ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಜಾಗೃತಿಗೆ ಚಿತ್ರಕಲೆ ಸ್ಪರ್ಶ

ವಿಶ್ವ ಪರಿಸರ ದಿನಾಚರಣೆ: ಚಿತ್ರರಚನಾ ಸ್ಪರ್ಧೆಗೆ ಡಾ.ಕೆ. ಹರೀಶ್‌ಕುಮಾರ್‌ ಚಾಲನೆ
Last Updated 3 ಜೂನ್ 2017, 8:42 IST
ಅಕ್ಷರ ಗಾತ್ರ

ಚಾಮರಾಜನಗರ: ಆ ಮಕ್ಕಳ ಪರಿಸರ ಪ್ರೀತಿ ಬಿಳಿ ಹಾಳೆಯ ಮೇಲೆ ಬಣ್ಣದೊಂದಿಗೆ ನಲಿದಾಡುತ್ತಿತ್ತು. ‘ಜೀವ ಜಗತ್ತನ್ನು ಸಂರಕ್ಷಿಸಿ’ ಎಂಬ ಅವರ ತುಡಿತ ನೋಡುಗರ ಮನಮುಟ್ಟುತ್ತಿತ್ತು.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಈ ದೃಶ್ಯ ಕಂಡುಬಂದಿತು. ಶುಕ್ರವಾರ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜಿಲ್ಲಾ ಪರಿಸರ ಇಲಾಖೆ ಜಿಲ್ಲೆಯ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ಥಳದಲ್ಲಿಯೇ ಚಿತ್ರ ಬರೆಯುವ ಸ್ಪರ್ಧೆಯಲ್ಲಿ ಪರಿಸರದ ಮೇಲಿನ ಮಕ್ಕಳ ಕಾಳಜಿ ಅನಾವರಣಗೊಂಡಿತ್ತು.

ಕೆರೆ ಶುದ್ಧವಾಗಿಡಿ, ಮರ ಕಡಿಯಲು ಬಿಡಬೇಡಿ, ಕಾಡು ಪ್ರಾಣಿಗಳನ್ನು ಉಳಿಸಿ, ಸುತ್ತಲಿನ ಪರಿಸರ ಸ್ವಚ್ಛವಾಗಿಡಿ ಎಂಬ ಕೂಗು ಮಕ್ಕಳು ಬಿಡಿಸಿದ್ದ ಚಿತ್ರಗಳಲ್ಲಿ ಅಭಿವ್ಯಕ್ತಗೊಂಡಿತು.

ಸ್ಪರ್ಧೆಯಲ್ಲಿ ನಗರದ ಜೆಎಸ್ಎಸ್‌ ಬಾಲಕರ ಪ್ರೌಢಶಾಲೆ, ಜೆಎಸ್‌ಎಸ್‌ ಬಾಲಕಿಯರ ಪ್ರೌಢಶಾಲೆ, ಎಂವೈಎಫ್‌ ಶಾಲೆ, ಯುನಿವರ್ಸಲ್‌ ಶಾಲೆ, ಉಪ್ಪಾರ ಬೀದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೇಂಟ್‌ಜೋಸೆಫ್‌ ಶಾಲೆ, ಎಂಸಿಎಸ್‌ ಶಾಲೆ, ಬದನಗುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವಿಶ್ವ ಹಿಂದೂ ಪರಿಷತ್‌ ಆಂಗ್ಲ ಮಾಧ್ಯಮ ಶಾಲೆ, ದೀನಬಂಧು ಶಿಕ್ಷಣ ಸಂಸ್ಥೆ ಹಾಗೂ ಬಂಜಾರ ಶಾಲೆಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪಾಲ್ಗೊಂಡಿದ್ದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪತ್ರ ನೀಡಲಾಯಿತು. 1ರಿಂದ 4ನೇ ತರಗತಿವರೆಗೆ, 5ರಿಂದ 7ನೇ ತರಗತಿ ಯವರೆಗೆ ಹಾಗೂ 8ರಿಂದ ಎಸ್ಎಸ್‌ಎಲ್‌ಸಿ ವರೆಗೆ 3 ವಿಭಾಗದಲ್ಲಿ ಸ್ಪರ್ಧೆ ನಡೆಸಲಾಯಿತು.

‘ವಿಜೇತರಾದ ವಿದ್ಯಾರ್ಥಿಗಳಿಗೆ ಜೂನ್‌ 5ರಂದು ನಡೆಯುವ ವಿಶ್ವ ಪರಿಸರ ದಿನಾಚರಣೆಯಲ್ಲಿ ಬಹುಮಾನ ನೀಡಲಾಗುವುದು. ಎಲ್ಲ ವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕಾರ ಬಹುಮಾನ ನೀಡಲಾಗುತ್ತದೆ’ ಎಂದು ಜಿಲ್ಲಾ ಪರಿಸರ ಇಲಾಖೆಯ ಅಧಿಕಾರಿ ಪಿ.ಎಂ. ಪ್ರಕಾಶ್‌ ತಿಳಿಸಿದರು.

‘ಪರಿಸರದ ಮೇಲೆ ಮಾನವನ ಆಕ್ರಮಣ ದಿನೇ, ದಿನೇ ಹೆಚ್ಚುತ್ತಿದೆ. ಇದರಿಂದ ಶುದ್ಧಗಾಳಿ ಸಿಗುತ್ತಿಲ್ಲ. ಅಂತರ್ಜಲ ಕಲುಷಿತವಾಗಿದೆ. ಶುದ್ಧ ಆಹಾರದ ಕೊರತೆ ಉಂಟಾಗಿದೆ. ಮನುಷ್ಯ ನೆಮ್ಮದಿಯಾಗಿ ಬದುಕಲು ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಿದೆ. ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಪರಿಸರ ಚಿತ್ರ ಬರೆಯುವ ಸ್ಪರ್ಧೆ ಪೂರಕವಾಗಿದೆ’ ಎಂದು ಎಂವೈಎಫ್‌ ಶಾಲೆಯ ಶಿಕ್ಷಕಿಯರಾದ ಎ.ಎಂ.ಆಶಾ ಮತ್ತು ಸಬೀನಾ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮುನಿರಾಜಪ್ಪ,  ಪರಿಸರ ರಕ್ಷಣೆ ಎಲ್ಲರ ಕರ್ತವ್ಯ. ಪ್ರತಿಯೊಬ್ಬರೂ ಪರಿಸರ ಸಂರಕ್ಷಣಾ ಕಾರ್ಯ­ದಲ್ಲಿ ಮುಂದಾಗಬೇಕು ಎಂದು ಅವರು ಹೇಳಿದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಮಂಜುಳಾ, ಜಿಲ್ಲಾ ಪರಿಸರ ಅಧಿಕಾರಿ ಪಿ.ಎಂ. ಪ್ರಕಾಶ್‌, ಉಪ ಪರಿಸರ ಅಧಿಕಾರಿ ಉಮಾಶಂಕರ್, ಲಲಿತಾ ಅಕಾಡೆಮಿಯ ರಾಜಶೇಖರ್‌, ಚಿತ್ರಕಲೆ ಶಿಕ್ಷಕ ಸಂಪತ್‌ಕುಮಾರ್ ಹಾಜರಿದ್ದರು.

**

ಪರಿಸರ ಸಂರಕ್ಷಣೆ: ವಿದ್ಯಾರ್ಥಿಗಳಿಗೆ ಸಲಹೆ

ಚಾಮರಾಜನಗರ: ‘ಭವಿಷ್ಯದ ಪ್ರಜೆಗಳಾದ ಮಕ್ಕ­ಳಿಂದಲೇ ಪರಿಸರ ಸಂರಕ್ಷಣೆ ಸಾಧ್ಯ. ಅವರಲ್ಲಿ ಅರಿವು ಮೂಡಿಸುವ ಜವಾಬ್ದಾರಿ ಶಿಕ್ಷಕ ಮತ್ತು ಪಾಲಕರದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ. ಹರೀಶ್‌ಕುಮಾರ್‌ ಸಲಹೆ ನೀಡಿದರು.

ಸ್ಥಳದಲ್ಲಿಯೇ ಚಿತ್ರ ಬರೆಯುವ ಸ್ಪರ್ಧೆಗೆ ಚಾಲನೆ ನೀಡಿದ ಅವರು, ಪರಿಸರ ಸಂರಕ್ಷಣೆ ಎಲ್ಲರ ಹೊಣೆ. ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತಗೊಳ್ಳಬಾರದು. ಪ್ರತಿದಿನ ಗಿಡ, ಮರಗಳ ಸಂರಕ್ಷಣೆಗೆ ನಿಗಾವಹಿಸಿದರೆ ಆಚರಣೆಗೆ ನೈಜ ಅರ್ಥ ಬರಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT