ಪ್ರೊ ಕಬಡ್ಡಿ ಲೀಗ್‌ನ ಚಿಗುರು

7

ಪ್ರೊ ಕಬಡ್ಡಿ ಲೀಗ್‌ನ ಚಿಗುರು

Published:
Updated:
ಪ್ರೊ ಕಬಡ್ಡಿ ಲೀಗ್‌ನ ಚಿಗುರು

ಎಳವೆಯಲ್ಲಿಯೇ ಕಬಡ್ಡಿ ಲೋಕದ ಮಿನುಗು ತಾರೆಯಾಗಬೇಕೆಂಬ ಕನಸು ಕಂಡಿದ್ದ ನೆಲಮಂಗಲದ ಜೆ.ದರ್ಶನ್‌, ಅಮ್ಮನ ಪ್ರೋತ್ಸಾಹ ಮತ್ತು ಅರ್ಪಣಾ ಭಾವದಿಂದ ಈ ಆಟದ ಪಾಠಗಳನ್ನು ಕಲಿತು ನೈಪುಣ್ಯ ಸಾಧಿಸುತ್ತಿದ್ದಾರೆ. ಪ್ರೊ ಕಬಡ್ಡಿ ಲೀಗ್‌ ಐದನೇ ಆವೃತ್ತಿಯಲ್ಲಿ ತಮಿಳುನಾಡು ತಂಡದ ಪರ ಆಡುವ ಅವಕಾಶ ಪಡೆದಿರುವ ಅವರು ‘ಪ್ರಜಾವಾಣಿ’ ಜೊತೆ ತಾವು ಬೆಳೆದು ಬಂದ ಹಾದಿ ಹಾಗೂ ಮುಂದಿನ ಕನಸುಗಳ ಬಗ್ಗೆ ಮಾತನಾಡಿದ್ದಾರೆ.

* ಕಬಡ್ಡಿಯೊಂದಿಗೆ ನಂಟು ಬೆಸೆದಿದ್ದು ಹೇಗೆ?

ಎಳವೆಯಲ್ಲೇ ಕಬಡ್ಡಿಯಲ್ಲಿ ವಿಶೇಷ ಆಸಕ್ತಿ ಇತ್ತು. ಶಾಲಾ ದಿನಗಳಲ್ಲಿದ್ದಾಗ  ತಾಲ್ಲೂಕು ಮತ್ತು ಹೋಬಳಿ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದೆ. ಆಗ ದೈಹಿಕ ಶಿಕ್ಷಕ ಸೋಮಪ್ಪ ತಿಪ್ಪಣ್ಣ ಅವರು ಆಟದ ತಂತ್ರಗಳನ್ನು ಹೇಳಿಕೊಡುತ್ತಿದ್ದರು. ಮೂರು ವರ್ಷಗಳ ಹಿಂದೆ ದಸರಾ ಕ್ರೀಡಾಕೂಟದಲ್ಲಿ ನನ್ನ ಆಟ ನೋಡಿದ್ದ ಶ್ರೀ ಸಾಯಿ ಕ್ಲಬ್‌ನ ಪರಮೇಶ್ವರ ಮೂರ್ತಿ, ನರಸಿಂಹಮೂರ್ತಿ ಮತ್ತು ರಂಗಣ್ಣ ಅವರು ಕ್ಲಬ್‌ ಪರ ಆಡುವ ಅವಕಾಶ ನೀಡಿದರು.

ಕ್ಲಬ್‌ಗೆ ಸೇರಿದ ನಂತರ ಪರಮೇಶ್ವರಮೂರ್ತಿ ಅವರ ಮಾರ್ಗದರ್ಶನ ಲಭಿಸಿತು.  ಬಳಿಕ ಕಬಡ್ಡಿ ರಂಗದ ದಿಗ್ಗಜ ಬಿ.ಸಿ. ರಮೇಶ್‌ ಅವರು ನನ್ನ ನೆರವಿಗೆ ನಿಂತರು. ಅವರ ಅಕಾಡೆಮಿಗೆ ಸೇರಿದ ನಂತರ ಅದೃಷ್ಟದ ಬಾಗಿಲು ತೆರೆಯಿತು. ಎಲೆ ಮರೆಯ ಕಾಯಿಯಂತಿದ್ದ ನನಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಸೇರಿದಂತೆ ಅನೇಕ ತಂಡಗಳ ಪರ ಆಡಲು ಅವಕಾಶ ಮಾಡಿಕೊಟ್ಟವರೇ ರಮೇಶ್‌ ಸರ್‌. ಈ ಮೂಲಕ ಆತ್ಮಸ್ಥೈರ್ಯ ತುಂಬಿದರು. ಹೀಗಾಗಿಯೇ 19ರ ಹರೆಯದಲ್ಲೇ ಕಬಡ್ಡಿ ಲೀಗ್‌ಗೆ ಅಡಿ ಇಡಲು ಸಾಧ್ಯವಾಗಿದೆ.

* ‘ಯಂಗ್‌ ಪ್ಲೇಯರ್‌ ಪೂಲ್’ ಯೋಜನೆಯ ಆಯ್ಕೆ ಪ್ರಕ್ರಿಯೆ ಹೇಗಿತ್ತು?

ಹೊಸಬರನ್ನು ಗುರುತಿಸುವ ಸಲುವಾಗಿ ಪ್ರಸಕ್ತ ಸಾಲಿನಲ್ಲಿ ‘ಯಂಗ್‌ ಪ್ಲೇಯರ್‌ ಪೂಲ್‌’ ಎಂಬ ಯೋಜನೆಯ ಅಡಿಯಲ್ಲಿ 18ರಿಂದ 22 ವರ್ಷದೊಳಗಿನವರ ಉದಯೋನ್ಮುಖ ಆಟಗಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆದಿತ್ತು. ಕರ್ನಾಟಕದಲ್ಲಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಬಿ.ಸಿ. ರಮೇಶ್‌ ಮತ್ತು ಜೈವೀರ್‌ ಅವರ ನೇತೃತ್ವದಲ್ಲಿ ಆಯ್ಕೆ ಟ್ರಯಲ್ಸ್‌ ಹಮ್ಮಿಕೊಳ್ಳಲಾಗಿತ್ತು.

ಜನವರಿಯಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದ ಟ್ರಯಲ್ಸ್‌ನಲ್ಲಿ ಸಾವಿರಕ್ಕೂ ಅಧಿಕ ಆಟಗಾರರು ಭಾಗವಹಿಸಿದ್ದರು. ಈ ಪೈಕಿ ಬೆಂಗಳೂರಿನಿಂದ  ಒಟ್ಟು ಆರು ಮಂದಿ  ಆಯ್ಕೆಯಾದೆವು. ಮಂಗಳೂರಿನಿಂದ ಒಬ್ಬ ಆಯ್ಕೆಯಾಗಿದ್ದ. ಹೀಗೆ  ಹೆಕ್ಕಿ ತೆಗೆದವರಿಗೆ ಗುಜರಾತ್‌ನ ಗಾಂಧಿನಗರದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ 12 ದಿನಗಳ ಕಾಲ ವಿಶೇಷ ತರಬೇತಿ ಕೊಟ್ಟರು . ನಂತರ ಮುಂಬೈನ ಬೇಲಾಪುರ್‌ನಲ್ಲಿ ಒಂದು ತಿಂಗಳ ಶಿಬಿರ ಆಯೋಜಿಸಲಾಗಿತ್ತು.ದೇಶದ ವಿವಿಧ ಭಾಗಗಳಿಂದ ಆಯ್ಕೆಯಾಗಿದ್ದ 130 ಮಂದಿ ಈ ಶಿಬಿರದಲ್ಲಿದ್ದರು. ಈ ಪೈಕಿ ಅಂತಿಮವಾಗಿ 24 ಮಂದಿಯನ್ನು ಆಯ್ಕೆ ಮಾಡಲಾಯಿತು. ಇದರಲ್ಲಿ ಕರ್ನಾಟಕದ ಮೂರು ಮಂದಿ ಇದ್ದೆವು.

* ಈ ಬಾರಿ ಪಿಕೆಎಲ್‌ಗೆ ಅಡಿ ಇಡುತ್ತಿದ್ದೀರಿ. ಹೇಗನಿಸುತ್ತಿದೆ?

ಮೊದಲ ನಾಲ್ಕು ಆವೃತ್ತಿಯ ಎಲ್ಲಾ ಪಂದ್ಯಗಳನ್ನು ಟಿ.ವಿ.ಯಲ್ಲಿ ನೋಡಿ ಪುಳಕಿತನಾಗಿದ್ದೆ. ಹೀಗೆ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾಗಲೆಲ್ಲಾ ಲೀಗ್‌ನಲ್ಲಿ ಆಡುವ ಕನಸು ಜಾಗೃತಗೊಳ್ಳುತ್ತಿತ್ತು. ಅದು ಇಷ್ಟು ಬೇಗ ಕೈಗೂಡಲಿದೆ ಎಂದು ಖಂಡಿತವಾಗಿಯೂ ಭಾವಿಸಿರಲಿಲ್ಲ. ನನ್ನ ಸಾಮರ್ಥ್ಯವನ್ನು ಕಬಡ್ಡಿ ಲೋಕಕ್ಕೆ ಸಾರಿ ಹೇಳಲು ಲೀಗ್‌ ಉತ್ತಮ ವೇದಿಕೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತೇನೆ.* ಹರಾಜಿನಲ್ಲಿ ₹7.70 ಲಕ್ಷ ಸಿಗಬಹುದೆಂಬ ನಿರೀಕ್ಷೆ ಇತ್ತೆ?

ಖಂಡಿತವಾಗಿಯೂ ಇರಲಿಲ್ಲ. ಮೊದಲಿನಿಂದಲೂ ಕಲ್ಲು ಮುಳ್ಳಿನ ಹಾದಿ ಸವೆಸಿದ್ದೆ. ಈ ಪರಿಶ್ರಮಕ್ಕೆ ಸಿಕ್ಕ ಫಲ ಇದು. ತಮಿಳುನಾಡು ಫ್ರಾಂಚೈಸ್‌ ನನ್ನ ಮೇಲೆ ನಂಬಿಕೆ ಇಟ್ಟು ಇಷ್ಟು ಮೊತ್ತ ನೀಡಿದೆ. ಅದನ್ನು ಉಳಿಸಿಕೊಳ್ಳುವ ವಿಶ್ವಾಸ ಇದೆ.* ಸಚಿನ್‌ ತೆಂಡೂಲ್ಕರ್‌ ಸಹ ಮಾಲೀಕತ್ವದ ತಂಡದಲ್ಲಿ ಆಡುವ ಅವಕಾಶ ಲಭಿಸಿದೆ. ಇದರ ಬಗ್ಗೆ ಹೇಳಿ?

ಸಚಿನ್‌ ಅವರು ನನ್ನಂತಹ ಅನೇಕ ಯುವಕರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಅವರ ಸಹ ಮಾಲೀಕತ್ವದ ತಂಡದಲ್ಲಿ ಆಡುವ  ಸೌಭಾಗ್ಯ ಸಿಕ್ಕಿರುವುದರಿಂದ ಹೆಮ್ಮೆಯ ಭಾವ ಮೂಡಿದೆ.* ನಿಮ್ಮ ಮುಂದಿರುವ ಸವಾಲುಗಳೇನು?

ಪ್ರಸ್ತುತ 25 ಜನರ ತಂಡದಲ್ಲಿದ್ದು ಲೀಗ್‌ನಲ್ಲಿ ಆಡುವ ಅಂತಿಮ ಬಳಗದಲ್ಲಿ ಸ್ಥಾನ ಪಡೆಯಬೇಕು. ಅದೇ ಈಗ ನನ್ನ ಮುಂದಿರುವ ಗುರಿ. ಅದಕ್ಕಾಗಿ ಕಠಿಣ ತಾಲೀಮು ನಡೆಸುತ್ತಿದ್ದೇನೆ. ತಂಡದಲ್ಲಿ ಸಾಕಷ್ಟು ಜನ ಅನುಭವಿಗಳು ಇರುವ ಕಾರಣ ಇದು ಅಷ್ಟು ಸುಲಭವಲ್ಲ ಎಂಬುದು ಗೊತ್ತು. ಹಾಗಂತ ಸುಮ್ಮನೆ ಕೂರುವುದಿಲ್ಲ.* ಕುಟುಂಬದ ಬೆಂಬಲದ ಬಗ್ಗೆ ಹೇಳಿ?

ನಮ್ಮದು ತೀರಾ ಬಡ ಕುಟುಂಬ. ಹತ್ತನೇ ತರಗತಿ ಓದುತ್ತಿದ್ದ ಸಮಯದಲ್ಲಿ ಅಪ್ಪನನ್ನು ಕಳೆದುಕೊಂಡೆ. ಹೀಗಾಗಿ ಅಣ್ಣನೊಬ್ಬನಿಂದಲೇ ಸಂಸಾರದ ಬಂಡಿ ಎಳೆಯುವುದು ಕಷ್ಟವಾಗಿತ್ತು. ಅದಕ್ಕೆ ನಾನು ಹೆಗಲು ಕೊಡುವುದು ಅನಿವಾರ್ಯವಾಗಿತ್ತು. ಹೀಗಾಗಿ ಪಿಯುಸಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿಕೊಂಡೆ. ಹೀಗಿದ್ದರೂ ಕಬಡ್ಡಿಯೆಡೆಗಿನ ವ್ಯಾಮೋಹ ಎಳ್ಳಷ್ಟೂ ಕಡಿಮೆ ಆಗಲಿಲ್ಲ. ಕಷ್ಟದ ನಡುವೆಯೂ ಅಮ್ಮ ವನಲಕ್ಷ್ಮಿ ಬೆನ್ನೆಲುಬಾಗಿ ನಿಂತರು. ಟೂರ್ನಿಗಳನ್ನು ಆಡಲು ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದಾಗ ಅಷ್ಟಿಷ್ಟು ಹಣ ಹೊಂದಿಸಿ ಕೊಡುತ್ತಿದ್ದರು. ಅಮ್ಮನ ಆ ಪ್ರೀತಿ ಮತ್ತು ಪ್ರೋತ್ಸಾಹ ನನ್ನಲ್ಲಿ ಸಾಧನೆ ಕಿಚ್ಚು ಹೊತ್ತಿಸಿತು. ಆಗಲೇ ಈ ಕ್ರೀಡೆಯಲ್ಲಿ ಹೆಜ್ಜೆ ಗುರುತು ಮೂಡಿಸುವ ಪಣ ತೊಟ್ಟೆ.ನೀವು ಆಡುವ ವಿಭಾಗ ಯಾವುದು?

ಮೊದಲಿನಿಂದಲೂ ರಕ್ಷಣಾ ವಿಭಾಗವೇ ನನ್ನ ಅಚ್ಚುಮೆಚ್ಚು. ಇದರಲ್ಲೇ ನೈಪುಣ್ಯ ಸಾಧಿಸುತ್ತಿದ್ದೇನೆ.* ತಂಡದಲ್ಲಿ ಡಿಫೆಂಡರ್‌ಗಳ ಪಾತ್ರ ಏನು?

ರೈಡರ್‌ಗಳಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಡಿಫೆಂಡರ್‌ಗಳಿಗೂ ಅಷ್ಟೇ ಮಹತ್ವ ಇದೆ. ರೈಡರ್‌ ಔಟಾದರೆ, ಎದುರಾಳಿ ಆಟಗಾರನನ್ನು ರಕ್ಷಣಾ ಬಲೆಯಲ್ಲಿ ಕೆಡವಿ ತಂಡಕ್ಕೆ ಅಂಕ ತಂದುಕೊಡಬೇಕಾದ ಜವಾಬ್ದಾರಿ ನಮ್ಮದಾಗಿರುತ್ತದೆ.

* ನಿಮ್ಮ ಆಟದಲ್ಲಿ ಏನು ಸುಧಾರಣೆಯಾಗಬೇಕು ಅಂತಾ ಭಾವಿಸುತ್ತೀರಿ?

ಪ್ರೊ ಕಬಡ್ಡಿ ಲೀಗ್‌ ಶುರುವಾದ ಬಳಿಕ ಆಲ್‌ರೌಂಡರ್‌ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಹೀಗಾಗಿ ರಕ್ಷಣಾ ವಿಭಾಗದ ಜೊತೆಗೆ ರೈಡಿಂಗ್‌ ಕೌಶಲಗಳನ್ನು ಕಲಿಯಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದೇನೆ.* ಇಷ್ಟದ ಆಟಗಾರ?

ಅಂತರರಾಷ್ಟ್ರೀಯ ಮಾಜಿ ಆಟಗಾರ ಬಿ.ಸಿ. ರಮೇಶ್‌ ಅವರ ಆಟವನ್ನು ನೋಡುತ್ತಾ ಬೆಳೆದವನು ನಾನು. ಅವರ ಆಟ ತುಂಬಾ ಇಷ್ಟ. ನನಗೆ  ಅವರೇ ಮಾದರಿ.  ಪಿಕೆಎಲ್‌ನಲ್ಲಿ ಆಡುವ ಯು ಮುಂಬಾ ತಂಡದ ಡಿಫೆಂಡರ್‌ ವಿಶಾಲ್ ಮಾನೆ ಅವರ ಆಟವೂ ಮನಸ್ಸಿಗೆ ಮುದ ನೀಡುತ್ತದೆ.* ಜೀವನದ ಗುರಿ?

ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಬೇಕೆಂಬುದು ಜೀವನದ ಮಹಾದಾಸೆ.  ಈ ಮಾರ್ಗದಲ್ಲಿ ಒಂದೊಂದೆ ಮೆಟ್ಟಿಲನ್ನು ಹತ್ತುತ್ತಿದ್ದೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry