ಸರ್ಕಾರ ಹಣಿಯಲು ಬಿಜೆಪಿ– ಜೆಡಿಎಸ್‌ ತಂತ್ರ

7

ಸರ್ಕಾರ ಹಣಿಯಲು ಬಿಜೆಪಿ– ಜೆಡಿಎಸ್‌ ತಂತ್ರ

Published:
Updated:
ಸರ್ಕಾರ ಹಣಿಯಲು ಬಿಜೆಪಿ– ಜೆಡಿಎಸ್‌ ತಂತ್ರ

ಬೆಂಗಳೂರು: ವಿಧಾನಮಂಡಲ ಅಧಿವೇಶನ ಜೂನ್‌ 5ರಿಂದ ಆರಂಭವಾಗಲಿದ್ದು, ನಾಲ್ಕು ವರ್ಷ ಪೂರೈಸಿದ ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳನ್ನು  ಎತ್ತಿ ತೋರಿಸಲು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸಜ್ಜಾಗಿವೆ.

ಹತ್ತು ದಿನ ನಡೆಯಲಿರುವ ಅಧಿವೇಶನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದ, ಗದ್ದಲ ನಡೆಯುವ ಸಾಧ್ಯತೆಗಳು ನಿಚ್ಚಳವಾಗಿದೆ. ವಿಧಾನಸಭೆ ಚುನಾವಣೆಗೆ ಕೆಲವು ತಿಂಗಳು ಮಾತ್ರ ಉಳಿದಿರುವುದರಿಂದ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿ, ರಾಜಕೀಯ ಲಾಭ ಮಾಡಿಕೊಳ್ಳಲು ವಿರೋಧ ಪಕ್ಷಗಳು ತಂತ್ರ ರೂಪಿಸಿವೆ. ವಿರೋಧ ಪಕ್ಷಗಳನ್ನು ಹಣಿಯಲು ಆಡಳಿತ ಪಕ್ಷವೂ ಪ್ರತಿ ತಂತ್ರ  ರೂಪಿಸುತ್ತಿದೆ.

ಆಹಾರ ಇಲಾಖೆ ಆಯುಕ್ತರಾಗಿದ್ದ ಅನುರಾಗ್‌ ತಿವಾರಿ ಅಸಹಜ ಸಾವು, ಹಿರಿಯ ಅಧಿಕಾರಿಗಳಿಗೆ ಕಿರುಕುಳ, ಭ್ರಷ್ಟಾಚಾರ ಹಗರಣ, ಕೆಲವು ಅತ್ಯಾಚಾರ, ಕೊಲೆ ಪ್ರಕರಣಗಳನ್ನು ಪ್ರಸ್ತಾಪಿಸಿ, ಕಾನೂನು– ಸುವ್ಯವಸ್ಥೆ ಹದಗೆಟ್ಟಿದೆ ಎಂದು ಪ್ರತಿಪಕ್ಷಗಳು ಗದ್ದಲ ಎಬ್ಬಿಸಲಿವೆ.

‘ಆಹಾರ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹೊರಹಾಕಲು ಮುಂದಾಗಿದ್ದೇ ಅನುರಾಗ್‌ ಸಾವಿಗೆ ಕಾರಣ’ ಎಂದು ಅವರ ಸಹೋದರ ಮಯಾಂಕ್ ತಿವಾರಿ ಮಾಡಿರುವ ಆರೋಪ ಉಲ್ಲೇಖಿಸಿ, ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಎಂದೂ ವಿರೋಧ ಪಕ್ಷಗಳು ವಾಗ್ದಾಳಿ ನಡೆಸುವ ಸಂಭವವಿದೆ.

ಬರ ಪರಿಸ್ಥಿತಿ ಸಮರ್ಥವಾಗಿ ನಿರ್ವಹಿಸಲು ಸರ್ಕಾರ ವಿಫಲವಾಗಿದೆ. ಬರಪೀಡಿತ ತಾಲ್ಲೂಕುಗಳಲ್ಲಿ ಕುಡಿಯುವ ನೀರು, ಮೇವು, ಉದ್ಯೋಗ ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತಿರುವುದು ವಿರೋಧ  ಪಕ್ಷಗಳಿಗೆ  ಸರ್ಕಾರವನ್ನು ಹಣಿಯಲು ದಾರಿ ಆಗಲಿದೆ.

ಈಗಾಗಲೇ ಬಿಜೆಪಿ ನಾಯಕರು ರಾಜ್ಯ ಪ್ರವಾಸ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಯಾವ ಜಿಲ್ಲೆಗಳಲ್ಲಿ  ಕುಡಿಯುವ ನೀರಿಗೆ ತೊಂದರೆಯಿದೆ, ಮೇವು, ನೀರು ಇಲ್ಲದೆ ಜಾನುವಾರುಗಳನ್ನು ಮಾರಲಾಗುತ್ತಿದೆ. ಕೂಲಿ ಇಲ್ಲದೆ ಜನರು ಗುಳೆ ಹೋಗುತ್ತಿದ್ದಾರೆ ಎಂಬ ಮಾಹಿತಿ ಕಲೆ ಹಾಕಿದೆ. ಅದನ್ನು ಸದನದ ಮುಂದಿಡಲು ತೀರ್ಮಾನಿಸಿದ್ದಾರೆ. ಜಿಎಸ್‌ಟಿ, ರೈತರ ಸಾಲಮನ್ನಾ ವಿಷಯವನ್ನು ಪ್ರಮುಖವಾಗಿ ತೆಗೆದುಕೊಂಡು ಕೋಲಾಹಲ ಸೃಷ್ಟಿಸಲು ಜೆಡಿಎಸ್‌ ಅಣಿಯಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪರಸ್ಪರ ಆರೋಪ ಮತ್ತು ಪ್ರತ್ಯಾರೋಪದಿಂದ ಸಂಕಷ್ಟದಲ್ಲಿ ಸಿಲುಕಿರುವ ರೈತರಿಗೆ ಬೆಳೆ ಪರಿಹಾರ ನೀಡಿಕೆಯಲ್ಲಿ ಹಿನ್ನಡೆ ಉಂಟಾಗಿದೆ ಎಂದು ರಾದ್ಧಾಂತ ಸೃಷ್ಟಿಸಲು ಜೆಡಿಎಸ್‌ ಚಿಂತಿಸಿದೆ.

ಅಹಿಂದ ಅಡಿ ವಿವಿಧ ಯೋಜನೆಗಳನ್ನು ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರೈತರನ್ನೂ ಆ ವರ್ಗಕ್ಕೆ ಸೇರಿಸಿಕೊಳ್ಳಬೇಕು ಎನ್ನುವುದು ಆ ಪಕ್ಷದ ವಾದ. ಜಿಎಸ್‌ಟಿ ವಿಷಯವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ರಾಜ್ಯದ ಹಿತಾಸಕ್ತಿಗೆ ಮಾರಕವಾಗಿರುವ ಜಿಎಸ್‌ಟಿಗೆ ಸರ್ಕಾರ ಮೌನ ಸಮ್ಮತಿ ನೀಡಿದೆ ಎಂದು ಆರೋಪಿಸಿ ಕೋಲಾಹಲ ಉಂಟು ಮಾಡಲು ಉದ್ದೇಶಿಸಿದೆ.

ರಾಜಕೀಯ ವಿದ್ಯಮಾನ

ಕಳೆದ ಅಧಿವೇಶನ ಮತ್ತು ಈ ಅಧಿವೇಶನದ ಮಧ್ಯೆ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದಲ್ಲಿ ‘ಒಗ್ಗಟ್ಟು’ ವಿಷಯದಲ್ಲಿ ಆಂತರಿಕ ಬೆಳವಣಿಗೆಗಳು ಘಟಿಸಿವೆ. ಕಾಂಗ್ರೆಸ್‌ ನಾಯಕತ್ವದ ವಿವಾದ ಸುಖಾಂತ್ಯ ಕಂಡಿದ್ದರೂ, ಅಸಮಾಧಾನ ತಣ್ಣಗಾಗಿಲ್ಲ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ವಿರುದ್ಧ ಗುಡುಗಿದ್ದ  ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ, ಪಕ್ಷದ ವರಿಷ್ಠರ ಎಚ್ಚರಿಕೆ ಬಳಿಕ ಸಮಾಧಾನಗೊಂಡಿದ್ದಾರೆ. ಜೆಡಿಎಸ್‌ನಲ್ಲೂ ಅತೃಪ್ತಿ ಹೊಗೆಯಾಡುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry