ಸಮಗ್ರ ತನಿಖೆ ನಡೆಸಲು ಕೋರಿ ಪೊಲೀಸರಿಗೆ ದೂರು

7

ಸಮಗ್ರ ತನಿಖೆ ನಡೆಸಲು ಕೋರಿ ಪೊಲೀಸರಿಗೆ ದೂರು

Published:
Updated:
ಸಮಗ್ರ ತನಿಖೆ ನಡೆಸಲು ಕೋರಿ ಪೊಲೀಸರಿಗೆ ದೂರು

ಶಿವಮೊಗ್ಗ: ಮೆಗ್ಗಾನ್‌ ಆಸ್ಪತ್ರೆ ಒಳಗೆ ರೋಗಿಯೊಬ್ಬರನ್ನು ಅವರ ಪತ್ನಿ ನೆಲದ ಮೇಲೆ ಎಳೆದುಕೊಂಡು ಹೋಗಿದ್ದ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಕೋರಿ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಬಿ.ವಿ.ಸುಶೀಲ್‌ಕುಮಾರ್ ಶನಿವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ್‌ ಅಶೋಕ್‌ ಖರೆ ಅವರಿಗೆ ದೂರು ಸಲ್ಲಿಸಿದ್ದಾರೆ.

‘ಇಂತಹ ಘಟನೆ ಅಮಾನವೀಯ. ಆದರೆ, ವಿಡಿಯೊ ಚಿತ್ರೀಕರಣ ಪೂರ್ವನಿಯೋಜಿತ ಕೃತ್ಯ ಎನ್ನುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ರೋಗಿ ಕುಟುಂಬ ಹಾಗೂ ವಿಡಿಯೊ ಚಿತ್ರೀಕರಿಸಿದ ವ್ಯಕ್ತಿಯ ವಿಚಾರಣೆ ನಡೆಸಬೇಕು’ ಎಂದು ಕೋರಿದ್ದಾರೆ.

ಮುರಳಿನಾಯ್ಕ ವಿರುದ್ಧ ಅನುಮಾನದ ಹುತ್ತ: ‘ಘಟನೆಯ ವಿಡಿಯೊ ಚಿತ್ರೀಕರಿಸಿದ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕು ಮಲ್ಲಾಪುರದ ಮುರಳಿನಾಯ್ಕ ಅಂದು  ರೋಗಿಯೊಬ್ಬರನ್ನು ನೋಡಲು ಆಸ್ಪತ್ರೆಗೆ ಬಂದಿದ್ದರು. ಪ್ರಚಾರದ ಉದ್ದೇಶಕ್ಕಾಗಿ ಅಮೀರ್‌ ಸಾಬ್‌ ಅವರನ್ನು ಎಳೆದುಕೊಂಡು ಹೋಗಲು ಫಾಮಿದಾ ಅವರನ್ನು ಪ್ರಚೋದಿಸಿದ್ದರೇ ಎನ್ನುವ ಅನುಮಾನ ಮೂಡಿದೆ. ಹಾಗಾಗಿ, ಘಟನೆ ಕುರಿತು ಸಮಗ್ರ ವಿಚಾರಣೆ ನಡೆಸಬೇಕು’ ಎಂದು ಆಸ್ಪತ್ರೆಯ ಸಿಬ್ಬಂದಿ ಬೆಳಿಗ್ಗೆ ಸಂಸ್ಥೆಯ ನಿರ್ದೇಶಕರಿಗೆ ಮನವಿ ಮಾಡಿದ್ದರು.

ಶುಶ್ರೂಷಕಿ ಅಮಾನತು: ಘಟನೆ ಸಂಬಂಧ ಶುಕ್ರವಾರ ನಾಲ್ವರು ಹೊರಗುತ್ತಿಗೆ ಸಿಬ್ಬಂದಿ ಅಮಾನತು ಮಾಡಿದ್ದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕರು ಶನಿವಾರ ಕಾಯಂ ಶುಶ್ರೂಷಕಿ ಚೇತನಾ ಕುಮಾರಿ ಎಂಬುವವರನ್ನು ಅಮಾನತು ಮಾಡಿದ್ದಾರೆ.

ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ: ಘಟನೆ ಸಂಬಂಧ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಶನಿವಾರ ಸಮಗ್ರ ಮಾಹಿತಿ ಪಡೆದರು. ಆಸ್ಪತ್ರೆಯ ಬಹುತೇಕ ವೈದ್ಯರು ಖಾಸಗಿ ನರ್ಸಿಂಗ್‌ ಹೋಂ ನಡೆಸುತ್ತಿದ್ದು, ರೋಗಿಗಳನ್ನು ಅಲ್ಲಿಗೆ ದಾಖಲಿಸಲು ಒತ್ತಡ ಹೇರುತ್ತಾರೆ ಎನ್ನುವ ದೂರುಗಳು ಬಂದಿವೆ. ಎಲ್ಲ ನ್ಯೂನತೆಗಳನ್ನು ತಕ್ಷಣ ಸರಿಪಡಿಸಬೇಕು ಎಂದು ನಿರ್ದೇಶಕರಿಗೆ ಸೂಚಿಸಿದರು.

ಭಾರಿ ಬದಲಾವಣೆ:  ಹಲವು ವರ್ಷಗಳಿಂದ ಆಸ್ಪತ್ರೆಯ ಒಂದೇ ವಿಭಾಗದಲ್ಲಿ ಬೀಡುಬಿಟ್ಟಿದ್ದ ಹಲವು ಸಿಬ್ಬಂದಿಯನ್ನು ಬೇರೆ ಕಡೆಗೆ ನಿಯೋಜಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಘಟನೆ ಹಿನ್ನೆಲೆ: ಶ್ವಾಸಕೋಶ ಸೋಂಕು, ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿದ್ದ ಅಮೀರ್ ಸಾಬ್‌ ಅವರನ್ನು ಕಳೆದ ತಿಂಗಳ 25ರಂದು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 30ರಂದು ಸ್ಕ್ಯಾನಿಂಗ್‌ಗೆ ಕರೆದುಕೊಂಡು ಹೋಗಲು ಅಲ್ಲಿನ ಸಿಬ್ಬಂದಿ ಗಾಲಿಕುರ್ಚಿ ನೀಡದ ಕಾರಣ ಅವರ ಪತ್ನಿ ಫಾಮಿದಾ ಪತಿಯ ಕಾಲುಗಳನ್ನು ಹಿಡಿದು ನೆಲೆದ ಮೇಲೆ ಎಳೆದುಕೊಂಡು ಹೋಗಿದ್ದರು. ಆಸ್ಪ ತ್ರೆಯ ಸಹ ರೋಗಿಯೊಬ್ಬರು ತೆಗೆದ ವಿಡಿಯೊ ತುಣುಕು ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಪ್ರತ್ಯೇಕ ಪ್ರತಿಭಟನೆ:ಘಟನೆ ಖಂಡಿಸಿ ಶನಿವಾರ ಬಿಜೆಪಿ, ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ, ಭಾರತ ಸಂವಿಧಾನ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

ಹಣ ದುರುಪಯೋಗ: ಡಿಎಚ್‌ಒ ಅಮಾನತುಶಿವಮೊಗ್ಗ: ಹಣ ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಅವರನ್ನು  ಅಮಾನತು ಮಾಡಿ ಆರೋಗ್ಯ ಇಲಾಖೆ ಆಯುಕ್ತ ಸುಬೋಧ್‌ ಯಾದವ್ ಆದೇಶ ಹೊರಡಿಸಿದ್ದಾರೆ.

ಇಲಾಖೆಯ ವಹಿವಾಟಿಗಾಗಿ ಬ್ಯಾಂಕ್‌ಗೆ ನೀಡುವ ಮಾದರಿ ಸಹಿಯನ್ನು ಹಲವು ಬಾರಿ ಬದಲಿಸುವ ಮೂಲಕ ನಿಯಮಬಾಹಿರವಾಗಿ ಹಲವರಿಗೆ ಚೆಕ್‌ ನೀಡಿದ್ದಾರೆ.  ನಗರದ ಶಂಕರ ಕಣ್ಣಿನ ಆಸ್ಪತ್ರೆಗೆ ನೀಡಿದ ₹ 13,38,800 ಮೊತ್ತದ ಚೆಕ್‌ನಲ್ಲಿ ₹ 97,700 ಹಾಗೂ ಸ್ವಂತ ಚೆಕ್‌ಗಳ ಮೂಲಕ ನೀಡಿದ ₹ 8,59,518 ದುರುಪಯೋಗ ಮಾಡಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ಮುಖ್ಯ ಆರ್ಥಿಕ ಅಧಿಕಾರಿ ನೀಡಿದ ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆ ಅವ್ಯವಸ್ಥೆ ಕುರಿತು ವಿಚಾರಣೆ ನಡೆಸಲು ಸೂಚಿಸಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ವರದಿ ತರಿಸಿ ಕೊಂಡು ಕ್ರಮ ಕೈಗೊಳ್ಳಲಾಗುವುದು

ಸಿದ್ದರಾಮಯ್ಯ,ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry