ ವಿಸ್ತರಣೆಗಾಗಿ ಬಲಭಾಗದಲ್ಲಿ  686 ಮರಗಳು ಹಾಗೂ ಎಡಭಾಗದಲ್ಲಿ 615 ಮರಗಳು ಸೇರಿ ಒಟ್ಟು 1301 ಮರಗಳನ್ನು ತೆರವುಗೊಳಿಸಲು ಗುರುತಿಸಲಾಗಿದೆ. ಆಲ, ಅರಳಿ, ಬೇವು,  ಬನ್ನಿ, ಹುಣಸೆ, ತಪಸಿ, ಗೋಣಿ, ಬಸರಿ, ಬಕುಳ ಸೇರಿದಂತೆ 25ಕ್ಕೂ ಹೆಚ್ಚು ಜಾತಿಯ ಮರಗಳು ಈ ಪಟ್ಟಿಯಲ್ಲಿವೆ. ಇದರಲ್ಲಿ 15ರಿಂದ 25 ವರ್ಷದೊಳಗಿನ ಮರಗಳನ್ನು ಗುರುತಿಸಿ, ಅವುಗಳನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲು  ನಿರ್ಧರಿಸಲಾಗಿದೆ.

‘ರಸ್ತೆ ಬದಿ, ಉದ್ಯಾನಗಳಲ್ಲಿ, ಕೆರೆ ಆವರಣದಲ್ಲಿ ಚಿಕ್ಕಚಿಕ್ಕ ಸಸಿಗಳನ್ನು ನೆಟ್ಟು ಅವುಗಳು ಬದುಕಿ ಉಳಿಯುವಂತೆ ಮಾಡಲು ಹರಸಾಹಸ ಪಡುವ ಬದಲಿಗೆ, ರಸ್ತೆ ವಿಸ್ತರಣೆ ಸಮಯದಲ್ಲಿ ತೆರವುಗೊಳಿಸಬೇಕಾದ ದೊಡ್ಡ ಮರಗಳನ್ನು ಈ ರೀತಿ ಸ್ಥಳಾಂತರಿಸಬಹುದು. ಬೆಂಗಳೂರಿನಲ್ಲಿ ಜಯಮಹಲ್‌ ರಸ್ತೆ ವಿಸ್ತರಣೆ ವೇಳೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸ್ವಯಂಸೇವಾ ಸಂಸ್ಥೆಯೊಂದರ ನೆರವಿನೊಂದಿಗೆ ಮರಗಳನ್ನು ಸ್ಥಳಾಂತರಿಸಿ ನೆಟ್ಟಿತ್ತು. ಈ ಪ್ರಯತ್ನ ಯಶಸ್ವಿಯಾಗಿದೆ. ಈ ರೀತಿಯಲ್ಲೇ ಗದುಗಿನಲ್ಲಿ ಮರಗಳನ್ನು ಸ್ಥಳಾಂತರಿಸಿ ನೆಡಲು ನಿರ್ಧರಿಸಲಾಗಿದೆ. ಚಿಕ್ಕ ಸಸಿಗಳ ಬದಲು ದೊಡ್ಡ ಮರ ನೆಡುವುದರಿಂದ ವಿವಿಧ ರೀತಿಯಲ್ಲಿ ಖರ್ಚು ತಗ್ಗಿಸಬಹುದಾಗಿದೆ ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳ ಅಭಿಮತ.

‘ಮರಗಳು ಎತ್ತರಕ್ಕೆ ಬೆಳೆದಿರುತ್ತವೆಯಾದ್ದರಿಂದ ಬಿಡಾಡಿ ದನ, ಕುರಿ ತಿಂದು ಹಾಳು ಮಾಡುವುದಕ್ಕೆ ಅವಕಾಶ ಇರುವುದಿಲ್ಲ. ಗಿಡದ ಸುತ್ತ ಜಾಲಿಮುಳ್ಳು, ತಂತಿ  ಕಟ್ಟುವ ಅಗತ್ಯವಿಲ್ಲ. ಕಾಂಡ ದಪ್ಪವಿರುವುದರಿಂದ ಆಸರೆಗಾಗಿ ಕೋಲು ಕಟ್ಟುವ ಅನಿವಾರ್ಯವೂ ಇರುವುದಿಲ್ಲ. ಒಟ್ಟಿನಲ್ಲಿ ನಿರ್ವಹಣೆ ವೆಚ್ಚ ಕಡಿಮೆ ಇರುತ್ತದೆ. ಚಿಕ್ಕ ಸಸಿಗಳನ್ನು ನೆಟ್ಟು ಪೋಷಣೆ ಮಾಡುವುದಕ್ಕಿಂತ ಈಗಾಗಲೇ 15ರಿಂದ 20 ವರ್ಷಗಳ ಕಾಲ ಬದುಕಿರುವ, ಇನ್ನೂ ನೂರಾರು ವರ್ಷಗಳ ಕಾಲ ಬದುಕುವ ಇಂತಹ ಅತ್ಯಮೂಲ್ಯ ವೃಕ್ಷಗಳನ್ನು ಸಂರಕ್ಷಣೆ ಮಾಡಿದಂತೆಯೂ ಆಗುತ್ತದೆ’ ಎಂದು ಎಸಿಎಫ್‌ ಆರ್‌.ಎನ್‌ ಪತ್ತಾರ ಹೇಳಿದರು.

ವಿಶ್ವ ಪರಿಸರ ದಿನಾಚರಣೆಗೆ ಮೂರು ದಿನ ಬಾಕಿ ಇರುವಾಗಲೇ ಅರಣ್ಯ ಇಲಾಖೆ ಜಿಲ್ಲೆಯಲ್ಲಿ ಈ ಕಾರ್ಯ ಕೈಗೆತ್ತಿಕೊಂಡಿರುವುದು ಪರಿಸರ ಪ್ರೇಮಿಗಳಲ್ಲಿ ಹರ್ಷ ಮೂಡಿಸಿದೆ. ‘ಇದೊಂದು ಅತ್ಯುತ್ತಮ ಪ್ರಯತ್ನ. ಪಕ್ಕದ ಬಳ್ಳಾರಿ ಜಿಲ್ಲೆಯಲ್ಲೂ ನಡೆಸಿದ ಇಂತಹ ಪ್ರಯತ್ನ ಫಲ ನೀಡಿದೆ. ಎರಡು ವರ್ಷಗಳ ಹಿಂದೆ ಗದಗ–ಮುಂಡರಗಿ ರಸ್ತೆ ವಿಸ್ತರಣೆ ಸಂದರ್ಭದಲ್ಲಿ 800ಕ್ಕೂ ಹೆಚ್ಚು ಮರಗಳು ಪ್ರಗತಿಯ ಕೊಡಲಿಗೆ ಬಲಿಯಾಗಿದ್ದವು. ಈ ಬಾರಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಮರಗಳನ್ನು ಅಭಿವೃದ್ಧಿಗೆ ಬಲಿ ಕೊಡುವ ಬದಲು ಅದನ್ನು ಸಂರಕ್ಷಣೆ ಮಾಡುತ್ತಿರುವುದು ಮಹತ್ವದ ಕೆಲಸ’ ಎಂದು ಗೌರವ ವನ್ಯಜೀವಿ ಪರಿಪಾಲಕ ಪ್ರೊ. ಅರಸನಾಳ ಸಂತಸ ವ್ಯಕ್ತಪಡಿಸಿದರು.

ಎಲ್ಲಿಂದ ಎಲ್ಲಿಗೆ ಸ್ಥಳಾಂತರ: ಪ್ರಾಯೋಗಿಕ ಹಂತದಲ್ಲಿ 7 ಮರಗಳನ್ನು ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಭೀಷ್ಮಕೆರೆ ಆವರಣದಲ್ಲಿ 5 ಬೃಹತ್‌ ಗುಂಡಿಗಳನ್ನು ಮತ್ತು ಪಾಪನಾಶಿ ಬಳಿ 2 ಗುಂಡಿಗಳನ್ನು ತೆಗೆಯಲಾಗಿದೆ. ಹುಲಕೋಟಿ– ಹೊಸಹಳ್ಳಿ ಕ್ರಾಸ್‌ನಿಂದ  ತೆರವುಗೊಳಿಸುವ ಮರಗಳನ್ನು ಇಲ್ಲಿಗೆ ತಂದು ನೆಡಲಾಗುತ್ತದೆ. ಮುಖ್ಯಮಂತ್ರಿ ಸಿದರಾಮಯ್ಯ ಅವರು ಜೂನ್‌.4ರಂದು ಮರ ಸ್ಥಳಾಂತರ ಯೋಜನೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ನಂತರ ಹಂತ ಹಂತವಾಗಿ ಸ್ಥಳಾಂತರ ಪ್ರಕ್ರಿಯೆ ನಡೆಯಲಿದೆ.

ಪ್ರಾಯೋಗಿಕ ಹಂತದಲ್ಲಿ ಗದುಗಿನ ಭೀಷ್ಮ ಕೆರೆ, ವೈದ್ಯಕೀಯ ವಿಜ್ಞಾನ ಸಂಸ್ಥೆ, ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ, ಹೆರಿಗೆ ಆಸ್ಪತ್ರೆಯ ಆವರಣದಲ್ಲಿ ಈ ಮರಗಳನ್ನು ನೆಡಲು ಉದ್ದೇಶಿಸಲಾಗಿದೆ. ನಂತರ ಅರಣ್ಯ ಇಲಾಖೆ ಉಳಿದ ಮರಗಳನ್ನು ಸ್ಥಳಾಂತರಿಸಿ ನೆಡಬೇಕಾಗಿರುವ ಸ್ಥಳ ಗುರುತಿಸಲಿದೆ.  ಒಂದು ಮರದ ಸ್ಥಳಾಂತರಕ್ಕೆ  ಕನಿಷ್ಠ ₹ 6 ಸಾವಿರದಿಂದ ₹15 ಸಾವಿರದವರೆಗೆ ವೆಚ್ಚವಾಗಲಿದೆ. ಈ ವೆಚ್ಚವನ್ನು ನಗರ ಸಭೆ, ನಗರಾಭಿವೃದ್ಧಿ ಪ್ರಾಧಿಕಾರ, ಗ್ರಾಮೀಣಾಭಿವೃದ್ಧಿ ವಿಶೇಷ ಯೋಜನೆ, ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಭರಿಸಲು ಜಿಲ್ಲಾಡಳಿತ ಉದ್ದೇಶಿಸಿದೆ.

**

ಬದುಕಿ ಉಳಿಯುವ ಸಾಧ್ಯತೆ ಹೆಚ್ಚು

ಸ್ಥಳಾಂತರಿಸಿದರೂ ದೊಡ್ಡ ಮರಗಳು ಬದುಕಿ ಉಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ವಿಶೇಷವಾಗಿ ನಾರು ನಾರಾದ ಬೇರಿನ ವ್ಯವಸ್ಥೆ (Fibrous root system) ಹೊಂದಿರುವ ಆಲ, ಅರಳಿ, ಬಸರಿ ಜಾತಿಯ ಮರಗಳನ್ನು ಸುಲಭವಾಗಿ ಸ್ಥಳಾಂತರಿಸಿ ನೆಡಬಹುದು. ಇವು ಎಂತಹ ಪರಿಸ್ಥಿತಿಯಲ್ಲೂ ಬಾಳಿ ಬದುಕುತ್ತವೆ. ತಾಯಿ ಬೇರು (Taproot) ವ್ಯವಸ್ಥೆ ಹೊಂದಿರುವ ಮರಗಳ ಬೇರುಗಳು ನೆಲದಾಳಕ್ಕೆ ಇಳಿದಿರುತ್ತವೆ. ಇವುಗಳನ್ನು ಕೀಳುವ ಮೊದಲು ಎಚ್ಚರಿಕೆ ವಹಿಸಬೇಕು.

ಮರದ ಸುತ್ತ ಗುಂಡಿ ತೆಗೆದು ಐದಾರು ದಿನ ಸತತ ನೀರು ಹಾಕಿ ಬೇರುಗಳು ಸಡಿಲವಾಗುವಂತೆ ಮಾಡಬೇಕು. ಮೂಲ ಮಣ್ಣ ಮತ್ತು ತಾಯಿಬೇರಿಗೆ ಧಕ್ಕೆಯಾಗದಂತೆ ಬೃಹತ್‌ ಕ್ರೇನ್‌ ಮೂಲಕ ಮಣ್ಣಿನಿಂದ ಮೇಲೆತ್ತಿ, ಬೇರೆಡೆ ಸ್ಥಳಾಂತರಿಸಬೇಕು. ಬೇರೆಡೆ ನೆಟ್ಟ ನಂತರವೂ ಸರಿಯಾಗಿ ಪೋಷಣೆ ಮಾಡಬೇಕು ಎನ್ನುತ್ತಾರೆ ಆರ್‌ಎಫ್‌ಒ ಕೆ.ಪಿ ಅಂಗಡಿ ಅವರು.

**

ಸಂಘ ಸಂಸ್ಥೆಗಳು ಮರಗಳ ಸ್ಥಳಾಂತರಕ್ಕೆ ಕೈಜೋಡಿಸ ಬೇಕು. ಈ  ಮರಗಳ ಪೋಷಣೆಗೆ ಆಸಕ್ತರು ಮನವಿ ಸಲ್ಲಿಸಿದರೆ ಅವರಿಗೂ ಮರಗಳನ್ನು ನೀಡಲಾಗುವುದು

–ಎಚ್‌.ಕೆ ಪಾಟೀಲ,

ಜಿಲ್ಲಾ ಉಸ್ತುವಾರಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry