ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನ ಪರಿಸರ ರಕ್ಷಣೆಗೆ ಒಕ್ಕೊರಲ ಕೂಗು

ಮಡಿಕೇರಿ: ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ರ್‍ಯಾಲಿ
Last Updated 3 ಜೂನ್ 2017, 8:45 IST
ಅಕ್ಷರ ಗಾತ್ರ

ಮಡಿಕೇರಿ: ಅಭಿವೃದ್ಧಿ ನೆಪದಲ್ಲಿ ಕೊಡಗು ಜಿಲ್ಲೆಯ ಪರಿಸರದ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆಪಾದಿಸಿ ವಿವಿಧ ಪರಿಸರ ಸಂಘಟನೆ ಗಳು ನಗರದಲ್ಲಿ ಶುಕ್ರವಾರ ಪ್ರತಿಭಟನಾ ರ‍್ಯಾಲಿ ನಡೆಸಿದವು.

ನಗರದ ಹಳೆ ಕೋಟೆ ಸಭಾಂಗಣ ದಿಂದ ಆರಂಭವಾದ ರ‍್ಯಾಲಿ ನಗರ ಪೊಲೀಸ್‌ ಠಾಣೆ ರಸ್ತೆ, ಮೈಸೂರು ರಸ್ತೆ, ಜನರಲ್‌ ತಿಮ್ಮಯ್ಯ ವೃತ್ತದ ಮೂಲಕ ಸಾಗಿ ಕಾವೇರಿ ಕಲಾ ಕ್ಷೇತ್ರಕ್ಕೆ ಬಂದು ತಲುಪಿತು.

ಅಲ್ಲಿ ನಡೆದ ಸಭೆಯಲ್ಲಿ ಕೂರ್ಗ್‌ ವೈಲ್ಡ್‌ಲೈಫ್‌ ಸೊಸೈಟಿ ಅಧ್ಯಕ್ಷರೂ ಆಗಿರುವ ನಿವೃತ್ತ ಕರ್ನಲ್‌ ಸಿ.ಪಿ. ಮುತ್ತಣ್ಣ, ‘ಕಾವೇರಿ ನದಿ ಹಾಗೂ ಕೊಡಗಿನ ಈ ಪವಿತ್ರ ಭೂಮಿಯ ಮೇಲೆ ದೌರ್ಜನ್ಯ ನಡೆಯುತ್ತಿದೆ. ಕಾವೇರಿ ತಾಯಿ ಆಪತ್ತಿಗೆ ಸಿಲುಕಿದ್ದಾಳೆ. ಈ ಸಂದರ್ಭದಲ್ಲಿ ಕೈಕಟ್ಟಿ ಕುಳಿತರೆ ಭ್ರಷ್ಟಾಚಾರ ಮಾಡಿ ದಂತೆ’ ಎಂದು ಎಚ್ಚರಿಸಿದರು.

‘2015ರಲ್ಲಿ ಮೈಸೂರಿನಿಂದ ಕೇರಳದ ಕೋಯ್‌ಕೋಡ್‌ಗೆ 400 ಕೆ.ವಿ.ಯ ವಿದ್ಯುತ್‌ ಮಾರ್ಗಕ್ಕೆ ಕೊಡಗಿ ನಲ್ಲಿ 56 ಸಾವಿರ ಮರಗಳನ್ನು ಕಡಿಯ ಲಾಗಿತ್ತು. ಅದರ ಪರಿಣಾಮವನ್ನು ಇಂದಿಗೂ ನಾವು ಎದುರಿಸುತ್ತಿದ್ದೇವೆ. ಈಗ ಎರಡು ರೈಲು ಮಾರ್ಗ ಹಾಗೂ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ.

ಎರಡು ಯೋಜನೆಗಳೂ ಕಾರ್ಯಗತ  ವಾದರೆ ಪುಟ್ಟ ಜಿಲ್ಲೆ ಇಬ್ಭಾಗವಾಗಲಿದೆ. ಅಭಿವೃದ್ಧಿ ಯೋಜನೆಯಿಂದ ಕೊಡಗಿನ ಜನರಿಗೆ ಪ್ರಯೋಜನವಿಲ್ಲ. ಅಧಿಕಾರಿ ಗಳಿಗೆ, ಗುತ್ತಿಗೆದಾರರಿಗೆ ಮಾತ್ರ ಲಾಭ’ ಎಂದು ದೂರಿದರು.

‘ಕುಶಾಲನಗರದಿಂದ ಮಕ್ಕಂದೂರು ವರೆಗೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ₹ 1,587 ಕೋಟಿ, ಮೈಸೂರಿನಿಂದ ತಲಚೇರಿ ತನಕ ರೈಲ್ವೆ ಮಾರ್ಗಕ್ಕೆ ₹ 3,700 ಕೋಟಿ ವೆಚ್ಚವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ. ಈ ಮಾರ್ಗ ಯಾರ ಪ್ರಯೋಜನಕ್ಕೆ’ ಎಂದು ಪ್ರಶ್ನಿಸಿದರು.

‘ಕೊಡಗಿನ ಜನರನ್ನು ಸಾಯಿಸುವು ದಕ್ಕೆ ರೆಸಾರ್ಟ್‌ಗಳಿಗೆ ಸಬ್ಸಿಡಿ ನೀಡಲಾಗು ತ್ತಿದೆ. ಕಾಡು ನಾಶವಾಗಿ ಆನೆ– ಮಾನವರ ಸಂಘರ್ಷ ತೀವ್ರಗೊಂಡಿದೆ. ಕೊಡಗಿನಲ್ಲಿ ಮಳೆ ಬಂದಿಲ್ಲವೆಂದು ಅತ್ತ ಕಾವೇರಿ ನಂಬಿದ್ದ ರೈತರು ಆತ್ಮಹತ್ಯೆ ಮಾಡಿ ಕೊಳ್ಳುವ ಪರಿಸ್ಥಿತಿ ಇದೆ’ ಎಂದು ಮುತ್ತಣ್ಣ ಎಚ್ಚರಿಸಿದರು.

ಕಾವೇರಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಚಂದ್ರಮೋಹನ್‌ ಮಾತನಾಡಿ, ‘ಇದೇ ರೀತಿಯ ಹೋರಾಟ ನಡೆದರೆ ಜೀವನದಿ ಕಾವೇರಿ ಯನ್ನು ಉಳಿಸಲು ಸಾಧ್ಯವಿದೆ. ಹಿಂದೆ ಕಾವೇರಿ ನದಿಯೇ ನಮ್ಮನ್ನು ರಕ್ಷಣೆ ಮಾಡುತ್ತಿತ್ತು. ಆದರೆ, ಇಂದು ಕಾವೇರಿ ನದಿಯನ್ನೇ ನಾವು ಸಂರಕ್ಷಿಸಬೇಕಾದ ಸ್ಥಿತಿ ಬಂದಿದೆ’ ಎಂದು ವಿಷಾದಿಸಿದರು.

‘ಕಾವೇರಿ ನದಿಯ ನೀರಿನ ಗುಣ ಮಟ್ಟ ‘ಎ’ ದರ್ಜೆಯಿಂದ ‘ಸಿ’ ದರ್ಜೆಗೆ ಕುಸಿದಿದೆ ಎಂಬುದು ಆತಂಕಕಾರಿ ವಿಚಾರ’ ಎಂದು ಹೇಳಿದರು.
ನಾಪೋಕ್ಲು ಸತ್ಯಾನ್ವೇಷಣೆ ಸಮಿತಿ ಮುಖಂಡ ಸನ್ನಿ ಸೋಮಣ್ಣ ಮಾತ ನಾಡಿ, ‘ನಾವೆಲ್ಲಾ ಧೈರ್ಯ ಕಳೆದು ಕೊಂಡಿರುವ ಪರಿಣಾಮ ಕೊಡಗಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ವಾಸ್ತಾಂಶದ ವರದಿಯನ್ನು ನೀಡುತ್ತಿಲ್ಲ. ಪ್ರವಾ ಸೋದ್ಯಮದಿಂದ ಕೊಡಗು ಅವನತಿಯತ್ತ ಸಾಗುತ್ತಿದೆ’ ಎಂದು ವಿಷಾದಿಸಿದರು.

‘ನಾಪೋಕ್ಲು ಸಮೀಪದ ಯವಕ ಪಾಡಿಯಲ್ಲಿ ಖಾಸಗಿ ರೆಸಾರ್ಟ್‌ವೊಂದು ಅಲ್ಲಿನ ಮೂಲ ನಿವಾಸಿಗಳಿಗೆ ತೊಂದರೆ ನೀಡುತ್ತಿದೆ. ನೂರಾರು ವರ್ಷಗಳಿಂದ ಅಡಿಯ ಜನಾಂಗದವರು ಸಂಚರಿಸು ತ್ತಿದ್ದ ರಸ್ತೆಯನ್ನೇ ಬಂದ್‌ ಮಾಡಲಾಗಿದೆ. ನಮಗೆ ನ್ಯಾಯಬೇಕು’ ಎಂದು ಸಮುದಾಯ ಮುಖಂಡರಾದ ಸುಂದರಿ ಆಗ್ರಹಿಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ್‌ ಮಾಚಯ್ಯ, ‘ಕೊಡಗು ಹೊಗಳಿಕೆಗೆ ಮಾತ್ರ ಸೀಮಿತಗೊಂಡಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಜಿಲ್ಲೆಯನ್ನು ವಕ್ರದೃಷ್ಟಿಯಿಂದಲೇ ಕಾಣ ಲಾಗುತ್ತದೆ. ಹಿಂದೆ ಭರಪೊಳೆ ತಿರುವು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಯೋಜನೆ ಸ್ಥಗಿತಗೊಳಿಸಲಾಗಿತ್ತು. ಇನ್ನು ಮುಂದೆ ಸಂಘಟಿತ ಹೋರಾಟ ಅಗತ್ಯ’ ಎಂದು ಎಚ್ಚರಿಸಿದರು.

‘ಪಶ್ಚಿಮಘಟ್ಟವನ್ನು ಉಳಿಸುವುದು ಅನಿವಾರ್ಯ. ಅಭಿವೃದ್ಧಿ ನೆಪದಲ್ಲಿ ಪರಿಸರ ಹಾಳಾದರೆ ನ್ಯಾಯಾಲಯದ ಮೆಟ್ಟಿಲೇರಲೂ ಸಿದ್ಧರಾಗಿ’ ಎಂದು ಕರೆ ನೀಡಿದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನ, ಸೇವ್‌ ರಿವರ್‌ ಕಾವೇರಿ ಫೋರಂ, ಬಸವ ದೇವರ ಬನ ಸಮಿತಿ, ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಫೋರಂ, ಕೊಡವ ಮಕ್ಕಡ ಒಕ್ಕೂಟ, ಸತ್ಯಾನ್ವೇ ಷಣಾ ಸಮಿತಿ, ಕಾವೇರಿ ಸೇನೆ, ಕೊಡವ ಸಮಾಜ, ಅಮ್ಮತ್ತಿಯ ರೈತ ಸಂಘ, ಯುನೈಟೆಡ್‌, ಕೊಡವ ಆರ್ಗನೈಜೇಷನ್‌, ಕಾವೇರಿ ಸೇವಾ ಟ್ರಸ್ಟ್‌ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದವು.

ಪ್ರತಿಭಟನಾ ರ‍್ಯಾಲಿ ಯಲ್ಲಿ ನಿವೃತ್ತ ಮೇಜರ್‌ ಬಿ.ಎ.ನಂಜಪ್ಪ, ಬಿಜೆಪಿ ಮುಖಂಡ ಎಂ.ರವೀಂದ್ರ, ಮಂಜು ಚಿಣ್ಣಪ್ಪ, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಯಮುನಾ ಚೆಂಗಪ್ಪ, ಕೆ.ದೇವಯ್ಯ ಹಾಗೂ ಬೋಸ್‌ ಮೊಣಪ್ಪ ಹಾಜರಿದ್ದರು.

**

ರೈಲ್ವೆ ಮಾರ್ಗ, ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಅನುಷ್ಠಾನದಿಂದ ಜಿಲ್ಲೆಯೇ ಇಬ್ಭಾಗ ಆಗಲಿದೆ. ಈ ಯೋಜನೆಗಳ ವಿರುದ್ಧ ಜನಾಂದೋಲನ ಅಗತ್ಯ
-ಸಿ.ಪಿ.ಮುತ್ತಣ್ಣ
ಅಧ್ಯಕ್ಷ, ಕೂರ್ಗ್‌ ವೈಲ್ಡ್‌ಲೈಫ್‌ ಸೊಸೈಟಿ, ಕೊಡಗು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT