ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಗಾಲಯ ಬಳಿ ಬಹುಮಹಡಿ ವಾಹನ ನಿಲುಗಡೆ

ಮೃಗಾಲಯ ಮುಂಭಾಗ ಸ್ಥಳ ಪರಿಶೀಲಿಸಿದ ಸಚಿವ ಮಹದೇವಪ್ಪ ಭರವಸೆ
Last Updated 3 ಜೂನ್ 2017, 8:24 IST
ಅಕ್ಷರ ಗಾತ್ರ

ಮೈಸೂರು: ನಗರದ ಮೃಗಾಲಯದ ಮುಂಭಾಗ ಇರುವ ಸ್ಥಳದಲ್ಲಿ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ ನಿರ್ಮಾಣಕ್ಕೆ ಸಂಬಂಧಿಸಿ ಶೀಘ್ರದಲ್ಲೇ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಸಚಿವ ಡಾ.ಎಚ್‌.ಸಿ.­ಮಹದೇವಪ್ಪ ಇಲ್ಲಿ ಹೇಳಿದರು.

ಮೃಗಾಲಯಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಪಾಲಿಕೆಯು 30 ವರ್ಷಗಳಿಗೆ ಆ ನಿವೇಶನವನ್ನು ಗುತ್ತಿಗೆ ನೀಡಿದೆ. ಅಲ್ಲಿ ಎರಡು ಮಹಡಿಗಳ ವಾಹನ ನಿಲುಗಡೆ ಸಂಕೀರ್ಣ ನಿರ್ಮಿಸಲು ₹ 30 ಕೋಟಿ ಮೊತ್ತದ ಸಮಗ್ರ ಯೋಜನಾ ವರದಿ ಸಿದ್ಧಗೊಳಿಸಲಾಗಿದೆ. ಯೋಜನೆಯನ್ನು ಪಾಲಿಕೆ, ಮೃಗಾಲಯ, ಸರ್ಕಾರ ಅಥವಾ ಜಂಟಿಯಾಗಿ ಮಾಡಬೇಕೆ ಎಂಬುದರ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಜತೆಗೂ ಚರ್ಚಿಸ­ಲಾಗುವುದು ಎಂದು ತಿಳಿಸಿದರು.

ವಾಹನ ನಿಲುಗಡೆ ಸಂಕೀರ್ಣದಲ್ಲಿ 500 ದ್ವಿಚಕ್ರ ವಾಹನ, 250 ಕಾರು, 20 ಬಸ್‌ಗಳ ನಿಲುಗಡೆಗೆ ಅವಕಾಶ ಸಿಗಲಿದೆ. ಮೃಗಾಲಯ ಸಂಪರ್ಕಿಸುವ ರಸ್ತೆಯ ವಿಸ್ತರಣೆಗೂ ಸೂಚನೆ ನೀಡಲಾಗಿದೆ. ಮೃಗಾಲಯದಲ್ಲಿ ₹ 2.50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಬಯಲು ರಂಗ ಮಂದಿರವನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ.

ಹೊಸದಾಗಿ ಝೀಬ್ರಾ, ಚಿಂಪಾಂಜಿಯನ್ನೂ ತರಿಸಲಾಗುವುದು. ಅಕ್ವೇರಿಯಂ ಕೂಡ ಚಟುವಟಿಕೆಯನ್ನು ಆರಂಭಿಸಬೇಕಿದೆ ಎಂದು ಮಾಹಿತಿ ನೀಡಿದರು.

ರೇಸ್‌ಕೋರ್ಸ್‌ ಸ್ಥಳಾಂತರಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾ­ಲಯದಲ್ಲಿ ಇದೆ. ಕೋರ್ಟ್ ತೀರ್ಪಿನ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.

ಮನವಿ ಸಲ್ಲಿಸಲು ಸಲಹೆ: ಉದ್ಯೋಗ ವನ್ನು ಕಾಯಂ­ಗೊಳಿಸುವುದು ಸೇರಿ ದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಸಚಿವ ಮಹದೇವಪ್ಪ ಅವರನ್ನು ಮೃಗಾಲಯ ಸಿಬ್ಬಂದಿ ಕೇಳಿಕೊಂಡರು.

ಶಾಸಕ ಎಂ.ಕೆ.ಸೋಮಶೇಖರ್‌, ಮೃಗಾಲಯ ಪ್ರಾಧಿಕಾರ ಅಧ್ಯಕ್ಷೆ ಮಲ್ಲಿಗೆ ವೀರೇಶ್‌, ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕಿ ಕಮಲಾ ಕರಿಕಾಳನ್‌, ಮೇಯರ್‌ ಎಂ.ಜೆ.ರವಿ ಕುಮಾರ್‌, ‘ಮುಡಾ’ ಅಧ್ಯಕ್ಷ ಧ್ರುವ ಕುಮಾರ್‌, ಪಾಲಿಕೆ ಆಯುಕ್ತ ಜಗದೀಶ್‌ ಇದ್ದರು.

**

ವಾಹನಮುಕ್ತ ವಲಯ; ಸಚಿವ ಇಂಗಿತ

ಮೈಸೂರು: ನಗರದ ಸುಮಾರು 3–4 ಕಿ.ಮೀ ವ್ಯಾಪ್ತಿಯನ್ನು ವಾಹನ ಮುಕ್ತ ವಲಯವನ್ನಾಗಿ ಮಾಡಬೇಕು ಎಂಬ ಉದ್ದೇಶ ಇದೆ. ಮೃಗಾಲಯ ಆವರಣ, ನಂಜರಾಜ ಬಹದ್ದೂರ್‌ ಛತ್ರ, ಪುರಭವನ ಮೊದಲಾದ ಕಡೆ ವಾಹನ ನಿಲುಗಡೆಗೆ ಅವಕಾಶ ನೀಡಿದರೆ ಅದರ ಸುತ್ತಮುತ್ತಲಿನ ರಸ್ತೆಗಳನ್ನು ವಾಹನ ಮುಕ್ತಗೊಳಿಸಬಹುದು. ಪ್ರವಾಸಿಗರು ನಗರದ ವಿವಿಧ ಪ್ರೇಕ್ಷಣೀಯ ತಾಣಗಳಿಗೆ ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್‌ ರಸ್ತೆಗಳ ಮೂಲಕ ಕಾಲ್ನಡಿಗೆಯಲ್ಲಿ ತೆರಳಿದರೆ ಅವರಿಗೆ ಹೆಚ್ಚು ಖುಷಿ ಕೊಡಲಿದೆ. ಈ ಕನಸನ್ನು ಶೀಘ್ರವಾಗಿ ಮಾಡಬೇಕು ಎಂಬ ಇಂಗಿತ ಇದೆ ಎಂದು ತಿಳಿಸಿದರು.

ಟೌನ್‌ಹಾಲ್‌ ಬಳಿ 950 ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು. ಗುತ್ತಿಗೆದಾರರ ಸಮಸ್ಯೆಯಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ. ಶೇ 10ರಷ್ಟು ಕಾಮಗಾರಿ ಮಾತ್ರ ಬಾಕಿ ಉಳಿದಿದೆ. ಇದನ್ನು ಶೀಘ್ರದಲ್ಲೇ ಪೂರೈಸಲು ಸೂಚಿಸಲಾಗಿದೆ ಎಂದರು.

ಬಹು ದಿನಗಳ ಬಳಿಕ...
‘ಅನೇಕ ದಿನಗಳಿಂದ ಮೃಗಾಲಯಕ್ಕೆ ಭೇಟಿ ನೀಡಬೇಕು ಎಂದುಕೊಂಡಿದ್ದೆ. ಹೈಸ್ಕೂಲ್‌ ವಿದ್ಯಾರ್ಥಿಯಾಗಿದ್ದಾಗ ಮೃಗಾಲಯ ನೋಡಿದ್ದು ಚೆನ್ನಾಗಿ ನೆನಪಿದೆ. ಆಮೇಲೆ ಒಂದು ಬಾರಿ ಬಂದಿದ್ದೇನೆ. ಈಗ ಸರ್ಕಾರದ ವತಿಯಿಂದ ಬಂದಿದ್ದೇನೆ’ ಎಂದು ಎಚ್‌.ಸಿ.ಮಹದೇವಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT