ಕೋಚಿಂಗ್ ಇಲ್ಲದೆ ಯುಪಿಎಸ್‌ಸಿ 600ನೇ ರ‍್ಯಾಂಕ್ ಪಡೆದ ವ್ಯಾಪಾರಿ ಮಗ

7

ಕೋಚಿಂಗ್ ಇಲ್ಲದೆ ಯುಪಿಎಸ್‌ಸಿ 600ನೇ ರ‍್ಯಾಂಕ್ ಪಡೆದ ವ್ಯಾಪಾರಿ ಮಗ

Published:
Updated:
ಕೋಚಿಂಗ್ ಇಲ್ಲದೆ ಯುಪಿಎಸ್‌ಸಿ 600ನೇ ರ‍್ಯಾಂಕ್ ಪಡೆದ ವ್ಯಾಪಾರಿ ಮಗ

ತಿಪಟೂರು: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ್ದ 2016ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತಿಪಟೂರಿನ ಟಿ.ಎಸ್. ದಿವಾಕರ್‌ 600ನೇ ರ‍್ಯಾಂಕ್ ಗಳಿಸುವ ಮೂಲಕ ಕಲ್ಪತರು ನಗರಕ್ಕೆ ಕೀರ್ತಿ ತಂದಿದ್ದಾರೆ.

ನಗರದ ಎಲೆ, ಅಡಿಕೆ ವ್ಯಾಪಾರಿ ಎಲ್. ಶಿವಣ್ಣ ಮತ್ತು ಪ್ರೇಮಾ ದಂಪತಿ ಮಗ  ದಿವಾಕರ್‌ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಪಿಯುಸಿ ಹಾಗೂ ಮೈಸೂರಿನ ಎಸ್.ಜೆ.ಸಿ.ಇ ಕಾಲೇಜಿನಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದಾರೆ. ಬಿಡುವಿನ ಸಮಯದಲ್ಲಿ ಎಲೆ ವ್ಯಾಪಾರ ಮಾಡಿ ಅಪ್ಪ, ಅಮ್ಮನಿಗೆ ಸಹಾಯ ಮಾಡುತ್ತಿದ್ದ ಇವರು ಯಾವುದೇ ಕೋಚಿಂಗ್ ತೆಗೆದುಕೊಳ್ಳದೆ ಕಠಿಣ ಪರಿಶ್ರಮದಿಂದ ಸಾಧನೆ ಮಾಡಿದ್ದಾರೆ.

‘ನಾನು 2010ರಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಮುಗಿಸಿದೆ. ನಂತರ 2014ರವರೆಗೆ ಹೈದರಬಾದ್‌ನ ಕಂಪ್ಯೂಟರ್ ಎಂಜಿನಯರ್ ಆಗಿ ಕೆಲಸ ಮಾಡುತ್ತಿದ್ದೆ. ಈ ಪದವಿಯಿಂದ ಒಂದು ಸೀಮಿತ ವಲಯದಲ್ಲಿ ಮಾತ್ರ ಕೆಲಸ ಮಾಡಬಹುದಾಗಿತ್ತು. ಆದರೆ ನಾನು ಸಮಾಜದ ಮಧ್ಯದಲ್ಲಿ ಇದ್ದು, ಜನರಿಗೆ ಹಾಗೂ ಸಮಾಜದ ಅಭಿವೃದ್ಧಿಗೆ ವಿವಿಧ ರೀತಿಯ ಸಹಾಯ ಮಾಡಬಹುದೆಂಬ ಆಸೆ ಇಟ್ಟುಕೊಂಡು ಯುಪಿಎಸ್‍ಸಿ ಮಾಡಬೇಕೆಂಬ ಕನಸು ಹೊತ್ತಿದ್ದೆ. ಕಠಿಣ ಪರಿಶ್ರಮ, ಛಲ ಇದ್ದಲ್ಲಿ ಯಾರು ಬೇಕಾದರೂ ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬಹುದು’ ಎಂದು ದಿವಾಕರ್ ಅನಿಸಿಕೆ ಹಂಚಿಕೊಂಡರು.

‘ತಾತನ ಕಾಲದಿಂದಲೂ ನಾವು ಎಲೆ ಅಡಿಕೆ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ನಮ್ಮ ಮಕ್ಕಳು ನಮ್ಮಂತೆ ಕಷ್ಟ ಪಡಬಾರದು ಎಂದು ಅವರಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದೆವು. ಪ್ರತಿಫಲವಾಗಿ ನಮ್ಮ ಮಗ ಕಷ್ಪಪಟ್ಟು ಓದಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆದುಕೊಂಡು ಇತರರಿಗೆ ಮಾದರಿಯಾಗಿದ್ದಾನೆ. ಮುಂದೆ ಉನ್ನತ ಹುದ್ದೆ ಅಲಂಕರಿಸಿ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂಬುದೆ ನಮ್ಮ ಆಶಯ’ ಎಂದು ದಂಪತಿ ಶಿವಣ್ಣ ಮತ್ತು ಪ್ರೇಮಾ ಹರ್ಷ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry