ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈದ್‌ಗೆ ಬರಲಿದ್ದಾನೆ ‘ಟ್ಯೂಬ್‌ಲೈಟ್’

Last Updated 4 ಜೂನ್ 2017, 19:30 IST
ಅಕ್ಷರ ಗಾತ್ರ

ಸಲ್ಮಾನ್‌ ಖಾನ್‌ ಮುಗ್ಧನಂತೆ ನಟಿಸಿದ ಬಹುತೇಕ ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದಿವೆ. ಈದ್‌ಗೆ ತೆರೆಕಾಣಲು ಸಿದ್ಧತೆ ನಡೆಸಿರುವ ‘ಟ್ಯೂಬ್‌ಲೈಟ್‌’ ಇದೇ ದಾಖಲೆ ಮಾಡಲಿದೆಯೇ? ಹೀಗೊಂದು ಚರ್ಚೆ ಇದೀಗ ಬಾಲಿವುಡ್‌ ಗಲ್ಲಿಗಳಲ್ಲಿ ಆರಂಭಗೊಂಡಿದೆ.

ಯೂಟ್ಯೂಬ್‌ನಲ್ಲಿ 'ಟ್ಯೂಬ್‌ಲೈಟ್‌' ಟ್ರೇಲರ್‌ಗೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿದರೆ ಮುಗ್ಧನ ಭಾವ ಪ್ರಪಂಚ ಮತ್ತೆ ಮೋಡಿ ಮಾಡುವುದು ಖಚಿತ ಎನಿಸದಿರದು. ಚೀನಾ ಜತೆಗಿನ ಯುದ್ಧದಲ್ಲಿ ಕಳೆದುಹೋದ ಸಹೋದರನ ಹುಡುಕಾಟವೇ ಚಿತ್ರದ ಕೇಂದ್ರ. ಕೆಲ ವಿಶ್ಲೇಷಕರು ಈ ಚಿತ್ರವನ್ನು ಈಗಾಗಲೇ ‘ಭಜರಂಗಿ ಭಾಯಿಜಾನ್‌’ಗೆ ಹೋಲಿಸುತ್ತಿದ್ದಾರೆ.

ಈವರೆಗೆ ‘ಟ್ಯೂಬ್‌ಲೈಟ್’ ಚಿತ್ರದ ಮೂರು ಟ್ರೇಲರ್‌ಗಳು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿವೆ. ಲಕ್ಷ್ಮಣ್‌ ಪಾತ್ರಕ್ಕೆ ಜೀವ ತುಂಬಿರುವ ಸಲ್ಮಾನ್ ಅಭಿನಯ ಅಲ್ಲಲ್ಲಿ ನಗೆ ಉಕ್ಕಿಸುತ್ತದೆ. ಯುದ್ಧಕ್ಕೆಂದು ಹೊರಟ ಲಕ್ಷ್ಮಣ್‌ನ ಅಣ್ಣ ಭರತ್‌ (ಸೊಹೈಲ್‌ ಖಾನ್‌) ಏನಾದ ಎಂಬುದು ಈ ಟ್ರೇಲರ್‌ ಹುಟ್ಟುಹಾಕುವ ಕುತೂಹಲ.

ಈ ಚಿತ್ರದಲ್ಲಿ ಅತಿಥಿ ಪಾತ್ರವೊಂದರಲ್ಲಿ ನಟಶಾರುಖ್‌ ಖಾನ್‌ ಕಾಣಿಸಿಕೊಂಡಿದ್ದಾರೆ. ಶಾರುಖ್‌ ಖಾನ್‌ ಹಾಗೂ ಸಲ್ಮಾನ್‌ ಖಾನ್‌ ನಡುವೆ ಸದಾ ಭಿನ್ನಾಭಿಪ್ರಾಯ ಹೊಗೆಯಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಚಿತ್ರವು ಕುತೂಹಲ ಕೆರಳಿಸಿದೆ. ಶಾರುಖ್‌ ಖಾನ್‌ ಜಾದೂಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಚಿತ್ರದಲ್ಲಿ ಶಾರುಖ್‌ ಖಾನ್‌ ಅಭಿನಯದ ಕೆಲ ದೃಶ್ಯಗಳು ಟ್ರೈಲರ್‌ನಲ್ಲಿ ಕಾಣಿಸಿಕೊಂಡಿವೆ. ಆದರೆ ಸಿನಿಮಾದಲ್ಲಿ ಶಾರುಖ್‌ಖಾನ್ ಪಾತ್ರ ಮಾತ್ರ ಇನ್ನೂ ಗುಟ್ಟು.

ಶಾರುಖ್‌ ನಟನೆ ಬಗ್ಗೆ ಸಲ್ಮಾನ್‌ ಖುಷಿಯ ಮಾತುಗಳನ್ನಾಡಿದ್ದು, ‘ನನ್ನ ಚಿತ್ರದಲ್ಲಿ ಶಾರುಖ್‌ ನಟಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಚಿತ್ರದಲ್ಲಿ ಆತನ ಪ್ರವೇಶದಿಂದಾಗಿ ಕತೆಯಲ್ಲಿ ತಿರುವು ಸಿಗುತ್ತದೆ’ ಎಂದು ಹೇಳಿದ್ದಾರೆ. ಅಂದ ಹಾಗೆ ‘ಟ್ಯೂಬ್‌ಲೈಟ್’ ಈ ವರ್ಷದ ಈದ್‌ ವಿಶೇಷ.

ಲೇಹ್‌, ಲಡಾಕ್‌, ಮನಾಲಿ ಸೇರಿದಂತೆ ಹಿಮಾಲಯದ ಅನೇಕ ಮೋಹಕ ದೃಶ್ಯಗಳೊಂದಿಗೆ ಯುದ್ಧದ ಸನ್ನಿವೇಶಗಳೂ ಕಳೆಕಟ್ಟಿವೆ. ಜೂನ್ 25ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಅದು ರಂಜಾನ್ ಈದ್ ಆರಂಭದ ದಿನವೂ ಹೌದು. ಮೇ 25ರಂದು ಅಪ್‌ಲೋಡ್ ಆದ ಟ್ರೇಲರ್‌ಗೆ 1.5 ಕೋಟಿಗೂ ಹೆಚ್ಚು ಹಿಟ್ಸ್‌ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT