ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಜಿಒಗೆ ಕೊಕ್ಕರೆಬೆಳ್ಳೂರು ಪಕ್ಷಿಧಾಮ ನಿರ್ವಹಣೆ

ನಿಸರ್ಗ ಶಿಕ್ಷಣ ಕೇಂದ್ರ (ಮಾಹಿತಿ ಕೇಂದ್ರ) ಉದ್ಘಾಟನೆ
Last Updated 3 ಜೂನ್ 2017, 8:52 IST
ಅಕ್ಷರ ಗಾತ್ರ

ಮಂಡ್ಯ: ‘ಮದ್ದೂರು ತಾಲ್ಲೂಕಿನ ಕೊಕ್ಕರೆಬೆಳ್ಳೂರು ಪಕ್ಷಿಧಾಮದ ನಿರ್ವಹಣಾ ಜವಾಬ್ದಾರಿಯನ್ನು ಮೂರು ವರ್ಷಗಳವರೆಗೆ ಡಬ್ಲ್ಯುಡಬ್ಲ್ಯುಎಫ್‌ (ವರ್ಡ್ಲ್‌ ವೈಡ್‌ ಫಂಡ್‌) ಇಂಡಿಯಾ ಸಂಘಟನೆಗೆ ಹಸ್ತಾಂತರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಸ್‌.ಜಿಯಾವುಲ್ಲಾ ಹೇಳಿದರು.

ಕೊಕ್ಕರೆಬೆಳ್ಳೂರು ಪಕ್ಷಿಧಾಮದಲ್ಲಿ ಶುಕ್ರವಾರ ನಿಸರ್ಗ ಶಿಕ್ಷಣ ಕೇಂದ್ರ (ಮಾಹಿತಿ ಕೇಂದ್ರ) ಉದ್ಘಾಟಿಸಿ ಮಾತನಾಡಿದರು.

‘ಎಚ್‌ಎಸ್‌ಬಿಸಿ ಸಂಸ್ಥೆಯ ಸಹಯೋಗದಲ್ಲಿ ಡಬ್ಲ್ಯುಡಬ್ಲ್ಯುಎಫ್‌ ಸಂಘಟನೆ ಕೊಕ್ಕರೆಬೆಳ್ಳೂರು ಪಕ್ಷಿಧಾಮವನ್ನು ನಿರ್ವಹಣೆ ಮಾಡಲಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆ ಜತೆ ಮೂರು ವರ್ಷಗಳವರೆಗೆ ಒಡಂಬಡಿಕೆ ಮಾಡಿಕೊಂಡಿದೆ. ಸಂಘಟನೆ 1961ರಿಂದಲೂ ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯ ನಿರ್ವಹಿಸುತ್ತಿದೆ. ಇದನ್ನು ಮನಗಂಡು ಕೊಕ್ಕರೆಬೆಳ್ಳೂರು ಪಕ್ಷಿಧಾಮವನ್ನು ಈ ಸಂಘಟನೆ ಸುಪರ್ದಿಗೆ ನೀಡಲಾಗುತ್ತಿದೆ’ ಎಂದು ಹೇಳಿದರು.

‘ಇದಕ್ಕೂ ಮೊದಲು ಕೊಕ್ಕರೆಬೆಳ್ಳೂರಿನಲ್ಲಿ ಮಾಹಿತಿ ಕೇಂದ್ರ ಇತ್ತು. ಪ್ರವಾಸೋದ್ಯಮ ಇಲಾಖೆಯ ಸಹಕಾರದೊಂದಿಗೆ ಗ್ರಾಮದ ಹೆಜ್ಜಾರ್ಲೆ ಬಳಗ ಪ್ರವಾಸಿಗರಿಗೆ ಮಾಹಿತಿ ನೀಡುತ್ತಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಪ್ರವಾಸಿಗರಿಗೆ ಮಾಹಿತಿ ಸಿಗದೆ ಡಬ್ಲ್ಯುಡಬ್ಲ್ಯುಎಫ್‌ ಸಂಘಟನೆ ದೊಡ್ಡಮಟ್ಟದಲ್ಲಿ ನಿಸರ್ಗ ಶಿಕ್ಷಣ ಕೇಂದ್ರ ಆರಂಭಿಸಿದೆ. ಇಲ್ಲಿ ಪಕ್ಷಿಧಾಮದ ಇತಿಹಾಸ, ವೈಶಿಷ್ಟ್ಯ ಹಾಗೂ ಅಪರೂಪದ ಪಕ್ಷಿಗಳ ಛಾಯಾಚಿತ್ರ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

‘ಪ್ರವಾಸೋದ್ಯಮ ಇಲಾಖೆ ಹೆಸರಿನಲ್ಲಿರುವ 3.12 ಎಕರೆ ಜಾಗದಲ್ಲಿ ₹ 88 ಲಕ್ಷ ವೆಚ್ಚದಲ್ಲಿ ಕೇಂದ್ರ ನಿರ್ಮಾಣ ಮಾಡಲಾಗಿದೆ. ₹ 24 ಲಕ್ಷ ವೆಚ್ಚದಲ್ಲಿ ಪಕ್ಷಿ ಸಂರಕ್ಷಣಾ ಕೇಂದ್ರ, ಮಕ್ಕಳ ಆಟದ ಮೈದಾನ ಅಭಿವೃದ್ಧಿಪಡಿಸಲಾಗಿದೆ. ಜನರು ಹಾಗೂ ಪಕ್ಷಿಗಳು ಜತೆಜತೆಯಲ್ಲಿ ವಾಸಿಸುವ ಏಕೈಕ ಪಕ್ಷಿಧಾಮ ಕೊಕ್ಕರೆಬೆಳ್ಳೂರು. ಇಲ್ಲಿಯ ಜನರು ಪಕ್ಷಿಗಳನ್ನು ಮನೆಯ ಮಕ್ಕಳಂತೆ ಸಂರಕ್ಷಣೆ ಮಾಡುತ್ತಾರೆ. ಹೀಗಾಗಿ, ಈ ಗ್ರಾಮದ ಜನರು ಅಭಿನಂದನಾರ್ಹರು. ಮುಂದೆಯೂ ಗ್ರಾಮಸ್ಥರು ಹೊಸ ಸಂಘಟನೆಯ ಜೊತೆಗೂಡಿ ವಿಶ್ವದ ಶ್ರೇಷ್ಠ ಪ್ರವಾಸಿ ತಾಣವನ್ನಾಗಿ ನಿರ್ಮಾಣ ಮಾಡಲು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಡಬ್ಲ್ಯುಡಬ್ಲ್ಯುಎಫ್‌– ಇಂಡಿಯಾ ಸಂಘಟನೆ ಸಿಇಒ ರವಿಸಿಂಗ್‌ ಮಾತನಾಡಿ ‘ನಮ್ಮ ಸಂಘಟನೆಯ ಸಿಬ್ಬಂದಿ ಗ್ರಾಮದಲ್ಲೇ ಇದ್ದು ಪ್ರವಾಸಿಗರಿಗೆ ಮಾಹಿತಿ ನೀಡಲಿದ್ದಾರೆ. ಪಕ್ಷಿ ಸಂರಕ್ಷಣೆಗೆ ಅಗತ್ಯವಿರುವ ಕೆರೆ, ಕಟ್ಟೆ ಅಭಿವೃದ್ಧಿ ಮಾಡಲಾಗುವುದು. ಈ ಪ್ರದೇಶದ ಜೀವವೈವಿಧ್ಯದ ಉಳಿವಿಗಾಗಿ ಸಂಘಟನೆ ಎಲ್ಲ ರೀತಿಯ ಸಹಕಾರ ನೀಡಲಿದೆ. ಸಂಪನ್ಮೂಲ ನಿರ್ವಹಣೆ, ತರಬೇತಿ, ಮಾಹಿತಿ ಹಂಚಿಕೆಗೆ ಆದ್ಯತೆ ನೀಡಲಿದೆ’ ಎಂದು ಹೇಳಿದರು.

ಎಚ್‌ಎಸ್‌ಬಿಸಿ ಗ್ಲೋಬಲ್‌ ಸರ್ವೀಸಸ್‌ ಮುಖ್ಯಸ್ಥ ಸುಬೀರ್‌ ಮೆಹ್ರಾ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಎಂ.ಎನ್‌.ಹರೀಶ್‌, ಮದ್ದೂರು ತಹಶೀಲ್ದಾರ್‌ ಹರ್ಷ, ಕೊಕ್ಕರೆಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಸ್ವಾಮಿ, ಹೆಜ್ಜಾರ್ಲೆ ಬಳಗದ ಮುಖ್ಯಸ್ಥ ಬಿ.ಲಿಂಗೇಗೌಡ ಹಾಜರಿದ್ದರು.

**

ನಿಸರ್ಗ ಕೇಂದ್ರದಲ್ಲಿ ಏನಿದೆ?
ಕೊಕ್ಕರೆಬೆಳ್ಳೂರು ಗ್ರಾಮದಲ್ಲಿ ಡಬ್ಲ್ಯುಡಬ್ಲ್ಯುಎಫ್‌–ಇಂಡಿಯಾ ಸಂಘಟನೆ ವತಿಯಿಂದ ರೂಪಿಸಿರುವ ನಿಸರ್ಗ ಶಿಕ್ಷಣ ಕೇಂದ್ರ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕೊಕ್ಕರೆಬೆಳ್ಳೂರಿಗೆ ಬರುವ 135 ಜಾತಿಯ ಪಕ್ಷಿಗಳ ಛಾಯಾಚಿತ್ರ ಪ್ರದರ್ಶನ ಕೇಂದ್ರ (ಗ್ಯಾಲರಿ) ಎಲ್ಲರ ಗಮನ ಸೆಳೆಯುತ್ತಿದೆ. ಪಕ್ಷಿಧಾಮಕ್ಕೆ ಹಕ್ಕಿಗಳು ಭೇಟಿ ಕೊಡುವ ತಿಂಗಳು, ಇಲ್ಲಿ ನಡೆಸುವ ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ಫೈಬರ್‌ ಚಿತ್ರದ ಮೂಲಕ ಕಟ್ಟಿಕೊಡಲಾಗಿದೆ.

ಕೆರೆಯ ಸಮೀಪ ಕೊಕ್ಕರೆಗಳು ಮೀನಿಗಾಗಿ ಹುಡುಕುವ ಚಿತ್ರಣವನ್ನು ವಿಶೇಷ ಮಾದರಿ ಮೂಲಕ ಚಿತ್ರಿಸಲಾಗಿದ್ದು ‘ಕೆರೆಯ ಮೇಲ್ಮೈ’ ಆವರಣದಲ್ಲಿ ಮೀನಿಗಾಗಿ ಹುಡುಕುತ್ತಿರುವ ಕೊಕ್ಕರೆಗಳ ಚಿತ್ರಣವನ್ನು ರೂಪಿಸಲಾಗಿದೆ.

**

ಸ್ಥಳೀಯರ ವಿರೋಧ
ಕೊಕ್ಕರೆಬೆಳ್ಳೂರು ಗ್ರಾಮಸ್ಥರಿಗೆ ಮಾಹಿತಿ ನೀಡದೆ ಪಕ್ಷಿಧಾಮದ ನಿರ್ವಹಣೆ ಉಸ್ತುವಾರಿಯನ್ನು ಡಬ್ಲ್ಯುಡಬ್ಲ್ಯುಎಫ್‌ ಸಂಘಟನೆಗೆ ನೀಡಿರುವುದಕ್ಕೆ ಗ್ರಾಮದ ಹೆಜ್ಜಾರ್ಲೆ ಬಳಗದ ಪ್ರಮುಖರು ವಿರೋಧ ವ್ಯಕ್ತಪಡಿಸಿದರು.

‘ಇಲ್ಲಿಗೆ ಬರುವ ಪಕ್ಷಿಗಳು ನಮ್ಮ ಮಕ್ಕಳಿದ್ದಂತೆ. ಪಕ್ಷಿಗಳ ಉಳಿವಿಗಾಗಿ ಹಲವು ತ್ಯಾಗ ಮಾಡಿದ್ದೇವೆ. ಪಟಾಕಿ ಹೊಡೆದು ದೀಪಾವಳಿ ಆಚರಿಸುವುದನ್ನು ಬಿಟ್ಟಿದ್ದೇವೆ. ಸರ್ಕಾರವೇ ಪಕ್ಷಿಧಾಮ ನಿರ್ವಹಣೆ ಮಾಡಬಹುದಾಗಿತ್ತು. ಈಗ ಖಾಸಗಿಯವರಿಗೆ ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಈ ಕುರಿತು ನಮ್ಮ ಜತೆ ಮಾತುಕತೆ ನಡೆಸಿಲ್ಲ. ಈಗ ಕಾರ್ಯಕ್ರಮಕ್ಕೆ ಅಡ್ಡಿ ಮಾಡುವುದಿಲ್ಲ. ಹೆಜ್ಜಾರ್ಲೆ ಬಳಗದ ಸದಸ್ಯರು ಕುಳಿತು ಮಾತನಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೆಜ್ಜಾರ್ಲೆ ಬಳಗದ ಅಪ್ಪಾಜಿಗೌಡ ಹೇಳಿದರು.

‘ಪಕ್ಷಿಧಾಮ ನೋಡಲು ಟಿಕೆಟ್‌ ಇಡುತ್ತಾರಂತೆ. ಗೈಡ್‌ಗಳನ್ನು ನೇಮಕ ಮಾಡುತ್ತಾರಂತೆ. ನಮ್ಮ ಊರಿನ ಪಕ್ಷಿಗಳನ್ನು ನೋಡಲು ನಾವೇ ಟಿಕೆಟ್‌ ಖರೀದಿ ಮಾಡಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಮೋಹನ್‌ ಬೇಸರ ವ್ಯಕ್ತಪಡಿಸಿದರು.

**

ದೀಪಾವಳಿಗೆ ಬರುವ ಪಕ್ಷಿಗಳು

-ಎಂ.ಎನ್‌.ಯೋಗೇಶ್‌
ಮಂಡ್ಯ: ‘ದೀಪಾವಳಿ ಬಂತೆಂದರೆ ತವರು ಮನೆಗೆ ಹೆಣ್ಣುಮಕ್ಕಳು ಬರುವಂತೆ ನಮ್ಮ ಊರಿಗೆ ಪಕ್ಷಿಗಳು ಬರುತ್ತವೆ. ಇಲ್ಲೇ ಎರಡು ಮೂರು ತಿಂಗಳು ತಂಗಿದ್ದು, ಮರಿ ಮಾಡಿಕೊಂಡು ತಮ್ಮೂರಿಗೆ ಹಾರಿ ಹೋಗುತ್ತವೆ’ ಎನ್ನುತ್ತಾ ಕೊಕ್ಕರೆಬೆಳ್ಳೂರಿನ ಯಶೋದಮ್ಮ ಮಾತು ಆರಂಭಿಸಿದರು.

ಶಿಂಷಾನದಿಯಿಂದ ಗಾವುದ ದೂರದಲ್ಲಿರುವ ಕೊಕ್ಕರೆಬೆಳ್ಳೂರು ಗ್ರಾಮದ ಮನೆಮನೆಯಲ್ಲೂ ಪಕ್ಷಿಗಳ ಮಾತು ಮೊಳಗುತ್ತದೆ. ಕಿಟಕಿಯ ಕೆಳಗೆ, ತೊಲೆಯ ಮೂಲೆಯಲ್ಲಿ, ಅಟ್ಟಣಿಗೆ ಮೇಲೆ, ಮನೆಯ ಕೈತೋಟದಲ್ಲಿ ಹಕ್ಕಿಗಳ ಗೂಡು ಕಾಣಿಸುತ್ತವೆ. ಈ ಗ್ರಾಮದ ಜನರ ಬದುಕು ಹಕ್ಕಿಗಳ ಜೊತೆ ಬೆರೆತು ಹೋಗಿದೆ.
ಕೊಕ್ಕರೆಬೆಳ್ಳೂರು ಪಕ್ಷಿಧಾಮವೆಂದರೆ ಪಕ್ಷಿಗಳು ಭೇಟಿ ನೀಡುವ ತಾಣವಲ್ಲ, ಜನರು ಮತ್ತು ಪಕ್ಷಿಗಳು ಒಟ್ಟಿಗೆ ವಾಸ ಮಾಡುವ ಒಂದು ವಿಶಿಷ್ಟ ಪ್ರದೇಶ. ಜನಸಮುದಾಯದಿಂದಲೇ ರಕ್ಷಿಸಲ್ಪಡುತ್ತಿರುವ ಸಂರಕ್ಷಿತ ಜಾಗ.

ಕೊಕ್ಕರೆಗಳ ಆವಾಸ ಸ್ಥಾನ: ಕೊಕ್ಕರೆಬೆಳ್ಳೂರು ಪಕ್ಷಿಧಾಮಕ್ಕೆ ಪ್ರತಿವರ್ಷ 135 ಜಾತಿಯ ಪಕ್ಷಿಗಳು ಭೇಟಿ ಕೊಡುತ್ತದೆ. ಆದರೆ, ಗ್ರಾಮದ ಹೆಸರಿನ ಜೊತೆ ಬೆರೆತಿರುವ ಕೊಕ್ಕರೆ ಈ ಗ್ರಾಮದಲ್ಲಿ ಶಾಶ್ವತವಾಗಿ ವಾಸಿಸುವ ಪ್ರಮುಖ ಪಕ್ಷಿ. ಕರ್ನಾಟಕ ಸರ್ಕಾರದಿಂದ ಮಹತ್ವದ ಜೀವವೈವಿಧ್ಯ ಪ್ರದೇಶ ಎಂದು ಗುರುತಿಸಿಕೊಂಡಿದ್ದು ವಿಶ್ವದ ಪ್ರಮುಖ ಪಕ್ಷಿಧಾಮವಾಗಿ ಗುರುತಿಸಿಕೊಂಡಿದೆ.

ಇಲ್ಲಿ ಪ್ರಮುಖವಾಗಿ ಸ್ಪಾಟ್‌ ಬಿಲ್ಲ್‌ಡ್‌ ಪೆಲಿಕನ್‌, ಪೇಂಟೆಂಡ್‌ ಪೆಲಿಕನ್‌ ವಾಸ ಮಾಡುತ್ತವೆ. ಜೊತೆಗೆ ಬೇರೆ ಪ್ರದೇಶದಿಂದ ಹಾರಿಬಂದ ಕೊಕ್ಕರೆಗಳು ಇಲ್ಲಿ ಸಂತಾನೋತ್ಪತ್ತಿ ಮಾಡಿಕೊಂಡು ತೆರಳುತ್ತವೆ.

‘ನಮ್ಮ ಮನೆಯ ಧಾನ್ಯಗಳು ನಮಗೆ ಮಾತ್ರ ಸೀಮಿತವಲ್ಲ, ನಮ್ಮ ಮನೆಗೆ ಬರುವ ಪಕ್ಷಿಗಳ ಆಹಾರ ಕೂಡ. ಆ ಹಕ್ಕಿಗಳು ನಮ್ಮ ಸ್ವಂತ ಮಕ್ಕಳಿಗಿಂತಲೂ ಹೆಚ್ಚು. ಎಲ್ಲಿಂದಲೋ ಹಾರಿಬರುವ ಪಕ್ಷಿಗಳು ನಮ್ಮ ಮನೆಯ ಕಾಳಿಗಾಗಿ ಕಾಯುತ್ತವೆ. ದೀಪಾವಳಿ ಸಮಯಕ್ಕೆ ಬಂದು ಯುಗಾದಿವರೆಗೂ ಇರುತ್ತವೆ’ ಎಂದು ಯಶೋದಮ್ಮ ಹೇಳಿದರು.

‘ನಾವು ನಿಸರ್ಗದೊಂದಿಗೆ ಸಹಬಾಳ್ವೆ ನಡೆಸುತ್ತಿದ್ದೇವೆ. ನಮ್ಮ ಊರಿನ ಸುತ್ತಮುತ್ತ ಇರುವ ಕೆರೆ–ಕಟ್ಟೆಗಳು ಪಕ್ಷಿಗಳನ್ನು ಕೈಬೀಸಿ ಕರೆಯುತ್ತವೆ. ಇಲ್ಲಿರುವ ಹುಣಸೆ ಮರಗಳನ್ನು ಪಕ್ಷಿಗಳಿಗಾಗಿ ಬಿಟ್ಟುಕೊಟ್ಟಿದ್ದೇವೆ. ಎರಡು ಮಹಡಿ ಮನೆ ಇದ್ದರೆ ಮೇಲಿನ ಮಹಡಿ ಪಕ್ಷಿಗಳ ಗೂಡಾಗಿದೆ’ ಎಂದು ಗ್ರಾಮದಲ್ಲಿರುವ ಪಕ್ಷಿ ಸಂರಕ್ಷಣಾ ಕೇಂದ್ರದ ಮುಖ್ಯಸ್ಥ ಬಿ.ಲಿಂಗೇಗೌಡ ಹೇಳಿದರು.

ಹೊಲಕ್ಕೆ ಗೊಬ್ಬರ: ಪಕ್ಷಿಗಳ ಭೇಟಿಯಿಂದ ಕೊಕ್ಕರೆಬೆಳ್ಳೂರು ಗ್ರಾಮದ ರೈತರಿಗೆ ಲಾಭವೇ ಆಗಿದೆ. ಹೊಲದಲ್ಲಿ ಬೀಡು ಬಿಡುವ ಪಕ್ಷಿಗಳಿಂದಾಗಿ ಹೊಲಕ್ಕೆ ಗೊಬ್ಬರವಾಗುತ್ತದೆ. ಇದು ನೈಸರ್ಗಿಕ ಗೊಬ್ಬರವಾಗಿದ್ದು ಭೂಮಿಯ ಫಲವತ್ತತೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

‘ನಮ್ಮ ಹೊಲಗಳಲ್ಲಿ ಹುಣಸೆ ಮರ ಬೆಳೆಸಿದ್ದೇವೆ. ಹುಣಸೆ ಮರದಲ್ಲಿ ಹೆಚ್ಚು ಪಕ್ಷಿಗಳು ಗೂಡು ಕಟ್ಟುತ್ತವೆ. ಹೀಗಾಗಿ ಹೊಲಕ್ಕೆ ಉತ್ತಮ ನೈಸರ್ಗಿಕ ಗೊಬ್ಬರ ಸಿಗುತ್ತಿದೆ’ ಎಂದು ಗ್ರಾಮದ ರೈತ ಶಿವಣ್ಣ ಹೇಳಿದರು.

ಗ್ರಾಮದ ಮೂಲ ಹೆಸರು ಬೆಳ್ಳೂರು. ಆದರೆ ಇಲ್ಲಿ ತೇವಾಂಶವುಳ್ಳ ನೀರಿನಲ್ಲಿ ಹೆಚ್ಚಿನ ಸಂಖ್ಯೆಯ ಕೊಕ್ಕರೆಗಳು ವಾಸಿಸುತ್ತಿದ್ದ ಕಾರಣ ಗ್ರಾಮ ಕೊಕ್ಕರೆಬೆಳ್ಳೂರು ಎಂಬ ಹೆಸರು ಪಡೆಯಿತು. ಗ್ರಾಮದ ಸುತ್ತಲಿನ 780 ಎಕೆರೆ ಪ್ರದೇಶವನ್ನು ಪಕ್ಷಿಧಾಮ ಎಂದು ಗುರುತಿಸಲಾ ಗಿದ್ದು 2007ರಲ್ಲಿ ಸಮುದಾಯ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ.

ಸದ್ಯ ಕೊಕ್ಕರೆಬೆಳ್ಳೂರಿನಲ್ಲಿ ಪಕ್ಷಿಗಳು ಸಂತಾನೋತ್ಪತ್ತಿ ಮುಗಿಸಿ ಮರಳಿ ಹೋಗಿವೆ. ಈಗ ಪಕ್ಷಿಧಾಮದಲ್ಲಿ ಆಶ್ರಯ ಬಯಸಿ ಬರುವ ಪಕ್ಷಿಗಳ ಸಂಖ್ಯೆ
ಕಡಿಮೆ ಇದೆ. ಆದರೆ ಇಲ್ಲೇ ಶಾಶ್ವತವಾಗಿ ನೆಲೆಸಿರುವ ಪಕ್ಷಿಗಳು ಪ್ರವಾಸಿಗರಿಗೆ ದರ್ಶನ ಭಾಗ್ಯ ನೀಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT