ಕಾಂಗ್ರೆಸ್ ಕಿರುಹೊತ್ತಗೆಯಲ್ಲಿದೆ ಜಮ್ಮು ಕಾಶ್ಮೀರವನ್ನು 'ಭಾರತ ಆಕ್ರಮಿತ ಕಾಶ್ಮೀರ' ಎಂದು ತೋರಿಸಿರುವ ಭೂಪಟ!

7

ಕಾಂಗ್ರೆಸ್ ಕಿರುಹೊತ್ತಗೆಯಲ್ಲಿದೆ ಜಮ್ಮು ಕಾಶ್ಮೀರವನ್ನು 'ಭಾರತ ಆಕ್ರಮಿತ ಕಾಶ್ಮೀರ' ಎಂದು ತೋರಿಸಿರುವ ಭೂಪಟ!

Published:
Updated:
ಕಾಂಗ್ರೆಸ್ ಕಿರುಹೊತ್ತಗೆಯಲ್ಲಿದೆ ಜಮ್ಮು ಕಾಶ್ಮೀರವನ್ನು 'ಭಾರತ ಆಕ್ರಮಿತ ಕಾಶ್ಮೀರ' ಎಂದು ತೋರಿಸಿರುವ ಭೂಪಟ!

ಲಖನೌ: ಕಾಂಗ್ರೆಸ್ ಪಕ್ಷದ ಕಿರುಹೊತ್ತಗೆಯಲ್ಲಿ ಪ್ರಕಟವಾಗಿರುವ ಭಾರತದ ಭೂಪಟದಲ್ಲಿ ಜಮ್ಮು ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರ ಎಂದು ತೋರಿಸಿರುವುದು ವಿವಾದ ಸೃಷ್ಟಿಸಿದೆ.

ಕಾಂಗ್ರೆಸ್‍ನ ಹಿರಿಯ ನೇತಾರ ಗುಲಾಂ ನಬಿ ಆಜಾದ್ ಅವರು ಭಾನುವಾರ ಪಕ್ಷದ ಕಿರುಹೊತ್ತಗೆಯನ್ನು ಬಿಡುಗಡೆ ಮಾಡಿದ್ದರು., ಈ ವೇಳೆ ಮಾತನಾಡಿದ ಅವರು, ಮೋದಿ ಸರ್ಕಾರ ಉತ್ತಮ ಆಡಳಿತ ನಡೆಸುವಲ್ಲಿ ಸೋತಿದೆ. ಪಾಕಿಸ್ತಾನ ಮತ್ತು ಚೀನಾದೊಂದಿಗಿನ ಸಂಬಂಧವನ್ನು ನಿಭಾಯಿಸುವಲ್ಲಿಯೂ ಮೋದಿ ಸರ್ಕಾರ ವಿಫಲವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಿರುಹೊತ್ತಗೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಜಮ್ಮು ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರ ಎಂದು ತೋರಿಸುವ ಭೂಪಟ ಪ್ರಕಟವಾಗಿದೆ. ಭೂಪಟದಲ್ಲಿ ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರ ಎಂದು ತೋರಿಸಿರುವುದು ಯಾಕೆ ಎಂದು ಕಾಂಗ್ರೆಸ್‍ ನೇತಾರರನ್ನು ಪ್ರಶ್ನಿಸಿದಾಗ ಅದು ಮುದ್ರಣ ದೋಷ ಎಂಬ ಉತ್ತರ ಸಿಕ್ಕಿದೆ.

ಕ್ಷಮೆ ಕೇಳಿದ ಕಾಂಗ್ರೆಸ್

ಭೂಪಟದಲ್ಲಿ ಪ್ರಮಾದವೆಸಗಿರುವುದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಿದೆ. ಈ ರೀತಿಯ ಭೂಪಟವನ್ನು ನಾವು ಪ್ರಕಟ ಮಾಡಬಾರದಿತ್ತು. ಅದಕ್ಕೆ ನಾವು ಕ್ಷಮೆ ಕೇಳುತ್ತಿದ್ದೇವೆ. ಆದಾಗ್ಯೂ, ಬಿಜೆಪಿ ತಮ್ಮ ವೆಬ್‍ಸೈಟ್‍ನಲ್ಲಿ ಇದೇ ರೀತಿಯ ತಪ್ಪು ಎಸಗಿತ್ತು. ಆದರೆ ಆ ಪಕ್ಷ ಯಾವತ್ತೂ ಕ್ಷಮೆ ಕೇಳಲಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

ಬಿಜೆಪಿ ಟೀಕಾ ಪ್ರಹಾರ

ಕಾಂಗ್ರೆಸ್ ಪಕ್ಷದ 'ಪ್ರಮಾದ'ಕ್ಕೆ ಟೀಕಾ ಪ್ರಹಾರ ನಡೆಸಿರುವ ಬಿಜೆಪಿ, ಕಾಂಗ್ರೆಸ್ ಪಾಕಿಸ್ತಾನಕ್ಕೆ ಬೆಂಬಲ ನೀಡುವುದನ್ನು ನಿಲ್ಲಿಸಲಿ ಎಂದು ಹೇಳಿದೆ.

ಕಾಂಗ್ರೆಸ್‍ನ ಈ ಪ್ರಮಾದ ಖಂಡನಾರ್ಹ. ಕಾಂಗ್ರೆಸ್ ಹಿರಿಯ ನಾಯಕ ಆಜಾದ್ ಅವರು ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರ ಎಂದು ತೋರಿಸಿದ್ದು ಅಚ್ಚರಿ ಮೂಡಿಸಿದೆ. ಕಾಂಗ್ರೆಸ್ ಪಾಕಿಸ್ತಾನದ ಭಾಷೆ ಮಾತನಾಡುತ್ತಿದೆಯೇ?

ಪಾಕ್ ಆಕ್ರಮಿತ ಕಾಶ್ಮೀರವೂ ಭಾರತದ್ದೇ ಎಂದು ಸಂಸತ್ತಿನ ಮಸೂದೆಯಲ್ಲಿ ಹೇಳಿದೆ. ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರ ಎಂದು ತೋರಿಸುವ ಮೂಲಕ ಕಾಂಗ್ರೆಸ್ ಪ್ರತ್ಯೇಕತಾವಾದಿಗಳನ್ನು ಖುಷಿ ಪಡಿಸಿದ್ದಲ್ಲದೆ, ಪಾಕಿಸ್ತಾನದ ಮೇಲಿರುವ ಪ್ರೀತಿಯನ್ನೂ ತೋರಿಸಿದೆ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಟೀಕಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಸಚಿವ ಮತ್ತು ವಕ್ತಾರ ಶ್ರೀಕಾಂತ್ ಶರ್ಮಾ, ಈ ರೀತಿಯ ಭೂಪಟವನ್ನು ಪ್ರಕಟಿಸಿರುವುದು ದೇಶದ್ರೋಹ.ಈ ತಪ್ಪಿಗಾಗಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

ಮುದ್ರಣ ದೋಷ

ಇದೊಂದು ಮುದ್ರಣ ದೋಷ. ಆದರೆ ಕಿರುಹೊತ್ತಗೆಯನ್ನು ಬಿಡುಗಡೆ ಮಾಡುವ ಮುನ್ನ ಅದನ್ನು ಪರಿಶೀಲಿಸ ಬೇಕಾಗಿತ್ತು ಎಂದು ಕಾಂಗ್ರೆಸ್ ನಾಯಕ ಅಜಯ್ ಮಕೇನ್ ಹೇಳಿದ್ದಾರೆ.

ಮಾರ್ಚ್ 28, 2014ರಲ್ಲಿ ಬಿಜೆಪಿ ಇದೇ ರೀತಿಯ ಭೂಪಟವನ್ನು ತಮ್ಮ ವೆಬ್‍ಸೈಟ್‍ನಲ್ಲಿ ಪ್ರಕಟಿಸಿತ್ತು.  ಚೀನಾದೊಂದಿಗೆ ಭಾರತ ಒಡಂಬಡಿಕೆ ಮಾಡಿಕೊಂಡ ಅದೇ ವರ್ಷ, ಅರುಣಾಚಾಲ ಪ್ರದೇಶ ಚೀನಾದ ಭಾಗವಾಗಿ ತೋರಿಸಿರುವ ಭೂಪಟವನ್ನು ಬಿಜೆಪಿ ತಮ್ಮ ವೆಬ್‍ಸೈಟ್‍ನಲ್ಲಿ ಪ್ರಕಟಿಸಿತ್ತು.

ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವ್ಯತ್ಯಾಸ ಏನೆಂದರೆ ನಾವು ತಪ್ಪು ಮಾಡಿದರೆ ಕ್ಷಮೆ ಕೇಳುತ್ತೇವೆ, ಅವರು ತಪ್ಪು ಮಾಡಿದರೂ ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ ಮಕೇನ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry