ಉನ್ನತ ಅಧಿಕಾರಿಗಳ ಸಭೆ

7

ಉನ್ನತ ಅಧಿಕಾರಿಗಳ ಸಭೆ

Published:
Updated:
ಉನ್ನತ ಅಧಿಕಾರಿಗಳ ಸಭೆ

ಬೆಂಗಳೂರು: ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಆಡಳಿತ ವ್ಯಾಪ್ತಿಯಲ್ಲಿರುವ  ದಾಂಡೇಲಿ ವನ್ಯಧಾಮದ ಕ್ಯಾಸಲ್‌ರಾಕ್‌ ವಲಯದಲ್ಲಿ ಅನುಮತಿ ಇಲ್ಲದೆ ‘ಕ್ಯಾನೋಪಿ ವಾಕ್’ ಕಾಮಗಾರಿ ನಡೆಸಿರುವ ಆರೋಪದ ಬಗ್ಗೆ ಚರ್ಚಿಸಲು ರಾಜ್ಯ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಶನಿವಾರ ವಿಶೇಷ ಸಭೆ ನಡೆಸಿದರು.

ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿ ಪಡೆಯದೆಯೇ ‘ಕ್ಯಾನೋಪಿ ವಾಕ್‌’  ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದು ಆರೋಪಿಸಿ ನಗರದ ವನ್ಯಜೀವಿ ಕಾರ್ಯಕರ್ತರೊಬ್ಬರು  ಪ್ರಧಾನ ಮಂತ್ರಿಗೆ ಹಾಗೂ ಸುಪ್ರೀಂ ಕೋರ್ಟ್‌ ರಚಿಸಿರುವ ಕೇಂದ್ರೀಯ ಉನ್ನತಾಧಿಕಾರ ಸಮಿತಿಗೆ (ಸಿಇಸಿ) ದೂರು ಸಲ್ಲಿಸಿದ್ದರು. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಪ್ರಧಾನ ಮಂತ್ರಿ ಅವರ ಕಾರ್ಯಾಲಯವು ಸೂಚಿಸಿತ್ತು.

ಸಿಇಸಿಯು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ ಹಾಗೂ ಕರ್ನಾಟಕದ ಮುಖ್ಯ ವನ್ಯಜೀವಿ ಪರಿಪಾಲಕರಿಂದ ಈ ಕಾಮಗಾರಿ ಬಗ್ಗೆ ವಿವರಣೆ ಕೇಳಿತ್ತು.

‘ವನ್ಯಧಾಮದಲ್ಲಿ ಪ್ರವಾಸೋದ್ಯಮ ಚಟುವಟಿಕೆ ನಡೆಸಲು ಸುಪ್ರೀಂಕೋರ್ಟ್‌  , ರಾಷ್ಟ್ರೀಯ ವನ್ಯಜೀವಿ ಮಂಡಳಿ, ರಾಜ್ಯ ವನ್ಯಜೀವಿ ಮಂಡಳಿಯ ಅನುಮತಿ ಅತ್ಯಗತ್ಯ. ಈ ಕಾಮಗಾರಿಯಲ್ಲಿ ಅರಣ್ಯ ಭೂಮಿಯನ್ನು ಅರಣ್ಯೇತರ ಚಟುವಟಿಕೆಗೆ ಪರಿವರ್ತನೆ ಮಾಡಲಾಗಿದೆ. ಹಾಗಾಗಿ 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಅಡಿ  ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದ ಅನುಮತಿಯನ್ನೂ ಪಡೆಯಬೇಕಿತ್ತು’ ಎಂಬುದು ಅರ್ಜಿದಾರರ ಅಭಿಪ್ರಾಯ.

‘ಈ ಕಾಮಗಾರಿ ಬಗ್ಗೆ ನಾವು ಚರ್ಚಿಸಿದ್ದೇವೆ.  ಇದು ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಗಮನಕ್ಕೆ ಬಂದಿದೆ. ಆದರೂ, ಸಿಇಸಿ ಸದಸ್ಯರನ್ನು ಸ್ಥಳ ಪರಿಶೀಲನೆಗೆ   ಆಹ್ವಾನಿಸುತ್ತೇವೆ.  ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ನಿಯಮಗಳನ್ನು ಪಾಲಿಸಲಾಗಿದೆಯೇ ಇಲ್ಲವೇ ಎಂಬ ಬಗ್ಗೆ  ಇನ್ನೂ ನಿರ್ಧಾರಕ್ಕೆ ಬಂದಿಲ್ಲ’ ಎಂದು ಸಭೆಯಲ್ಲಿ ಪಾಲ್ಗೊಂಡ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry