ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಸರಿ ಎನ್ನುವ ಸಿನಿಮಾ ಫ್ಯಾಕ್ಟರಿ

Last Updated 4 ಜೂನ್ 2017, 8:12 IST
ಅಕ್ಷರ ಗಾತ್ರ

ದಾಸರಿ ನಾರಾಯಣರಾವು ಅವರನ್ನು ಸಿನಿಮಾ ಲೋಕದ ‘ಬ್ರಹ್ಮ’ ಅಂತ ಬಣ್ಣಿಸಬಹುದು. ಹತ್ತಲ್ಲ... ಇಪ್ಪತ್ತಲ್ಲ... 151 ಸಿನಿಮಾ ಸೃಷ್ಟಿಸಿದ ಹಿರಿಮೆ ಅವರದು. ತೆಲುಗಿನಲ್ಲಿ ಅಷ್ಟೇ ಅಲ್ಲ; ಕನ್ನಡ, ಹಿಂದಿ ಭಾಷೆಯಲ್ಲೂ ಚಿತ್ರ ನಿರ್ದೇಶಿಸಿದ ಮಹಾನ್‌ ಪ್ರತಿಭೆ. ಕತೆ, ಚಿತ್ರಕತೆ, ಸಂಭಾಷಣೆ, ಗೀತರಚನೆ, ಅಭಿನಯ, ನಿರ್ದೇಶನ... ಎಲ್ಲದರಲ್ಲೂ ಛಾಪು ಮೂಡಿಸಿದ ದಾಸರಿಗೆ ದಾಸರಿಯೇ ಸರಿಸಾಟಿ!

ಏಕಕಾಲಕ್ಕೆ ಮೂರು–ನಾಲ್ಕು ಸಿನಿಮಾ ನಿರ್ದೇಶಿಸುವಷ್ಟು ಸೃಷ್ಟಿಶಕ್ತಿ ಹೊಂದಿದ್ದ ದೈತ್ಯಪ್ರತಿಭೆ ದಾಸರಿ. ಸ್ವತಃ 50ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸಿದ ಸಾಹಸಿಯೂ ಹೌದು. ಒಂದು ಹಂತದಲ್ಲಿ ನಿರ್ದೇಶನ ವಿಭಾಗದಲ್ಲಿ ಅವರಿಗೆ ಸುಮಾರು 40 ಮಂದಿ ಸಹಾಯಕರಿದ್ದರಂತೆ. ಅವರ ಮನೆಯಂಗಳದಲ್ಲಿ ಅರಳಿದ ಪ್ರತಿಭೆಗಳಿಗೆ ಲೆಕ್ಕವಿಲ್ಲ. ‘ದಾಸರಿ ಶಿಷ್ಯರು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನೂರಕ್ಕೂ ಹೆಚ್ಚು ಮಂದಿ ಉದ್ಯಮದಲ್ಲಿ ಇದ್ದಾರೆ ಎಂಬುದು ಅವರ ಶಿಷ್ಯವಾತ್ಸಲ್ಯಕ್ಕೆ ಒಂದು ನಿದರ್ಶನ. ‘ಗುರುವುಗಾರು’ ಎಂದರೆ ದಾಸರಿ ಎಂದೇ ಅರ್ಥ.

ಚಿತ್ರಸಾಹಿತಿ ಪಾಲಗುಮ್ಮಿ ಪದ್ಮರಾಜು ಗರಡಿಯಲ್ಲಿ ಪಳಗಿದ ದಾಸರಿ, ಕೌಟುಂಬಿಕ ಕಥಾಹಂದರ ಹೊಂದಿರುವ ‘ತಾತಾಮನವಡು’ (1972) ಚಿತ್ರದ ಮೂಲಕ  ನಿರ್ದೇಶನಕ್ಕೆ ಕಾಲಿಟ್ಟರು. ಅವರು ಉದ್ಯಮಕ್ಕೆ ಬರುವುದಕ್ಕೆ ಮೊದಲೇ ಪ್ರಸಿದ್ಧಿ ಪಡೆದಿದ್ದ ಅನೇಕ ನಿರ್ದೇಶಕರು ತೆಲುಗಿನಲ್ಲಿದ್ದರು. ಆದರೆ ಅವರ್‍್ಯಾರೂ ದಾಸರಿ ಅವರಂತೆ ಪ್ರಯೋಗ ನಡೆಸಿದವರಲ್ಲ. ದಾಸರಿ ರೂಪಿಸಿದಷ್ಟು ನಿರ್ದೇಶಕ ಪ್ರತಿಭೆಗಳನ್ನು ರೂಪಿಸಿದವರಲ್ಲ.

ವರ್ಚಸ್ವೀ ನಟರು ಉದ್ಯಮವನ್ನು ಆಳುತ್ತಿದ್ದ ಹೊತ್ತಲ್ಲಿ ಹೊಸ ನಟ–ನಟಿಯರಿಗೆ ಅವಕಾಶ ನೀಡಿ ಅವರ ಪ್ರತಿಭೆಗೆ ಸಾಣೆ ಹಿಡಿದರು. ಅವರು ನೆಲೆ ನಿಲ್ಲಲು ಬೆಂಬಲವಾಗಿ ನಿಂತರು. ಖಳನಟ ಆಗಿದ್ದ ಮೋಹನ್‌ಬಾಬು ಅವರನ್ನು ನಾಯಕನಟ ಮಾಡಿದರು. ಅವರು ‘ಡೈಲಾಗ್‌ ಕಿಂಗ್’ ಆಗಿ ರೂಪಾಂತರಗೊಳ್ಳುವಲ್ಲಿ ದಾಸರಿ ಪಾತ್ರ ದೊಡ್ಡದು. ಈಗ ತಾರಾನಟನಾಗಿ ಮಿಂಚುತ್ತಿರುವ ಮಹೇಶ್‌ಬಾಬು ಬಾಲನಟನಾಗಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ದಾಸರಿ ನಿರ್ದೇಶನದ ‘ನೀಡ’ (1979) ಎಂಬ ಪ್ರಯೋಗಾತ್ಮಕ ಚಿತ್ರದಲ್ಲಿ. ಶ್ರೀಹರಿ ಅವರನ್ನು ಸಿನಿಮಾಗೆ ಪರಿಚಯಿಸಿದ್ದು ದಾಸರಿ ಅವರೇ. ನಟ, ನಿರ್ಮಾಪಕ, ನಿರ್ದೇಶಕ ಆರ್‌. ನಾರಾಯಣ ಮೂರ್ತಿ ಅವರಿಗೆ ಬೆಂಬಲವಾಗಿ ನಿಂತದ್ದೂ ಇವರೇ.

‘ಮಂಗಮ್ಮಗಾರಿ ಮನವಡು’, ‘ಅಮ್ಮೋರು’, ‘ಅರುಂಧತಿ’ ಅಂತಹ ಯಶಸ್ವೀ ಚಿತ್ರಗಳನ್ನು ನೀಡಿರುವ ಕೋಡಿ ರಾಮಕೃಷ್ಣ; ‘ಅಹನಾ ಪೆಳ್ಳಂಟ!’ ರೀತಿಯ ಹಾಸ್ಯಚಿತ್ರಗಳಿಗೆ ಹೆಸರಾದ ರೇಲಂಗಿ ನರಸಿಂಹ ರಾವ್‌; ‘ಯಮುಡಿಕಿ ಮೊಗುಡು’, ‘ಪೆದರಾಯುಡು’ ಅಂತಹ ಸೂಪರ್‌ಹಿಟ್‌ ಚಿತ್ರಗಳನ್ನು ಕೊಟ್ಟಿರುವ ರವಿರಾಜ ಪಿನಿಶೆಟ್ಟಿ ಸೇರಿದಂತೆ ಹಲವು ಪ್ರತಿಭಾನ್ವಿತ ನಿರ್ದೇಶಕರು ರೂಪುಗೊಂಡದ್ದು ದಾಸರಿ ಪಾಳಯದಲ್ಲಿಯೇ.

ಇವರ ಸಮಕಾಲೀನರಾದ ಕೆ. ವಿಶ್ವನಾಥ್‌ ಅವರು ಕಲಾತ್ಮಕ ಚಿತ್ರಗಳನ್ನಷ್ಟೇ ರೂಪಿಸಿದರು. ಕೆ. ರಾಘವೇಂದ್ರ ರಾವ್‌ ಅವರು ‘ಅನ್ನಮಯ್ಯ’, ‘ಶ್ರೀ ರಾಮದಾಸು’ ಅಂತಹ ಮೂರು–ನಾಲ್ಕು ಚಿತ್ರಗಳನ್ನು ಬಿಟ್ಟರೆ ಉಳಿದಂತೆ ಸೂತ್ರಬದ್ಧ ಸಿನಿಮಾ ಚೌಕಟ್ಟಿಗೆ ಅಂಟಿಕೊಂಡರು. ಆದರೆ ದಾಸರಿ ಅವರಿಗೆ ಎಲ್ಲೆಗಳೇ ಇರಲಿಲ್ಲ. ಪ್ರೇಮ, ಸಾಂಸಾರಿಕ, ದಾಂಪತ್ಯ, ವಿಪ್ಲವಾತ್ಮಕ, ಸಂದೇಶಭರಿತ... ಹೀಗೆ ಎಲ್ಲ ಬಗೆಯ ಚಿತ್ರಗಳಿಗೂ ತಮ್ಮ ಪ್ರತಿಭೆಯನ್ನು ಒಡ್ಡಿಕೊಂಡರು. ಸಿನಿಮಾ ಮೂಲಕ ಬದುಕಿನ ಎಲ್ಲ ನೆಲೆಗಳನ್ನೂ ಶೋಧಿಸಿದರು.

ತೆಲುಗಿನ ‘ಎಂಎಲ್‌ಎ ಏಡುಕೊಂಡಲು’ ಚಿತ್ರದಲ್ಲಿ ದಾಸರಿ ನಾರಾಯಣ ರಾವು

ದಾಸರಿ ಅವರದು ಒಂದು ರೀತಿಯಲ್ಲಿ ಪೂರ್ಣದೃಷ್ಟಿ. ನಮ್ಮ ವಿಶ್ವವಿದ್ಯಾಲಯಗಳ ಬೋಧನಾಂಗ, ಪ್ರಸಾರಾಂಗ ಸಾಧಿಸಲಾರದ್ದನ್ನು ಅವರ ಸಿನಿಮಾಗಳು ಸಾಧಿಸಿವೆ. ಜನತಾ ಶಿಕ್ಷಣ ನೀಡಿದ ಗುರುವೂ ಹೌದು. ಒಬ್ಬ ಪರಿಪೂರ್ಣ ನಿರ್ದೇಶಕ ಎಂದು ಯಾರನ್ನಾದರೂ ಕರೆಯಬಹುದು ಎಂದಾದರೆ, ಮುಂಚೂಣಿಯಲ್ಲಿ ನಿಲ್ಲುವ ಹೆಸರೇ ದಾಸರಿ ಅವರದು.

ದಾಸರಿ ಅವರು ಕಡಿಮೆ ಬಜೆಟ್‌ ಸಿನಿಮಾಗಳಿಗೆ ದೊಡ್ಡ ಹೆಸರು ತಂದುಕೊಟ್ಟರು. ಕೆಲವು ಚಿತ್ರಗಳಿಗೆ ರಾಷ್ಟ್ರಮಟ್ಟದ ಪುರಸ್ಕಾರಗಳನ್ನೂ ಪಡೆದರು. ‘ಶಿವರಂಜನಿ’, ‘ಸ್ವರ್ಗಂ–ನರಕಂ’, ‘ಸ್ವಪ್ನ’, ‘ಅದ್ದಾಲಮೇಡ’, ‘ಸ್ವಯಂವರಂ’, ‘ಅಮ್ಮ ರಾಜೀನಾಮಾ’,  ‘ಕಂಟೆ ಕೂತುರ್ನೇ ಕನು’... ಚಿತ್ರಗಳಿಗೆ ಪ್ರೇಕ್ಷಕರ ನೆನಪಿನಕೋಶದಲ್ಲಿ ಶಾಶ್ವತ ಸ್ಥಾನ ಉಂಟು.

‘ಶಿವರಂಜನಿ’ ಚಿತ್ರ ತೆರೆಕಂಡದ್ದು 1978ರಲ್ಲಿ. ಮೋಹನ್‌ಬಾಬು–ಜಯಸುಧಾ ನಾಯಕ–ನಾಯಕಿ. ದಾಸರಿ ಅವರು ತಾವು ಆರಂಭಿಸಿದ ಚಿತ್ರನಿರ್ಮಾಣ ಸಂಸ್ಥೆ  ‘ತಾರಕಪ್ರಭು ಫಿಲಂಸ್‌’ ಬ್ಯಾನರ್‌ ಅಡಿ ನಿರ್ಮಿಸಿದ ಈ ಮೊದಲ ಚಿತ್ರ ಬೆಂಗಳೂರಿನಲ್ಲಿ ಕೂಡ ಶತದಿನ ಪೂರೈಸಿತು. ‘ಜೋರುಮೀದುನ್ನಾವು ತುಮ್ಮೆದ... ನೀ  ಜೋರೆವರಿ ಕೋಸಮೇ ತುಮ್ಮೆದಾ...’ ಗೀತೆ ಈಗಲೂ ಜನರ ನಾಲಿಗೆ ಮೇಲೆ ನಲಿದಾಡುತ್ತದೆ. ಚಿತ್ರದ ಗೆಲುವಿನಲ್ಲಿ ಅರ್ಧದಷ್ಟು ಪಾತ್ರ ಸಂಭಾಷಣೆಗೇ ಸಲ್ಲುತ್ತದೆ. ಮನಸ್ಸಿಗೆ ನಾಟುವಂತೆ ಸಂಭಾಷಣೆ ಬರೆಯುವುದರಲ್ಲಿಯೂ ದಾಸರಿ ಸಿದ್ಧಹಸ್ತರಾಗಿದ್ದರು. ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆಂಧ್ರಪ್ರದೇಶ ಸರ್ಕಾರ ನೀಡುವ ‘ನಂದಿ’ ಪುರಸ್ಕಾರ ನಟನೆಗಾಗಿಯೂ ಒಲಿದಿದೆ.

ದಾಸರಿ ರೂಪಿಸಿದ ಮತ್ತೊಂದು ಆಣಿಮುತ್ತು ‘ಗೋರಿಂಟಾಕು’. ಶೋಭನ್‌ಬಾಬು–ಸುಜಾತಾ ಜೋಡಿ. ನಾಯಕನಟನ ತಾಯಿಯಾಗಿ ಮಹಾನಟಿ ಸಾವಿತ್ರಿ ನಟಿಸಿದ್ದರು. ಈ ಚಿತ್ರ ಮನೆಮಾತಾಗಿತ್ತು. ಹೆಂಗಳೆಯರನ್ನು ಆ ಮಟ್ಟಿಗೆ ಸೆಳೆದಿತ್ತು. ಕೃಷ್ಣಂರಾಜು ಅವರಿಗೆ ರೆಬಲ್‌ಸ್ಟಾರ್‌ ವರ್ಚಸ್ಸು ತಂದುಕೊಟ್ಟ ಚಿತ್ರ ‘ಕಟಕಟಾಲ ರುದ್ರಯ್ಯ’. ಆ್ಯಕ್ಷನ್‌ ಚಿತ್ರಗಳಿಗೆ ಹೊಸ ಆಯಾಮ ನೀಡಿದ ಚಿತ್ರ ಇದು.

ಅಕ್ಕಿನೇನಿ ನಾಗೇಶ್ವರ ರಾವ್‌ ಅಭಿನಯದ ‘ಪ್ರೇಮಾಭಿಷೇಕಂ’ ಅದ್ಭುತ ಪ್ರೇಮಕಾವ್ಯ. 1981ರಲ್ಲಿ ಚಿತ್ರ ತೆರೆಕಂಡು 30 ಕೇಂದ್ರಗಳಲ್ಲಿ ಶತದಿನ ಪೂರೈಸಿತು. ಎಎನ್‌ಆರ್‌ ವೃತ್ತಿಬದುಕಿನಲ್ಲಿ ‘ದೇವದಾಸು’ ಚಿತ್ರಕ್ಕೆ ಎಷ್ಟು ಪ್ರಧಾನ ಸ್ಥಾನ ಇದೆಯೋ ಅಷ್ಟೇ ಪ್ರಮುಖ ಸ್ಥಾನ ಈ ಚಿತ್ರಕ್ಕೂ ಇದೆ. ‘ಮೇಘಸಂದೇಶಂ’ ಅಪರೂಪದ ದೃಶ್ಯಕಾವ್ಯ. ಸಹಜೀವನ ಎಂಬ ಪರಿಕಲ್ಪನೆಯನ್ನು ಕೇಂದ್ರವಾಗಿರಿಸಿಕೊಂಡು ರೂಪಿಸಿದ ಈ ಚಿತ್ರಕ್ಕೆ ರಾಷ್ಟ್ರಮಟ್ಟದ ಪುರಸ್ಕಾರ ಒಲಿಯಿತು.

ಎನ್‌.ಟಿ. ರಾಮರಾವ್‌ ಅಭಿನಯದ ‘ಬೊಬ್ಬಿಲಿ ಪುಲಿ’ ಚಿತ್ರ ಚಾರಿತ್ರಿಕ ವಿಜಯ ದಾಖಲಿಸಿತು. ಚಿತ್ರದ ಸಂಭಾಷಣೆ ಜನಸಾಮಾನ್ಯರಿಗೆ ಬಾಯಿಪಾಠ ಆಗಿತ್ತು. ದೇಶಕ್ಕಾಗಿ ಗಡಿಯಲ್ಲಿ ಹೋರಾಡುವ ಸೈನಿಕನು ದೇಶದ ಒಳಗೆ ಕೊಳೆತ ವ್ಯವಸ್ಥೆಗೆ ಶಸ್ತ್ರಚಿಕಿತ್ಸೆ ನೆರವೇರಿಸಲು ಮುಂದಾದರೆ ಹೇಗಿರಬಹುದು ಎಂಬ ಕ್ರಾಂತಿಕಾರಕ ಆಲೋಚನೆಯ ಸುತ್ತ ಹಬ್ಬಿಕೊಂಡ ಕಥೆ ಜನರನ್ನು ಸೂಜಿಗಲ್ಲಿನಂತೆ ಸೆಳೆದಿತ್ತು.  ಅದೇ ರೀತಿ ‘ಸರ್ದಾರ್‌ ಪಾಪಾರಾಯುಡು’ ಚಿತ್ರವೂ ಎನ್‌ಟಿಆರ್‌–ದಾಸರಿ ಜೋಡಿಗೆ ಯಶಸ್ಸು ಹಾಗೂ ಹೆಸರು ಎರಡನ್ನೂ ತಂದುಕೊಟ್ಟಿತು.

‘ದಾಸರಿ ಫಿಲಂ ಯೂನಿವರ್ಸಿಟಿ’ ಎಂಬ ಮತ್ತೊಂದು ಚಿತ್ರನಿರ್ಮಾಣ ಸಂಸ್ಥೆಯನ್ನು ಅವರು ಹುಟ್ಟುಹಾಕಿದರು. ಆ ಬ್ಯಾನರ್‌ ಅಡಿ ರೂಪುಗೊಂಡ ಮೊದಲ ಚಿತ್ರ ‘ಒರೇಯ್‌ ರಿಕ್ಷಾ’. ಶಿಷ್ಯ ಆರ್‌. ನಾರಾಯಣಮೂರ್ತಿ ನಾಯಕನಟನಾಗಿ ನಟಿಸಿದ್ದರು. ಈ ಚಿತ್ರಕ್ಕೆ ಕೆಲವು ಗೀತೆಗಳನ್ನು ಗದ್ದರ್‌ ರಚಿಸಿದ್ದರು. ಅದರಲ್ಲಿನ ‘ನೀ ಪಾದಂಮೀದ ಪುಟ್ಟುಮಚ್ಚನೈ ಚೆಲ್ಲಮ್ಮಾ...’ ಎಂಬ ಗೀತೆಗೆ ‘ನಂದಿ’ ಪುರಸ್ಕಾರ ಒಲಿದಿತ್ತು. ಈ ಗೀತೆ ಸದಾ ಜನಜನಿತ.
ಉತ್ತರಪ್ರದೇಶದಲ್ಲಿ ಬುಡಕಟ್ಟು ಮಹಿಳೆ ಮೇಲೆ ನಡೆದ ದೌರ್ಜನ್ಯದ ನೈಜ ಘಟನೆಯ ಎಳೆಯನ್ನು ಇಟ್ಟುಕೊಂಡು ರೂಪಿಸಿದ ಚಿತ್ರ ‘ಒಸೇಯ್‌ ರಾಮುಲಮ್ಮ’. ಅದರಲ್ಲಿ ವಿಜಯಶಾಂತಿ ನಾಯಕಿ. ದಾಸರಿ ಸಿನಿ ಪಯಣದಲ್ಲಿ ಈ ಚಿತ್ರ ಒಂದು ಮೈಲುಗಲ್ಲು.

‘ಸ್ವಪ್ನ’ ಚಿತ್ರ ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ರೂಪುಗೊಂಡಿತ್ತು. ದ್ವಾರಕೀಶ್‌ ಅಭಿನಯದ ‘ಪೊಲೀಸ್‌ ಪಾಪಣ್ಣ’ ಚಿತ್ರವನ್ನೂ ದಾಸರಿ ಅವರೇ ನಿರ್ದೇಶಿಸಿದ್ದರು. ಹಿಂದಿಯಲ್ಲಿ ರಾಜೇಶ್‌ ಖನ್ನಾ ನಟಿಸಿದ ‘ಆಶಾ ಜ್ಯೋತಿ’, ‘ಆಜ್‌ ಕಾ ಎಂಎಲ್‌ಎ...’ ಚಿತ್ರಗಳೂ ದಾಸರಿ ಮೂಸೆಯಲ್ಲಿ ಅರಳಿವೆ.
ಸಿನಿಮಾವನ್ನೇ ಉಸಿರಾಗಿಸಿಕೊಂಡು ಬದುಕಿದ ದಾಸರಿ ಪತ್ರಿಕೋದ್ಯಮಕ್ಕೂ ಕೈಹಾಕಿದರು. 1984ರಲ್ಲಿ ‘ಉದಯಂ’ ದೈನಿಕ ಆರಂಭಿಸಿದರು. ನಾಲ್ಕೈದು ವರ್ಷಗಳ ಕಾಲ ಅವರ ನೇತೃತ್ವದಲ್ಲೇ ನಡೆಯಿತು. ಬಳಿಕ ಉದ್ಯಮಿಯೊಬ್ಬರಿಗೆ ಮಾರಿಬಿಟ್ಟರು. ‘ಶಿವರಂಜನಿ’ ಎಂಬ ಸಿನಿಮಾ ಪತ್ರಿಕೆಯನ್ನೂ ಹೊರತಂದರು.

ಎನ್‌ಟಿಆರ್‌ ರಾಜಕೀಯಕ್ಕೆ ಧುಮುಕಿ ಮುಖ್ಯಮಂತ್ರಿಯಾದ ಬಳಿಕ ಸಿನಿಮಾರಂಗದ ಅನೇಕರ ದೃಷ್ಟಿ ರಾಜಕೀಯದತ್ತ ಹೊರಳಿತು. ‘ತೆಲುಗು ತಲ್ಲಿ’ ಎಂಬ ಹೆಸರಿನಲ್ಲಿ ಒಂದು ಪಕ್ಷ ಕಟ್ಟುವ ಪ್ರಯತ್ನವನ್ನು ದಾಸರಿ ಮಾಡಿದ್ದರು. ಆದರೆ ಅದೇಕೋ ಕೈಗೂಡಲಿಲ್ಲ. 1999ರಲ್ಲಿ ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡರು. ಎರಡು ಅವಧಿಗೆ ರಾಜ್ಯಸಭಾ ಸದಸ್ಯರೂ ಆದರು. ಮನಮೋಹನ್‌ ಸಿಂಗ್‌ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಕಲ್ಲಿದ್ದಲು ಖಾತೆ ರಾಜ್ಯ ಸಚಿವರಾಗಿದ್ದರು. ಆದರೆ ಸಿನಿಮಾ ಒಲಿದಂತೆ ರಾಜಕೀಯ ಅವರಿಗೆ ಒಲಿದಂತೆ ಕಾಣಲಿಲ್ಲ. ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣವೊಂದರಲ್ಲಿ ಅವರ ಹೆಸರು ತಳಕು ಹಾಕಿಕೊಂಡಿತ್ತು. ಅವರ ಮನೆ ಮೇಲೆ ಸಿಬಿಐ ದಾಳಿ ಕೂಡ ನಡೆದಿತ್ತು. ಅವರಿಗೆ ಅಂಟಿದ ಭ್ರಷ್ಟಾಚಾರ ಆರೋಪದ ಕಳಂಕ ನಿವಾರಣೆಯಾಗುವ ಮೊದಲೇ ಇಹಲೋಹ ಯಾತ್ರೆ ಮುಗಿಸಿದರು.

ದಾಸರಿ ಹುಟ್ಟೂರು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪಾಲಕೊಲ್ಲು. ಆರನೇ ತರಗತಿ ಓದುವಾಗಲೇ ಪೋಷಕರು ಶಾಲೆ ಬಿಡಿಸುತ್ತಾರೆ. ಶಿಕ್ಷಕರ ಒತ್ತಾಯದ ಮೇರೆಗೆ ಪುನಃ ಶಾಲೆಗೆ ಸೇರುತ್ತಾರೆ. ವಿದ್ಯಾರ್ಥಿಗಳ ದೇಣಿಗೆಯಿಂದ ಶುಲ್ಕ ತುಂಬಿ ಓದು ಮುಂದುವರಿಸುತ್ತಾರೆ. ಬಡತನದ ಬೇಗೆಯಲ್ಲೂ ರಂಗಭೂಮಿಯತ್ತ ಆಸಕ್ತಿ ಹೊರಳುತ್ತದೆ. ಅದು ಸಿನಿಮಾರಂಗಕ್ಕೆ ಜಿಗಿಯಲು ಏಣಿಯಾಗುತ್ತದೆ. ಪಾಲಕೊಲ್ಲು ಬಾಲಕ ತೆಲುಗು ಚಿತ್ರೋದ್ಯಮದ ‘ಗುರುವುಗಾರು’ ಆಗಿ ರೂಪಾಂತರಗೊಳ್ಳುವ ಪ್ರಕ್ರಿಯೆಯಲ್ಲಿ ಇರುವುದು ಬರೀ ಸ್ವಪ್ರಯತ್ನ, ಛಲ.                                    v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT