ಅತ್ಯಾಚಾರ ಎಸಗಿ ಕಲ್ಲಿನಿಂದ ತಲೆ ಜಜ್ಜಿದ

7

ಅತ್ಯಾಚಾರ ಎಸಗಿ ಕಲ್ಲಿನಿಂದ ತಲೆ ಜಜ್ಜಿದ

Published:
Updated:
ಅತ್ಯಾಚಾರ ಎಸಗಿ ಕಲ್ಲಿನಿಂದ ತಲೆ ಜಜ್ಜಿದ

ಬೆಂಗಳೂರು: ನಾಗವಾರ ಸಮೀಪದ ವೈಯಾಲಿಕಾವಲ್ ಸೊಸೈಟಿ ಪ್ರದೇಶದಲ್ಲಿ ಐದು ವರ್ಷದ ಹಸುಳೆ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಮೋರಿ ಪಕ್ಕ ಬಿಸಾಡಿ ಹೋಗಿದ್ದ ವೀರೇಶ್‌ (24) ಎಂಬ ಕೂಲಿ ಕಾರ್ಮಿಕನನ್ನು ಕೃತ್ಯ ನಡೆದ 12 ತಾಸಿನಲ್ಲೇ ಪೊಲೀಸರು ಸೆರೆ ಹಿಡಿದಿದ್ದಾರೆ.

ಶುಕ್ರವಾರ ರಾತ್ರಿ 2 ಗಂಟೆ ಸುಮಾರಿಗೆ ಬಾಲಕಿ ಮೂತ್ರ ವಿಸರ್ಜನೆ ಮಾಡಲು ಗುಡಿಸಲಿನಿಂದ ಆಚೆ ಬಂದಿದ್ದಳು. ಅದೇ ಸಮಯದಲ್ಲಿ ವೀರೇಶ್ ಸಹ ಬೀ ಡಿ ಸೇದಲು ಹೊರ ಬಂದಿದ್ದ. ಮಾತನಾಡಿಸುವ ನೆಪದಲ್ಲಿ ಹತ್ತಿರ ಹೋದ ಆತ, ಆಕೆಯನ್ನು ಹೊತ್ತುಕೊಂಡು ಸಮೀಪದ ಕಾಲೇಜುವೊಂದರ ವಾಹನ ನಿಲುಗಡೆ ಪ್ರದೇಶಕ್ಕೆ ಕರೆದೊಯ್ದಿದ್ದ ಎಂದು ಪೊಲೀಸರು ಹೇಳಿದರು.

ಅಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ವೀರೇಶ್, ಸುಮ್ಮನೆ ಬಿಟ್ಟರೆ ಪೋಷಕರಿಗೆ ಹೋಗಿ ಹೇಳುತ್ತಾಳೆಂದು ಕಲ್ಲಿನಿಂದ ತಲೆಯನ್ನು ಜಜ್ಜಿದ್ದ. ತೀವ್ರ ರಕ್ತಸ್ರಾವವಾಗಿ ಆಕೆ ಸ್ವಲ್ಪ ಸಮಯದಲ್ಲೇ ಪ್ರಜ್ಞೆ ಕಳೆದುಕೊಂಡಿದ್ದಳು.

ಸತ್ತು ಹೋದಳೆಂದು ಭಾವಿಸಿದ ಆರೋಪಿ, ಆಕೆಯನ್ನು ಪುನಃ ಎತ್ತಿಕೊಂಡು ಬಂದು ಗುಡಿಸಲಿನಿಂದ 500 ಮೀಟರ್ ದೂರದಲ್ಲಿರುವ ಮೋರಿ ಬಳಿ ಎಸೆದಿದ್ದ. ಅಪಘಾತದಿಂದ ಮೃತಪಟ್ಟಿದ್ದಾಳೆ ಎಂದು ಬಿಂಬಿಸುವುದು ಆತನ ಉದ್ದೇಶವಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದರು.

ಬೆಳಕಿಗೆ ಬಂದಿದ್ದು ಹೀಗೆ: ರಾತ್ರಿ 2.45ರ ಸುಮಾರಿಗೆ ಬೈಕ್‌ಗಳಲ್ಲಿ ಬಂದ ನಾಲ್ವರು ಪುಂಡರು, ಆ ಮೋರಿ ಪಕ್ಕದಲ್ಲೇ ನಿಂತಿದ್ದ ಕಾರಿನ ಕಿಟಕಿ ಗಾಜುಗಳನ್ನು  ಒಡೆದು ಹಾಕಿದ್ದರು. ಅವರ ದಾಂದಲೆ ಸದ್ದಿನಿಂದ ಸ್ಥಳೀಯ ವ್ಯಕ್ತಿಯೊಬ್ಬರು ಮನೆಯಿಂದ ಹೊರ ಬಂದಿದ್ದರು. ಅವರನ್ನು ನೋಡುತ್ತಿದ್ದಂತಯೇ ಕಿಡಿಗೇಡಿಗಳು ಪರಾರಿಯಾಗಿದ್ದರು.

ಆ ವ್ಯಕ್ತಿ ಕಾರಿನ ಬಳಿ ಹೋದಾಗ, ಮೋರಿ ಬಳಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಬಾಲಕಿಯನ್ನು ಕಂಡಿದ್ದರು. ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು.

‘ಕರೆ ಬಂದ ಮೂರು ನಿಮಿಷಗಳಲ್ಲೇ ಸ್ಥಳಕ್ಕೆ ಹೋದೆವು. ಬಾಲಕಿಯ ತಲೆಯಿಂದ ರಕ್ತ ಸೋರುತ್ತಿತ್ತು. ಬಲಗೈನ ಉಂಗುರದ ಬೆರಳು ಸಹ ತುಂಡಾಗಿತ್ತು. ತಕ್ಷಣ ಆಕೆಯನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದೆವು. ತಪಾಸಣೆ ನಡೆಸಿದ ವೈದ್ಯರು, ‘ಗುಪ್ತಾಂಗದಲ್ಲಿ ತೀವ್ರ ರಕ್ತಸ್ರಾವವಾಗಿದೆ. ಮಗು ಉಸಿರಾಟದ ತೊಂದರೆಯಿಂದ ಬಳಲುತ್ತಿದೆ. ಯಾರೋ ಅತ್ಯಾಚಾರ ಎಸಗಿದ್ದಾರೆ’ ಎಂದು ಹೇಳಿದರು. ಆ ವಿಷಯವನ್ನು ಡಿಸಿಪಿ ಗಮನಕ್ಕೆ ತಂದೆವು’ ಎಂದು ಹೊಯ್ಸಳ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮಗಳಿಗಾಗಿ ಹುಡುಕಾಟ: ಇತ್ತ 3 ಗಂಟೆ ಸುಮಾರಿಗೆ ಎಚ್ಚರಗೊಂಡ ಸಂತ್ರಸ್ತೆಯ ತಾಯಿ, ಸುತ್ತಮುತ್ತಲ ರಸ್ತೆಗಳಲ್ಲೆಲ್ಲ ಮಗಳಿಗಾಗಿ ಹುಡುಕಾಟ ನಡೆಸಿದ್ದರು. ಆಗ ಆ ಸ್ಥಳೀಯ ವ್ಯಕ್ತಿಯು ‘ಪ್ರಜ್ಞೆ ತಪ್ಪಿ ಬಿದ್ದಿದ್ದ ಮಗುವನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದರು’ ಎಂದು ತಿಳಿಸಿದ್ದರು. ಕೂಡಲೇ ತಾಯಿ ಪತಿಯನ್ನು ಕರೆದುಕೊಂಡು ಅಲ್ಲಿಗೆ ತೆರಳಿದ್ದರು.

‘ಪ್ರತಿದಿನ ರಾತ್ರಿ 2 ಗಂಟೆ ಸುಮಾರಿಗೆ ಮಗಳು ಎದ್ದೇಳುತ್ತಿದ್ದಳು. ಆಗ ಆಕೆಗೆ ಬಿಸ್ಕತ್ ತಿನ್ನಿಸಿ, ಮೂತ್ರ ವಿಸರ್ಜನೆ ಮಾಡಿಸಿ ಮಲಗಿಸುತ್ತಿದ್ದೆ. ಶುಕ್ರವಾರ ಹೆಚ್ಚು ಕೆಲಸ ಇದ್ದಿದ್ದರಿಂದ ನನಗೆ ಮೈ–ಕೈ ನೋವಾಗಿತ್ತು. ಹೀಗಾಗಿ ಗಾಢ ನಿದ್ರೆಗೆ ಜಾರಿದ್ದೆ. ಪತಿ ಕೂಡ ಪಾನಮತ್ತರಾಗಿ ಮಲಗಿದ್ದರು. ಹೀಗಾಗಿ, ರಾತ್ರಿ ಮಗಳು ಎದ್ದಾಗ ನಮಗೆ ಎಚ್ಚರವಾಗಿಲ್ಲ. ಆಕೆ ಒಬ್ಬಳೇ ಗುಡಿಸಲಿನಿಂದ ಆಚೆ ಹೋಗಿರಬಹುದು ಅಥವಾ ಯಾರೋ ಗುಡಿಸಲಿಗೇ ನುಗ್ಗಿ ಆಕೆಯನ್ನು ಹೊತ್ತೊಯ್ದಿರಬಹುದು’ ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾಗಿ ಪೊಲೀಸರು ತಿಳಿಸಿದರು.

ಸಿ.ಸಿ ಟಿ.ವಿ ಕ್ಯಾಮೆರಾ ಸುಳಿವು: ‘ಬಾಲಕಿ ಆ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಹಾಗೂ ನಾಲ್ವರು ಯುವಕರು ಅದೇ ಸ್ಥಳದಿಂದ ಪರಾರಿಯಾಗಿದ್ದರ ಆಧಾರದ ಮೇಲೆ ಆರಂಭದಲ್ಲಿ ಸಾಮೂಹಿಕ ಅತ್ಯಾಚಾರ ಇರಬಹುದೆಂದೇ ಭಾವಿಸಿದ್ದೆವು. ಪ್ರಕರಣ ಭೇದಿಸಲು ಪೂರ್ವ ವಿಭಾಗದ ಡಿಸಿಪಿ ಅಜಯ್ ಹಿಲೋರಿ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಿದ್ದೆವು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಆ ರಸ್ತೆಯಲ್ಲಿದ್ದ 15 ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದೆವು. ಆರೋಪಿ ಬಾಲಕಿಯನ್ನು ಹೊತ್ತೊಯ್ಯುತ್ತಿರುವ ದೃಶ್ಯವು ಕಾಲೇಜು ಕಟ್ಟಡದ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದನ್ನು ಸಂತ್ರಸ್ತೆಯ ತಾಯಿಗೆ ತೋರಿಸಿದಾಗ ‘ಈತ ಪಕ್ಕದ ಗುಡಿಸಲಿನ ವೀರೇಶ್’ ಎಂದು ಹೇಳಿದರು’

‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ), ಅತ್ಯಾಚಾರ (ಐಪಿಸಿ 376), ಕೊಲೆ ಯತ್ನ (ಐಪಿಸಿ 307) ಆರೋಪಗಳಡಿ ವೀರೇಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜತೆಗೆ ಕಾರಿನ ಗಾಜು ಒಡೆದ ಪುಂಡರ ವಿರುದ್ಧವೂ ಪ್ರತ್ಯೇಕ ದೂರು ದಾಖಲಾಗಿದೆ’ ಎಂದು ಮಾಹಿತಿ ನೀಡಿದರು.

ಐಸಿಯುನಲ್ಲಿ ಚಿಕಿತ್ಸೆ: ‘ಬಾಲಕಿ ಬೌರಿಂಗ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಶನಿವಾರ ಮಧ್ಯಾಹ್ನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಆದರೆ, ರಾತ್ರಿ ನಡೆದ ಘಟನೆ ಬಗ್ಗೆ ಆಕೆಗೆ ಅಷ್ಟಾಗಿ ನೆನಪಿಲ್ಲ. ಅಲ್ಲದೆ, ಆಸ್ಪತ್ರೆಗೆ ದಾಖಲಾಗಿರುವ ಕಾರಣ ಆಘಾತದಲ್ಲಿದ್ದಾಳೆ. ಹೀಗಾಗಿ ಹೇಳಿಕೆ ಪಡೆಯುವುದು ಸಾಧ್ಯವಾಗಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪರಿಚಿತ ಆರೋಪಿ

ಸಂತ್ರಸ್ತೆಯು ಚಿತ್ರದುರ್ಗದ ಕಾರ್ಮಿಕ ದಂಪತಿಯ ಮಗಳು. 6 ತಿಂಗಳ ಹಿಂದೆ ನಗರಕ್ಕೆ ಬಂದಿರುವ ಈ ಕುಟುಂಬ, ವೈಯಾಲಿಕಾವಲ್ ಸೊಸೈಟಿ ಪ್ರದೇಶದಲ್ಲಿ ನೆಲೆಸಿದೆ.

ಆರೋಪಿ ಕೂಡ ಮೊಳಕಾಲ್ಮೂರು ತಾಲ್ಲೂಕಿನವನು. ಕೂಲಿ ಕೆಲಸದ ಜತೆಗೆ ಚಿಂದಿಯನ್ನೂ ಆಯುತ್ತಿದ್ದ ಆತ, ಸಂತ್ರಸ್ತೆಯ ತಂದೆಗೆ ಆಪ್ತನಾಗಿದ್ದ. ಮೊದಲು ವೀರಣ್ಣನಪಾಳ್ಯದಲ್ಲಿ ನೆಲೆಸಿದ್ದ ಈತ, ಮೂರು ತಿಂಗಳ ಹಿಂದೆ ಪಕ್ಕದ ಗುಡಿಸಲಿಗೆ ಬಂದಿದ್ದ.

ಸೊಲ್ಯುಷನ್ ಪುಂಡರ ವಿಚಾರಣೆ

‘ಕೆ.ಆರ್.ಪುರ, ಕಾಡುಗೊಂಡನಹಳ್ಳಿ, ಹೆಣ್ಣೂರು, ಬಾಣಸವಾಡಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಪುಂಡರ ಹಾವಳಿ ಹೆಚ್ಚಿದೆ. ಸೊಲ್ಯುಷನ್ ವಾಸನೆಯಿಂದ ಅಮಲು ಏರಿಸಿಕೊಂಡು ರಾತ್ರಿ ವೇಳೆ ವಾಹನಗಳ ಗಾಜುಗಳನ್ನು ಒಡೆಯುತ್ತಾರೆ. ಇಲ್ಲವೇ, ಮನೆ ಮುಂದೆ ನಿಲ್ಲಿಸಿದ ಬೈಕ್‌ಗಳಿಗೆ ಬೆಂಕಿ ಹಚ್ಚು ಹೋಗುತ್ತಾರೆ. ಅಂಥವರನ್ನು ಸಹ ಗುರುತಿಸಿ ವಿಚಾರಣೆ ನಡೆಸಿದ್ದೆವು’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry