ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರಿಕ್ಷಕೆ ಬಣ್ಣದ ಕೀಲುಕುದುರೆ

Last Updated 4 ಜೂನ್ 2017, 19:30 IST
ಅಕ್ಷರ ಗಾತ್ರ

ಚಾಮರಾಜನಗರ ಜಿಲ್ಲೆ ಮಲೆಮಾದೇಶ್ವರದಿಂದ ಹಿಡಿದು ಬೆಳಗಾವಿಯ ಸವದತ್ತಿಯವರೆಗೆ ನೂರಾರು ಜಾನಪದ ಪ್ರಕಾರಗಳು ಪ್ರಚಲಿತ. ಅವು ಕೇವಲ ಮನರಂಜನೆಯ ಪ್ರಕಾರಗಳಷ್ಟೇ ಅಲ್ಲ, ಜನರ ಜೀವನದಲ್ಲಿ ಹಾಸುಹೊಕ್ಕಾದ ನಂಬಿಕೆಗಳೂ ಹೌದು. ಇಂಥ ಜಾನಪದ ಕಲೆಗಳಲ್ಲಿ ಕೀಲುಕುದುರೆ ಕುಣಿತವೂ ಒಂದು.

ರಾಜಕುಮಾರನೊಬ್ಬ ಏಳು ಉಪ್ಪರಿಗೆ ಮೇಲೆ ಕಾಯತ್ತಿರುವ ತನ್ನ ಪ್ರೇಯಸಿಯನ್ನು (ರಾಜಕುಮಾರಿ) ಅಂತರಿಕ್ಷಮಾರ್ಗವಾಗಿ ಹಾರಿ ಬಂದು ಭೇಟಿಯಾಗುವುದು ಕೀಲುಕುದುರೆ ಕುಣಿತದ ಒಂದೆಳೆ ಕಥೆ.

ಉದ್ದನೆಯ ಮರಗಾಲು ಧರಿಸಿ ಕುದುರೆಯ ತಲೆ, ಬಾಯಿ, ಬಾಲವನ್ನು ಅಲುಗಾಡಿಸುತ್ತಾ, ಜೀಕುತ್ತಾ ನಾದಸ್ವರ, ಡೋಲು, ತಮಟೆಗಳ ಸಂಗೀತದೊಂದಿಗೆ ಹೊಸಲೋಕವನ್ನೇ ನಿರ್ಮಿಸಿ ಸುತ್ತಲ ಜನ ಸಾಗರಕ್ಕೆ ಮೈನವಿರೇಳಿಸುವ ಪರಿ ಈ ಕುಣಿತದ್ದು.

ರವೀಂದ್ರ ಕಲಾಕ್ಷೇತ್ರ ಪ್ರಾಂಗಣದಲ್ಲಿ ಕೆಲವು ತಿಂಗಳುಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ವೇಷ ಹಾಕಿಕೊಂಡಿದ್ದ ಕೀಲುಕುದುರೆ ಕಲಾವಿದರು ಆಯೋಜಕರಿಗಾಗಿ ಕಾಯುತ್ತಾ ತಾಲೀಮು ಮಾಡುತ್ತಿದ್ದರು. ಈ ದೃಶ್ಯವನ್ನು ಗಮನಿಸಿದಾಗ ತಾಯಿ ಲೋಕೇಶ್ ಅವರಿಗೆ ತಕ್ಷಣ ಫೋಟೊ ತೆಗೆಯಬೇಕು ಎನಿಸಿತು. ಅದರ ಫಲವೇ ಈ ಚಿತ್ರ.

ಕಳೆದ ಎರಡು ವರ್ಷಗಳಿಂದ ಛಾಯಾಗ್ರಹಣದಲ್ಲಿ ತೊಡಗಿಸಿಕೊಂಡಿರುವ ತಾಯಿ ಲೋಕೇಶ್ ವೃತ್ತಿಯಲ್ಲಿ ಚಲನಚಿತ್ರಗಳ ಸಹಾಯಕ ನಿರ್ದೇಶಕರು. ಸ್ಟೇಜ್ ಪರ್ಫಾಮೆನ್ಸ್‌, ರಂಗ ಪ್ರದರ್ಶನಗಳ ಚಿತ್ರ ತೆಗೆಯುವುದು ಅವರ ಆಸಕ್ತಿ.

ಈ ಚಿತ್ರ ತೆಗೆಯಲು ಅವರು ಬಳಸಿದ ಕ್ಯಾಮೆರಾ ಕೆನಾನ್ 5D MARK 2. ಲೆನ್ಸ್ 24-105 ಎಂ.ಎಂ. ಜೂಂನಲ್ಲಿ 24 ಫೋಕಲ್ ಲೆಂಗ್ತ್, ಅಪರ್ಚರ್ f 5.6, ಷಟರ್ ವೇಗ 1/160 ಸೆಕೆಂಡ್, ಐ.ಎಸ್.ಒ 100. ಆಟೊಮೆಟಿಕ್ ವೈಟ್ ಬ್ಯಾಲೆನ್ಸ್.

ಈ ಛಾಯಾಚಿತ್ರದ ತಾಂತ್ರಿಕ ಹಾಗೂ ಕಲಾತ್ಮಕ ವಿಶ್ಲೇಷಣೆ ಇಂತಿದೆ:
*ಹಿತವಾದ ಬೆಳಗಿನ ಸಂದರ್ಭ ಹಾಗೂ ವರ್ಣರಂಜಿತ ವಸ್ತುನಿರೂಪಣೆಯ ಈ ದೃಶ್ಯಕ್ಕಾಗಿ ಬಳಸಿದ ಕ್ಯಾಮೆರಾ, ಜೂಂ ಲೆನ್ಸ್‌ನ ಫೋಕಲ್ ಲೆಂಗ್ತ್, ಎಕ್ಸ್‌ಪೋಶರ್ ಮತ್ತು ವೈಟ್ ಬ್ಯಾಲೆನ್ಸ್ ಸಮರ್ಪಕವಾಗಿವೆ.
*ಬಿಸಿಲಿನ ಝಳ ಪ್ರಖರವಾಗಿರುವುದರಿಂದ, ಜೋಡಿ ಕೀಲುಕುದುರೆ ಕಲಾವಿದರ ಮುಖಭಾವ ಅರ್ಥಪೂರ್ಣವಾಗಿ ಮೂಡಿ ಬಂದಿದೆ.
*ಕುದುರೆಗಳ ಮತ್ತು ವರ್ಣರಂಜಿತ ವಸ್ತ್ರವಿನ್ಯಾಸದ ಮೆರುಗು ಸ್ಫುಟವಾಗಿ ಮೂಡಿದೆ. ಸೂರ್ಯನ ಬೆಳಕಿನ ಓರೆಯಾದ ಕೋನದ ಸಮರ್ಪಕ ಸಂಯೋಜನೆಯಿಂದಾಗಿ ಛಾಯಾಚಿತ್ರ ನೋಡುಗನ ಕಣ್ಣಿಗೆ ಹಿತವಾಗುವಂತೆ ಮೂಡಿ ಬಂದಿದೆ.
*ಹಿನ್ನೆಲೆಯ ಕಟ್ಟಡಗಳೆರಡೂ ಸಂದರ್ಭ ಸೂಚಿಯಾಗಿ ಮಹತ್ವ ಪಡೆದಿವೆ. ಹಿಂಬದಿಯಿಂದ ಹೊರಹೊಮ್ಮಿರುವ  ಮುಂಜಾನೆಯ ಬಿಸಿಲಿನಿಂದಾಗಿ ಅವುಗಳ ಎದುರು ಭಾಗಗಳು ನೆರಳಿನಲ್ಲಿವೆ. ಹೀಗಾಗಿ, ಮುಖ್ಯವಸ್ತುವಾದ ಕೀಲುಕುದುರೆಯ ಜೋಡಿ ಸ್ಫುಟವಾಗಿ ಬೆಳಗಿ ಚೌಕಟ್ಟಿನಲ್ಲಿ ಪ್ರಾಮುಖ್ಯತೆ ಪಡೆದಿದೆ.
*ಇಬ್ಬರು ಪೂಜಾ ಕುಣಿತದ ಕಲಾವಿದರು ಹಿನ್ನೆಲೆಯಲ್ಲಿ ತಮ್ಮ ತಯಾರಿಯಲ್ಲಿ ತೊಡಗಿರುವುದು ಕೂಡ ಚಿತ್ರದ ಚೌಕಟ್ಟಿಗೆ ಜೀವಂತಿಕೆ ನೀಡಿದೆ. ಈ ತಾಂತ್ರಿಕ ವಿವರಗಳು ಹೊಸಬರಿಗೆ ಮಾದರಿಯೂ ಆಗಬಹುದು.
*ಗದ್ದಲದ ಕಲಾಕ್ಷೇತ್ರ ಆವರಣವನ್ನು ಸುಂದರವಾಗಿ ಸೆರೆ ಹಿಡಿಯಲಾಗಿದೆ, ಪೇಂಟಿಂಗ್ ಒಂದರ ಸುಂದರ ಕ್ಯಾನ್ವಾಸ್ ಥರರ ಹಿನ್ನೆಲೆ (ಬ್ಯಾಕ್‌ಗ್ರೌಂಡ್) ನೀಡಿರುವುದು ಮತ್ತು ಅದನ್ನು ಉತ್ತಮವಾಗಿ ಬಳಸಿ, ಮುನ್ನೆಲೆಯ (ಫೋರ್‌ಗ್ರೌಂಡ್)  ಮುಖ್ಯವಸ್ತುವಿನ (ಕೀಲುಕುದುರೆ ಜೋಡಿ) ನಿರೂಪಣೆಗಾಗಿ ಕ್ಯಾಮೆರಾ ಕೋನವನ್ನು ಅರ್ಥಪೂರ್ಣವಾಗಿ ಸಂಯೋಜಿಸಲಾಗಿದೆ (ಆಂಗಲ್ ಆಫ್ ಶೂಟಿಂಗ್).
*ಈ ಬಗೆಯ ಹೊರಾಂಗಣದ ದೃಶ್ಯಗಳಿಗೆ ಸಹಜತೆಯ ಗುಣವಿರುವುದು ಕಲಾತ್ಮಕತೆಗೆ ಸಹಕಾರಿ.
*ಚೌಕಟ್ಟಿನಲ್ಲಿ ಮೂಡುವ ಕಲಾವಿದರಿಗೆ (ಆಬ್ಜೆಕ್ಟ್‌) ಛಾಯಾಗ್ರಾಹಕ ಎದುರು ಇದ್ದಾನೆ ಎಂಬ ಅರಿವು ಇದ್ದಾಗ ಚಿತ್ರಕ್ಕೆ ಸಹಜತೆ ಸಿಗುವುದು ಕಷ್ಟ. ಇಂಥ ಸಂದರ್ಭ ಕೆಲ ಕ್ಷಣಗಳಲ್ಲಿ ಮಾತ್ರ ಕಲಾವಿದರು ಛಾಯಾಗ್ರಾಹಕನ ಅಸ್ತಿತ್ವ ಮರೆತು ತಮ್ಮಪಾಡಿಗೆ ತಾವು ವರ್ತಿಸುತ್ತಾರೆ. ಇದನ್ನೇ ಮಾಂತ್ರಿಕ ಕ್ಷಣ (ಮ್ಯಾಜಿಕ್ ಮೊಮೆಂಟ್) ಎನ್ನುವುದು.
*ಪ್ರೇಮಿಗಳ ಹಾವಭಾವ, ಕಣ್ಣಿನ ದೃಷ್ಟಿ ಸಂಧಿಸುವುದು, ಒಟ್ಟಾರೆ ಪ್ರಭಾವ ಈ ಚೌಕಟ್ಟಿನಲ್ಲಿ (ಕ್ರಿಯೇಟಿವ್ ಕ್ಯಾಂಡಿಡ್ ಶಾಟ್) ಮೂಡಬೇಕು ಎನ್ನುವುದು ಎಲ್ಲ ಛಾಯಾಗ್ರಾಹಕರ ಕನಸು. ಇದು ಸಾದ್ಯವಾಗುವುದು ಅದೃಷ್ಟವೇ ಸರಿ. ಅದರ ಅರಿವು ಛಾಯಾಚಿತ್ರಕಾರರಿಗಿದ್ದರೆ ಮಾತ್ರ ಅಂಥ ಸದವಕಾಶ ಛಾಯಾಗ್ರಾಹಕರಿಗೆ ಸಿಗುತ್ತದೆ.
* ಕಲಾವಿದರನ್ನು ಚೌಕಟ್ಟಿನಲ್ಲಿ ದಾಖಲಿಸಿರುವ ಈ ಚಿತ್ರ ಕೇವಲ ದಾಖಲೆಯ ಶಾಟ್ ಮಾತ್ರವೇ ಆಗಿಲ್ಲ. ನೋಡುಗನ ಕಣ್ಣಿಗೆ ಮತ್ತು ಮನಸ್ಸಿಗೆ ಭಾವದ ಧಾರೆ ಹರಿಸುವ ಚಿತ್ರವಾಗಿ ಶಾಶ್ವತ ಸ್ಥಾನ ಪಡೆದುಕೊಳ್ಳುತ್ತದೆ. ಚಿತ್ರದ ಸಂಯೋಜನೆ ಹೃದಯಕ್ಕೂ ಮುದನೀಡಬಲ್ಲ ಸೃಜನಶೀಲ ಕೃತಿ ಎನಿಸಿಕೊಳ್ಳುತ್ತದೆ.

ಛಾಯಾಗ್ರಾಹಕರು: ತಾಯಿ ಲೋಕೇಶ್
ಇಮೇಲ್: thailokesh@gmail.com
ಮೊಬೈಲ್: 99728 12767
             

- ಕೆ.ಎಸ್.ರಾಜಾರಾಮ್
email: ksrajaram173@gmail.com

(ನೀವೂ ಚಿತ್ರ ಕಳುಹಿಸಿ: ಬೆಂಗಳೂರಿನ ಬದುಕು ಬಿಂಬಿಸುವ ಚಿತ್ರಗಳಿಗೆ ಸ್ವಾಗತ.  ಇಮೇಲ್:  metropv@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT