ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವಿಎಂ ದುರ್ಬಳಕೆ ಸವಾಲು ಯಂತ್ರದತ್ತ ಸುಳಿಯದ ಪಕ್ಷಗಳು!

Last Updated 4 ಜೂನ್ 2017, 8:14 IST
ಅಕ್ಷರ ಗಾತ್ರ

ನವದೆಹಲಿ: ಎಲೆಕ್ಟ್ರಾನಿಕ್‌ ಮತಯಂತ್ರಗಳ (ಇವಿಎಂ) ವಿಶ್ವಾಸಾರ್ಹತೆ ಬಗ್ಗೆ 12ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಪ್ರಶ್ನೆಗಳನ್ನು ಎತ್ತಿದ್ದವು.
ಆದರೆ, ಅವುಗಳನ್ನು ದುರ್ಬಳಕೆ ಮಾಡಬಹುದು ಎಂದು ಸಾಬೀತು ಪಡಿಸುವಂತೆ ಚುನಾವಣಾ ಆಯೋಗ ಎಸೆದಿದ್ದ ಸವಾಲನ್ನು ಸ್ವೀಕರಿಸಿ, ಅದನ್ನು ಸಾಧಿಸಲು ಯಾವ ಪಕ್ಷಕ್ಕೂ ಸಾಧ್ಯವಾಗಿಲ್ಲ!

ಆಯೋಗ ನೀಡಿದ್ದ ಸವಾಲನ್ನು ಸಿಪಿಎಂ ಮತ್ತು ಎನ್‌ಸಿಪಿಗಳು ಸ್ವೀಕರಿಸಿದ್ದವಾದರೂ, ಶನಿವಾರ ಆಯೋಜಿಸಲಾಗಿದ್ದ ಪರೀಕ್ಷೆಯಲ್ಲಿ ಅವುಗಳೂ ಭಾಗವಹಿಸಲಿಲ್ಲ.

ಪರೀಕ್ಷೆ ಅವಧಿ ಮುಗಿದ ನಂತರ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ನಸೀಮ್‌ ಜೈದಿ, ‘ಆಯೋಗ ಬಳಸುತ್ತಿರುವ ಇವಿಎಂಗಳನ್ನು ದುರ್ಬಳಕೆ ಮಾಡಲು ಸಾಧ್ಯವೇ ಇಲ್ಲ. ಭವಿಷ್ಯದ ಎಲ್ಲ ಚುನಾವಣೆಗಳಲ್ಲಿ ಮತದಾನ ದೃಢೀಕರಣ ರಸೀದಿ ಮುದ್ರಣ ಯಂತ್ರಗಳನ್ನು ಬಳಸುವುದರಿಂದ ಈವಿಚಾರ ಅಪ್ರಸ್ತುತವಾಗಲಿದೆ’ ಎಂದರು.

ಈ ಸವಾಲಿನಲ್ಲಿ ಭಾಗವಹಿಸಲು ತಾನು ಬಯಸುವುದಿಲ್ಲ. ಆದರೆ ಇವಿಎಂ ಪ್ರಕ್ರಿಯೆ ತಿಳಿಯಲು ಇಚ್ಛಿಸುವುದಾಗಿ ಸಿಪಿಎಂ ಹೇಳಿತ್ತು. ಎನ್‌ಸಿಪಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಸವಾಲಿನ ಸಾಬೀತಿಗೆ ಈ ಎರಡು ಪಕ್ಷಗಳಿಗೆ ನಾಲ್ಕು ಗಂಟೆಗಳ ಕಾಲಾವಕಾಶವನ್ನು ಆಯೋಗ ನೀಡಿತ್ತು. ಇದಕ್ಕಾಗಿ ಇತ್ತೀಚೆಗೆ ಚುನಾವಣೆ ನಡೆದ ಉತ್ತರಪ್ರದೇಶ, ಪಂಜಾಬ್‌, ಉತ್ತರಾಖಂಡಗಳಲ್ಲಿ ಬಳಸಿದ್ದ ನಾಲ್ಕು ಮತಯಂತ್ರಗಳನ್ನೂ ಒದಗಿಸಿತ್ತು.

ಸಿಪಿಎಂ ಪ್ರತಿನಿಧಿಗಳಿಗೆ ಇವಿಎಂಗಳ ಬಗ್ಗೆ ವಿಸ್ತೃತವಾಗಿ ಪ್ರಾತ್ಯಕ್ಷಿಕೆ ನೀಡಲಾಯಿತು. ಇದಕ್ಕೆ ಅವರು ತೃಪ್ತಿ ವ್ಯಕ್ತಪಡಿಸಿದರು ಎಂದು ಜೈದಿ ಹೇಳಿದರು.

ಎಚ್ಚರಿಕೆ: ಆಯೋಗ ನೀಡಿದ್ದ ಸವಾಲಿನ ಕುರಿತಾಗಿ ಟೀಕೆ ಮಾಡುವ ಮೂಲಕ ಉತ್ತರಾಖಂಡ ಹೈಕೋರ್ಟ್‌ನ ಆದೇಶವನ್ನು ಯಾರಾದರೂ ಉಲ್ಲಂಘಿಸಿದರೆ, ಅಂಥವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಚುನಾವಣಾ ಆಯೋಗ ನೀಡಿದೆ.

ಆಯೋಗ ಮುಂದಿಟ್ಟಿದ್ದ ಸವಾಲಿನ ಸಂವಿಧಾನ ಬದ್ಧತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ್ದ ಉತ್ತರಾಖಂಡ ಹೈಕೋರ್ಟ್‌,  ಇವಿಎಂಗಳ ನಿಷ್ಪಕ್ಷಪಾತ ಕಾರ್ಯನಿರ್ವಹಣೆಯ ಬಗ್ಗೆ ಸಂದೇಹ ಪಡಲು ಆಸ್ಪದ ಇಲ್ಲ ಎಂದು ಹೇಳಿತ್ತು.

*
ಮುಂದಿನ ದಿನಗಳಲ್ಲಿ ಇವಿಎಂಗಳ ವಿಶ್ವಾಸಾರ್ಹತೆಯ ಪರೀಕ್ಷೆಗಾಗಿ ಇಂತಹ ಸವಾಲುಗಳನ್ನು ಆಯೋಜಿಸುವುದಿಲ್ಲ.
-ನಸೀಮ್‌ ಜೈದಿ,
ಮುಖ್ಯ ಚುನಾವಣಾ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT