ಮುಳುಗುವ ಭೀತಿಯಲ್ಲಿ ಬಾರ್ಜ್‌: ರಕ್ಷಣಾ ಕಾರ್ಯಾಚರಣೆ ಆರಂಭ

7
10 ಮಂದಿ ರಕ್ಷಣೆ

ಮುಳುಗುವ ಭೀತಿಯಲ್ಲಿ ಬಾರ್ಜ್‌: ರಕ್ಷಣಾ ಕಾರ್ಯಾಚರಣೆ ಆರಂಭ

Published:
Updated:
ಮುಳುಗುವ ಭೀತಿಯಲ್ಲಿ ಬಾರ್ಜ್‌: ರಕ್ಷಣಾ ಕಾರ್ಯಾಚರಣೆ ಆರಂಭ

ಮಂಗಳೂರು: ಇಲ್ಲಿನ ಉಳ್ಳಾಲದ ಅಳಿವೆ ಬಾಗಿಲಿನಲ್ಲಿ ಕಡಲ್ಕೊರೆತ ತಡೆ ಕಾಮಗಾರಿಗೆ ಬಳಸುತ್ತಿದ್ದ ಬಾರ್ಜ್‌ ಸಮುದ್ರದ ಅಲೆಗಳ ಅಬ್ಬರಕ್ಕೆ ಕಲ್ಲುಗಳಿಗೆ ಡಿಕ್ಕಿಯಾಗಿದ್ದು, ಮುಳುಗುವ ಭೀತಿಯಲ್ಲಿದೆ. ಬಾರ್ಜ್‌ನ ಒಳಗಿರುವ 33 ಕಾರ್ಮಿಕರು ಅಪಾಯಕ್ಕೆ ಸಿಲುಕಿದ್ದಾರೆ.ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ನೆರವಿನಲ್ಲಿ ಕೈಗೆತ್ತಿಕೊಂಡಿರುವ ಕಡಲ್ಕೊರೆತ ತಡೆ ಕಾಮಗಾರಿಯ ಗುತ್ತಿಗೆ ಪಡೆದಿರುವ ಮುಂಬೈನ ಕಂಪೆನಿ ಬಾರ್ಜ್‌ ಒಂದನ್ನು ಕೆಲಸಕ್ಕೆ ತಂದಿತ್ತು. ಶನಿವಾರ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಭಾನುವಾರ ಬಾರ್ಜ್‌ ಸಮುದ್ರ ಮಾರ್ಗವಾಗಿ ಮುಂಬೈಗೆ ಪ್ರಯಾಣ ಬೆಳೆಸಬೇಕಿತ್ತು. ಬಾರ್ಜ್‌ ನಿಲುಗಡೆಗೆ ಹಾಕಿದ್ದ ಲಂಗರು ಸಮುದ್ರದ ಅಲೆಗಳ ಹೊಡೆತಕ್ಕೆ ಶನಿವಾರ ಮಧ್ಯಾಹ್ನ ತುಂಡಾಗಿದೆ.ಬಳಿಕ ಬಾರ್ಜ್‌ ಕಲ್ಲುಗಳಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ಪರಿಣಾಮವಾಗಿ ಬಾರ್ಜ್‌ನ ಹಿಂಬದಿಗೆ ಹಾನಿಯಾಗಿದೆ. ಇದರಿಂದ ಬಾರ್ಜ್‌ನ ಒಳಕ್ಕೆ ನೀರುನುಗ್ಗಿ, ಮುಳುಗುವ ಅಪಾಯದಲ್ಲಿದೆ. ಒಳಗಡೆ  ಬಾರ್ಜ್‌ ಚಾಲಕರು, ಯಂತ್ರೋಪಕರಣಗಳ ನಿರ್ವಹಣೆ ಮಾಡುವ ತಾಂತ್ರಿಕ ಸಿಬ್ಬಂದಿ ಸೇರಿದಂತೆ 33 ಮಂದಿ ಇದ್ದಾರೆ. ಡಿಕ್ಕಿ ಸಂಭವಿಸಿದ ಬಳಿಕ ಕೆಲವರು ದೂರವಾಣಿ ಮೂಲಕ ಉಳ್ಳಾಲ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಬಳಿಕ ಎಲ್ಲರ ಮೊಬೈಲ್‌ಗಳು ಸ್ವಿಚ್‌ ಆಫ್‌ ಆಗಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.ಮೀನುಗಾರಿಕೆ ಚಟುವಟಿಕೆ ನಿಷೇಧಗೊಂಡಿರುವುದರಿಂದ ಎಲ್ಲ ದೋಣಿಗಳು ಲಂಗರು ಹಾಕಿದ್ದು, ಕಾರ್ಯಾಚರಣೆಗೆ ದೋಣಿಗಳ ಕೊರತೆ ಎದುರಾಗಿದೆ.ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಕೆ.ಎಂ.ಶಾಂತರಾಜು, ‘ಹೆಲಿಕಾಪ್ಟರ್‌ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ’ ಎಂದರು.ರಕ್ಷಣಾ ಕಾರ್ಯಾಚರಣೆ ಆರಂಭ

ಬಾರ್ಜ್‌ನಲ್ಲಿ ಸಿಲುಕಿರುವ ಸಿಬ್ಬಂದಿಯ ರಕ್ಷಣೆಗೆ ಕಾರ್ಯಾಚರಣೆ ಆರಂಭವಾಗಿದ್ದು, ಕರಾವಳಿ ಕಾವಲು ಪಡೆಯ ಒಂದು ದೋಣಿ ಬಾರ್ಜ್‌ನತ್ತ ಧಾವಿಸಿದೆ.

ಸಮುದ್ರದಲ್ಲಿ ಪಹರೆಗೆ ನಿಯೋಜಿಸಿರುವ ‘ಅಮರ್ತ್ಯ’ ಹೆಸರಿನ ಹಡಗನ್ನು ರಕ್ಷಣಾ ಕಾರ್ಯಾಚರಣೆಗೆ ಕರೆಸಿಕೊಳ್ಳಲಾಗುತ್ತಿದೆ. ಈಗಾಗಲೇ ಸ್ಥಳದಲ್ಲಿರುವ ದೋಣಿಯಿಂದ ಸುಡುಮದ್ದು ಸಿಡಿಸಿ ಹಡಗಿಗೆ ಸ್ಥಳದ ಮಾಹಿತಿ ನೀಡಲಾಗುತ್ತಿದೆ. ಬಾರ್ಜ್‌ನ ಒಳಗಿರುವ ಕಾರ್ಮಿಕರು ಕೂಡ ಎರಡು ಬಾರಿ ಸುಡುಮದ್ದು ಸಿಡಿಸಿ ರಕ್ಷಣೆಗೆ ಮನವಿ ಮಾಡಿದ್ದಾರೆ.

ರಕ್ಷಣಾ ಕಾರ್ಯಾಚರಣೆಯ ಮೊದಲ ಹಂತದಲ್ಲಿ 10 ಮಂದಿಯನ್ನು ರಕ್ಷಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry