‘ನಟನೆಗೆ ಜೀರೊ ಸೈಜ್‌ ಬೇಕಿಲ್ಲ’

7

‘ನಟನೆಗೆ ಜೀರೊ ಸೈಜ್‌ ಬೇಕಿಲ್ಲ’

Published:
Updated:
‘ನಟನೆಗೆ ಜೀರೊ ಸೈಜ್‌ ಬೇಕಿಲ್ಲ’

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ನಯನಾ ಶೆಟ್ಟಿ ಅವರು ಬಿಬಿಎಂ ಪದವಿ ಮಾಡುವಾಗಲೇ ರಂಗದ ನಂಟನ್ನು ಹಚ್ಚಿಕೊಂಡವರು. ಪ್ರಯೋಗರಂಗ ತಂಡದ ಮೂಲಕ ಅನೇಕ ನಾಟಕಗಳಿಗೆ ಬಣ್ಣ ಹಚ್ಚಿದರು.

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪಂಚರಂಗಿ ಪೋಂ ಪೋಂ’ ಧಾರಾವಾಹಿಯಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದರು. ಸದ್ಯ ಉದಯ ಟಿ.ವಿ.ಯಲ್ಲಿ ಪ್ರಸಾರವಾಗುವ ‘ಜೋಜೋ ಲಾಲಿ’ ಧಾರಾವಾಹಿಯಲ್ಲಿ ರಾಧಾ ಎಂಬ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ನಯನಾ ಅವರಿಗೆ ಬೆಳ್ಳಿತೆರೆಯಲ್ಲೂ ಮಿಂಚುವ ಕನಸಿದೆಯಂತೆ.

‘ಬಿಬಿಎಂ ಓದುತ್ತಿದ್ದಾಗ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ತಂಡಗಳನ್ನು ಮಾಡಿಕೊಂಡು ನಾಟಕ ಪ್ರದರ್ಶನ ಆಯೋಜಿಸುತ್ತಿದ್ದೆವು. ನಂತರ ಪ್ರಯೋಗರಂಗ ತಂಡದಲ್ಲಿ ಅವಕಾಶ ಸಿಕ್ಕಿತು. ‘ಮಂಟೆಸ್ವಾಮಿ ಕಥಾ ಪ್ರಸಂಗ’, ‘ಶಿವರಾತ್ರಿ’ ನಾಟಕಗಳು ನನಗೆ ಹೆಸರು ತಂದುಕೊಟ್ಟವು. ರಂಗ ಕಲಾವಿದ ದಾನಪ್ಪ ಎಂಬುವರ ಸಹಾಯದಿಂದ ‘ಪಂಚರಂಗಿ ಪೋಂ ಪೋಂ’ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು’ ಎಂದು ಕಿರುತೆರೆಗೆ ಬಂದ ಬಗೆಯನ್ನು ವಿವರಿಸುತ್ತಾರೆ ನಯನಾ.

‘ಜೋ ಜೋ ಲಾಲಿ’ ಧಾರಾವಾಹಿಯಲ್ಲಿ ನಯನಾ ಅವರು ಮಧ್ಯಮ ವರ್ಗದ ಕುಟುಂಬದ ಹೆಣ್ಣು ಮಗಳಾಗಿರುತ್ತಾಳೆ.  ಮಾನಸಿಕ ಅಸ್ವಸ್ಥೆಯಾದ ಅಕ್ಕ, ವಯಸ್ಸಾದ ತಾಯಿ...  ಕುಟುಂಬದ ಜವಾಬ್ದಾರಿ ಇವರ  ಮೇಲಿರುತ್ತದೆ. ಕುಡಿದು ಬರುವ ಅಣ್ಣ ಮತ್ತೊಂದು ಕಡೆ. ‘ರಾಧಾ’  ಸ್ವಾಭಿಮಾನಿಯಾಗಿ ಹೇಗೆ ಕುಟುಂಬವನ್ನು ನಿಭಾಯಿಸುತ್ತಾಳೆ ಎಂಬುದು ಕಥೆ. ಭಾವನಾತ್ಮಕ ಕಥಾ ಹಂದರವುಳ್ಳ ಧಾರಾವಾಹಿಯಿದು.

‘ಕಿರುತೆರೆಯಲ್ಲಿ ಫ್ರೇಮ್‌ಗಾಗಿ ನಟಿಸಬೇಕು, ರಂಗಭೂಮಿಯಲ್ಲಿ ಕೊನೆ ಕುರ್ಚಿಯಲ್ಲಿ ಕುಳಿತಿರುವವರಿಗೂ ಕೇಳಿಸುವಂತೆ ಸಂಭಾಷಣೆಗಳನ್ನು ಹೇಳಬೇಕು. ನಮ್ಮ ಅಭಿನಯವೂ ಕಾಣಬೇಕು. ಎರಡೂ ಕ್ಷೇತ್ರದಲ್ಲೂ ಕಷ್ಟ–ಸುಖಗಳಿವೆ’ ಎನ್ನುತ್ತಾರೆ ನಯನಾ.

ನಿಮ್ಮ ಕೈಹಿಡಿಯುವ ಹುಡುಗ ಹೇಗಿರಬೇಕು ಎಂದು ಪ್ರಶ್ನೆ ಮಾಡಿದರೆ ನಯನಾ ಅವರು ಉತ್ತರಿಸಿದ್ದು ಹೀಗೆ...‘ಅದೆಲ್ಲಾ ಸದ್ಯಕ್ಕಿಲ್ಲ. ಹುಡುಗನನ್ನು ಹುಡುಕುವ ಜವಾಬ್ದಾರಿ ಅಪ್ಪನಿಗೆ ಬಿಟ್ಟಿದ್ದು. ಮನೆಯವರು ನೋಡಿದ, ನನಗೂ ಒಪ್ಪಿಗೆಯಾಗುವ ಹುಡುಗನನ್ನು ಮದುವೆಯಾಗುತ್ತೇನೆ.’

ಬಿಡುವಿನ ವೇಳೆಯಲ್ಲಿ   ಪುಸ್ತಕಗಳನ್ನು ಓದುವ ನಯನಾ ಶೆಟ್ಟಿ ಅವರು, ಟಿ.ವಿಯಲ್ಲಿ ನೃತ್ಯ ಕಾರ್ಯಕ್ರಮ ಹಾಗೂ ಧಾರಾವಾಹಿಗಳನ್ನು ನೋಡುತ್ತಾರೆ. ದಿನ ಒಂದು ಗಂಟೆ ವಾಕಿಂಗ್‌ ಮಾಡುತ್ತಾರೆ. ಮಳೆ ಬಂದ್ರೆ ಮನೆಯಲ್ಲೇ ವರ್ಕೌಟ್‌ ಮೊರೆ ಹೋಗುತ್ತಾರೆ.

ದುಂಡಾಗಿ, ಮುದ್ದಾಗಿ ಕಾಣಬೇಕು: ನಟಿಯರಾದ ಮಾತ್ರಕ್ಕೆ ಬಳ್ಳಿಯಂತೆ ಬಳುಕಬೇಕು. ಜೀರೊ ಸೈಜ್‌ ಆಗಿರಬೇಕು ಎಂಬುದೆಲ್ಲ ಸರಿಯಲ್ಲ. ಪಾತ್ರಕ್ಕೆ ತಕ್ಕಂತೆ ಇರಬೇಕು. ಅನುಷ್ಕಾ ಶೆಟ್ಟಿ ಅವರು ‘ಸೈಜ್‌ ಜೀರೊ’ ಚಿತ್ರಕ್ಕಾಗಿ, ಅಮೀರ್‌ಖಾನ್‌ ‘ದಂಗಲ್‌’ ಸಿನಿಮಾಗಾಗಿ ದಪ್ಪ ಆಗಿರಲಿಲ್ಲವಾ? ನಟಿಯರು ದುಂಡಗೆ, ಮುದ್ದಾಗಿ ಕಾಣುವಂತೆ ಇರಬೇಕು’ ಎಂದು ನಟಿಯರ ಫಿಟ್‌ನೆಸ್‌ ಬಗ್ಗೆ ವ್ಯಾಖ್ಯಾನ ನೀಡುತ್ತಾರೆ ನಯನಾ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry