ಮೊದಲ ಕೂಟ, ಹೊಸ ಪರೀಕ್ಷೆ...

7

ಮೊದಲ ಕೂಟ, ಹೊಸ ಪರೀಕ್ಷೆ...

Published:
Updated:
ಮೊದಲ ಕೂಟ, ಹೊಸ ಪರೀಕ್ಷೆ...

ಅಣ್ಣಂದಿರನ್ನು ನೋಡಿ ಕುಸ್ತಿ ಆಡುವುದನ್ನು ಕಲಿತ ಆ ಹುಡುಗನಿಗೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದರೆ ಸಾಕು ಎನ್ನುವ ಆಸೆಯಿತ್ತು. ಕಲಿಯುವ ಛಲ ಮತ್ತು ಎತ್ತರದ ಸಾಧನೆ ಮಾಡುವ ಗುರಿ ಆತನನ್ನು ಈಗ ವಿಶ್ವ ಶಾಲಾ ಕ್ರೀಡಾಕೂಟದ ‘ಅಖಾಡ’ಕ್ಕೆ ತಂದು ನಿಲ್ಲಿಸಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಸುನಿಲ್‌ ಬಿ. ಪಡತರೆ ವಿಶ್ವ ಶಾಲಾ ಕೂಟಕ್ಕೆ ಆಯ್ಕೆಯಾಗಿದ್ದಾರೆ.

84 ಕೆ.ಜಿ. ವಿಭಾಗದ ಫ್ರೀಸ್ಟೈಲ್‌ನಲ್ಲಿ ಅವರು ದೇಶವನ್ನು ಪ್ರತಿನಿಧಿಸಲಿದ್ದು, ಕೂಟ ಇದೇ ವರ್ಷದ ಜುಲೈ 7ರಿಂದ 15ರ ವರೆಗೆ ನವದೆಹಲಿಯಲ್ಲಿ ಆಯೋಜನೆಯಾಗಿದೆ. ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತ ತಂಡದಲ್ಲಿರುವ ಕರ್ನಾಟಕದ ಏಕೈಕ ಆಟಗಾರ. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.

l ಕುಸ್ತಿ ಬಗ್ಗೆ ಆಸಕ್ತಿ ಬರಲು ಕಾರಣವೇನು?

ಮೊದಲಿನಿಂದಲೂ ಮನೆಯಲ್ಲಿ ಕ್ರೀಡಾ ವಾತಾವರಣವಿತ್ತು. ಅದರಲ್ಲಿಯೂ ಕುಸ್ತಿ ಬಗ್ಗೆ ವಿಶೇಷ ಒಲವು ಇತ್ತು. ಅಣ್ಣಂದಿರಾದ ಸಚಿನ್‌, ಸತೀಶ್‌ ವಿಶ್ವವಿದ್ಯಾಲಯ ಮಟ್ಟದ ಕುಸ್ತಿ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ಅವರಿಂದ ನಾನೂ ಆಡುವುದನ್ನು ರೂಢಿಸಿಕೊಂಡೆ. ಮೊದಲು ಹವ್ಯಾಸಕ್ಕಾಗಿ ಅಷ್ಟೇ ಆಡುತ್ತಿದೆ. ದಿನಗಳು ಉರುಳಿದಂತೆಲ್ಲಾ ಇದನ್ನೇ ವೃತ್ತಿಪರವಾಗಿ ಸ್ವೀಕರಿಸಿ ಗಂಭೀರ ಅಭ್ಯಾಸ ಆರಂಭಿಸಿದೆ.l ವಿಶ್ವ ಶಾಲಾ ಕ್ರೀಡಾಕೂಟಕ್ಕೆ ಆಯ್ಕೆಯಾದ ಬಗ್ಗೆ ಹೇಳಿ?

ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದರಿಂದ ಸಹಜವಾಗಿ ಖುಷಿಯಾಗಿದೆ. ಸಿಕ್ಕ ಮೊದಲ ಅವಕಾಶದಲ್ಲಿ ಚಿನ್ನದ ಪದಕ ಗೆಲ್ಲಬೇಕು. ನನ್ನ ಕೋಚ್‌ ಶಂಕರಪ್ಪ ಮತ್ತು ಕುಟುಂಬದವರು ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಬೇಕು. ನನಗೆ ಈಗ 17 ವರ್ಷವಷ್ಟೇ. ಮುಂಬರುವ ದಿನಗಳಲ್ಲಿ ಮತ್ತಷ್ಟು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಆಸೆಯಿದೆ. ಕುಸ್ತಿ ಲೀಗ್‌ನಲ್ಲಿ ಅವಕಾಶ ಪಡೆಯಬೇಕು ಎನ್ನುವ ಕನಸಿದೆ. ಆದ್ದರಿಂದ ಮೊದಲ ಕ್ರೀಡಾಕೂಟದಲ್ಲಿ ಪದಕ ಗೆದ್ದರೆ ಮುಂದಿನ ಸಾಧನೆಗೆ ವಿಶ್ವಾಸ ಬರಲಿದೆ.l ತರಬೇತಿ ಶಿಬಿರದಲ್ಲಿ ಅಭ್ಯಾಸದ ವೇಳಾಪಟ್ಟಿ ಹೇಗಿರುತ್ತದೆ?

ಮುಂಬರುವ ಸಬ್‌ ಜೂನಿಯರ್‌ ಏಷ್ಯಾ ಮತ್ತು ವಿಶ್ವ ಕ್ರೀಡಾಕೂಟಕ್ಕೆ ಭಾರತ ತಂಡವನ್ನು ಆಯ್ಕೆ ಮಾಡಲು ಸೋನೆಪತ್‌ನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಶಿಬಿರ ನಡೆಯುತ್ತದೆ. ಸದ್ಯಕ್ಕೆ ಶಿಬಿರದಲ್ಲಿ ಅಭ್ಯಾಸ ಮಾಡುತ್ತಿದ್ದೇನೆ. ಬೆಳಿಗ್ಗೆ 6ರಿಂದ ಎರಡೂವರೆ ಗಂಟೆ ಅಭ್ಯಾಸ. ಸಂಜೆ 5.30ರಿಂದ ಎರಡೂವರೆ ಗಂಟೆ ಅಭ್ಯಾಸ. ನಿತ್ಯ ಐದು ತಾಸು ಕಸರತ್ತು ಮಾಡಬೇಕು. ಇದಲ್ಲದೇ ಪ್ರತ್ಯೇಕ ಫಿಟ್‌ನೆಸ್‌ ಶಿಬಿರ ಕೂಡ ಇರುತ್ತದೆ. ಶಿಬಿರದಲ್ಲಿ 34 ಕುಸ್ತಿ ಪಟುಗಳಿದ್ದು ಐದು ಜನ ಕೋಚ್‌ಗಳು ಇದ್ದಾರೆ. ಹರಿಯಾಣ ಮತ್ತು ದೆಹಲಿಯ ಪೈಲ್ವಾನರೇ ಹೆಚ್ಚು.l ಫ್ರೀಸ್ಟೈಲ್‌ ವಿಭಾಗದಲ್ಲಿ ಇರುವ ಸವಾಲುಗಳು ಏನು?

ಗ್ರಿಕೊ ರೋಮನ್‌ಗಿಂತ ಫ್ರೀಸ್ಟೈಲ್‌ನಲ್ಲಿ ಪದಕ ಗೆಲ್ಲುವುದು ಕಷ್ಟ. ಏಕೆಂದರೆ ಫ್ರೀಸ್ಟೈಲ್‌ನಲ್ಲಿ ಪಾದದಿಂದ ಮೇಲಿನವರೆಗೆ ಎಲ್ಲಿ ಬೇಕಾದರೂ ಮುಟ್ಟಿ ಪಾಯಿಂಟ್‌ ಗಳಿಸಬಹುದು. ಆದ್ದರಿಂದ ನಾವು ಪಾಯಿಂಟ್‌ ಗಳಿಸುವ ಜೊತೆಗೆ ಎದುರಾಳಿ ಸ್ಪರ್ಧಿ ಪಾಯಿಂಟ್ ಪಡೆಯಲು ಅವಕಾಶ ಕೊಡದಂತೆ ಎಚ್ಚರಿಕೆ ವಹಿಸಬೇಕು. ಕೋಚ್‌ಗಳಾದ ಓಂ ಪ್ರಕಾಶ್‌ ಮತ್ತು ಪರ್ವೇಜ್‌ ಅವರು ಫ್ರೀಸ್ಟೈಲ್‌ ಸ್ಪರ್ಧಿಗಳಿಗೆ ಹೆಚ್ಚು ತರಬೇತಿ ನೀಡುತ್ತಿದ್ದಾರೆ.l ಅಭ್ಯಾಸ ಶಿಬಿರದಲ್ಲಿ ಆಹಾರದ ಕ್ರಮ ಹೇಗಿದೆ?

ಹೆಚ್ಚುಕಡಿಮೆ ಪ್ರತಿದಿನದಂತೆಯೇ ಆಹಾರ ಕ್ರಮ ಇರುತ್ತದೆ. ನಿತ್ಯ ಬೆಳಿಗ್ಗೆ ಪೌಷ್ಠಿಕಾಂಶ ಇರುವ ಮಡಿಕೆ ಕಾಳು, ಬಾಳೆಹಣ್ಣು, ಆಮ್ಲೆಟ್‌ ಕೊಡುತ್ತಾರೆ. ಅನ್ನ ಮತ್ತು ಕರಿದ ಪದಾರ್ಥಗಳನ್ನು ತಿನ್ನುವುದು ಕಡಿಮೆ.l ವಿಶ್ವ ಶಾಲಾ ಕ್ರೀಡಾಕೂಟದಲ್ಲಿ ನಿಮ್ಮಿಂದ ಏನು ಸಾಧನೆ ನಿರೀಕ್ಷೆ ಮಾಡಬಹುದು?

ಹಿಂದೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದೆ. ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದು ಇದೇ ಮೊದಲು. ಆದ್ದರಿಂದ ಈ ಟೂರ್ನಿಯ ಬಗ್ಗೆ ಹೆಚ್ಚು ಗೊತ್ತಿಲ್ಲ. ಹೋದ ವರ್ಷ ವಿಶ್ವ ಶಾಲಾ ಕೂಟದಲ್ಲಿ ಬಾಗಲಕೋಟೆಯ ಅರ್ಜುನ್‌ ಹಲಕುರ್ತಿ ಪಾಲ್ಗೊಂಡಿದ್ದರು. ಅವರೊಂದಿಗೆ ಚರ್ಚಿಸಿದ್ದೇನೆ. ವಿಶ್ವ ಕೂಟದಲ್ಲಿ ಯಾವ ರೀತಿಯ ಸವಾಲು ಇರುತ್ತದೆ. ಅಲ್ಲಿನ ಸ್ಪರ್ಧೆಯ ಗುಣಮಟ್ಟ ಹೇಗಿರುತ್ತದೆ, ನಾವು ಹೇಗೆ ಸ್ಪರ್ಧೆ ಒಡ್ಡಬೇಕು ಎನ್ನುವುದನ್ನು ತಿಳಿದುಕೊಂಡಿದ್ದೇನೆ.

****

ಆಯ್ಕೆ ನಡೆದಿದ್ದು ಹೀಗೆ

ವಿಶ್ವ ಶಾಲಾ ಕ್ರೀಡಾಕೂಟಕ್ಕೆ ಭಾರತ ತಂಡವನ್ನು ಆಯ್ಕೆ ಮಾಡಲು ಹೋದ ತಿಂಗಳು ನವದೆಹಲಿಯಲ್ಲಿ ಟ್ರಯಲ್ಸ್‌ ನಡೆದಿತ್ತು. ಹೋದ ವರ್ಷ ಪುಣೆಯಲ್ಲಿ ಸ್ಕೂಲ್‌ ಗೇಮ್ಸ್ ಫೆಡರೇಷನ್‌ ಆಫ್‌ ಇಂಡಿಯಾದಿಂದ ನಡೆದಿದ್ದ ಕೂಟದಲ್ಲಿ ಸುನಿಲ್‌ ಚಿನ್ನ ಜಯಿಸಿದ್ದರು. 76 ಕೆ.ಜಿ. ವಿಭಾಗದಲ್ಲಿ ಅವರು ಈ ಸಾಧನೆ ಮಾಡಿ ಟ್ರಯಲ್ಸ್‌ಗೆ ಆಯ್ಕೆಯಾಗಿದ್ದರು. ಅಂತಿಮವಾಗಿ ವಿಶ್ವ ಶಾಲಾ ಕೂಟದಲ್ಲಿಯೂ ಸ್ಥಾನ ಪಡೆದರು.

ಇದಕ್ಕೂ ಮೊದಲು ಆಂಧ್ರದ ಚಿತ್ತೂರಿನಲ್ಲಿ ನಡೆದಿದ್ದ ಸಬ್‌ ಜೂನಿಯರ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪಡೆದಿದ್ದರು.ಓದಿನಲ್ಲಿಯೂ ಮುಂದೆ

ಧಾರವಾಡ ಜಿಲ್ಲೆಯ ಮೊರಬದಲ್ಲಿರುವ ಯೋಗೇಶ್ವರ ವಿದ್ಯಾಮಂದಿರಲ್ಲಿ ಸುನಿಲ್‌ 10ನೇ ತರಗತಿ ಪಾಸಾಗಿದ್ದಾರೆ. ಶೇ 75ರಷ್ಟು ಫಲಿತಾಂಶ ಪಡೆದು ಓದಿನಲ್ಲಿಯೂ ಮುಂದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry