ಮುತ್ತೇ ಗಮ್ಮತ್ತು

7

ಮುತ್ತೇ ಗಮ್ಮತ್ತು

Published:
Updated:
ಮುತ್ತೇ ಗಮ್ಮತ್ತು

ರಾಜರ ಕಾಲದಿಂದಲೂ ಮುತ್ತಿಗೆ ವಿಶೇಷ ಆದ್ಯತೆ ಇದೆ. ಮುತ್ತು ಎಂದರೆ ಆಭರಣ ಮಾತ್ರ ಎನ್ನುವ ಕಲ್ಪನೆ ಹಿಂದಿತ್ತು. ಆದರೀಗ ಅಲಂಕಾರದ ಹಲವು ಕವಲುಗಳನ್ನು ಅದು ಆವರಿಸಿಕೊಂಡಿದೆ.

ಆಭರಣ, ಉಡುಪು, ಚಪ್ಪಲಿ, ಬ್ಯಾಗ್‌... ಹೀಗೆ ಮುತ್ತು- ಫ್ಯಾಷನ್‌ ಪ್ರಪಂಚದಲ್ಲಿ ತನ್ನ ಹರವು ಹೆಚ್ಚಿಸಿಕೊಂಡಿದೆ. ರಾಜ, ರಾಣಿಯರ ಕುತ್ತಿಗೆಯಲ್ಲಿ ದೊಡ್ಡ ಮುತ್ತಿನ ಸರ, ಬಳೆಗಳು, ಕಿವಿಯೋಲೆ ಇರುತ್ತಿದ್ದುದನ್ನು ಕಂಡಿದ್ದೆವು. ಆ ಕಾಲದಿಂದ ಇಂದಿನವರೆಗೂ ಮುತ್ತುಗಳು  ಮಹತ್ವ ಕಳೆದುಕೊಂಡಿಲ್ಲ.  ಬಂಗಾರದ ಒಡವೆಗಳ ಜೊತೆಗೆ ಫ್ಯಾಷನೆಬಲ್‌ ಆಭರಣಗಳಲ್ಲಿಯೂ ಮುತ್ತಿನದೇ ಪ್ರಾಬಲ್ಯ.

ಎಲ್ಲಾ ಉಡುಪುಗಳಿಗೂ ಹೊಂದಿಕೆಯಾಗುವ ಇದರ ಸ್ವಭಾವವೇ ಬಹುಶಃ ಅದರ ಸ್ಥಾನ ಭದ್ರವಾಗಲು ಕಾರಣವಿರಬಹುದು. ಆಧುನಿಕ ಉಡುಪಿಗೆ ಒಂದೇ ಮುತ್ತಿರುವ ಕಿವಿಯೋಲೆ, ಸಪೂರ ಸರಕ್ಕೆ ದೊಡ್ಡ ಮುತ್ತುಗಳು ತುಂಬಾ ಚೆನ್ನಾಗಿ ಒಪ್ಪುತ್ತವೆ.   

‘ವಧುವಿನ ಅಲಂಕಾರದಲ್ಲಿ ಮುತ್ತಿಗೆ ಹೆಚ್ಚು ಪ್ರಾಶಸ್ತ್ಯ. ಸೂಕ್ಷ್ಮವಾದ ಮುತ್ತುಗಳ ಹತ್ತಾರು ಎಳೆಗಳ ಸೊಂಟಪಟ್ಟಿಯಿಂದ ಹಿಡಿದು ಹಣೆಯ ಬೊಟ್ಟಿನವರೆಗೂ ಮುತ್ತಿನದೇ ವೈಭವ’ ಎನ್ನುತ್ತಾರೆ ಬ್ಯೂಟಿಷಿಯನ್‌ ದೀಪಾ ಹೊಳಿಮಠ.  

ಬೇಸಿಗೆ ಕಾಲದ ಫ್ಯಾಷನ್‌ ಸಂಗ್ರಹದಲ್ಲಂತೂ ಇದಕ್ಕೆ ವಿಶೇಷ ಬೇಡಿಕೆ. ಮುತ್ತುಗಳ ಆಭರಣ, ಉಡುಪು ಧರಿಸಿದ ರೂಪದರ್ಶಿಯರ ಮಾರ್ಜಾಲ ನಡಿಗೆ ಕಣ್ತುಂಬಿಕೊಳ್ಳುವ ಅವಕಾಶ ದೊರಕುವುದು ಬೇಸಿಗೆಯಲ್ಲಿಯೇ. 

ದೀಪಿಕಾ ಪಡುಕೋಣೆಗೆ ಮುತ್ತಿನ ಆಭರಣಗಳೆಂದರೆ ಸಿಕ್ಕಾಪಟ್ಟೆ ಇಷ್ಟವಂತೆ. ‘ಪಾಶ್ಚಾತ್ಯ ಉಡುಪು ತೊಟ್ಟಾಗ ಮುತ್ತಿನ ಒಡವೆ  ಧರಿಸುವುದು ನನಗೆ ಇಷ್ಟ’ ಎಂದು ಹಿಂದೊಮ್ಮೆ ಅವರು ಹೇಳಿದ್ದರು. ಹಲವು ಬಾರಿ ಮುತ್ತಿನ ಹಾರವನ್ನು ಧರಿಸಿ ಅವರು ವೇದಿಕೆಯನ್ನು ಏರಿದ್ದಾರೆ.

ಸೋನಂ ಕಪೂರ್‌ ಸಹ ಮುತ್ತು ಪ್ರಿಯೆ. ತಿಳಿ ನೀಲಿ ಬಣ್ಣದ ಸೀರೆಗೆ ಜೊತೆಯಾಗಿ ಅವರು ತೊಟ್ಟ ಮುತ್ತಿನ ಸರ, ಕಿವಿಯೋಲೆ ಮತ್ತು ಚೋಕರ್‌ ಫ್ಯಾಷನ್‌ ಪ್ರಿಯರ ಮೆಚ್ಚುಗೆ ಗಳಿಸಿತ್ತು.

 

ಮುತ್ತಿನ ಮತ್ತಿಗೆ ಹಾಲಿವುಡ್‌ ಸೆಲೆಬ್ರಿಟಿ ಗಳೂ ಹೊರತಲ್ಲ. ಮುತ್ತಿನ ಆಭರಣಗಳನ್ನು ಉಡುಪಿಗೆ ಮ್ಯಾಚ್‌ ಮಾಡಿಕೊಂಡು ಧರಿಸುವ ಹಾಲಿವುಡ್‌ ಮಂದಿಯೂ ಸಾಕಷ್ಟಿದ್ದಾರೆ.

ಹಾಲಿವುಡ್‌ ಅಚ್ಚರಿಯಿಂದ ಕಂಡಿದ್ದ ಬಿನ್ನಾಣಗಿತ್ತಿ ಮರ್ಲಿನ್‌ ಮನ್ರೊ, ‘ವಜ್ರಗಳು ಹುಡುಗಿಯರಿಗೆ ಅಚ್ಚುಮೆಚ್ಚು. ನನಗೆ ಮಾತ್ರ ಮುತ್ತಿನ ಸರವೆಂದರೆ ಬಲು ಇಷ್ಟ’ ಎಂದು ಹೇಳಿಕೊಂಡಿದ್ದರು.

ರಾಜಕುಟುಂಬಕ್ಕೆ ಸೇರಿದ ನಂತರವೂ ಭಿನ್ನವಿಭಿನ್ನ ಫ್ಯಾಷನ್‌ ಮೂಲಕ ಜಗತ್ತಿನ ಗಮನ ಸೆಳೆದವರು ಬ್ರಿಟನ್‌ನ ರಾಜಕುಮಾರಿ ಡಯಾನಾ. ಅವರು ಹಾಕಿಕೊಂಡಿದ್ದ ನೀಲಮಣಿಯ ಪೆಂಡೆಂಟ್‌ ಇದ್ದ ಮುತ್ತಿನ ಸರ ಫ್ಯಾಷನ್‌ ಪ್ರಿಯರ ಗಮನ ಸೆಳೆದಿತ್ತು.

ಹೀಗೆ ಎಲ್ಲಾ ಕಾಲದವರ ಮನಗೆದ್ದಿರುವ ಮುತ್ತುಗಳು ಆಭರಣಗಳ ಜೊತೆಗೆ ಉಡುಪಿನ ಅಲಂಕಾರದಲ್ಲಿಯೂ ಪ್ರವೇಶ ಪಡೆದಿವೆ. ಈಗೆಲ್ಲ ಬ್ಲೌಸ್‌ಗಳ ಮೇಲೆ ಕುಸುರಿ ಮೂಡಿಸುವುದು ಸಾಮಾನ್ಯ. ಇದಕ್ಕೆ ಮುತ್ತುಗಳೂ ಸೇರ್ಪಡೆಯಾಗಿವೆ.  ಸಾಂಪ್ರದಾಯಿಕ ಸಮಾರಂಭಗಳಿಗೆ  ಧರಿಸುವಂತಹ ಚಪ್ಪಲಿಗಳಲ್ಲಿಯೂ ಮುತ್ತುಗಳು ರಾರಾಜಿಸುತ್ತಿವೆ.  ಬ್ಯಾಗ್‌ಗಳ ಅಲಂಕಾರದಲ್ಲಿಯೂ ಮುತ್ತಿನ ಬಳಕೆ ಇದೆ.

ಕೇಶ ವಿನ್ಯಾಸದಲ್ಲಿಯೂ ಇದು ಸ್ಥಾನಪಡೆದುಕೊಂಡಿದೆ. ಚಿಕ್ಕಚಿಕ್ಕ ಮುತ್ತುಗಳಿರುವ ಹಲವು ಎಳೆಯ ಸರಗಳು ಮಾರುಕಟ್ಟೆಯಲ್ಲಿ ವೇಗವಾಗಿ ಬಿಕರಿಯಾಗುತ್ತವೆ. ಇವು ಡಿಸೈನರ್‌ ಸೀರೆಗಳಿಗೆ ಸುಂದರ ನೋಟ  ನೀಡುತ್ತವೆ.  ಮುತ್ತಿನ ಜುಮ್ಕಿ, ವಿಭಿನ್ನ ಶೈಲಿಯ ಕಿವಿಯೋಲೆಗಳು ಇಂದಿಗೂ ಟ್ರೆಂಡ್‌ ಎನಿಸಿಕೊಂಡಿವೆ. ಕಪ್ಪು, ಪೀಚ್‌, ನೇರಳೆ, ಬಿಳಿ, ಹಾಲಿನ ಕೆನೆಬಣ್ಣ, ಹಸಿರು, ಕಂದು...ಹೀಗೆ ಹಲವು ಬಣ್ಣಗಳಲ್ಲಿ ಈಗ ಮುತ್ತುಗಳು ಲಭ್ಯ.  

****

ಮುತ್ತಿನ ಆಭರಣ ಹೀಗೆ ಧರಿಸಿದರೆ ಚೆನ್ನ...

* ಫಾರ್ಮಲ್‌ ಡ್ರೆಸ್‌ಗಳಿಗೆ ಬಿಳಿ ಮುತ್ತಿನ ಸರಗಳು ಹೆಚ್ಚು ಸೂಕ್ತ.

* ಆಧುನಿಕ ಉಡುಪಿಗೆ ಒಂದೇ ಮುತ್ತಿನ ಚಿಕ್ಕ ಸರ ಮತ್ತು ಉದ್ದದ ಸರಗಳಲ್ಲಿ ಅಲ್ಲೊಂದು ಇಲ್ಲೊಂದರಂತೆ ಇರುವ ಮುತ್ತುಗಳು ಚೆಂದ ಕಾಣುತ್ತವೆ.

* ಪ್ರಸಾಧನಗಳನ್ನು ಹಚ್ಚುವ ಮೊದಲೇ ಮುತ್ತಿನ ಆಭರಣಗಳನ್ನು ಧರಿಸಬೇಡಿ. ಮೇಕಪ್‌ ಉತ್ಪನ್ನಗಳು ಮುತ್ತಿಗೆ ತಾಗುವುದರಿಂದ ಅದರ ಹೊಳಪು ಕಡಿಮೆಯಾಗುತ್ತದೆ.

* ಕಪ್ಪು ಬಣ್ಣದ ಗೌನ್‌ ಮತ್ತು ಸ್ಕರ್ಟ್‌ಗಳಿಗೆ ಬಿಳಿ ಬಣ್ಣದ ಮುತ್ತು ಹೊಂದಿಕೆಯಾಗುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry