ಸಭಾಪತಿ ರಕ್ಷಣೆಗೆ ಬರಲಿರುವ ಕಾಲಾವಕಾಶದ ಗಡುವು?

7
ಕಾಂಗ್ರೆಸ್‌ ಸದಸ್ಯರಿಂದ ಅವಿಶ್ವಾಸ ನಿರ್ಣಯ ಮಂಡಿಸಲು ನೋಟಿಸ್‌

ಸಭಾಪತಿ ರಕ್ಷಣೆಗೆ ಬರಲಿರುವ ಕಾಲಾವಕಾಶದ ಗಡುವು?

Published:
Updated:
ಸಭಾಪತಿ ರಕ್ಷಣೆಗೆ ಬರಲಿರುವ ಕಾಲಾವಕಾಶದ ಗಡುವು?

ಬೆಂಗಳೂರು: ಕಾಂಗ್ರೆಸ್ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಕೋರಿ ಸಲ್ಲಿಸಿರುವ ನೋಟಿಸ್‌ ಸಂಬಂಧ ನಿರ್ಣಯ ತೆಗೆದುಕೊಳ್ಳಲು 14 ದಿನಗಳ ಕಾಲಾವಕಾಶವಿದೆ ಎಂದು ಸಭಾಪತಿ ಡಿ.ಎಚ್. ಶಂಕರಮೂರ್ತಿ ಸ್ಪಷ್ಟಪಡಿಸಿದರು.

ಈ ನೋಟಿಸ್‌ ಕುರಿತು ಮಾಧ್ಯಮ ಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘14 ದಿನಗಳ ಕಾಲಾವಕಾಶ ಮುಗಿದ ನಂತರವೂ ಯಾವ ದಿನ ಚರ್ಚೆಗೆ ಅವಕಾಶ ಮಾಡಿಕೊಡಬೇಕೆನ್ನುವುದು ಸಭಾಪತಿಯ ವಿವೇಚನೆಗೆ ಬಿಟ್ಟದ್ದು. ಕನಿಷ್ಠ 10 ಸದಸ್ಯರು ನಿರ್ಣಯವನ್ನು ಬೆಂಬಲಿಸಿದರೆ ಮಾತ್ರ ಚರ್ಚೆಗೆ ಅವಕಾಶವಿದೆ’ ಎಂದರು.

‘ನಿರ್ಣಯದ ಪರ ಇರುವವರ ಸಂಖ್ಯೆ 10ಕ್ಕಿಂತ ಕಡಿಮೆಯಾದರೆ ಆ ಕ್ಷಣದಲ್ಲೆ ನೋಟಿಸ್‌ ಬಿದ್ದುಹೋಗುತ್ತದೆ. ಚರ್ಚೆಗೆ ಎತ್ತಿಕೊಂಡ ಐದು ದಿನಗಳ ಒಳಗೆ ಅದರ ಮೇಲೆ ಮತದಾನ ನಡೆಯಬೇಕು. ವಿಧಾನ ಪರಿಷತ್‌ನ ಕಾರ್ಯವಿಧಾನ ಹಾಗೂ ನಡವಳಿಕೆ ನಿಯಮ 165ರಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ’ ಎಂದೂ ಅವರು ಹೇಳಿದರು.

ಶಂಕರಮೂರ್ತಿ ಅವರನ್ನು ಪದಚ್ಯುತಿಗೊಳಿಸುವ ಉದ್ದೇಶದಿಂದ ಅವಿಶ್ವಾಸದ ಮಂಡನೆಗೆ ಅವಕಾಶ ಕೋರಿ ಪರಿಷತ್‌ ಕಾರ್ಯದರ್ಶಿಗೆ ಕಾಂಗ್ರೆಸ್ಸಿನ ಏಳು ಸದಸ್ಯರು ಮೇ 30ರಂದು ನೋಟಿಸ್ ನೀಡಿದ್ದಾರೆ.

ಕಾಲಾವಕಾಶಕ್ಕೆ ಮನವಿ: ‘ಕಾನೂನುಬಾಹಿರವಾಗಿ ಪ್ರಯಾಣ ಭತ್ಯೆ ಮತ್ತಿತರ ಸೌಲಭ್ಯ ಪಡೆದಿದ್ದಾರೆಂಬ ಆರೋಪ ಎದುರಿಸುತ್ತಿರುವ ಎಂಟು ಸದಸ್ಯರು, ಈ ಕುರಿತು ವಿವರಣೆ ನೀಡಲು ನಾಲ್ಕು ವಾರಗಳ ಕಾಲಾವಕಾಶ ನೀಡುವಂತೆ ಕೋರಿದ್ದಾರೆ’ ಎಂದು ಶಂಕರಮೂರ್ತಿ ತಿಳಿಸಿದರು.

‘ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆರ್‌ಟಿಐ  ಅಡಿ ಪಡೆದ ದಾಖಲೆಗಳ ಸಹಿತ ನೀಡಿದ ದೂರು ಪರಿಗಣಿಸಿ, ಈ ಕುರಿತು ವಿವರಣೆ ನೀಡುವಂತೆ ಕಾಂಗ್ರೆಸ್‌ನ ಐವರು, ಜೆಡಿಎಸ್‌ನ ಇಬ್ಬರು ಮತ್ತು ಪಕ್ಷೇತರ ಸದಸ್ಯರೊಬ್ಬರಿಗೆ ಇದೇ 26ರಂದು ಪತ್ರ ಕಳುಹಿಸಲಾಗಿದೆ’ ಎಂದರು.

ಅಂತರ ಕಾಯ್ದುಕೊಳ್ಳಲು ಜೆಡಿಎಸ್‌ ನಿರ್ಧಾರ: ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ವಿರುದ್ಧ ಅವಿಶ್ವಾಸ ಮಂಡಿಸಲು ಕಾಂಗ್ರೆಸ್‌ ಸದಸ್ಯರು ನೀಡಿರುವ ನೋಟಿಸ್‌ ವಿಷಯದಲ್ಲಿ ಅಂತರ ಕಾಯ್ದುಕೊಳ್ಳಲು ಜೆಡಿಎಸ್‌ ನಿರ್ಧರಿಸಿದೆ.

‘ಸಭಾಧ್ಯಕ್ಷರು ಅಥವಾ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಪ್ರಯತ್ನ ಒಳ್ಳೆಯ ಬೆಳವಣಿಗೆಯಲ್ಲ. ಸಭಾಪತಿಯಾಗಲಿ, ಕಾಂಗ್ರೆಸ್‌ ಪಕ್ಷವಾಗಲಿ ಜೆಡಿಎಸ್‌ ಹೆಸರು ಬಳಕೆ ಮಾಡಿಕೊಳ್ಳಬಾರದು’ ಎಂದು ಪಕ್ಷದ ವಕ್ತಾರ ರಮೇಶ್‌ ಬಾಬು ತಿಳಿಸಿದ್ದಾರೆ.

‘ಮತದಾನ ಮಾಡುವ ಸಂದರ್ಭ ಬಂದಲ್ಲಿ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಮತ್ತು ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಅಭಿಪ್ರಾಯ ತಿಳಿಸಲಿದ್ದಾರೆ’ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಶಂಕರಮೂರ್ತಿ  ವಿರುದ್ಧ  ಅವಿಶ್ವಾಸ ಕುಮಾರಸ್ವಾಮಿ ಜತೆ ಚರ್ಚೆ: ಸಿ.ಎಂ

ಮೈಸೂರು:
ವಿಧಾನ ಪರಿಷತ್ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಅವರನ್ನು ಪದಚ್ಯುತಿಗೊಳಿಸುವ ಸಂಬಂಧ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಜತೆ ಚರ್ಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಶನಿವಾರ ಹೇಳಿದರು.

‘ಶಂಕರಮೂರ್ತಿ ಅವರನ್ನು ಪದಚ್ಯುತಿಗೊಳಿಸಲು ಕಾಂಗ್ರೆಸ್ ಮುಂದಾಗಿಲ್ಲ. ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲ. ವಿಧಾನ ಪರಿಷತ್ ಸದಸ್ಯರು ಈ ಪ್ರಯತ್ನ ನಡೆಸಿದ್ದಾರೆ. ಶಂಕರಮೂರ್ತಿ ಅವರಿಗೆ ಬಹುಮತವಿಲ್ಲದಿದ್ದರೆ ಹೇಗೆ ಮುಂದುವರಿಯುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತವಿದ್ದರೆ ಮಾತ್ರ ಮುಂದುವರಿಯಲು ಸಾಧ್ಯ. ಇದಕ್ಕಾಗಿ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಲಾಗುವುದು’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಅಧಿವೇಶನ 5ರಿಂದ

ವಿಧಾನಪರಿಷತ್ ಅಧಿವೇಶನ ಇದೇ 5ರಿಂದ 10 ದಿನ ನಡೆಯಲಿದೆ. ಪರಿಷತ್‌ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ಪಿ.ಆರ್. ರಮೇಶ್ ಮತ್ತು ಮೋಹನ್‌ಕೊಂಡಜ್ಜಿ ಮೊದಲ ದಿನ ಪ್ರಮಾಣ ವಚನ ಸ್ವೀಕರಿಸುವರು. ಬಳಿಕ, ಇತ್ತೀಚೆಗೆ ನಿಧನರಾದ ಹಾಲಿ ಸದಸ್ಯೆ ವಿಮಲಾಗೌಡ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಕಲಾಪವನ್ನು ಮರುದಿನಕ್ಕೆ ಮುಂದೂಡಲಾಗುವುದು ಎಂದು ಸಭಾಪತಿ ತಿಳಿಸಿದರು.

ಮರುದಿನ ಬೆಳಿಗ್ಗೆ 10.30ರಿಂದ ಎರಡೂವರೆ ತಾಸು ವಿಕಾಸಸೌಧದಲ್ಲಿ ಸದಸ್ಯರಿಗೆ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಕುರಿತು ಮಾಹಿತಿ ಕಾರ್ಯಾಗಾರ ನಡೆಯಲಿದೆ. ಬಳಿಕ ಸದನ ಕಲಾಪ ನಡೆಯಲಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry