ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಅಭಿಮಾನಿಗಳನ್ನು ಕಿಚಾಯಿಸಿದ ಸೆಹ್ವಾಗ್‌: ಖಾರವಾಗಿ ಪ್ರತಿಕ್ರಿಯಿಸಿದ ಅಕ್ತರ್‌

Last Updated 3 ಜೂನ್ 2017, 11:34 IST
ಅಕ್ಷರ ಗಾತ್ರ

ನವದೆಹಲಿ: ಚಾಂಪಿಯನ್ಸ್‌ ಟ್ರೋಫಿ ಹಣಾಹಣಿಯ ಬಹು ನಿರೀಕ್ಷಿತ ಭಾರತ- ಪಾಕಿಸ್ತಾನ ಪಂದ್ಯಕ್ಕೆ ಅಭಿಮಾನಿಗಳು ಕಾಯುತ್ತಿರುವ ಬೆನ್ನಲ್ಲೇ ಉಭಯ ತಂಡಗಳ ಮಾಜಿ ಕ್ರಿಕೆಟಿಗರು ಪರಸ್ಪರ ಮಾತಿನ ಸಮರ ನಡೆಸಿದ್ದಾರೆ.

ಭಾನುವಾರ ಆರಂಭವಾಗಲಿರುವ ಭಾರತ–ಪಾಕಿಸ್ತಾನ ಪಂದ್ಯದ ಕುರಿತು ಭಾರತ ತಂಡದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್‌, ‘ಟೀವಿಯ ಬದಲಿಗೆ ರೇಡಿಯೋಗಳನ್ನು ಕೊಂಡುಕೊಳ್ಳಿ. ಪಾಕಿಸ್ತಾನ ಪಂದ್ಯ ಸೋತ ಬಳಿಕ ಅವುಗಳನ್ನು ಒಡೆದು ಹಾಕಿದರೂ ಅವು ನಿಮ್ಮ ಜೇಬಿಗೆ ಹೊರೆಯಾಗುವುದಿಲ್ಲ’ ಎಂದು ಪಾಕಿಸ್ತಾನ ತಂಡ ಹಾಗೂ ಅಭಿಮಾನಿಗಳನ್ನು ಕಿಚಾಯಿಸಿದ್ದರು. ಈ ಮೂಲಕ ಪಾಕಿಸ್ತಾನಕ್ಕೆ ಭಾರತವನ್ನು ಸೋಲಿಸಲು ಸಾಧ್ಯವಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದರು.

ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ತಂಡದ ಮಾಜಿ ಆಟಗಾರ ಶೊಯೆಬ್‌ ಅಕ್ತರ್‌ ಅವರೂ ಖಾರವಾಗಿ ಪ್ರತಿಕ್ರಿಯಿಸಿದ್ದು, ‘ನಮ್ಮ ಬಳಿ ಉಪಯೋಗಕ್ಕೆ ಬಾರದ ಬೇಕಾದಷ್ಟು ಹಳೆಯ ಚೀನಾ ಟೀವಿಗಳಿವೆ. ಹಾಗಾಗಿ ನಾವು ಅವುಗಳನ್ನೇ ಒಡೆಯುತ್ತೇವೆ’ ಎಂದು ಹೇಳಿದ್ದಾರೆ.

ಬಳಿಕ ತಮ್ಮ ತಂಡಕ್ಕೆ ‘ನಾವು ಕೊಹ್ಲಿಯಂತೆ ಅಥವಾ ಅವರ ಅರ್ಧದಷ್ಟಾದರೂ ಸಾಮರ್ಥ್ಯ ಹಾಕಿ ಆಡಬೇಕಾದ ಅಗತ್ಯವಿದೆ. ಪಂದ್ಯದ ಪೂರ್ಣ 50 ಓವರ್‌ಗಳಲ್ಲಿ ನಾವು ಸರಾಸರಿ 4–5ರನ್‌ ಗಳಿಸಿ ಉತ್ತಮ ಮೊತ್ತ ಕಲೆಹಾಕಿದರೂ ಪಂದ್ಯ ಗೆದ್ದುಕೊಳ್ಳುವ ಅವಕಾಶವಿದೆ’ ಎಂದು ಶೊಯೆಬ್‌ ಸಲಹೆ ನೀಡಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತದ ಎದುರು ಪಾಕಿಸ್ತಾನದ ಗೆಲುವಿನ ಸರಾಸರಿ ಉತ್ತಮವಾಗಿದ್ದು, ಹಿಂದಿನ ಪಂದ್ಯಗಳಲ್ಲಿ ಪಾಕಿಸ್ತಾನ 2 ಹಾಗೂ ಭಾರತ 1 ಪಂದ್ಯಗಳಲ್ಲಿ ಜಯ ಸಾಧಿಸಿವೆ.

ಸದ್ಯ ಭಾರತ ತಂಡದ ಕೋಚ್‌ ಹುದ್ದೆಯ ರೇಸ್‌ನಲ್ಲಿರುವ ಸೆಹ್ವಾಗ್‌ ಹಾಗೂ ಪಾಕಿಸ್ತಾನ ಆಟಗಾರನ ನಡುವಿನ ಈ ಮಾತಿನ ಸಮರ ಪಂದ್ಯದ ಬಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT