ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ ಕೌನ್ಸೆಲಿಂಗ್: ಎಲ್ಲಿ, ಏನು, ಎತ್ತ?

ರಾಜ್ಯದ 16 ಕಡೆ ಸಹಾಯ ಕೇಂದ್ರಗಳು
Last Updated 4 ಜೂನ್ 2017, 8:13 IST
ಅಕ್ಷರ ಗಾತ್ರ

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳಿಗೆ ನಡೆಸಲಾದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು, ಕೌನ್ಸೆಲಿಂಗ್‌ ಪ್ರಕ್ರಿಯೆ ಜೂನ್‌ 5ರಿಂದ ಆರಂಭವಾಗುತ್ತದೆ.

ಜೂನ್ 5ರಿಂದ 21ರವರೆಗೆ ದಾಖಲಾತಿ ಪರಿಶೀಲನೆ ಕಾರ್ಯ ನಡೆಯಲಿದೆ. ವಿದ್ಯಾರ್ಥಿ ಎಷ್ಟೇ ವಿಭಾಗಗಳಲ್ಲಿ ರ್‌್ಯಾಂಕ್ ಪಡೆದಿದ್ದರೂ  (ಉದಾಹರಣೆಗೆ: ಎಂಜಿನಿಯರಿಂಗ್‌ ಹಾಗೂ ಬಿ–ಫಾರ್ಮಾ, ಫಾರ್ಮಾ–ಡಿ ಅಥವಾ ಭಾರತೀಯ ವೈದ್ಯ ಪದ್ಧತಿ ಮತ್ತು ಬಿಎಸ್ಸಿ ಕೃಷಿ) ಹಾಗೂ ಯಾವುದೇ ಕೋರ್ಸ್‌ಗೆ ಪ್ರವೇಶ ಪಡೆದರೂ ಒಂದೇ ಬಾರಿ ದಾಖಲಾತಿ ಪರಿಶೀಲನೆ ನಡೆಸಲಾಗುತ್ತದೆ.

2017–18ನೇ ಸಾಲಿಗೆ ಲಭ್ಯ ಇರುವ ಎಂಜಿನಿಯರಿಂಗ್ ಕಾಲೇಜುಗಳ ಸೀಟುಗಳು ಮತ್ತು ಶುಲ್ಕ ಎಷ್ಟು ಎಂಬುದು ಇನ್ನೂ ಅಂತಿಮವಾಗಿಲ್ಲ. ಶುಲ್ಕ ಹೆಚ್ಚಳ ಸಂಬಂಧ ಸರ್ಕಾರ ಮತ್ತು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಮಧ್ಯೆ ಚರ್ಚೆ ನಡೆಯುತ್ತದೆ. ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾದ ನಂತರ ಅಂತಿಮಗೊಳ್ಳುವ ಸಾಧ್ಯತೆ ಇದೆ.

ಸೀಟು ಹಂಚಿಕೆ ಕೌನ್ಸೆಲಿಂಗ್ ನಡೆಸುವ ಕೋರ್ಸ್‌ಗಳು:
* ಎಂಜಿನಿಯರಿಂಗ್ (ಬಿ.ಇ/ ಬಿ.ಟೆಕ್)
* ಆರ್ಕಿಟೆಕ್ಚರ್
* ಬಿ.ಎಸ್ಸಿ (ಕೃಷಿ)
* ಪಶು ವೈದ್ಯ ವಿಜ್ಞಾನ
* ಬಿ–ಫಾರ್ಮಾ
* ಫಾರ್ಮಾ–ಡಿ

ದಾಖಲೆಗಳ ಪರಿಶೀಲನೆ
ಸಿಇಟಿಯಲ್ಲಿ ರ‍್ಯಾಂಕ್ಗಳನ್ನು ಪಡೆದ ವಿದ್ಯಾರ್ಥಿಗಳು ವೃತ್ತಿ ಶಿಕ್ಷಣ ಕೋರ್ಸ್‌ಗಳ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ದಾಖಲೆಗಳನ್ನು ಪರಿಶೀಲಿಸಿಕೊಳ್ಳಬೇಕು. ಬೆಂಗಳೂರು ಸೇರಿ ಪ್ರಾಧಿಕಾರದ ಒಟ್ಟು 16 ಕೇಂದ್ರಗಳ ಪೈಕಿ ವಿದ್ಯಾರ್ಥಿಗಳು ಈಗಾಗಲೇ ಆಯ್ಕೆ ಮಾಡಿಕೊಂಡ ನಿಗದಿತ ಕೇಂದ್ರಕ್ಕೆ ರ‍್ಯಾಂಕ್ ವಾರು ನಿಗದಿ ಪಡಿಸಲಾದ ದಿನಾಂಕ ಮತ್ತು ಸಮಯಕ್ಕೆ ಭೇಟಿ ನೀಡಬೇಕು.
ಯಾವ ಯಾವ ದಾಖಲೆಗಳು ಇರಬೇಕು?
* ಸಾಮಾನ್ಯ ಪ್ರವೇಶ ಪರೀಕ್ಷೆ–2017ಕ್ಕೆ ಭರ್ತಿ ಮಾಡಿ ಸಲ್ಲಿಸಿರುವ ಅರ್ಜಿಯ  ಪ್ರತಿ
* ಶುಲ್ಕ ಪಾವತಿಸಿರುವ ಚಲನ್‌ನ ಮೂಲ ಪ್ರತಿ
* ಸಿಇಟಿ ಪ್ರವೇಶ ಪತ್ರ
* ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಅಂಕಪಟ್ಟಿ
* ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ಅಥವಾ ಸಾರ್ವಜನಿಕ ಶಿಕ್ಷಣ ಜಿಲ್ಲಾ ಉಪನಿರ್ದೇಶಕರಿಂದ ಸಹಿ ಮಾಡಿದ ವ್ಯಾಸಂಗ ಪ್ರಮಾಣ ಪತ್ರ
* ಪಾಸ್‌ಪೋರ್ಟ್ ಅಳತೆಯ ಎರಡು ಭಾವಚಿತ್ರ

ಎಲ್ಲೆಲ್ಲಿ ದಾಖಲಾತಿ ಪರಿಶೀಲನೆ?
* ಬೆಂಗಳೂರು– ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿ, ಮಲ್ಲೇಶ್ವರ
* ದಾವಣಗೆರೆ– ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಸಂಸ್ಥೆ
* ಬಳ್ಳಾರಿ– ಸರ್ಕಾರಿ ಪಾಲಿಟೆಕ್ನಿಕ್, ಹೊಸಪೇಟೆ ರಸ್ತೆ
* ರಾಯಚೂರು– ಕೃಷಿ ವಿಶ್ವವಿದ್ಯಾಲಯ ಕಾಲೇಜು
* ಕಲಬುರ್ಗಿ– ಡಾ.ಫ.ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜು
* ಬೆಳಗಾವಿ– ಜೈನ್ ಎಂಜಿನಿಯರಿಂಗ್ ಕಾಲೇಜು
* ಧಾರವಾಡ– ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಂಜಿನಿಯರಿಂಗ್ ಕಾಲೇಜು
* ಕಾರವಾರ– ಗಿರಿಜಾಬಾಯಿ ಸೈಲ್ ತಾಂತ್ರಿಕ ಸಂಸ್ಥೆ
* ಮಂಗಳೂರು– ಸಹ್ಯಾದ್ರಿ ಎಂಜಿನಿಯರಿಂಗ್– ಮ್ಯಾನೇಜ್‌ಮೆಂಟ್ ಕಾಲೇಜು
* ಶಿವಮೊಗ್ಗ– ಜವಾಹರ್‌ಲಾಲ್ ನೆಹರೂ ನ್ಯಾಷನಲ್ ಎಂಜಿನಿಯರಿಂಗ್ ಕಾಲೇಜು
* ಹಾಸನ– ಸರ್ಕಾರಿ ಎಂಜಿನಿಯರಿಂಗ್ ಕಾಲೇಜು
* ಮೈಸೂರು– ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು
* ತುಮಕೂರು– ಸಿದ್ಧಾರ್ಥ ತಾಂತ್ರಿಕ ಸಂಸ್ಥೆ ಕ್ಯಾಂಪಸ್
* ಬೀದರ್– ಗುರುನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜು
* ಕೊಪ್ಪಳ– ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜು

ಆಯ್ಕೆ ದಾಖಲಿಸಲು ಅವಕಾಶ
ಸರ್ಕಾರದಿಂದ ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಟ ಆಗುತ್ತಲೇ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಕೋರ್ಸ್‌ಗಳಿಗಳಿಗೆ ಆನ್‌ಲೈನ್‌ ಮೂಲಕ ಆಯ್ಕೆಗಳನ್ನು ದಾಖಲಿಸಲು (ಆಪ್ಷನ್ ಎಂಟ್ರಿ) ಅವಕಾಶ ಇದೆ. ವಿದ್ಯಾರ್ಥಿಗಳು ಕಾಲೇಜುವಾರು, ಕೋರ್ಸ್‌ವಾರು, ಪ್ರವರ್ಗವಾರು ಸೀಟುಗಳನ್ನು ದಾಖಲಿಸಲು ಅವಕಾಶ ಇರುತ್ತದೆ. ದಾಖಲಾತಿ ಪರಿಶೀಲನೆ ನಂತರ ಅರ್ಹವಾದ ವಿದ್ಯಾರ್ಥಿಗಳು ಮಾತ್ರ ಆಯ್ಕೆ ದಾಖಲಿಸಲು ಅವಕಾಶ ಸಿಗುತ್ತದೆ.

ಅಣಕು ಸೀಟು ಹಂಚಿಕೆ
ಆಯ್ಕೆ ದಾಖಲಿಸುವ ಅವಕಾಶ ಮುಗಿದ ನಂತರ ಅಣಕು ಸೀಟು ಹಂಚಿಕೆ ಮಾಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಯಾವ ಸೀಟು ದೊರೆಯುತ್ತದೆ ಎಂಬುದು ಇದರಿಂದ ತಿಳಿಯುತ್ತದೆ. ಈ ಸಂದರ್ಭದಲ್ಲಿ ಕಾಲೇಜು ಮತ್ತು ಕೋರ್ಸ್‌ ಬದಲಾಯಿಸಿಕೊಳ್ಳಲೂ ವಿದ್ಯಾರ್ಥಿಗಳಿಗೆ ಅವಕಾಶ ಇರುತ್ತದೆ.

ಮೊದಲ ಸುತ್ತಿನ ಸೀಟು ಹಂಚಿಕೆ
ಸರ್ಕಾರ ಸೀಟ್‌ ಮ್ಯಾಟ್ರಿಕ್ಸ್‌ ಬಿಡುಗಡೆ ಮಾಡಿದ ಬಳಿಕ ಅಭ್ಯರ್ಥಿಗಳ ಮೆರಿಟ್ ಮತ್ತು ಆಪ್ಷನ್ ಎಂಟ್ರಿ ಆಧರಿಸಿ ಆನ್‌ಲೈನ್ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ಮಾಡಲಾಗುತ್ತದೆ. ಸೀಟು ಹಂಚಿಕೆ ಮಾಡಿದ ನಂತರ, ತನಗೆ ಲಭ್ಯವಾದ ಸೀಟು ಬಗ್ಗೆ ವಿದ್ಯಾರ್ಥಿಗೆ ‘ಚಾಯ್ಸ್‌’ ನೀಡುವ ಅವಕಾಶ ಇರುತ್ತದೆ.
ಚಾಯ್ಸ್‌–1: ವಿದ್ಯಾರ್ಥಿಯು ತನಗೆ ದೊರಕಿದ ಸೀಟು ತೃಪ್ತಿಕರವಾಗಿದೆ ಎಂದಾದರೆ ಅದನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಗದಿತ ಬ್ಯಾಂಕ್‌ನಲ್ಲಿ ಶುಲ್ಕ ಪಾವತಿಸಿ, ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕು.
ಚಾಯ್ಸ್–2: ಸಿಕ್ಕಿದ ಸೀಟು ತೃಪ್ತಿಕರವಾಗಿದ್ದರೂ ಇನ್ನೂ ಉತ್ತಮ ಸೀಟಿನ ನಿರೀಕ್ಷೆ ಇದ್ದರೆ ಮುಂದಿನ ಸುತ್ತಿನಲ್ಲಿ ಭಾಗವಹಿಸುತ್ತೇನೆ ಎಂದು ಈ ಆಯ್ಕೆ ಮಾಡಿಕೊಳ್ಳಬಹುದು.
ಚಾಯ್ಸ್‌–3: ದೊರಕಿದ ಸೀಟು ತೃಪ್ತಿಕರವಾಗಿಲ ಎಂದಾದರೆ ಮುಂದಿನ ಸುತ್ತಿನಲ್ಲಿ ಭಾಗವಹಿಸಲು ಈ ಆಯ್ಕೆ ಮಾಡಬಹುದು.
ಚಾಯ್ಸ್–4: ದೊರಕಿದ ಸೀಟು ತೃಪ್ತಿಕರವಾಗಿಲ್ಲ. ಈ ಸೀಟು ಬೇಡ ಮತ್ತು ಮುಂದಿನ ಸುತ್ತಿನಲ್ಲೂ ಯಾವುದೇ ಸೀಟು ಪಡೆಯಲು ಇಷ್ಟವಿಲ್ಲ. ಬೇರೆ ಸಂಸ್ಥೆಯಿಂದ ಸೀಟು ಪಡೆಯುವುದಾದರೆ ಈ ಆಯ್ಕೆ ಮಾಡಿಕೊಳ್ಳಬಹುದು.

ಸೀಟು ವಾಪಸ್ ಮಾಡಿದರೆ ದಂಡ
ಮೊದಲ ಸುತ್ತು ಅಥವಾ ಎರಡನೇ ಸುತ್ತಿನಲ್ಲಿ ಚಾಯ್ಸ್‌–1ನ್ನು ಆಯ್ಕೆ ಮಾಡಿಕೊಂಡು ಸೀಟು ಪಡೆದ ನಂತರ ಸೀಟು ರದ್ದುಗೊಳಿಸಲು ನಿರ್ಣಯಿಸಿದಲ್ಲಿ ಎರಡನೇ ಮುಂದುವರಿದ ಸುತ್ತಿನ ಸೀಟು ಆಯ್ಕೆ ದಾಖಲಿಸುವ ದಿನಾಂಕದೊಳಗೆ ರದ್ದು ಮಾಡಬೇಕು. ಅಂತಹ ಅಭ್ಯರ್ಥಿಗಳಿಗೆ ಪಾವತಿಸಿದ ಮೊತ್ತದಲ್ಲಿ ₹ 5,000 ಕಡಿತ ಮಾಡಿ ಉಳಿದ ಮೊತ್ತ ಹಿಂದಿರುಗಿಸಲಾಗುತ್ತದೆ. ಒಂದು ವೇಳೆ ಎರಡನೇ ಮುಂದುವರಿದ ಸುತ್ತಿನ ನಂತರ ಸೀಟು ರದ್ದುಪಡಿಸಿದಲ್ಲಿ ಪಾವತಿಸಿದ ಪೂರ್ಣ ಶುಲ್ಕ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

ಯಾವ ಕಾಲೇಜು ಎಷ್ಟಿವೆ?
ಎಂಜಿನಿಯರಿಂಗ್ - 210

ಸಂಜೆ ಎಂಜಿನಿಯರಿಂಗ್ - 12

ಆರ್ಕಿಟೆಕ್ಚರ್ -37

ಕೃಷಿ ವಿಜ್ಞಾನ -39

ಫಾರ್ಮಸಿ- 61

ಕೌನ್ಸೆಲಿಂಗ್ ಪ್ರಕ್ರಿಯೆ ವೇಳಾಪಟ್ಟಿ

ಜೂನ್,14: ಸೀಟ್ ಮ್ಯಾಟ್ರಿಕ್ಸ್‌ ಮತ್ತು ಶುಲ್ಕ ಪ್ರಕಟ
ಜೂನ್ 15 ಬೆಳಿಗ್ಗೆ 11ರಿಂದ ಜೂನ್ 23 ಬೆಳಿಗ್ಗೆ 11: ಆಯ್ಕೆ ದಾಖಲಿಸಲು ಅವಕಾಶ (ಆಪ್ಷನ್ ಎಂಟ್ರಿ).
ಜೂನ್ 24, ಸಂಜೆ 4: ಅಣಕು ಸೀಟು ಹಂಚಿಕೆ
ಜೂನ್ 24 ರಾತ್ರಿ 8ರಿಂದ ಜೂನ್ 26 ಬೆಳಿಗ್ಗೆ 11: ಸೀಟು ಆಯ್ಕೆ ತಿದ್ದುಪಡಿಗೆ ಅವಕಾಶ
ಜೂನ್ 27, ಸಂಜೆ 4: ಅಧಿಕೃತ ಸೀಟು ಹಂಚಿಕೆ
ಜೂನ್ 28ರಿಂದ 30: ಆಯ್ಕೆಗಳನ್ನ ಧೃಡೀಕರಿಸುವುದು, ಶುಲ್ಕ ಪಾವತಿಸುವುದು, ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳುವುದು, ಕಾಲೇಜಿನಲ್ಲಿ ಪ್ರವೇಶ ಪಡೆಯುವುದು.

ಖಾಸಗಿ, ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಪ್ರತ್ಯೇಕ ಕೌನ್ಸೆಲಿಂಗ್

ರಾಜ್ಯದ ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಡೀಮ್ಡ್‌ ವಿಶ್ವವಿದ್ಯಾಲಯಗಳು ಎಂಜಿನಿಯರಿಂಗ್ ಪ್ರವೇಶಕ್ಕಾಗಿ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಿದ್ದು, ಪ್ರತ್ಯೇಕವಾಗಿಯೇ ಕೌನ್ಸೆಲಿಂಗ್ ನಡೆಸಲಿವೆ.
ಬೆಂಗಳೂರಿನ ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಶನಿವಾರ ಮೊದಲ ಸುತ್ತಿನ ಎಂಜಿನಿಯರಿಂಗ್ ಸೀಟು ಹಂಚಿಕೆ ಕೌನ್ಸೆಲಿಂಗ್ ಆರಂಭವಾಗಿದೆ.
ಡೀಮ್ಡ್‌ ವಿಶ್ವವಿದ್ಯಾಲಯಗಳು
* ಅಲಯನ್ಸ್‌ ವಿಶ್ವವಿದ್ಯಾಲಯ
* ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ
* ಸಿಎಂಆರ್  ವಿಶ್ವವಿದ್ಯಾಲಯ
* ದಯಾನಂದ ಸಾಗರ್ ವಿಶ್ವವಿದ್ಯಾಲಯ
* ಗಾರ್ಡನ್ ಸಿಟಿ ವಿಶ್ವವಿದ್ಯಾಲಯ
* ಕೆಎಲ್‌ಇ ವಿಶ್ವವಿದ್ಯಾಲಯ
* ಎಂ.ಎಸ್. ರಾಮಯ್ಯ ವಿಶ್ವವಿದ್ಯಾಲಯ
* ಪಿಇಎಸ್ ವಿಶ್ವವಿದ್ಯಾಲಯ
* ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ
* ರೈ ಟೆಕ್ನಾಲಜಿ ವಿಶ್ವವಿದ್ಯಾಲಯ
* ರೇವಾ ವಿಶ್ವವಿದ್ಯಾಲಯ
* ಶ್ರೀನಿವಾಸ ವಿಶ್ವವಿದ್ಯಾಲಯ

ಡೀಮ್ಡ್‌ ವಿಶ್ವವಿದ್ಯಾಲಯಗಳು
* ಜಗದ್ಗುರು ಶ್ರೀ ಶಿವರಾತ್ರೀಶ್ವರ ವಿಶ್ವವಿದ್ಯಾಲಯ, ಮೈಸೂರು
* ಕೆ.ಎಲ್.ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಅಂಡ್ ರಿಸರ್ಚ್
* ನಿಟ್ಟೆ ವಿಶ್ವವಿದ್ಯಾಲಯ
* ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್‌ ಹೈಯರ್ ಎಜುಕೇಷನ್
* ಯೆನಪೋಯಾ ವಿಶ್ವವಿದ್ಯಾಲಯ
* ಕ್ರೈಸ್ಟ್‌ ವಿಶ್ವವಿದ್ಯಾಲಯ
* ಜೈನ್ ವಿಶ್ವವಿದ್ಯಾಲಯ
* ಬಿಎಲ್‌ಡಿಇ ವಿಶ್ವವಿದ್ಯಾಲಯ, ವಿಜಯಪುರ

ಕಾಮೆಡ್‌–ಕೆ ಕೌನ್ಸೆಲಿಂಗ್ ಪ್ರಕ್ರಿಯೆ ಇದೇ 5ರಿಂದ ಆರಂಭ ಸಾಧ್ಯತೆ

ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ನಡೆಸಲಾದ ಕಾಮೆಡ್‌–ಕೆ ಪರೀಕ್ಷೆಯ ಫಲಿತಾಂಶವನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಜೂನ್‌ 5ರಿಂದ ಅಥವಾ 7ರಿಂದ ಆಯ್ಕೆ ದಾಖಲಿಸಲು (ಆಪ್ಷನ್ ಎಂಟ್ರಿ) ಅವಕಾಶ ನೀಡಲಾಗುತ್ತದೆ.

ಕಾಮೆಡ್‌–ಕೆ ವ್ಯಾಪ್ತಿಯಲ್ಲಿ ಸದ್ಯ 143 ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಇದ್ದು, ಕಾಲೇಜು ವಾರು ಲಭ್ಯ ಇರುವ ಸೀಟುಗಳ ಪಟ್ಟಿಯನ್ನು ಪ್ರಕಟಿಸುತ್ತದೆ. ವಿದ್ಯಾರ್ಥಿಗಳು ಎಷ್ಟು ಕಾಲೇಜಿಗೆ ಬೇಕಾದರೂ ಆಯ್ಕೆಗಳನ್ನು ದಾಖಲಿಸಲು ಅವಕಾಶ ಇದೆ. ಇದಕ್ಕೆ ಜೂನ್ 14 ಕೊನೆಯ ದಿನ.
ಜೂನ್‌ 15ರಂದು ಅಣಕು ಸೀಟು  ಹಂಚಿಕೆ ನಡೆಸಲಾಗುತ್ತದೆ. ಆ ಸಂದರ್ಭದಲ್ಲಿ ಕಾಲೇಜುಗಳು ಅಥವಾ ಕೋರ್ಸ್‌ಗಳನ್ನು ಬದಲಾಯಿಸಲು ಅವಕಾಶ ನೀಡಲಾಗುತ್ತದೆ. ಅದಾದ ಎರಡು– ಮೂರು ದಿನಗಳಲ್ಲಿ ಅಧಿಕೃತವಾಗಿ ಸೀಟುಗಳನ್ನು ಹಂಚಲಾಗುತ್ತದೆ.
ಕಾಮೆಡ್‌–ಕೆ ಸೀಟು ಹಂಚಿಕೆ ಕೌನ್ಸೆಲಿಂಗ್‌ಗಾಗಿ ಈ ಹಿಂದೆ ಎಲ್ಲ ವಿದ್ಯಾರ್ಥಿಗಳು ಬೆಂಗಳೂರಿಗೆ ಬರಬೇಕಿತ್ತು. ಆದರೆ ಈಗ ಆನ್‌ಲೈನ್‌ ಕೌನ್ಸೆಲಿಂಗ್‌ ವ್ಯವಸ್ಥೆ ಮಾಡಿದೆ. ವಿದ್ಯಾರ್ಥಿ ಆಯ್ಕೆ ದಾಖಲೆಗೆ ಅನುಗುಣವಾಗಿ ಸೀಟು ಹಂಚಿಕೆ ಮಾಡಲಾಗುತ್ತದೆ. ಅದು ಒಪ್ಪಿತ ಆಗಿದ್ದರೆ ಮಾತ್ರ ಬೆಂಗಳೂರಿಗೆ ಬಂದು, ದಾಖಲೆಗಳನ್ನು ಪರಿಶೀಲನೆ ಮಾಡಿಸಿಕೊಂಡು, ಆ ಸೀಟಿಗೆ ನಿಗದಿ ಮಾಡಿದ ಶುಲ್ಕ ಪಾವತಿಸಬೇಕು.

12 ಸಾವಿರ ಸೀಟುಗಳು
‘ಸದ್ಯದ ಮಾಹಿತಿ ಪ್ರಕಾರ ಈ ವರ್ಷ ಕಾಮೆಡ್‌–ಕೆ ವ್ಯಾಪ್ತಿಯಲ್ಲಿ 143 ಕಾಲೇಜುಗಳು ಮತ್ತು ಅಂದಾಜು 12 ಸಾವಿರ ಸೀಟುಗಳು ಲಭ್ಯ ಇವೆ. ಆಯ್ಕೆ ದಾಖಲಿಸಲು ಅವಕಾಶ ನೀಡುವ ಸಂದರ್ಭದಲ್ಲಿ ಅಧಿಕೃತ ಸಂಖ್ಯೆಗಳನ್ನು ಪ್ರಕಟಿಸಲಾಗುವುದು’ ಎಂದು ಕಾಮೆಡ್‌–ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಎಸ್. ಕುಮಾರ್ ಹೇಳಿದರು.
‘ಎಂಜಿನಿಯರಿಂಗ್ ಕೋರ್ಸ್‌ನ ಶುಲ್ಕ ಇನ್ನೂ ಅಂತಿಮ ಗೊಂಡಿಲ್ಲ. ಆದರೆ, ಕೌನ್ಸೆಲಿಂಗ್ ವಿಳಂಬ ಆಗಬಾರದು ಎಂಬ ದೃಷ್ಟಿಯಿಂದ ಕಳೆದ ವರ್ಷದ ಶುಲ್ಕವನ್ನೇ ಮುಂದುವರಿಸಿದ್ದೇವೆ. ಆದರೆ, ಅಂತಿಮ ಸೀಟು ಹಂಚಿಕೆಯಾಗಿ ವಿದ್ಯಾರ್ಥಿ ಪ್ರವೇಶ ಬಯಸಿ ಬಂದಾಗ ಶುಲ್ಕ ವ್ಯತ್ಯಾಸ ಆಗಿದ್ದರೆ ಹೊಸ ಮಾದರಿಯ ಶುಲ್ಕ ಪಡೆಯಲಾಗುವುದು’ ಎಂದು ಅವರು ಸ್ಪಷ್ಟಪಡಿಸಿದರು.

ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಎಂಜಿನಿಯರಿಂಗ್ ಕಾಲೇಜುಗಳು
ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಕಾಲೇಜುಗಳಿಗೆ ಕರ್ನಾಟಕ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ವೃತ್ತಿಪರ ಕಾಲೇಜುಗಳ ಸಂಘ ಈಗಾಗಲೇ ಪ್ರವೇಶ ಪರೀಕ್ಷೆ ನಡೆಸಿದೆ. ಇದೇ 10ರಂದು ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ.
ಸಂಘದ ವೆಬ್‌ಸೈಟ್‌ನಲ್ಲಿ (http://www.kmca.info) ಇರುವ ಮಾಹಿತಿ ಪ್ರಕಾರ, ಸಂಘದ ವ್ಯಾಪ್ತಿಯ 10 ಕಾಲೇಜುಗಳಿಗೆ ಪ್ರತ್ಯೇಕ ಕೌನ್ಸೆಲಿಂಗ್ ನಡೆಸುತ್ತದೆ.

ಪ್ರಸಕ್ತ ವರ್ಷಕ್ಕೆ ಲಭ್ಯ ಇರುವ ಎಂಜಿನಿಯರಿಂಗ್‌ ಸೀಟುಗಳು ಮತ್ತು ಶುಲ್ಕ ನಿಗದಿ ಇನ್ನೂ ಪ್ರಕಟಿಸಿಲ್ಲ. ಆನ್‌ಲೈನ್‌ ಕೌನ್ಸೆಲಿಂಗ್ ಕುರಿತ ಮಾಹಿತಿಯನ್ನು ಜುಲೈ 2ನೇ ವಾರದಲ್ಲಿ ಪ್ರಕಟಿಸುವುದಾಗಿ ಅಧಿಸೂಚನೆಯಲ್ಲಿ ತಿಳಿಸಿದೆ.

ಅಲ್ಪಸಂಖ್ಯಾತ ಕಾಲೇಜುಗಳು
* ಅಂಜುಮಾನ್ ಇನ್ಸ್‌ಟಿಟ್ಯೂಟ್ ಆಫ್‌ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್, ಭಟ್ಕಳ
* ಬ್ಯಾರೀಸ್ ಇನ್ಸ್‌ಟಿಟ್ಯೂಟ್ ಆಫ್‌ ಟೆಕ್ನಾಲಜಿ, ಮಂಗಳೂರು
* ಕೆನರಾ ಎಂಜಿನಿಯರಿಂಗ್ ಕಾಲೇಜು, ಮಂಗಳೂರು
* ಗುರುನಾನಕ್‌ ದೇವ್‌ ಎಂಜಿನಿಯರಿಂಗ್‌ ಕಾಲೇಜು, ಬೀದರ್
* ಎಚ್‌ಎಂಎಸ್ ಇನ್ಸ್‌ಟಿಟ್ಯೂಟ್ ಅಫ್‌ ಟೆಕ್ನಾಲಜಿ, ತುಮಕೂರು
* ಖಾಜೆ ಬಂದೇ ನವಾಜ್ ಕಾಲೇಜ್ ಆಫ್‌ ಎಂಜಿನಿಯರಿಂಗ್, ಕಲಬುರ್ಗಿ
* ಕೆಸಿಟಿ ಎಂಜಿನಿಯರಿಂಗ್ ಕಾಲೇಜು, ಕಲಬುರ್ಗಿ
* ನ್ಯೂ ಹಾರಿಜನ್ ಕಾಲೇಜ್ ಆಫ್ ಎಂಜಿನಿಯರಿಂಗ್, ಮಂಗಳೂರು
* ಪಿ.ಎ. ಕಾಲೇಜ್‌ ಆಫ್‌ ಎಂಜಿನಿಯರಿಂಗ್, ಮಂಗಳೂರು
* ದಿ ಆಕ್ಸ್‌ಫರ್ಡ್ ಕಾಲೇಜ್ ಆಫ್‌ ಎಂಜಿನಿಯರಿಂಗ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT