ದೇಹ ದಂಡನೆಗೆ ಸಂಗೀತ ಸಾಥ್‌

7

ದೇಹ ದಂಡನೆಗೆ ಸಂಗೀತ ಸಾಥ್‌

Published:
Updated:
ದೇಹ ದಂಡನೆಗೆ ಸಂಗೀತ ಸಾಥ್‌

ಜಿಮ್‌ಗೆ ಹೊಸದಾಗಿ ಹೋದಾಗ ಒಂದೆರಡು ವಾರ ಮೈ, ಕೈ ನೋವಾಗುವುದು ಸಹಜ. ಇದರಿಂದ ಮತ್ತೆ ವ್ಯಾಯಾಮ ಮಾಡುವುದೇ ಬೇಡ ಎನಿಸಬಹುದು. ಆದರೆ ವ್ಯಾಯಾಮಕ್ಕೆ ಸಂಗೀತವೂ ಜೊತೆಯಾದಾಗ ಮನಸಿನ ಗಮನ ದೇಹದ ನೋವಿನತ್ತ ಹೆಚ್ಚಾಗಿ ಹರಿಯುವುದಿಲ್ಲ. ಸಂಗೀತದ ಇಂಪು ನೋವನ್ನು ಮರೆಸುತ್ತದೆ. 

ಮನಸು ಹಗುರಾಗುತ್ತದೆ: ಖಿನ್ನತೆ, ಕೋಪ, ಒತ್ತಡ ಸೇರಿದಂತೆ ಹಲವು ಮಾನಸಿಕ ಸಮಸ್ಯೆಗಳಿಗೆ ಸಂಗೀತ ಔಷಧವಾಗಿಯೂ ಕೆಲಸ ಮಾಡಬಲ್ಲದು. ಭಾವನೆಗಳನ್ನು ನಿಯಂತ್ರಣದಲ್ಲಿಡುವ ಶಕ್ತಿ ಸಂಗೀತಕ್ಕಿದೆ. ಮನಸ್ಸಿಗೆ ನೋವಾದಾಗ ಇಷ್ಟದ ಸಂಗೀತ ಆಲಿಸುವುದರಿಂದ ಪ್ರಶಾಂತ ಭಾವ ಮೂಡುತ್ತದೆ. ಇದರಿಂದ ಮನಸಿನಲ್ಲಿ ಒಳ್ಳೆಯ ಆಲೋಚನೆಗಳು ಮೂಡುತ್ತವೆ. ವ್ಯಾಯಾಮ ಮಾಡುವಾಗ ಹೊಸ ಹುರುಪು ಬರುತ್ತದೆ.

ಉದ್ವೇಗಕ್ಕೆ ಕಡಿವಾಣ: ವೇಗದ, ಏರುದನಿಯ ಸಂಗೀತ ಮನಸ್ಸನ್ನು ಪ್ರಚೋದಿಸಿದರೆ, ಮೆಲುದನಿಯ ಸಂಗೀತ ಮನಸ್ಸನ್ನು ಶಾಂತಗೊಳಿಸುತ್ತದೆ. ಸಾಮಾನ್ಯವಾಗಿ ಅಥ್ಲೀಟ್‌ಗಳು ಕ್ರೀಡಾಂಗಣಕ್ಕೆ ಇಳಿಯುವ ಮೊದಲು ಮೆಲು ದನಿಯ ಸಂಗೀತ ಆಲಿಸುತ್ತಾರೆ. ಇದರಿಂದ ಮನಸ್ಸು ಪ್ರಶಾಂತವಾಗಿ ದೇಹದ ಚೈತನ್ಯ ಹೆಚ್ಚುತ್ತದೆ. ವ್ಯಾಯಾಮ ಮಾಡುವಾಗ ಮೆಲುದನಿಯ ಸಂಗೀತ ಆಲಿಸಿದರೆ, ದೇಹ ದಂಡನೆಗೆ ಮನಸು ಸಹಕರಿಸುತ್ತದೆ.

ನೆನಪುಗಳ ಮೆಲುಕು: ಹಾಡುಗಳು ಹಳೆಯ ನೆನಪುಗಳನ್ನು ಮರುಕಳಿಸುತ್ತವೆ. ಆ ಹಾಡಿನ ಸಾಹಿತ್ಯ ಬದುಕಿನ ಘಟನೆಗೆ ಸಮೀಪವಿದೆ ಎನಿಸುತ್ತದೆ. ಹೀಗೆ ನೆನಪುಗಳನ್ನು ಮನಸಿನ ಮುನ್ನೆಲೆಗೆ ತಂದುಕೊಡುವ ಹಾಡುಗಳನ್ನು ಆಲಿಸುವುದರಿಂದ ದೈಹಿಕ ಚಟುವಟಿಕೆಗಳಿಗೆ ಪ್ರೇರಣೆ ಸಿಗುತ್ತದೆ.

ಸಂಗೀತ ಆಲಿಕೆ ಹೀಗಿರಲಿ: ಸೈಕ್ಲಿಂಗ್‌ ಮಾಡುವಾಗ ಏರುದನಿಯ ಮ್ಯೂಸಿಕ್‌ ಆಲಿಸುವುದರಿಂದ ದಣಿವು ಅರಿವಾಗುವುದೇ ಇಲ್ಲ. ಹಾಗಂತ ಕಿವಿ ಹಾಳಾಗುವಷ್ಟು ಗಟ್ಟಿ ದನಿಯಲ್ಲಿ ಹಾಡು ಕೇಳಬೇಡಿ. ಶಬ್ದದ ಪ್ರಮಾಣ  120ರಿಂದ 140 ಬಿಪಿಎಂ (ಬೀಟ್ಸ್‌ ಪರ್ ಮಿನಿಟ್) ಇರಲಿ.

ಒಳಿತಿಗೆ ಮುನ್ನುಡಿ: ಜಗತ್ತಿಗೆ ನಾನು ಭಾರವಾಗಿದ್ದೇನೆ, ನಾನೇಕೆ ಬದುಕಬೇಕು? ಇತ್ಯಾದಿ ನಕಾರಾತ್ಮಕ ಆಲೋಚನೆಗಳು ಕೆಲವರನ್ನು ಕಾಡುತ್ತಿರುತ್ತವೆ. ವ್ಯಾಯಾಮ ಮಾಡುವಾಗ ‘ವ್ಯಾಯಾಮ ಮಾಡಿ ಏನಾಗಬೇಕು?’ ಎಂದೂ ಮನಸು ಹಿಂಜರಿಯಬಹುದು. ಇಂಥವರು ಸಂಗೀತ ಆಲಿಸಿದರೆ, ಅವರ ಮೂಡ್‌ ಬದಲಾಗುತ್ತದೆ. ವ್ಯಾಯಾಮಕ್ಕೆ ಪ್ರೇರಣೆಯೂ ಸಿಗುತ್ತದೆ.

(ಮೂಲ: ವರ್ಚುಯಾಜಿಮ್‌)

****

ವರ್ಕೌಟ್‌

ಮಾಡುವವರಿಗೆ ಪ್ರೇರಣೆ ದೊರಕಬೇಕು ಎಂಬ ಕಾರಣಕ್ಕೆ ಜಿಮ್‌ನಲ್ಲಿ ಮ್ಯೂಸಿಕ್‌ ಹಾಕಿರುತ್ತೇವೆ. ರಿದಮ್‌ ಹೆಚ್ಚಿರುವ ಹಾಡನ್ನೇ ಸಾಮಾನ್ಯವಾಗಿ ಹಾಕುತ್ತೇವೆ. ಇಯರ್‌ ಫೋನ್‌ ಹಾಕಿಕೊಂಡು ಕೇಳುವವರು ಇದ್ದಾರೆ. ಇದರಿಂದ ವರ್ಕೌಟ್‌ ಕಡೆಗೆ ಅವರು ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ.ಟಪ್ಪಾಂಗುಚ್ಚಿ ಹಾಡು ಕೇಳುವಾಗ ಕುಣಿಯಬೇಕು ಎನಿಸುವುದು ಸಹಜ. ವರ್ಕೌಟ್‌ ಮಾಡುವಾಗಲೂ ಈ ತಂತ್ರವನ್ನು ಅಳವಡಿಸಬಹುದು. ಮ್ಯೂಸಿಕ್‌ ಕೇಳುತ್ತ ದೇಹ ದಂಡಿಸುವುದರಿಂದ ಉತ್ಸಾಹ ಹೆಚ್ಚುತ್ತದೆ.

   ಪ್ರದೀಪ್‌, ಫಿಟ್‌ನೆಸ್‌ಕಿಂಗ್‌ ಜಿಮ್‌ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry