ಪ್ರತ್ಯೇಕತಾವಾದಿ ಮುಖಂಡರ ಮೇಲೆ ಎನ್‌ಐಎ ದಾಳಿ

7
ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಪ್ರಚೋದನೆ ನೀಡಲು ಉಗ್ರ ಸಂಘಟನೆಗಳಿಂದ ಹಣ ಪಡೆದ ಆರೋಪ

ಪ್ರತ್ಯೇಕತಾವಾದಿ ಮುಖಂಡರ ಮೇಲೆ ಎನ್‌ಐಎ ದಾಳಿ

Published:
Updated:
ಪ್ರತ್ಯೇಕತಾವಾದಿ ಮುಖಂಡರ ಮೇಲೆ ಎನ್‌ಐಎ ದಾಳಿ

ಶ್ರೀನಗರ/ ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಪ್ರತ್ಯೇಕತಾವಾದಿ ಸಂಘಟನೆಗಳು ಹಣಕಾಸಿನ ನೆರವು ಪಡೆದಿವೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ಕಾಶ್ಮೀರ, ದೆಹಲಿ ಮತ್ತು ಹರಿಯಾಣದ 23 ಕಡೆಗಳಲ್ಲಿ ಹಠಾತ್‌ ದಾಳಿ ನಡೆಸಿದೆ.

ಪ್ರಕರಣದ ಸಂಬಂಧ ಎನ್‌ಐಎ, ಈ ವಾರದ ಆರಂಭದಲ್ಲಿ ಎಫ್‌ಐಆರ್ ದಾಖಲಿಸಿತ್ತು. ಕಾಶ್ಮೀರ ಕಣಿವೆಯ ವಿವಿಧ ಕಡೆಗಳಲ್ಲಿ ನಡೆದ ದಾಳಿಯಲ್ಲಿ ₹1.5 ಕೋಟಿ ನಗದು ಮತ್ತು ಹಲವು ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಇವುಗಳ ಪರಿಶೀಲನೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದೇ ಮೊದಲು: 1990ರ ದಶಕದಲ್ಲಿ ಉಗ್ರರ ಉಪಟಳ ಹೆಚ್ಚಳವಾದ ನಂತರ, ಕಾಶ್ಮೀರದಲ್ಲಿ  ಭಯೋತ್ಪಾದನೆಗೆ ಕುಮ್ಮಕ್ಕು ನೀಡಲು  ಹಣಕಾಸು ನೆರವು ಪಡೆದ ಆರೋಪದಲ್ಲಿ ಪ್ರತ್ಯೇಕತಾವಾದಿಗಳ ಮೇಲೆ ನಡೆಯುತ್ತಿರುವ ದಾಳಿ ಇದೇ ಮೊದಲು.

ಆದಾಯ ತೆರಿಗೆ ಇಲಾಖೆಯು 2002ರಲ್ಲಿ ಗಿಲಾನಿ ಸೇರಿದಂತೆ ಪ್ರತ್ಯೇಕತಾವಾದಿ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿ, ನಗದು ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಆದರೆ, ಯಾರ ವಿರುದ್ಧವೂ ಕ್ರಿಮಿನಲ್‌ ಪ್ರಕರಣ ದಾಖಲಾಗಿರಲಿಲ್ಲ.

ಯಾರ ಹೆಸರೂ ಇಲ್ಲ: ಎನ್‌ಐಎ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಯಾವೊಬ್ಬ ಪ್ರತ್ಯೇಕತಾವಾದಿ ಮುಖಂಡರ ಹೆಸರಿಲ್ಲ. ಆದರೆ, ಹುರಿಯತ್‌ ಕಾನ್ಫರೆನ್ಸ್‌ (ಗಿಲಾನಿ ಮತ್ತು ಮಿರ್ವಾಜ್‌ ಉಮರ್‌ ಫಾರೂಕ್‌ ನೇತೃತ್ವದ), ಹಿಜ್ಬುಲ್‌ ಮುಜಾಹಿದೀನ್‌, ದುಖ್ತರಾನ್‌–ಎ–ಮಿಲ್ಲತ್‌ ಮತ್ತು ಲಷ್ಕರ್‌–ಎ– ತಯಬಾ ಸಂಘಟನೆಗಳ ಹೆಸರುಗಳಿವೆ. ಜೊತೆಗೆ, ಪಾಕಿಸ್ತಾನದ ಜಮಾತ್‌ ಉಲ್‌ ದುವಾ ಸಂಘಟನೆ ಮುಖ್ಯಸ್ಥ ಹಫೀಜ್‌ ಸೈಯದ್‌ ಹೆಸರನ್ನೂ ಉಲ್ಲೇಖಿಸಲಾಗಿದೆ.

ಈ ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ್ದ ಎನ್‌ಐಎ, ದೆಹಲಿ, ಹರಿಯಾಣಗಳ ಎಂಟು ಹವಾಲಾ ಡೀಲರ್‌ಗಳು ಮತ್ತು ವ್ಯಾಪಾರಿಗಳನ್ನು  ಗುರಿಯಾಗಿಸಿಕೊಂಡು  ದಾಳಿ ನಡೆಸಿತ್ತು.

ಮೂವರು ಪ್ರತ್ಯೇಕತಾವಾದಿ ನಾಯಕರಾದ ನಯೀಮ್‌ ಖಾನ್‌ (ಪಾಕ್‌ ಮೂಲದ ಭಯೋತ್ಪಾದಕ ಸಂಘಟನೆಗಳಿಂದ ಹಣ ಪಡೆದಿದ್ದನ್ನು ಮಾರುವೇಷದ ಕಾರ್ಯಾಚರಣೆಯಲ್ಲಿ ಈತ ಒಪ್ಪಿಕೊಂಡಿದ್ದ), ಫರೂಕ್‌ ಅಹಮದ್‌ ದಾರ್‌ ಅಲಿಯಾಸ್‌ ಬಿಟ್ಟಾ ಕರಾಟೆ ಮತ್ತು ಗಾಜಿ ಜಾವೇದ್‌  ಬಾಬಾ ಅವರನ್ನು ವಿಚಾರಣೆಗೆ ಒಳಪಡಿಸಿದ ನಂತರ ಈ ದಾಳಿ ನಡೆಸಲಾಗಿತ್ತು.

ಪ್ರತ್ಯೇಕತಾವಾದಿ ಸಂಘಟನೆಗಳು ಪಾಕಿಸ್ತಾನದ ಲಷ್ಕರ್‌–ಎ ತಯಬಾ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ನಿಂದ ಹಣ ಪಡೆದು ಕಾಶ್ಮೀರ ಕಣಿವೆಯಲ್ಲಿ ಕಲ್ಲು ತೂರಾಟ ಸೇರಿದಂತೆ ವಿಧ್ವಂಸಕ ಚಟುವಟಿಕೆಗಳನ್ನು ನಡೆಸುತ್ತಿವೆ ಎಂದು ಆರೋಪಿಸಲಾಗಿದೆ.

ಗುರಿಯಾದವರು

ತೀವ್ರವಾದಿ ನಾಯಕ ಸೈಯದ್‌ ಅಲಿ ಷಾ ಗಿಲಾನಿ ಅವರ ಅಳಿಯ ಅಲ್ತಾಫ್‌ ಫಂತೂಷ್‌, ಉದ್ಯಮಿ ಝಹೂರ್‌ ವಾಟಾಳಿ,  ಅವಾಮಿ ಆ್ಯಕ್ಷನ್‌ ಕಮಿಟಿಯ ಮುಖಂಡ ಶಾಹಿದ್‌ ಉಲ್‌ ಇಸ್ಲಾಂ ಹಾಗೂ ಹುರಿಯತ್‌ ಕಾನ್ಫರೆನ್ಸ್‌ ಮತ್ತು ಜಮ್ಮು–ಕಾಶ್ಮೀರ ಲಿಬರೇಷನ್‌ ಫ್ರಂಟ್‌ಗಳ  2ನೇ ಹಂತದ ಕೆಲವು ಮುಖಂಡರು.

ಎಚ್ಚರಿಕೆ: ದಾಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪ್ರತ್ಯೇಕತಾವಾದಿಗಳು, ಕೇಂದ್ರ ಉಗ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಉಗ್ರರ ದಾಳಿ: ಇಬ್ಬರು ಯೋಧರ ಸಾವು

ಶ್ರೀನಗರ/ಜಮ್ಮು:
ಕುಲ್ಗಮ್‌ ಜಿಲ್ಲೆಯಲ್ಲಿ ಹಾದು ಹೋಗುವ  ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇನಾ ವಾಹನಗಳ ಮೇಲೆ ಉಗ್ರರು ಶನಿವಾರ ನಡೆಸಿದ ದಾಳಿಯಲ್ಲಿ ಇಬ್ಬರು ಯೋಧರು ಮೃತಪಟ್ಟಿದ್ದಾರೆ. ಇತರ ನಾಲ್ವರು ಗಾಯಗೊಂಡಿದ್ದಾರೆ.

ಖಾಜಿಗುಂಡ್‌ ಪ್ರದೇಶದಲ್ಲಿರುವ ಟೋಲ್‌ ಸಂಗ್ರಹ ಕೇಂದ್ರದ ಬಳಿ ನಡೆದ  ದಾಳಿಯಲ್ಲಿ ಆರು ಸಿಬ್ಬಂದಿ ಗಾಯಗೊಂಡರು. ಅವರನ್ನು ತಕ್ಷಣ ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ತೀವ್ರ ಗಾಯಗಳಿಂದಾಗಿ ಇಬ್ಬರು ಮೃತಪಟ್ಟರು. ಎಂದು ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.

ದಾಳಿಕೋರರ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನ ಸೇನೆ ಶನಿವಾರ ಎರಡು ಬಾರಿ ಕದನವಿರಾಮ ಉಲ್ಲಂಘಿಸಿದೆ. ಪೂಂಚ್‌ ಜಿಲ್ಲೆಯ ಎರಡು ವಲಯಗಳಲ್ಲಿ(ಕೃಷ್ಣಾ ಘಾಟಿ ಮತ್ತು ಪೂಂಚ್‌) ಭಾರತೀಯ ಸೇನಾ ಠಾಣೆ ಮತ್ತು ನಾಗರಿಕರು ನೆಲೆಸಿರುವ ಪ್ರದೇಶಗಳ ಮೇಲೆ ಪಾಕ್‌ ಸೇನೆ ನಡೆಸಿದ ಷೆಲ್‌ ದಾಳಿಯಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ.

ಶನಿವಾರ ಬೆಳಿಗ್ಗೆ 9.30 ಗಂಟೆಗೆ ಕೃಷ್ಣಾ ಘಾಟಿ ವಲಯಲ್ಲಿ ಪಾಕ್‌ ಸೇನೆ ಗುಂಡಿನ ದಾಳಿ ಆರಂಭಿಸಿದೆ. ಶುಕ್ರವಾರ ರಾತ್ರಿ 11 ಗಂಟೆಯಿಂದ ಪೂಂಚ್‌ ವಲಯದಲ್ಲಿ ದಾಳಿ ನಡೆಸುತ್ತಿದೆ ಎಂದು ಸೇನಾ ವಕ್ತಾರರೊಬ್ಬರು ಹೇಳಿದ್ದಾರೆ. ಭಾರತೀಯ ಸೇನೆ ಎರಡೂ ಕಡೆ ತೀವ್ರ ಪ್ರತಿದಾಳಿ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry