ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪರ್ಕ ಕ್ರಾಂತಿಗಾಗಿ ದೈತ್ಯ ಉಪಗ್ರಹಗಳು

ಉಪಗ್ರಹ ಆಧರಿತ, ವೇಗದ ಅಂತರ್ಜಾಲ ಸೇವೆ
Last Updated 4 ಜೂನ್ 2017, 18:49 IST
ಅಕ್ಷರ ಗಾತ್ರ

ದೇಶದ ಸಂಪರ್ಕ ಉಪಗ್ರಹಗಳ ಕ್ಷೇತ್ರದಲ್ಲಿ ಭಾರಿ ಕ್ರಾಂತಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸಿದ್ಧತೆ ನಡೆಸಿದೆ.

ಭಾರಿ ವೇಗದ ಮತ್ತು ಉಪಗ್ರಹ ಆಧರಿತ ಅಂತರ್ಜಾಲ ಸಂಪರ್ಕ ಸೇವೆಯನ್ನು ಆರಂಭಿಸಲು ಎರಡು ದೈತ್ಯ ಉಪಗ್ರಹಗಳನ್ನು ಭೂಸ್ಥಿರ ಕಕ್ಷೆಗೆ ಸೇರಿಸಲು  ಇಸ್ರೊ ಮುಂದಾಗಿದೆ.

ಇದರ ಅಂಗವಾಗಿ ಸೋಮವಾರ ಸಂಜೆ 5.28ಕ್ಕೆ  ಜಿಸ್ಯಾಟ್–19 ಉಪಗ್ರಹವನ್ನು ಹೊತ್ತು, ಭಾರತದ ಅತ್ಯಂತ ದೈತ್ಯ ರಾಕೆಟ್ ಜಿಎಸ್‌ಎಲ್‌ವಿ ಮಾರ್ಕ್ 3 ಬಾಹ್ಯಾಕಾಶದತ್ತ ಜಿಗಿಯಲಿದೆ.

‘ಜಿಸ್ಯಾಟ್–19 ಈವರೆಗಿನ ಭಾರತದ ಅತ್ಯಂತ ದೊಡ್ಡ ಉಪಗ್ರಹವಾಗಿದ್ದು, ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿದ ಹಲವು ತಂತ್ರಜ್ಞಾನ ಮತ್ತು ಉಪಕರಣಗಳನ್ನು ಒಳಗೊಂಡಿದೆ. ಇದರ ಉಡಾವಣೆ ಯಶಸ್ವಿಯಾದರೆ, ಆ ತಂತ್ರಜ್ಞಾನ ಮತ್ತು ಉಪಕರಣಗಳು ಬೇರೆ ಕ್ಷೇತ್ರಗಳ ಬಳಕೆಗೂ ಮುಕ್ತವಾಗಲಿದೆ’ ಎಂದು ಇಸ್ರೊ ಹೇಳಿದೆ.

ದೇಶಿ ತಂತ್ರಜ್ಞಾನಗಳ ಪರೀಕ್ಷೆ

*ಆಪ್ಟಿಕಲ್ ಫೈಬರ್ ಕೇಬಲ್ ಸಂಪರ್ಕ ಇಲ್ಲದ ಪ್ರದೇಶಗಳಿಗೂ  ಅಂತರ್ಜಾಲ, ದೂರವಾಣಿ ಸೇವೆ ಲಭ್ಯವಾಗಲಿದೆ
*ಸಂಪೂರ್ಣ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಲಿಥಿಯಂ ಅಯಾನ್ ಬ್ಯಾಟರಿಗಳನ್ನು ಬಳಸಲಾಗಿದೆ. ಇವು ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸಿದಲ್ಲಿ, ವಿದ್ಯುತ್ ಚಾಲಿತ ವಾಹನಗಳಲ್ಲಿ ಬಳಕೆಗೆ ಈ ತಂತ್ರಜ್ಞಾನ ಮುಕ್ತವಾಗಲಿದೆ
*ಬಾಹ್ಯಾಕಾಶದಲ್ಲಿನ ವಿಕಿರಣಗಳಿಂದ ಮತ್ತು ಬಾಹ್ಯಾಕಾಶ ತ್ಯಾಜಗಳಿಂದ ಉಪಗ್ರಹಗಳಿಗೆ ಆಗುವ ಹಾನಿಯನ್ನು ವಿಶ್ಲೇಷಿಸುವ ‘ಭೂಸ್ಥಿರ ವಿಕಿರಣ ಸ್ಪೆಕ್ಟ್ರೊಮೀಟರ್’ ಇದೆ. ವಿಕಿರಣ ನಿರೋಧಕ ಸಾಮರ್ಥ್ಯವಿರುವಂತೆ ಉಪಗ್ರಹಗಳ ಕವಚವನ್ನು ವಿನ್ಯಾಸ ಮಾಡಲು ನೆರವಾಗಲಿದೆ

ಟ್ರಾನ್ಸ್‌ಪಾಂಡರ್ ಬದಲಿಗೆ ಇನ್ಫ್ರಾರೆಡ್ ಕಿರಣ

ರೇಡಿಯೊ ಸಂಕೇತಗಳನ್ನು ಸ್ವೀಕರಿಸಿ, ಅವನ್ನು ವಿವಿಧ ತರಂಗಾಂತರಗಳಲ್ಲಿ ರವಾನಿಸುವ ಕೆಲಸವನ್ನು ಮಾಡುವ ಟ್ರಾನ್ಸ್‌ಪಾಂಡರ್‌ಗಳು ಈ ಉಪಗ್ರಹಗಳಲ್ಲಿ ಇಲ್ಲ. ಇದರ ಬದಲಿಗೆ ದತ್ತಾಂಶಗಳನ್ನು ಇನ್ಫ್ರಾರೆಡ್ ಕಿರಣಗಳ ಮೂಲಕ ರವಾನಿಸುವ ತಂತ್ರಜ್ಞಾನವನ್ನು (ಟಿ.ವಿ ಮತ್ತು ಅದರ ರಿಮೋಟ್‌ ನಡುವೆ ಸಂವಹನಕ್ಕೆ ಬಳಸುವಂತದ್ದೇ ತಂತ್ರಜ್ಞಾನ) ಬಳಸಲಾಗಿದೆ. ಭಾರತದ ಮಟ್ಟಿಗೆ ಇದು ಮೊದಲನೇ ಪ್ರಯೋಗ. ಈ ಕಿರಣಗಳು ಟ್ರಾನ್ಸ್‌ಪಾಂಡರ್‌ಗಳಿಗಿಂತ ತೀರಾ ವೇಗವಾಗಿ ದತ್ತಾಂಶಗಳನ್ನು ರವಾನಿಸುತ್ತವೆ. ಜತೆಗೆ, ಟ್ರಾನ್ಸ್‌ಪಾಂಡರ್‌ಗಳಂತೆಯೇ ವಿವಿಧ ತರಂಗಾಂತರಗಳ ಕಿರಣಗಳನ್ನು ಹೊಮ್ಮಿಸುವ ಸಾಮರ್ಥ್ಯ ಈ ಉಪಗ್ರಹಗಳಲ್ಲಿ ಇದೆ.

ಜಿಸ್ಯಾಟ್–19

3,136 ಕೆ.ಜಿ  ತೂಕ

8 ವಿಧದ ತರಂಗಾಂತರಗಳ ಇನ್ಫ್ರಾರೆಡ್ ಕಿರಣಗಳನ್ನು ಹೊಮ್ಮಿಸುವ ಸಾಮರ್ಥ್ಯ

4 ಗಿಗಾಬೈಟ್ (ಪ್ರತಿ ಸೆಕೆಂಡ್‌ಗೆ) ದತ್ತಾಂಶ ರವಾನೆ ಸಾಮರ್ಥ್ಯ

ಜಿಸ್ಯಾಟ್–11

5,800 ಕೆ.ಜಿ  ತೂಕ

32 ವಿಧದ ತರಂಗಾಂತರಗಳ ಇನ್ಫ್ರಾರೆಡ್ ಕಿರಣಗಳನ್ನು ಹೊಮ್ಮಿಸುವ ಸಾಮರ್ಥ್ಯ

14 ಗಿಗಾಬೈಟ್ (ಪ್ರತಿ ಸೆಕೆಂಡ್‌ಗೆ) ದತ್ತಾಂಶ ರವಾನೆ ಸಾಮರ್ಥ್ಯ

2018ರ ಜನವರಿಯಲ್ಲಿ ಏರಿಯಾನ್–5 ರಾಕೆಟ್‌ ಮೂಲಕ ಉಡಾವಣೆ

* ಜಿಸ್ಯಾಟ್–19  ಟ್ರೇಲರ್ ಮಾತ್ರ. ನಿಜವಾದ ಚಲನಚಿತ್ರ ಬಿಡುಗಡೆಯಾಗುವುದು ಜಿಸ್ಯಾಟ್–11ರ ಉಡಾವಣೆ ನಂತರ

-ತಪನ್ ಮಿಶ್ರಾ , ನಿರ್ದೇಶಕ, ಸ್ಪೇಸ್ ಅಪ್ಲಿಕೇಷನ್ಸ್ ಸೆಂಟರ್, ಅಹಮದಾಬಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT