ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲನೆಯ ದಿನವೇ ಪರೀಕ್ಷೆಗೆ ಸಿದ್ಧವಾಗಿ

Last Updated 4 ಜೂನ್ 2017, 19:30 IST
ಅಕ್ಷರ ಗಾತ್ರ

ಪರೀಕ್ಷೆಗಳು ಮುಗಿದು ಫಲಿತಾಂಶವೂ ಬಂದಾಗಿದೆ. ಬೇಸಿಗೆ ರಜವೂ ಮುಗಿದು ಮತ್ತೆ ಶಾಲೆಗಳು ಪ್ರಾರಂಭಗೊಂಡಿವೆ. ಮುಂದಿನ ತರಗತಿಗೆ ತೇರ್ಗಡೆ ಹೊಂದಿರುವ ನಿಮಗೆ, ಈ ವರ್ಷ ಅಧ್ಯಯನ ಮಾಡಬೇಕಾಗಿರುವ ಪಠ್ಯವಿಷಯಗಳ ಬಗ್ಗೆ ಸಹಜವಾದ ಕುತೂಹಲ, ಆತಂಕ ಮೂಡಿರಬಹುದಲ್ಲವೇ? ಕಳೆದ ವರ್ಷ ಯಾವುದಾದರೂ ವಿಷಯ ಕ್ಲಿಷ್ಟ ಎನಿಸಿದ್ದಲ್ಲಿ ಈ ವರ್ಷ ಅದಕ್ಕೆ ಹೆಚ್ಚಿನ ಪ್ರಾಮುಖ್ಯವನ್ನು ನೀಡಬೇಕು ಎನಿಸುತ್ತಿದೆಯೇ?

ಕಳೆದ ವರ್ಷ ವಿವಿಧ ವಿಷಯಗಳಲ್ಲಿ ನೀವು ಗಳಿಸಿರುವ ಅಂಕ ನಿಮಗೆ ಸಮಾಧಾನ ನೀಡಿದೆಯೆ? ಇನ್ನೂ ಕೊಂಚ ಹೆಚ್ಚು ಶ್ರಮ ಹಾಕಿದ್ದರೆ, ಇನ್ನಷ್ಟು ಉತ್ತಮ ಫಲಿತಾಂಶ ಪಡೆಯಬಹುದಿತ್ತು ಎಂಬ ಅಭಿಪ್ರಾಯ ನಿಮ್ಮಲ್ಲಿ ಮೂಡಿದೆಯೆ? ಹಾಗಿದ್ದಲ್ಲಿ, ಈ ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಈ ನಿಟ್ಟಿನಲ್ಲಿ ನೀವು ಯೋಚಿಸಬಹುದಲ್ಲವೇ? ಈಗಿನಿಂದಲೇ ನೀವು ಶ್ರಮ ಹಾಕಿ, ಯೋಜನಾಬದ್ಧವಾಗಿ ಅಧ್ಯಯನ ನಡೆಸಿದಲ್ಲಿ ಕೊನೇ ಘಳಿಗೆಯಲ್ಲಿ ‘ಯುದ್ಧಕಾಲೇ ಶಸ್ತ್ರಾಭ್ಯಾಸ’ ಎಂಬ ಮಾತಿನಂತೆ ಪರದಾಡುವುದನ್ನು ತಪ್ಪಿಸಬಹುದು. ಇದಕ್ಕೆ ನೀವೇನು ಮಾಡಬಹುದು ಎಂಬುದನ್ನು ಸೂಚಿಸುವುದೇ ಈ ಲೇಖನದ ಉದ್ದೇಶ.

ಒಂದು ವೇಳಾಪಟ್ಟಿ ಹಾಕಿಕೊಳ್ಳಿ: ಶಾಲೆ ಅಥವಾ ಕಾಲೇಜಿನಲ್ಲಿ ಈ ವರ್ಷದ ವೇಳಾಪಟ್ಟಿ ಈಗಾಗಲೇ ನಿಮ್ಮ ಕೈ ಸೇರಿರಬಹುದು. ನೀವೀಗ ಮಾಡಬೇಕಾದ ಮೊದಲ ಕೆಲಸವೆಂದರೆ ಈ ನಿಟ್ಟಿನಲ್ಲಿ ದೃಢ ನಿರ್ಧಾರವನ್ನು ಕೈಗೊಳ್ಳುವುದು. ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಅಧ್ಯಯನಶೀಲರಾಗುವುದಾಗಿ ನೀವು ತೆಗೆದುಕೊಂಡ ನಿರ್ಧಾರವನ್ನು ನಿಮ್ಮ ಪೋಷಕರು ಕೇಳಿ ಅದೆಷ್ಟು ಖುಷಿ ಪಡಬಹುದಲ್ಲವೇ? ನಂತರ, ನಿಮ್ಮ ಅಧ್ಯಯನಕ್ಕೆ ಸೂಕ್ತ ಸ್ಥಳವೊಂದನ್ನು ಗುರುತಿಸಿಕೊಳ್ಳುವುದು. 

ತರಗತಿಯ ವೇಳಾಪಟ್ಟಿಯನ್ನು ಆಧಾರವಾಗಿ ಇಟ್ಟುಕೊಂಡು ಮನೆಯಲ್ಲಿನ ನಿಮ್ಮ ಅಧ್ಯಯನಕ್ಕೆ ಒಂದು ವೇಳಾಪಟ್ಟಿಯನ್ನು ರಚಿಸಿಕೊಳ್ಳುವುದು. ಈ ವೇಳಾಪಟ್ಟಿಯಲ್ಲಿ ದಿನಕ್ಕೆ ಕನಿಷ್ಠ ಎರಡರಿಂದ ಮೂರು ಘಂಟೆಯನ್ನು ಅಧ್ಯಯನಕ್ಕೆ ಮೀಸಲಿಡಿ. ಶೈಕ್ಷಣಿಕ ವರ್ಷ ಈಗಷ್ಟೇ ಪ್ರಾರಂಭವಾಗಿರುವುದರಿಂದ ಸದ್ಯಕ್ಕೆ ಇಷ್ಟು ಸಾಕು. ಕ್ರಮೇಣ, ಪಾಠ, ಪ್ರವಚನಗಳು ಮುಂದುವರೆದಂತೆ, ಈ ಅವಧಿಯನ್ನು ಹೆಚ್ಚಿಸಿಕೊಳ್ಳಬಹುದು. ಈ ಅವಧಿಯನ್ನು  ಶಾಲೆಯಲ್ಲಿ ಬೋಧಿಸಿದ ವಿಷಯಗಳ ಪುನರ್ಮನನಕ್ಕೆ ಮಾತ್ರವಲ್ಲ, ನೀಡಲಾಗಿರುವ ಹೋಮ್ ವರ್ಕ್, ಪ್ರಾಜೆಕ್ಟ್ ಇತ್ಯಾದಿಗಳನ್ನು ಮಾಡುವುದಕ್ಕೂ ಬಳಸಿಕೊಳ್ಳಬಹುದು.

ನೀವು ಹಾಕಿಕೊಂಡಿರುವ ವೇಳಾಪಟ್ಟಿಯಲ್ಲಿ ಎಲ್ಲ ವಿಷಯಗಳ ಅಧ್ಯಯನಕ್ಕೂ ಅವಕಾಶ ಮಾಡಿಕೊಳ್ಳಿ. ಯಾವುದಾದರೂ ಒಂದು  ವಿಷಯ ನಿಮಗೆ ಕ್ಲಿಷ್ಟ ಎನಿಸಿದ್ದಲ್ಲಿ ಅದಕ್ಕೆ ಹೆಚ್ಚಿನ ಕಾಲಾವಕಾಶವನ್ನು ಒದಗಿಸಿಕೊಳ್ಳಿ. ವೇಳಾಪಟ್ಟಿಯನ್ನು ನಿಮ್ಮ ಪೋಷಕರಿಗೆ ತೋರಿಸಿ, ಅವರ ಸಲಹೆಗಳನ್ನು ಪಡೆದುಕೊಳ್ಳಿ. ಅಗತ್ಯ ಬಿದ್ದಲ್ಲಿ ನಿಮ್ಮ ತರಗತಿಯ ಅಧ್ಯಾಪಕರಿಗೂ ತೋರಿಸಿ ಅವರು ಸೂಚಿಸುವ ಮಾರ್ಪಾಡುಗಳನ್ನು ಅಳವಡಿಸಿಕೊಳ್ಳಿ. ಪ್ರತಿನಿತ್ಯ ಈ ವೇಳಾಪಟ್ಟಿಗೆ ಅನುಗುಣವಾಗಿ ನಿಮ್ಮ ಅಧ್ಯಯನವನ್ನು ಅಂದಿನಿಂದಲೇ ಪ್ರಾರಂಭಿಸಿ. ಅದಕ್ಕಾಗಿ ಒಳ್ಳೆಯ ದಿನಕ್ಕೆ ಕಾಯಬೇಡಿ!

ಅಧ್ಯಯನದ ವಿಧಾನವೇಳಾಪಟ್ಟಿಯಲ್ಲಿ ಪ್ರತಿ ವಿಷಯಕ್ಕೆ ಒಂದು ದಿನವನ್ನು ಮೀಸಲಿಡಿ. ಇಂಗ್ಲಿಷ್, ಭಾಷೆಗಳು (ಕನ್ನಡ, ಸಂಸ್ಕೃತ, ಹಿಂದಿ), ಐಚ್ಛಿಕ ವಿಷಯಗಳಿಗೆ ತಲಾ ಒಂದು ದಿನ ಮೀಸಲಿರಲಿ. ನಿಮ್ಮ ಅಧ್ಯಯನದ ವಿಧಾನ ವಿಷಯದಿಂದ ವಿಷಯಕ್ಕೆ ಕೊಂಚ ಬದಲಾಗಬಹುದಾದರೂ, ಒಂದು ನಿರ್ದಿಷ್ಟ ವಿಧಾನವನ್ನು ಬಳಸಿಕೊಳ್ಳುವುದು ಅತ್ಯವಶ್ಯ. ಓದುವಾಗ ಸಂಪೂರ್ಣ ಏಕಾಗ್ರತೆ ಇರಲಿ. ಪ್ರತಿದಿನ ಮೊದಲಿಗೆ ನೀವು ಅ ದಿನ ಶಾಲೆಯಲ್ಲಿ ಮಾಡಿದ ಪಾಠವನ್ನು ಪುನರ್ಮನನ ಮಾಡಿಕೊಳ್ಳಿ. ನಂತರ, ಒಂದು ಸಣ್ಣ ವಿರಾಮ ತೆಗೆದುಕೊಳ್ಳಿ. ಸ್ವಲ್ಪ ಹೊತ್ತು ಓಡಾಡಿ. ಇದು ಏಕತಾನತೆಯನ್ನು ದೂರ ಮಾಡುತ್ತದೆ.

ಕೊಂಚ ಸಮಯದ ನಂತರ,  ಯಾವುದಾದರೊಂದು ವಿಷಯಕ್ಕೆ ನಿಮ್ಮ ಅಧ್ಯಯನವನ್ನು ಸೀಮಿತಗೊಳಿಸಿ. ಪಠ್ಯಪುಸ್ತಕದಿಂದ ಹಾಗೂ ನೋಟ್ಸ್‌ಗಳಿಂದ ಓದಿದ ಪಾಠವನ್ನು ನೆನಪಿಗೆ ತಂದುಕೊಳ್ಳಿ. ಅದರ ಮುಖ್ಯಾಂಶಗಳನ್ನು ಹಾಳೆಯ ಮೇಲೆ ಟಿಪ್ಪಣಿ ಮಾಡಿಕೊಳ್ಳಿ. ಆ ಹಾಳೆಗಳನ್ನೆಲ್ಲ ಜೋಪಾನವಾಗಿ ತೆಗೆದಿಟ್ಟುಕೊಳ್ಳಿ. ಮುಂದಿನ ಪರೀಕ್ಷೆಗಳ ಸಮಯದಲ್ಲಿ ಪುನರ್ಮನನ ಮಾಡಿಕೊಳ್ಳಲು ಅವನ್ನು ಬಳಸಿಕೊಳ್ಳಿ. ಪಾಠವನ್ನು ಓದಿದಾಗ, ಅರ್ಥವಾಗದ ಅಥವಾ ಕ್ಲಿಷ್ಟ ಎನಿಸಿದ ಅಂಶಗಳನ್ನು ಬೇರೆಯಾಗಿ ಗುರುತು ಹಾಕಿಕೊಳ್ಳಿ. ಮಾರನೆಯ ದಿನ ನಿಮ್ಮ ಸಹಪಾಠಿಗಳ ಜೊತೆ ಚರ್ಚಿಸಿ. ಆಗಲೂ ಬಗೆಹರಿಯದಿದ್ದಲ್ಲಿ ಸಂಬಂಧಿಸಿದ ಶಿಕ್ಷಕರ ಜೊತೆಗೆ ಚರ್ಚಿಸಿ ನಿಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳಿ.

ಈ ವಿಷಯದಲ್ಲಿ ಯಾವ ಅಂಜಿಕೆ, ಅಳುಕು ಇಟ್ಟುಕೊಳ್ಳಬೇಡಿ. ವಿಜ್ಞಾನದ, ಅದರಲ್ಲಿಯೂ ಜೀವಶಾಸ್ತ್ರದಂಥ ವಿಷಯಗಳಲ್ಲಿ ಬರುವ  ತಾಂತ್ರಿಕ ಪದಗಳನ್ನು ಬೇರೆಯಾಗಿಯೇ ಬರೆದಿಟ್ಟುಕೊಂಡು ಅವುಗಳಿಗೆ ಅರ್ಥ ಹಾಗೂ ನಿರೂಪಣೆಯನ್ನು ಪತ್ತೆ ಮಾಡಿ ಬರೆದಿಟ್ಟುಕೊಳ್ಳಿ. ಇದು ಪ್ರತಿ ಬಾರಿ ಆ ವಿಷಯಕ್ಕೆ ಸಂಬಂಧಿಸಿದ ಅಧ್ಯಾಯವನ್ನು ಓದುವಾಗ ನಿಮಗೆ ನೆರವಿಗೆ ಬರುತ್ತದೆ.

ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ: ಶಾಲೆಯಲ್ಲಿ ನಡೆಸಲಾಗುವ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಚರ್ಚಾಸ್ಪರ್ಧೆ, ಆಶುಭಾಷಣ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ನಿಮ್ಮ ಜ್ಞಾನಸಂಪತ್ತಿನ ಜೊತೆಗೆ ಭಾಷಾಸಂಪತ್ತೂ ಬೆಳೆಯುತ್ತದೆ. ಅಲ್ಲದೆ, ವೇದಿಕೆಯ ಭಯವೂ ದೂರವಾಗುತ್ತದೆ. ನಿಮಗೆ ಬಹುಮಾನಗಳು ಬಾರದೇ ಇರಬಹುದು. ಆದರೆ, ಪಾಲ್ಗೊಳ್ಳುವಿಕೆಯ ಅನುಭವ ನಿಮಗೆ ಮುಂದೆ ಉಪಯುಕ್ತವಾಗುತ್ತದೆ. ಶಿಕ್ಷಕರು ಸೂಚಿಸುವ ಗುಂಪು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ.

ನಿಮ್ಮಲ್ಲಿ ಸಹಕಾರದ ಮನೋಭಾವನ್ನು ಬೆಳೆಸುವುದಕ್ಕೆ ಇದು ಸಹಾಯಕವಾಗುತ್ತದೆ. ಅಂತರ್ ಶಾಲಾ ಸ್ಪರ್ಧೆಗಳಲ್ಲಿ ಭಾಗವಹಿಸಿದರೆ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್‌ಗೆ ಸಂಬಂಧಿಸಿದ ಚಟುವಟಿಕೆಗಳಿದ್ದರೆ, ಅದಕ್ಕೂ ಸೇರಿಕೊಳ್ಳಿ. ನಿಮ್ಮಲ್ಲಿ ಸೇವಾ ಮನೋಭಾವವನ್ನು ಉದ್ದೀಪನಗೊಳಿಸುವುದಕ್ಕೆ ಇಂಥ ಚಟುವಟಿಕೆಗಳು ಸಹಕಾರಿ. ಈ ರೀತಿಯ ಚಟುವಟಿಕೆಗಳಿಗೆ ನಾಯಕತ್ವ ವಹಿಸುವ ಸಂದರ್ಭ ಬಂದರೆ ಹಿಂದು ಮುಂದೆ ನೋಡದೆ ಒಪ್ಪಿಕೊಳ್ಳಿ. ನಿಮ್ಮಲ್ಲಿರುವ ನಾಯಕತ್ವದ ಗುಣಗಳನ್ನು ವಿಕಸನಗೊಳಿಸಿಕೊಳ್ಳಿ. ಇಂಥ ಎಲ್ಲ ಚಟುವಟಿಕೆಗಳು ನಿಮ್ಮ ವೈಯುಕ್ತಿಕ ಬೆಳವಣಿಗೆಗೆ ಪೂರಕವಾಗಿರುತ್ತವೆ.

ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಿ: ಅತಿ ಹೆಚ್ಚಿನ ಅಂಕ ಗಳಿಸುವುದೊಂದೇ ನಿಮ್ಮ ಜೀವನದ ಗುರಿಯಾಗಬಾರದು. ಓದಿನ ಜೊತೆ ಜೊತೆಗೇ ಸಂಗೀತಾಭ್ಯಾಸ, ಭಾವಗೀತೆಗಳ ಗಾಯನ, ವಾದ್ಯಸಂಗೀತ ಮುಂತಾದ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಯೋಗಾಭ್ಯಾಸವೂ ಒಂದು ಉತ್ತಮ ಹವ್ಯಾಸ. ಇಂಥ ಹವ್ಯಾಸಗಳು ನೀವು ಸದಾ ಉತ್ಸಾಹಿಗಳಾಗಿ ಹಾಗೂ ಕ್ರಿಯಾಶೀಲರಾಗಿ ಇರಲು ನೆರವಾಗುತ್ತವೆ. ನಿಮ್ಮ ಏಕಾಗ್ರತೆಯ ಮಟ್ಟವನ್ನು ಹೆಚ್ಚಿಸಲು ಪೂರಕವಾಗುತ್ತವೆ.  

ಕನ್ನಡ ಪುಸ್ತಕಗಳನ್ನು ಓದಿ: ನಿಮ್ಮ ಶಾಲೆಯ ಗ್ರಂಥಾಲಯದಿಂದ ಅಥವಾ ಮನೆಯ ಸಮೀಪ ಇರುವ ಸಾರ್ವಜನಿಕ ಗ್ರಂಥಾಲಯದಿಂದ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಾದ ನಾಟಕ, ಕವಿತೆ, ಕಾದಂಬರಿ, ಪ್ರಬಂಧ, ವಿಚಾರಸಾಹಿತ್ಯ, ಅನುವಾದ ಮುಂತಾದ ಪುಸ್ತಕಗಳನ್ನು ತಂದು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ. ಕನ್ನಡದ ಖ್ಯಾತ ಸಾಹಿತಿಗಳ ಕೃತಿಗಳನ್ನು ಅಧ್ಯಯನ ಮಾಡಿ.

ವಿಜ್ಞಾನ ಹಾಗೂ ಗಣಿತಕ್ಕೆ ಸಂಬಂಧಿಸಿದಂತೆಯೂ ಕನ್ನಡದಲ್ಲಿ ಇಂದು ಸಾಕಷ್ಟು ಪುಸ್ತಕಗಳು ಪ್ರಕಟವಾಗಿವೆ. ಅಂಥ ಪುಸ್ತಕಗಳನ್ನು ಓದುವುದರಿಂದ ನಿಮ್ಮ ಪಾಠಗಳನ್ನು ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ. ಕನಿಷ್ಠ ತಿಂಗಳಿಗೆ ಒಂದಾದರೂ ಕನ್ನಡ ಕೃತಿಯನ್ನು ಓದುವ ಸಂಕಲ್ಪವನ್ನು ಮಾಡಿಕೊಳ್ಳಿ. ನೀವು ಓದಿದ ಕೃತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಬರೆದಿಡಿ. ಇದರಿಂದ ನಿಮ್ಮ ಓದುವ ಆಸಕ್ತಿಯ ಜೊತೆಗೆ ಬರೆಯುವ ಆಸಕ್ತಿಯನ್ನೂ ಹೆಚ್ಚಿಸಿಕೊಳ್ಳಬಹುದು. ಓದುವ ಅಭ್ಯಾಸವು ನಿಮ್ಮ ಭಾಷಾಸಂಪತ್ತನ್ನು ಶ್ರೀಮಂತಗೊಳಿಸಿದರೆ, ಬರೆಯುವ ಅಭ್ಯಾಸವು ನಿಮ್ಮ ಬರವಣಿಗೆಯ ಅಂದವನ್ನು ಹೆಚ್ಚಿಸುವುದಕ್ಕೆ ಬಹುವಾಗಿ ನೆರವಾಗುತ್ತದೆ.

ಈ ಎಲ್ಲ ಅಂಶಗಳನ್ನು ನಿಮ್ಮ ಜೀವನಶೈಲಿಯ ಭಾಗವಾಗಲಿ. ಇದರಿಂದ ನಿಮ್ಮ ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆಗಳಲ್ಲಿ ಬದಲಾವಣೆಯನ್ನು ತಂದುಕೊಳ್ಳಬಹುದು. ಆಗ ನಿಮ್ಮ ವ್ಯಕ್ತಿತ್ವ ಗಟ್ಟಿಯಾಗುತ್ತದೆ.  ಪರೀಕ್ಷೆ ಸಮೀಪಿಸುತ್ತಿದ್ದಂತೆ ತಯಾರಿ ನಡೆಸಿ ಕೊನೆಗೆ ನಿರಾಸೆಗೆ ಒಳಗಾಗುವ ಬದಲಿಗೆ, ವರ್ಷವಿಡೀ ಉಲ್ಲಸಿತರಾಗಿ ಯಾವುದೇ ಒತ್ತಡವಿಲ್ಲದೆ ಅಧ್ಯಯನಶೀಲರಾಗಿ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು. ಇನ್ನೇಕೆ ಯೋಚನೆ? ಇಂದೇ ಹಾಕಿಕೊಳ್ಳಿ ,ನಿಮ್ಮ ಉಜ್ವಲ ಭವಿಷ್ಯಕ್ಕೆ ನಿಮ್ಮದೇ ಯೋಜನೆ.
 (ಲೇಖಕರು ನಿವೃತ್ತ ಪ್ರಾಂಶುಪಾಲ)

****
ಕ್ರೀಡೆ ಮತ್ತು ಮನೋರಂಜನೆಗೂ ಸಮಯ ಮೀಸಲಿಡಿ

ಕ್ರೀಡೆ ಮತ್ತು ಮನೋರಂಜನೆ ನಿಮ್ಮ ಜೀವನಶೈಲಿಯ ಒಂದು ಭಾಗವಾಗಿರಲಿ. ಶಾಲೆಯಲ್ಲಾಗಲೀ, ಅಥವಾ ನಿಮ್ಮ ಮನೆಯ ಸಮೀಪವಾಗಲೀ ನಿಮಗೆ ಇಷ್ಟವಾದ ಕ್ರೀಡೆಗೆ ಕೊಂಚ ಸಮಯ ಮೀಸಲಿಡಿ. ನಿಮ್ಮ ದೈಹಿಕ ಬೆಳವಣಿಗೆಗೆ ಇದು ಅತ್ಯವಶ್ಯ.

ಆದರೆ ಅದರಲ್ಲಿಯೇ ಹೆಚ್ಚು ಸಮಯ ವ್ಯರ್ಥವಾಗದಂತೆ ನೋಡಿಕೊಳ್ಳಿ. ನಿಮ್ಮ ದಿನನಿತ್ಯದ ಓದಿನ ಜೊತೆಗೆ ರೇಡಿಯೋ ಕೇಳುವುದು ಹಾಗೂ ಟಿ.ವಿ. ನೋಡುವುದಕ್ಕೂ ಪ್ರಾಮುಖ್ಯ ನೀಡಿ. ನಿಮ್ಮ ಮೆದುಳಿಗೆ ಏಕತಾನತೆಯಿಂದ ಹೊರಬರಲು ಇದು ಅವಶ್ಯಕ. ಸಾಧ್ಯವಾದಷ್ಟೂ ಬೋಧಪ್ರದವಾದ ಕಾರ್ಯಕ್ರಮಗಳನ್ನು ವೀಕ್ಷಿಸಿ. ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT