ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿಗೆ ಹೊಸ ಆಯಾಮ ನೀಡುವತ್ತ...

Last Updated 4 ಜೂನ್ 2017, 19:30 IST
ಅಕ್ಷರ ಗಾತ್ರ

ಎಂ.ಪಿ.ಗಣೇಶ್‌
ಭಾರತದಲ್ಲಿ ಹಾಕಿಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅತೀವ ಆಸಕ್ತಿ ತೋರುತ್ತಿದೆ. ಹಾಕಿ ಇಂಡಿಯಾ ತೆಗೆದು ಕೊಳ್ಳುತ್ತಿರುವ ನಿರ್ಧಾರಗಳಿಗೆ ಸರ್ಕಾರದ ಬೆಂಬಲ ಎದ್ದು ಕಾಣುತ್ತಿದೆ.  ಇದೀಗ ಹುಟ್ಟು ಪಡೆದಿರುವ ರಾಷ್ಟ್ರೀಯ ಹಾಕಿ ಅಕಾಡೆಮಿಯ ಮೂಲಕ ಈ ಕ್ರೀಡೆ ನಮ್ಮ ದೇಶದಲ್ಲಿ ಹೊಸ ಮನ್ವಂತರ ಕಾಣಲಿದೆ.

ರಾಷ್ಟ್ರೀಯ ಹಾಕಿ ಅಕಾಡೆಮಿಯ ಪರಿಕಲ್ಪನೆಯೇ ವಿಶಿಷ್ಟವಾದುದು. ಇದಕ್ಕೊಂದು ಸ್ಪಷ್ಟ ರೂಪುರೇಷೆಗಳನ್ನು ರೂಪಿಸಲು ಕಳೆದ ಒಂದೂವರೆ ವರ್ಷಗಳಿಂದ  ಜಗಬೀರ್‌ ಸಿಂಗ್‌, ದಿಲೀಪ್‌ ಟರ್ಕಿ ಅವರೇ ಅಲ್ಲದೆ ಕೆಲವು ವಿದೇಶಿ ಕೋಚ್‌ಗಳ ಜತೆಗೆ ಸಾಕಷ್ಟು ಚರ್ಚೆ ನಡೆಸಿದ್ದೇನೆ.

ಕೇಂಧ್ರ ಸರ್ಕಾರದ ಕ್ರೀಡಾ ಇಲಾಖೆ, ಭಾರತ ಕ್ರೀಡಾ ಪ್ರಾಧಿಕಾರದವರು ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. ಹಾಕಿ ಇಂಡಿಯಾ ಈ ಯೋಜನೆಯ ಜತೆಗಿದೆ.  ಈ ದೇಶದಲ್ಲಿ ಹಾಕಿಯ ಏಳ್ಗೆಯತ್ತ ಎಲ್ಲರೂ ಒಗ್ಗೂಡಿ ನಡೆಯಲಿದ್ದಾರೆ.

ದೆಹಲಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಅಕಾಡೆಮಿಯ ಕೇಂದ್ರ ಇರುತ್ತದೆ. ಸುಮಾರು 40 ಮಂದಿ ಆಯ್ದ ಬಾಲಕರಿಗೆ ಅಲ್ಲಿ ವಸತಿಯ ವ್ಯವಸ್ಥೆ ಇರುತ್ತದೆ. ಅಷ್ಟೇ ಸಂಖ್ಯೆಯಲ್ಲಿ ಬಾಲಕಿಯರಿಗೂ ತರಬೇತಿ ನೀಡಲಾಗುತ್ತದೆ.

ಇವರೆಲ್ಲರಿಗೂ ಹಾಕಿಯ ತಂತ್ರಗಳೆಲ್ಲದರ ಬಗ್ಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಜತೆಗೆ ಫಿಟ್‌ನೆಸ್‌ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತದೆ. ರಾಷ್ಟ್ರೀಯ ಸಬ್‌ ಜೂನಿಯರ್‌ ಹಾಕಿ ಚಾಂಪಿಯನ್‌ಷಿಪ್‌ ಮುಂತಾದ ಕೂಟಗಳಲ್ಲಿ ಮೂಡಿ ಬಂದ ವಿಶೇಷ ಪ್ರತಿಭಾವಂತರನ್ನು ‘ಹಾಕಿ ಇಂಡಿಯಾ’ದವರು ಗುರುತಿಸಿದ್ದಾರೆ. ಅಂತಹ 70 ಮಂದಿ ಪ್ರತಿಭಾವಂತರ ಪಟ್ಟಿಯನ್ನೂ ಅವರು ಸಿದ್ದಪಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ಪ್ರಮುಖ ಟೂರ್ನಿಗಳಿಗೆ ತಂಡವನ್ನು ಸಿದ್ಧಗೊಳಿಸುವಾಗ ಕೇವಲ ಒಂದೆರೆಡು ಪಂದ್ಯಗಳನ್ನು ನೋಡಿ ಅಥವಾ ಆಯ್ಕೆ ಟ್ರಯಲ್ಸ್‌ನಲ್ಲಿ ಚಾಕಚಕ್ಯತೆಯನ್ನು ಪರಿಗಣಿಸಿ ತಂಡವನ್ನು ಆಯ್ಕೆ ಮಾಡುವ ಪದ್ಧತಿ ಇರುವುದಿಲ್ಲ. ಹಲವು ವಾರಗಳ ಕಾಲ ಆಟಗಾರರ ನೈಪುಣ್ಯತೆಯನ್ನು ಸೂಕ್ಷ್ಮವಾಗಿ ಗಮನಿಸಿದ ನಂತರವೇ ಆಯ್ಕೆ ನಡೆಸಲಾಗುತ್ತದೆ. ಇದಕ್ಕಾಗಿಯೇ ಆರು ಮಂದಿ ಸದಸ್ಯರ ಸಮಿತಿ ಇರುತ್ತದೆ.

ಜುಲೈ 15ರಿಂದ ಆರಂಭವಾಗಲಿರುವ ಈ ಅಕಾಡೆಮಿಯ ಲ್ಲಿರುವ ಆಯ್ದ ಆಟಗಾರರ ಶಿಕ್ಷಣದ ಬಗ್ಗೆಯೂ ಗಮನ ನೀಡಲಾಗುವುದು. ಕ್ರೀಡಾಂಗಣಕ್ಕೆ ಸಮೀಪದಲ್ಲಿರುವ ಕಾಲೇಜುಗಳಲ್ಲಿ ಇವರೆಲ್ಲರಿಗೂ ಪ್ರವೇಶ ಸಿಗುವಂತೆ ಪ್ರಯತ್ನಿಸಲಾಗುವುದು. ಆಟದಲ್ಲಿ ಪ್ರಾವಿಣ್ಯತೆ ಸಾಧಿಸುವುದರ ಜತೆಗೇ ಅತ್ಯುತ್ತಮ ಶಿಕ್ಷಣ ಪಡೆಯುವ ಅವಕಾಶವನ್ನು ಈ ಕಿರಿಯ ಆಟಗಾರರಿಗೆ ಒದಗಿಸಲಾಗುವುದು.

ಇದು ಸಧ್ಯಕ್ಕೆ ಸುಮಾರು ಏಳು ಕೋಟಿ ವೆಚ್ಚದ ಯೋಜನೆ. ಇದರ ಕಾರ್ಯವೈಖರಿ ಪಿರಮಿಡ್‌ ಸ್ವರೂಪದಲ್ಲಿ ರುತ್ತದೆ. ಮೇಲಿನ ಹಂತದಲ್ಲಿ ಹೊಸ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿದ್ದಂತೆಯೇ ಅದು ಅಷ್ಟೇ ಪರಿಣಾಮಕಾರಿಯಾಗಿ ಕೆಳಹಂತವನ್ನು ತಲುಪುತ್ತದೆ. ಈ ಯೋಜನೆಯನ್ನು ಹಂತಹಂತವಾಗಿ ಅಂತರ ರಾಜ್ಯ, ರಾಜ್ಯ, ಪ್ರಾದೇಶಿಕ, ಜಿಲ್ಲಾ ಮಟ್ಟಗಳಿಗೂ ವಿಸ್ತಾರಗೊಳ್ಳುವಂತೆ ನೋಡಿಕೊಳ್ಳುವುದೂ ರಾಷ್ಟ್ರೀಯ ಅಕಾಡೆಮಿಯ ಹೆಗ್ಗುರಿಯಾಗಿದೆ.

ಪ್ರಸಕ್ತ ಈ ರಾಷ್ಟ್ರೀಯ ಅಕಾಡೆಮಿಯಲ್ಲಿ ಬಾಲಕರಿಗೆ ಮೂರು ಕೋಚ್‌ಗಳಿದ್ದರೆ, ಬಾಲಕರಿಯರಿಗೂ ಅಷ್ಟೇ ಸಂಖ್ಯೆಯ ಕೋಚ್‌ಗಳಿರುತ್ತಾರೆ.
ಈ ಅಕಾಡೆಮಿಯಲ್ಲಿ ಅತ್ಯುತ್ತಮ ಪೌಷ್ಟಿಕ ಆಹಾರ ಮತ್ತು ಸುಸಜ್ಜಿತ ವಸತಿ ವ್ಯವಸ್ಥೆ ಇರುತ್ತದೆ. ಭಾರತದ ಹಳ್ಳಿಗಾಡುಗಳಲ್ಲಿ ದೊಡ್ಡ ಸಂಖ್ಯೆಯಲ್ಲಿಯೇ ಪ್ರತಿಭಾವಂತರಿದ್ದಾರೆ. ಅಂತಹವರನ್ನು ಎಳವೆಯಲ್ಲಿಯೇ ಗುರುತಿಸಿ ಈ ಅಕಾಡಮಿಯ ಚೌಕಟ್ಟಿನೊಳಗೆ ತಂದು ಅವರ ಪ್ರತಿಭೆಗೆ ಸಾಣೆ ಹಿಡಿಯುವುದೇ ನಮ್ಮ ಜವಾಬ್ದಾರಿಯಾಗಿದೆ.

ಮುಂದಿನ ದಿನಗಳಲ್ಲಿ ವಿಶ್ವ ಹಾಕಿ ನಕ್ಷೆಯಲ್ಲಿ ಭಾರತದ ಹೆಸರು ಸದಾ ಎದ್ದು ಕಾಣುವಂತೆ ಮಾಡುವ ನಿಟ್ಟಿನಲ್ಲಿ ಈ ಅಕಾಡೆಮಿ ಮಹತ್ವದ ಪಾತ್ರ ವಹಿಸಲಿದೆ.
ನಾನು ಇವತ್ತು ಏನೇ ಆಗಿದ್ದರೂ ಅದೆಲ್ಲವೂ ಹಾಕಿಯಿಂದಲೇ ಬಂದಿದ್ದು. ಈ ಕ್ರೀಡೆಗೆ ನಾನು ಯಾವತ್ತೂ ಕೃತಜ್ಞನೇ.  

ವಯಸ್ಸು ನನಗೆ ಕೇವಲ ಸಂಖ್ಯೆಯಷ್ಟೇ. ಇವತ್ತಿಗೂ ಹಾಕಿಗೆ ಸಂಬಂಧಿಸಿದಂತೆ ಇಪ್ಪತ್ತರ ಹರೆಯದ ಹುಮ್ಮಸ್ಸು ಇದೆ. ಮುಂದಿನ ಮೂರು ವರ್ಷಗಳಲ್ಲಿ ರಾಷ್ಟ್ರೀಯ ಅಕಾಡೆಮಿಯಿಂದ ಮಹತ್ತರವಾದುದನ್ನು ಸಾಧಿಸಿ ತೋರಿಸುತ್ತೇನೆ.

****


ಭಾರತ ಹಾಕಿ ತಂಡದ ಮಾಜಿ ನಾಯಕ ಎಂ.ಪಿ.ಗಣೇಶ್‌ 1988ರ ಸೋಲ್‌ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ಕೋಚ್‌ ಆಗಿದ್ದರು. ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಇವರು ನಿವೃತ್ತರಾದಾಗ  ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದರು. ಕಳೆದ ಏಳೂವರೆ ವರ್ಷಗಳಿಂದ ಇವರು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವ ಹಣಾಧಿಕಾರಿಯಾಗಿದ್ದರು. ಇವರು ಹಾಕಿ ತರಬೇತಿಗೆ ಸಂಬಂದಿಸಿದಂತೆ ಅಪಾರ ಅನುಭವ ಹೊಂದಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT