ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳವೇ ಇಲ್ಲ, ಕಟ್ಟಡಕ್ಕೆ ₹ 2.60 ಕೋಟಿ ಮಂಜೂರು

Last Updated 3 ಜೂನ್ 2017, 8:01 IST
ಅಕ್ಷರ ಗಾತ್ರ

ತುರುವೇಕೆರೆ: ಇಲ್ಲಿನ ಅಗ್ನಿಶಾಮಕ ಠಾಣೆಗೆ ಸಿಬ್ಬಂದಿ ಸೇರಿದಂತೆ ಹಲವು ಸಮಸ್ಯೆಗಳಿದ್ದು, ಅವಘಡ ಸಂಭವಿಸಿದಲ್ಲಿ ತುರ್ತು ಸೇವೆಯನ್ನು ಸಮರ್ಪಕವಾಗಿ ಒದಗಿಸಲು ಆಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಜಗ್ಗೇಶ್ ಶಾಸಕರಾಗಿದ್ದಾಗ ತಾಲ್ಲೂಕಿಗೆ ಅಗ್ನಿಶಾಮಕ ಠಾಣೆಗೆ ಮಂಜೂರಾತಿ ಸಿಕ್ಕಿತು. ಆದರೆ ಸ್ವಂತ ಕಟ್ಟಡವಿಲ್ಲದ ಕಾರಣ ಇಲ್ಲಿನ ಎಪಿಎಂಸಿ ಆವರಣದಲ್ಲಿನ 3 ಶೆಡ್‌ಗಳನ್ನು ಬಾಡಿಗೆ ಪಡೆದು ನಿರ್ವಹಿಸಲಾಗುತ್ತಿದೆ. ಸ್ವಂತ ಕಟ್ಟಡಕ್ಕಾಗಿ ತಾಲ್ಲೂಕು ಆಡಳಿತ ತಾವರೆಕೆರೆ ಬಳಿ 1.32 ಎಕರೆ ಭೂಮಿಯನ್ನು ಸೂಚಿಸಿತು. ಇದರಲ್ಲಿ ಅಗ್ನಿಶಾಮಕ ಠಾಣೆಗೆ ಮೀಸಲಿಟ್ಟ ಜಾಗವನ್ನು ಗ್ರಾಮಸ್ಥರ ಓಡಾಟದ ದಾರಿ ಮಾಡಿ ಸರ್ವೆ ಕಲ್ಲು, ಬೋರ್ಡ್ ಹಾಕಿದರು. ಕಟ್ಟಡ ನಿರ್ಮಾಣಕ್ಕೆ ಸರ್ಕಾರ ₹ 2.60 ಕೋಟಿ ಮಂಜೂರು ಮಾಡಿತು. ಆಗ ನಿಗದಿಪಡಿಸಿದ್ದ ಸ್ದಳದ ವಿಷಯದಲ್ಲಿ ಗೊಂದಲ ಶುರುವಾಯಿತು. ಉಪವಿಭಾಗಾಧಿಕಾರಿ ಶಿಲ್ಪಾ, ತಹಶೀಲ್ದಾರ್ ಎಂ. ಶಿವಲಿಂಗಮೂರ್ತಿ, ಶಾಸಕ ಎಂ.ಟಿ. ಕೃಷ್ಣಪ್ಪ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಠಾಣೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಅದಕ್ಕಿಂತ ಮುಖ್ಯವಾಗಿ ತುರ್ತು ಪರಿಸ್ಥಿತಿ ಎದುರಾದರೆ ವಾಹನಗಳಿಗೆ ನೀರು ತುಂಬಿಸುವುದಕ್ಕೂ ಪರದಾಡುವ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ ಎಂಬುದು ಸ್ಥಳೀಯರ ಆರೋಪ.

ಸಿಬ್ಬಂದಿ ಕೊರತೆ: ಇಲ್ಲಿನ ಅಗ್ನಿಶಾಮಕ ಠಾಣೆಗೆ ಒಟ್ಟು 24 ಸಿಬ್ಬಂದಿ ಬೇಕು. ಆದರೆ ಸದ್ಯ ಇಲ್ಲಿ 10 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇದಲ್ಲದೆ ಐವರು ಹೋಮ್‌ಗಾರ್ಡ್‌ಗಳಿದ್ದಾರೆ. ಕಾರ್ಯಾಚರಣೆಗೆ ಅಗತ್ಯವಿರುವ ತರಬೇತಿಯಿಲ್ಲದ ಕಾರಣ ಅವರನ್ನು ಠಾಣೆ ಪಹರೆಗಷ್ಟೇ ನಿಯೋಜಿಸಲಾಗುತ್ತಿದೆ.  ಈಗಿರುವ ಕಚೇರಿ ಶೆಡ್‌ನಲ್ಲಿದೆ. ಕಚೇರಿ ಸಿಬ್ಬಂದಿ ನಿರ್ವಹಣೆಗೆ ಕನಿಷ್ಠ ಮೂಲಸೌಲಭ್ಯಗಳನ್ನೂ ಒದಗಿಸಿಲ್ಲ. ಶೌಚಾಲಯವೂ ಇಲ್ಲ ಎಂಬುದು ಕಚೇರಿ ನೌಕರರ ಆರೋಪ.

**

ತಾವರೆಕೆರೆ ಬಳಿ ಅಗ್ನಿಶಾಮಕ ಠಾಣೆಗೆ ಮಂಜೂರಾಗಿರುವ ಪತ್ರ ತಂದರೆ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು
-ಎಂ. ಶಿವಲಿಂಗಮೂರ್ತಿ
ತಹಶೀಲ್ದಾರ್

**

-ಪಾಂಡುರಂಗಯ್ಯ ಎ.ಹೊಸಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT