ಓದಿಗೆ ಆಸರೆ ವಿದ್ಯಾರ್ಥಿವೇತನ

7

ಓದಿಗೆ ಆಸರೆ ವಿದ್ಯಾರ್ಥಿವೇತನ

Published:
Updated:
ಓದಿಗೆ ಆಸರೆ ವಿದ್ಯಾರ್ಥಿವೇತನ

ಬಹುತೇಕ ವಿದ್ಯಾರ್ಥಿಗಳು ಪರೀಕ್ಷಾ ಭಯದಿಂದ ಮುಕ್ತವಾಗಿ, ಫಲಿತಾಂಶದ ಒತ್ತಡದಿಂದ ಹೊರ ಬಂದಿದ್ದಾರೆ. ಅವರ ಫಲಿತಾಂಶದ ಆಧಾರದ ಮೇಲೆ ಜೊತೆಗೆ ಆಸಕ್ತಿಗೆ ಅನುಗುಣವಾಗಿ ವಿವಿಧ ಕಾಲೇಜುಗಳಿಗೆ ಸೇರ್ಪಡೆಯಾಗುತ್ತಿದ್ದಾರೆ.

ಆದರೆ ಕೆಲವರು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಉನ್ನತ ಶ್ರೇಣಿಯನ್ನು ಗಳಿಸಿದ್ದರೂ ಆರ್ಥಿಕ ಮತ್ತು ಪ್ರೋತ್ಸಾಹದ ಸಮಸ್ಯೆಯಿಂದ ಹಿಂದುಳಿಯುತ್ತಿದ್ದಾರೆ. ಇಂಥ ಬುದ್ಧಿವಂತ ವಿದ್ಯಾರ್ಥಿಗಳ ವ್ಯಾಸಂಗ ಮುಂದುವರಿಕೆಗೆ ಅನೇಕ ಮಾರ್ಗಗಳಿವೆ. ವಿದ್ಯಾರ್ಥಿ ಫೆಲೋಷಿಪ್ ಪಡೆಯುವುದರ ಮೂಲಕ ಮುಂದಿನ ವ್ಯಾಸಂಗಕ್ಕೆ, ಸಂಶೋಧನೆಗೆ ತಮ್ಮ ಮಾರ್ಗವನ್ನು ತಾವೇ ಹುಡುಕಿಕೊಳ್ಳಬಹುದು.

ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ನಂತರ ಇರುವ ವೈವಿಧ್ಯಮಯ ಕೋರ್ಸ್‌ಗಳಂತೆ ಶಿಕ್ಷಣಕ್ಕೆ ಅನುಕೂಲವಾಗುವ ಸಾವಿರಾರು ಸ್ಕಾಲರ್‌ಶಿಪ್‌ಗಳಿವೆ. ಆದರೆ ಅವುಗಳ ಕುರಿತ ಸರಿಯಾದ ಮಾಹಿತಿ ಇಲ್ಲದೆ ವಿದ್ಯಾರ್ಥಿಗಳು ಅವುಗಳಿಂದ ವಂಚಿತರಾಗುತ್ತಿದ್ದಾರೆ. ಅಂತಹ ಮಕ್ಕಳ ಭವಿಷ್ಯದ ಸುಂದರವಾಗಿ ಅರಳಬೇಕು ಎಂದು ಸರಕಾರದ ಇಲಾಖೆಗಳು, ಮಕ್ಕಳ ಪರ ಆಸಕ್ತಿಯುಳ್ಳ ವ್ಯಕ್ತಿಗಳು ಮತ್ತು ಸಂಸ್ಥೆಗಳು ಈ ನಿಟ್ಟಿನಲ್ಲಿ ಕೆಲಸಮಾಡುತ್ತಿವೆ. ಅವರ ಸಾಲಿನಲ್ಲಿ ಪ್ರಮುಖವಾಗಿ ಕಾಣುವುದು ಪ್ರಗತಿ ಆಪಲ್ ಎಜ್ಯಕೇಶನ್.

ವಿದ್ಯಾರ್ಥಿ ವೇತನಗಳು

ರಾಜ್ಯದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳ ಜೊತೆಗೆ ಅಲ್ಪಸಂಖ್ಯಾತ ಮತ್ತು ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನಾಗಿ ಅಂತರ್ಜಾಲದ ಮೂಲಕ 750ರೂ.ಗಳಿಂದ 2100ರೂ.ಗಳ ವರೆಗೆ ನೇರವಾಗಿ ಖಾತೆಗೆ ಜಮಾ ಮಾಡಲಾಗುತ್ತದೆ.

ಈ ಕುರಿತಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿವೇತನಕ್ಕಾಗಿ (www.karepass.cgg.gov.in), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ (www.sw.kar.nic.in), ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ (www.gokdom.kar.nic.in), ಪ್ರತಿ ವರ್ಷವು ಪದವಿ ಪ್ರವೇಶ ಪಡೆಯುವ ಎಲ್ಲಾ ಜಾತಿಯ ಬಡ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವಿದ್ಯಾರ್ಥಿವೇತನ (MHRD) (www.kar.nic.in/pue) ಅಂತರ್ಜಾಲದ ವಿಳಾಸವನ್ನು ನೋಡಬಹುದಾಗಿದೆ.

ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿವೇತನಕ್ಕೆ, ಅಂಗವಿಕಲ ವಿದ್ಯಾರ್ಥಿಗಳಿಗೆ ದೀರುಬಾಯಿ ಅಂಬಾನಿ ವಿದ್ಯಾರ್ಥಿವೇತನ, ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ನ್ಯಾಶನಲ್ ಮೆರಿಟ್ ಅರ್ವಾರ್ಡ್‌ಗಳಿಗೆ (www.kar.nic.in/pue), ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮೂಲವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ (Inspire Scholarship) ವಿದ್ಯಾರ್ಥಿವೇತನಕ್ಕೆ (www. kar.nic.in/pue 10), ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಬಡ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ( ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ) ಶುಲ್ಕವನ್ನು ಭರಿಸುವ ಮೆರಿಟ್ ಸ್ಕಾಲರ್‌ಶಿಪ್ ಅನ್ನು ಸರ್ಕಾರ ನೀಡುತ್ತಿದೆ(www. kar.nic.in/pue 11). ವಿದ್ಯಾಸಿರಿ ಮತ್ತು ಶುಲ್ಕ ವಿನಾಯಿತಿಗೆ (backwardclasses.kar.nic.in), ಸರ್ಕಾರದ  ಧನಸಹಾಯಕ್ಕಾಗಿ (karepass.cgg.gov.in), ಕೇಂದ್ರ ಸರ್ಕಾರದ ಧನಸಹಾಯಕ್ಕಾಗಿ (mhrd.gov.in), ವೃತ್ತಿಪರ ಶಿಕ್ಷಣ ವಿದ್ಯಾರ್ಥಿಗಳ ಇಂಡಿಯನ್ ಆಯಿಲ್ ಸ್ಕಾಲರ್‌ಶಿಪ್ (www.iocl.com) ಜಾಲತಾಣಗಳನ್ನು ಜಾಲಾಡಬಹುದು.

ಭಾರತ ಸರ್ಕಾರದ  ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ನೀಡಲಾಗುವ ರಾಷ್ಟ್ರದ ಪ್ರತಿಷ್ಠಿತ ಸ್ಕಾಲರ್‌ಶಿಪ್ ‘ಕಿಶೋರ ವೈಜ್ಞಾನಿಕ ಪ್ರೋತ್ಸಾಹನಾ ಯೋಜನೆ’[KVPY]. ಮೂಲಭೂತ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಸಂಶೋಧನೆಯಲ್ಲಿ ಆಸಕ್ತಿ ಹೊಂದಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಫೆಲೋಷಿಪ್ ಇದಾಗಿದೆ. ಕೆ.ವಿ.ಪಿ.ವೈ. ಸ್ಕಾಲರ್‌ಶಿಪ್‌ ಆಯ್ಕೆ ಪ್ರಕ್ರಿಯೆಯು ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಮೇಲ್ವಿಚಾರಣೆಯಲ್ಲಿ I.I.T.(Mumbai), AIIMS (New Delhi), PGIMER( Chandigarh) ಸಹಭಾಗಿತ್ವದೊಂದಿಗೆ ಪ್ರತಿ ವರ್ಷ ಮೇ ತಿಂಗಳಿನಿಂದ  ಡಿಸೆಂಬರ್ ತಿಂಗಳಿನವರೆಗೆ ನಡೆಯುತ್ತದೆ.

ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಸಿಕ 2000ರೂ.ಗಳಿಂದ 5000ರೂ.ಗಳವರೆಗೂ ಸಿಗುತ್ತದೆ. ಜೊತೆಗೆ ವರ್ಷಕ್ಕೊಮ್ಮೆ ಇತರ ಖರ್ಚುಗಳಿಗಾಗಿ ಎರಡು ತಿಂಗಳ ಹೆಚ್ಚುವರಿ ಫೆಲೋಶಿಪ್ ಸಹ ದೊರೆಯುತ್ತದೆ. ವಿಶೇಷವೆಂದರೆ ಕೆ.ವಿ.ಪಿ.ವೈ. ವಿದ್ಯಾರ್ಥಿಗಳು ಪ್ರತಿ ವರ್ಷ ಬೇಸಿಗೆ ರಜೆಯಲ್ಲಿ ದೇಶದ ಪ್ರಮುಖ ಸಂಶೋಧನಾ ಕೇಂದ್ರಗಳಿಗೆ ಭೇಟಿ ನೀಡುವ, ವಿಜ್ಞಾನಿಗಳ ಜೊತೆ ವಿಚಾರ ವಿನಿಮಯ ಮಾಡುವ, ಪ್ರಯೋಗಾಲಯಗಳಲ್ಲಿ ಕೆಲಸ ಮಾಡುವ ಅವಕಾಶ  ಪಡೆಯುತ್ತಾರೆ. ಹೆಚ್ಚಿನ ವಿವರಗಳಿಗಾಗಿ http://www.iisc.ernet.in/kvpy/index.htm ಅಂತರ್ಜಾಲ ತಾಣವನ್ನು ನೋಡಿ.

ಕೆಲವು ಖಾಸಗಿ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿವೆ. ಇನ್ಫೋಸಿಸ್ ವಿದ್ಯಾರ್ಥಿವೇತನಕ್ಕಾಗಿ (www.vidyaposhak.org), ವಿಪ್ರೊ ಅವರ ಅಜೀಮ್ ಪ್ರೇಮಜೀ ಫೌಂಡೇಷನ್ (www.azimpremjifoundation.org), ಜಿಂದಾಲ್ ವಿದ್ಯಾರ್ಥಿವೇತನವನ್ನು (www.sitaramjindalfoundation.org), ಹೇಮಾವತಿ ಧನಸಹಾಯ (www.blhtrust.org), ಫೇರ್ ಅಂಡ್ ಲವ್ಲಿ ಪ್ರತಿಷ್ಠಾನದ ವತಿಯಿಂದ 15ರಿಂದ 30 ವರ್ಷ ವಯೋಮಿತಿಯ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಕಲಿಯುತ್ತಿರುವ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸುತ್ತದೆ. ಮಹಿಳೆಯರ ವಿದ್ಯಾಭ್ಯಾಸಕ್ಕಾಗಿ ಸ್ಕಾಲರ್‌ಶಿಪ್ಸ್‌, ಕೆರಿಯರ್ ಗೈಡೆನ್ಸ್ ಮತ್ತು ಆನ್‌ಲೈನ್‌ಕೋರ್ಸುಗಳಿಗೆ ಆದ್ಯತೆ ನಿಡಲಾಗುತ್ತಿದೆ.ಪರಮೇಶ್ವರಯ್ಯ ಸೊಪ್ಪಿಮಠ  (ಲೇಖಕರು ಶಿಕ್ಷಕರು)

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 2

  Angry