ವಿವಾದದ ಮುಂಬೆಳಕಿನಲ್ಲಿ ಜನರಲ್ ರಾವತ್

7

ವಿವಾದದ ಮುಂಬೆಳಕಿನಲ್ಲಿ ಜನರಲ್ ರಾವತ್

ಡಿ.ಉಮಾಪತಿ
Published:
Updated:
ವಿವಾದದ ಮುಂಬೆಳಕಿನಲ್ಲಿ ಜನರಲ್ ರಾವತ್

ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ದೇಶಭಕ್ತಿಯೆಂಬ ಹೊಸ ಹತಾರು ಝಳಪಿಸಿರುವ ದಿನಗಳಲ್ಲಿ ಭಾರತೀಯ ಸೇನೆಯ ಸೂತ್ರಗಳನ್ನು ಕೇಂದ್ರ ಸರ್ಕಾರ ಜನರಲ್ ಬಿಪಿನ್ ರಾವತ್ ಅವರ ಕೈಗಿರಿಸಿತು. ಗಡಿಯಾಚೆಗೆ ಪಾಕಿಸ್ತಾನ ಮತ್ತು ಬರ್ಮಾದ ಮೇಲೆ ನಡೆಸಿದ ನಿರ್ದಿಷ್ಟ ದಾಳಿಗಳ (ಸರ್ಜಿಕಲ್ ಸ್ಟ್ರೈಕ್) ರೂವಾರಿ ಎಂದು ಅವರನ್ನು ಬಣ್ಣಿಸಲಾಗುತ್ತದೆ. ಇತ್ತೀಚೆಗೆ ವಿವಾದಗಳ ಮುಂಬೆಳಕಿನಲ್ಲಿ ಮೆಚ್ಚುಗೆ-ಟೀಕೆ ಟಿಪ್ಪಣಿಗಳನ್ನು ಸೆಳೆದಿದ್ದಾರೆ.

ಜನರಲ್ ರಾವತ್ ಬಹುಕಾಲ ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದವರು. ಕಾಶ್ಮೀರದ ಅಶಾಂತಿಯ ಹಿಂದೆ ಪಾಕಿಸ್ತಾನದ ಚಿತಾವಣೆಯಲ್ಲದೆ ಬೇರೇನೂ ಇಲ್ಲ, ಪಾಕಿಸ್ತಾನವನ್ನು ನೆಟ್ಟಗೆ ಮಾಡಿದರೆ ಕಾಶ್ಮೀರ ನೆಟ್ಟಗಾಗುತ್ತದೆ ಎಂಬುದು ನರೇಂದ್ರ ಮೋದಿಯವರ ಸರ್ಕಾರದ ನಿಲುವು. ಈ ನಿಲುವಿಗೆ ಜನರಲ್ ರಾವತ್ ಬದ್ಧರು.

ಕಾಶ್ಮೀರದಲ್ಲಿ ಪಾಕಿಸ್ತಾನಿಗಳ ಕುಮ್ಮಕ್ಕಿನಿಂದ ನಡೆದಿರುವುದು ಒಂದು ಕೊಳಕು ಯುದ್ಧ. ಕೊಳಕು ಯುದ್ಧಗಳಲ್ಲಿ ಹೊಸ ಬಗೆಯ ರಣತಂತ್ರಗಳು, ಆಲೋಚನೆಗಳು, ಆಚರಣೆಗಳು ಬೇಕೇ ಬೇಕು. ಸೇನಾಧಿಕಾರಿ ಮೇಜರ್ ಗೊಗೊಯಿ ಅವರು ಚುನಾವಣಾ ಸಿಬ್ಬಂದಿಯನ್ನು ಕಲ್ಲು ತೂರಾಟದಲ್ಲಿ ತೊಡಗಿದ್ದ ಉದ್ರಿಕ್ತ ಗುಂಪಿನಿಂದ ಸುರಕ್ಷಿತವಾಗಿ ಬಿಡಿಸಿ ಹೊರತರಲು ಅನುಸರಿಸಿದ ‘ಮಾನವ ಗುರಾಣಿ’ ಇಂತಹ ಹೊಸ ತಂತ್ರದ ಭಾಗ ಎಂದು ರಾವತ್ ಮೆಚ್ಚಿದ್ದಾರೆ. ಗೊಗೊಯಿ ಅವರ ನಡೆಯ ಕುರಿತು ವಿಚಾರಣೆ ನಡೆದಿರುವಾಗಲೇ ಅವರಿಗೆ ಮೆಚ್ಚುಗೆಯ ಪದಕವನ್ನು ನೀಡಿರುವ ರಾವತ್ ಕ್ರಮ ವಿವಾದಕ್ಕೆ ಗುರಿಯಾಗಿದೆ.

ಭಾರತದಿಂದ ಮಾನಸಿಕವಾಗಿ ದೂರವಾಗತೊಡಗಿರುವ ಕಾಶ್ಮೀರಿಗಳನ್ನು ಸೇನೆ ಇನ್ನಷ್ಟು ದೂರ ಮಾಡಿ ಪಾಕಿಸ್ತಾನದತ್ತ ತಳ್ಳಬಾರದು ಎಂಬ ವಾದದಲ್ಲಿ ಹುರುಳಿದೆ. ಮಾನವ ಗುರಾಣಿ ಬಳಕೆ ಮತ್ತು ಮೇಜರ್ ಗೊಗೊಯಿಗೆ ಮೆಚ್ಚುಗೆಯ ಪದಕ ನೀಡಿರುವ ಜನರಲ್ ರಾವತ್ ನಡೆಯು ಕಾಶ್ಮೀರಿಗಳನ್ನು ಇನ್ನಷ್ಟು ದೂರ ತಳ್ಳಿದೆ ಎನ್ನುತ್ತಾರೆ ವಿಶ್ಲೇಷಕರು.

ಭಾರತ ಗಣರಾಜ್ಯಕ್ಕೆ ಕಾವಲು ನಿಂತ ಸುದೀರ್ಘ ಪರಂಪರೆ ನಮ್ಮ ಸೇನೆಯದು. ಒಂದೆರಡು ಅಪವಾದಗಳನ್ನು ಬಿಟ್ಟರೆ ನಮ್ಮ ಸೇನೆಯ ಕಾರ್ಯಕ್ಷಮತೆ ಹೆಮ್ಮೆಪಡುವಂತಹುದೇ. ಕಾಶ್ಮೀರದಲ್ಲಿ ನಮ್ಮ ಸಿಪಾಯಿಗಳು ಅತ್ಯಂತ ಪ್ರತಿಕೂಲ ಸನ್ನಿವೇಶದಲ್ಲಿ ತಮ್ಮ ಪ್ರಾಣಗಳನ್ನು ಪಣವಿಟ್ಟು ಕೆಲಸ ಮಾಡುತ್ತಿರುವುದು ಹೌದು.

ಕಾಶ್ಮೀರಿಗಳ ಮಾನಪ್ರಾಣವನ್ನು ಹರಣಗೊಳಿಸಿರುವ ಅತಿರೇಕಗಳಲ್ಲಿ ಕಳಂಕವನ್ನು ಮೆತ್ತಿಸಿಕೊಂಡಿರುವುದೂ ನಿಜ. ‘ಮಾನವ ಗುರಾಣಿ’ ಬಳಕೆಯ ಕುಖ್ಯಾತಿ ಐಎಸ್‌ ನಂತಹ ತೀವ್ರವಾದಿಗಳಿಗೆ ಮೀಸಲಾಗಿತ್ತು. ಸೇನೆಯ ಸಮವಸ್ತ್ರ ಧರಿಸಿದವರು ನಿರ್ದಿಷ್ಟ ಸಂಹಿತೆಯ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಇಲ್ಲವಾದರೆ ಉಗ್ರಗಾಮಿಗಳಿಗೂ ಸೇನೆಗೂ ವ್ಯತ್ಯಾಸವೇ ಉಳಿಯುವುದಿಲ್ಲ. ಕಾಶ್ಮೀರ ಕಣಿವೆಯನ್ನು ಉಳಿಸಿಕೊಳ್ಳಲು ಇಂತಹ ನಡೆ- ನುಡಿಗಳು ನೆರವಾಗುವುದಿಲ್ಲ ಎಂಬ ಟೀಕೆಯನ್ನು ರಾವತ್ ಎದುರಿಸಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಆಡಿರುವ ಮಾತುಗಳು ಕಾಶ್ಮೀರದಲ್ಲಿ ಭಾರತೀಯ ಸೇನೆ ಮತ್ತು ಕಾಶ್ಮೀರಿ ಪ್ರತಿಭಟನಾಕಾರರ ನಡುವಣ ಸಂಘರ್ಷ ಉಗ್ರರೂಪ ತಳೆಯುವುದನ್ನು ಮನಸಾರೆ ಬಯಸುವುದನ್ನು ಧ್ವನಿಸುತ್ತವೆ. ‘ಈ ಜನ, ಸೇನೆಯೆಡೆಗೆ ಕಲ್ಲು ತೂರುವ ಬದಲು, ಬಂದೂಕು ಹಿಡಿದು ಗುಂಡು ಹಾರಿಸುತ್ತಿದ್ದರೆ ನನಗೆ ಸಂತೋಷವಾಗುತ್ತಿತ್ತು. ಆಗ ನಾನು ಏನು ಮಾಡಬೇಕೆಂದಿದ್ದೇನೋ ಅದನ್ನು ಮಾಡುವುದು ಸಾಧ್ಯವಿತ್ತು’ ಎಂಬ ಅವರ ಮಾತಿನ ಅರ್ಥ; ಗುಂಡು ಹಾರಿಸಿದವರ ಮೇಲೆ ಗುಂಡು ಹಾರಿಸುವುದು ಸಲೀಸು. ಕಲ್ಲು ತೂರುವವರ ವಿರುದ್ಧ ಗುಂಡು ಹಾರಿಸುವುದು ಸುಲಭವಲ್ಲ ಎಂಬುದು.

ಕಾಶ್ಮೀರಿಗಳಿಗೆ ಸೇನೆಯ ಭಯವೇ ಹೊರಟು ಹೋಗಿದೆ ಎಂಬುದು ಅವರಿಗೆ ಚಿಂತೆಯ ಸಂಗತಿ. ಸೇನೆಯ ಭಯ ಇಲ್ಲವೆಂದಾದರೆ ದೇಶ ಮುಳುಗಿ ಹೋದಂತೆಯೇ ಲೆಕ್ಕ. ದೇಶದ ಶತ್ರುಗಳು ಮತ್ತು ದೇಶದೊಳಗಿನ ನಮ್ಮದೇ ಜನ ಇಬ್ಬರೂ ಸೇನೆಗೆ ಭಯಪಡಬೇಕು. ನಮ್ಮದು ಸ್ನೇಹಪೂರ್ಣ ಸೇನೆ. ಆದರೆ ಕಾನೂನು ಸುವ್ಯವಸ್ಥೆ ಕಾಪಾಡಲು ನಮ್ಮನ್ನು ನಿಯುಕ್ತಿ ಮಾಡಿದಾಗ ಜನ ನಮ್ಮ ಕಂಡರೆ ಹೆದರುವುದು ಅತ್ಯಗತ್ಯ ಎನ್ನುವುದು ಅವರ ನಿಲುವು.

ಭಾರತೀಯ ಸೇನೆಯನ್ನು ಜಗತ್ತಿನ ಬಲಶಾಲೀ ಸೇನೆಯನ್ನಾಗಿ ಕಟ್ಟಬೇಕೆನ್ನುವ ಧ್ಯೇಯ ಅವರದು. ಸರಳ ಬದುಕನ್ನು ನಂಬುವ ಅವರು ತಮ್ಮ ಸಮವಸ್ತ್ರವನ್ನು ತಾವೇ ಸ್ವಚ್ಛಗೊಳಿಸಿ ಸಜ್ಜುಮಾಡಿಕೊಳ್ಳುವ ಅಪರೂಪದ ಸೇನಾ ಮುಖ್ಯಸ್ಥ. ಸರ್ಕಾರದ ಹಣವನ್ನು ಸ್ವಂತಕ್ಕೆ ಬಳಕೆ ಮಾಡಬಾರದು ಎಂಬ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವವರು. ಸೇನೆಯಲ್ಲಿ ಸಿಪಾಯಿ- ಸೇನಾಧಿಪತಿಯ ನಡುವಣ ಅಂತರವನ್ನು ತಗ್ಗಿಸಬೇಕೆಂಬ ಸದುದ್ದೇಶ ಉಳ್ಳವರು.

ವೃತ್ತಿನಿಷ್ಠೆಯಲ್ಲಿ ಕುಟುಂಬ ಕ್ಷೇಮವನ್ನು ಬದಿಗೆ ಸರಿಸಿರುವವರು. ತಮ್ಮ ಪತಿ ಬಹಳ ಖಡಕ್ ವ್ಯಕ್ತಿ, ಕುಟುಂಬವನ್ನು ನಿರ್ಲಕ್ಷಿಸಿದಂತೆ ತೋರುತ್ತಾರೆ. ಆದರೆ ಅವರದೇ ಆದ ಅವ್ಯಕ್ತ ಬಗೆಯಲ್ಲಿ ಕುಟುಂಬದ ಸದಸ್ಯರ ಯೋಗಕ್ಷೇಮ ಕಾಯುತ್ತಾರೆ. ತಲೆಯ ಮೇಲೆ ಕೂರಿಸಿಕೊಂಡು ಪ್ರೀತಿಸುವುದು ಅವರ ವಿಧಾನ ಅಲ್ಲ ಎನ್ನುತ್ತಾರೆ ರಾವತ್ ಅವರ ಪತ್ನಿ ಮಧುಲಿಕಾ ರಾವತ್.

ಆಕ್ರಮಣಕಾರಿ ರಾಷ್ಟವಾದದ ಸಿದ್ಧಾಂತವನ್ನು ಸೂಸುವ ವ್ಯಕ್ತಿತ್ವದ ರಾವತ್ ಅವರಿಗೆ ಪಟ್ಟ ಕಟ್ಟಲು ಇತರೆ ಇಬ್ಬರು ಸೇನಾಧಿಕಾರಿಗಳ ಸೇವಾ ಹಿರಿತನವನ್ನು ಬದಿಗಿರಿಸಲಾಗಿತ್ತು. ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ನಂತರ ಜಗತ್ತಿನ ಅತ್ಯಂತ ದೊಡ್ಡ ಸೇನೆ ಭಾರತೀಯ ಸೇನೆ. ಜನತಂತ್ರದ ಹೊರ ಹೊದಿಕೆಯ ಒಳಗೆ ಸರ್ವಾಧಿಕಾರಿ ಸೇನೆಯ ಹೂರಣವನ್ನು ಹೊಂದಿರುವ ನೆರೆಯ ಪಾಕಿಸ್ತಾನ ವ್ಯರ್ಥ ವೀರಾವೇಶದ ಮಾತುಗಳನ್ನು ಆಡುತ್ತ ಬಂದಿದೆ.

ಈ ಮಾತುಗಳನ್ನು ಮಾತಿನಲ್ಲಿ ಮಾತ್ರವಲ್ಲದೆ ಕೃತಿಯಲ್ಲೂ ಸರಿಗಟ್ಟಿಸುವ ವ್ಯಕ್ತಿತ್ವ ರಾವತ್ ಅವರದು. ಎತ್ತರದ ಭೂಪ್ರದೇಶಗಳ ಸಮರ ತಂತ್ರದಲ್ಲಿ ಬಂಡುಕೋರರನ್ನು ಬಗ್ಗು ಬಡಿವ ಕಾರ್ಯಾಚರಣೆಗಳಲ್ಲಿ ಸಿದ್ಧಹಸ್ತರು. ಹತ್ತಾರು ವರ್ಷಗಳ ಅನುಭವ ಅವರಿಗೆ ಉಂಟು.

ಭಾರತೀಯ ಸೇನೆಯ 27ನೆಯ ಮುಖ್ಯಸ್ಥರಾಗಿ ಆರು ತಿಂಗಳ ಹಿಂದೆಯಷ್ಟೇ ಅಧಿಕಾರ ವಹಿಸಿಕೊಂಡ ರಾವತ್ ಉತ್ತರಾಖಂಡದ ಪೌಡಿ ಗಢವಾಲ್ ಜಿಲ್ಲೆಗೆ ಸೇರಿದವರು. ಹಲವು ತಲೆಮಾರುಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಕುಟುಂಬದಲ್ಲಿ ಜನಿಸಿದವರು.

ರಾವತ್ ಅವರು ವೆಲ್ಲಿಂಗ್ಟನ್‌ನ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನ ಪದವೀಧರರು. ಭಾರತೀಯ ಮಿಲಿಟರಿ ಅಕಾಡೆಮಿಯಿಂದ ಗೌರವ ಖಡ್ಗದ ಸನ್ಮಾನ ಪಡೆದವರು. ಅಮೆರಿಕದ ಫೋರ್ಟ್ ಲೀವೆನ್ವರ್ತ್ ನಲ್ಲಿ ಹೈಯರ್ ಕಮಾಂಡ್ ಕೋರ್ಸ್ ಪೂರ್ಣಗೊಳಿಸಿದವರು.

ಮದ್ರಾಸ್ ವಿಶ್ವವಿದ್ಯಾಲಯದಿಂದ ಡಿಫೆನ್ಸ್ ಸ್ಟಡೀಸ್ ನಲ್ಲಿ ಎಂ.ಫಿಲ್. ಪದವೀಧರರು. ಮಿಲಿಟರಿ ಮೀಡಿಯಾ ಕೂಟ ಅಧ್ಯಯನದಲ್ಲಿ ಮಾಡಿದ ಸಂಶೋಧನೆಗಾಗಿ ಮೀರಠ್‌ನ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯವು ರಾವತ್ ಅವರಿಗೆ ಪಿಎಚ್.ಡಿ. ಪದವಿ ನೀಡಿದೆ.

2015ರಲ್ಲಿ ನಾಗಾ ಭಯೋತ್ಪಾದಕರು ಮಣಿಪುರದಲ್ಲಿ ನಡೆಸಿದ ದಾಳಿಗೆ ಭಾರತೀಯ ಸೇನೆಯ 18 ಯೋಧರು ಬಲಿಯಾದರು. ಗಡಿಯಾಚೆ ಬರ್ಮಾದಲ್ಲಿ ಆಶ್ರಯ ಪಡೆದ ನಾಗಾ ಬಂಡುಕೋರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಪ್ರತಿದಾಳಿಯ ನೇತೃತ್ವವನ್ನು ರಾವತ್ ವಹಿಸಿದ್ದರು.

ವರ್ಷದ ನಂತರ ಸೇನೆಯ ಉಪಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ವಾರಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸುವ ಜವಾಬ್ದಾರಿ ಅವರ ಹೆಗಲಿಗೆ ಬಿದ್ದಿತ್ತು. ಈ ಎರಡೂ ದಾಳಿಗಳಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಉಸ್ತುವಾರಿಯಲ್ಲಿ ಕೆಲಸ ಮಾಡಿದರು. ಡೋವಲ್ ಮತ್ತು ರಾವತ್ ಇಬ್ಬರೂ ಪೌಡಿ ಗಢವಾಲ್‌ಗೆ ಸೇರಿದವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry