ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತು ಸಾವಿರ ಶಾಲೆಗಳಿಗೆ ಬೀಗ ಹಾಕಿದ ಸರ್ಕಾರ!

2 ವರ್ಷಗಳಲ್ಲಿ 10,000 ಕಾನ್ವೆಂಟ್‌ಗಳು ಸಕ್ರಮ
Last Updated 4 ಜೂನ್ 2017, 20:39 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ 10,560 ಸರ್ಕಾರಿ ಶಾಲೆಗಳು ಮುಚ್ಚಿವೆ. ಆದರೆ, ಎರಡು ವರ್ಷಗಳ ಅವಧಿಯಲ್ಲೇ 10 ಸಾವಿರ ಕಾನ್ವೆಂಟ್‌ಗಳು ಸರ್ಕಾರದಿಂದ ಸಕ್ರಮಗೊಂಡು ತಲೆ ಎತ್ತಿ ನಿಂತಿವೆ!

ಅಸ್ತಿತ್ವ ಉಳಿಸಿಕೊಂಡಿರುವ ಸರ್ಕಾರಿ ಶಾಲೆಗಳೂ ಮೂಲಸೌಲಭ್ಯ ಕೊರತೆಯಿಂದ ನಲುಗುತ್ತಿವೆ. ದಾಖಲೆ ಪ್ರಕಾರ ಈ ಶಾಲೆಗಳಲ್ಲಿ ಶೌಚಾಲಯಗಳಿದ್ದರೂ ಶೇ 90ರಷ್ಟು ಉಪಯೋಗಕ್ಕೆ ಬಾರದಂತಾಗಿವೆ. ಶೇ60ರಷ್ಟು ಶಾಲೆಗಳಲ್ಲಿ ಕುಡಿಯುವ ನೀರೇ ಇಲ್ಲ. ಆಟದ  ಮೈದಾನಗಳಿದ್ದರೂ ಶೇ 40ರಷ್ಟು ಶಾಲೆಗಳಲ್ಲಿ ಕ್ರೀಡಾ ಸಾಮಗ್ರಿಗಳಿಲ್ಲ. ಬಹಳಷ್ಟು ಕಟ್ಟಡಗಳು ಕುಸಿದು ಬೀಳುವ ಸ್ಥಿತಿಯಲ್ಲಿವೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸಿದ ‘ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ’ಯ ಅಧ್ಯಯನ ವರದಿಯಲ್ಲಿ ಈ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. ಸದ್ಯದಲ್ಲೇ ಈ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ. ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು, ಮಕ್ಕಳ ಕೊರತೆ ಇರುವ ಶಾಲೆಗಳನ್ನು ಸಮೀಪದ ಶಾಲೆಗಳ ಜೊತೆ ವಿಲೀನಗೊಳಿಸಿರುವುದು ಹಾಗೂ ಎಗ್ಗಿಲ್ಲದೆ ತಲೆ ಎತ್ತುತ್ತಿರುವ ಕಾನ್ವೆಂಟ್‌ಗಳು ಸರ್ಕಾರಿ ಶಾಲೆಗಳು ಮುಚ್ಚಲು ಪ್ರಮುಖ ಕಾರಣ. ಪೂರ್ವ ಪ್ರಾಥಮಿಕ ತರಗತಿ (ಎಲ್‌ಕೆಜಿ, ಯುಕೆಜಿ ಮಾದರಿಯಲ್ಲಿ) ಆರಂಭಿಸಿದರೆ ಮಾತ್ರ ಕಣ್ಣುಮುಚ್ಚುವ ಹಾದಿಯಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಸಾಧ್ಯ. ಹೀಗಾಗಿ. ಈ ನಿಟ್ಟಿನಲ್ಲಿ ತಕ್ಷಣವೇ ನೀತಿ ರೂಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಮಿತಿ ಶಿಫಾರಸು ಮಾಡಲಿದೆ. ಸರ್ಕಾರಿ ಶಾಲೆಗಳಲ್ಲಿ ಸಮವಸ್ತ್ರ, ಪಠ್ಯಪುಸ್ತಕ, ಶೂ –ಸಾಕ್ಸ್‌, ಸೈಕಲ್‌, ಬಿಸಿಯೂಟ ಉಚಿತವಾಗಿ ನೀಡಿದರೂ ಮಕ್ಕಳು ಖಾಸಗಿ ಶಾಲೆಗಳ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಅಂಗನವಾಡಿಯಿಂದ ಹೊರಬರುವ ಮಕ್ಕಳು, ಎರಡು ವರ್ಷ ಅನಿವಾರ್ಯವಾಗಿ ಪೂರ್ವ ಪ್ರಾಥಮಿಕ ತರಗತಿಗೆ ಆಂಗ್ಲ ಮಾಧ್ಯಮ ಶಾಲೆಗೆ ಹೋಗುತ್ತಾರೆ. ಮತ್ತೆ ಈ ಮಕ್ಕಳು ಸರ್ಕಾರಿ ಶಾಲೆಗಳ ಕಡೆಗೆ ಬರುವುದಿಲ್ಲ ಎಂದೂ ಸಮಿತಿ ಬೊಟ್ಟು ಮಾಡಿದೆ.

ಮಂಜೂರಾದ ಶಿಕ್ಷಕರ ಹುದ್ದೆಗಳಲ್ಲಿ ಶೇ 40ರಷ್ಟು ಖಾಲಿ ಇದೆ. ಅತಿಥಿ ಶಿಕ್ಷಕರು ನೇಮಕಗೊಳ್ಳುವಷ್ಟರಲ್ಲಿ ಸೆಪ್ಟೆಂಬರ್‌– ನವೆಂಬರ್‌ ಆಗುತ್ತದೆ. ಶಿಕ್ಷಕ ಕೊರತೆ ಮಕ್ಕಳು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಲು ಕಾರಣವಾಗುತ್ತಿದೆ  ಎಂದೂ ಸಮಿತಿ ಅಭಿಪ್ರಾಯಪಟ್ಟಿದೆ.
ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು ಇರುವ ನಿಬಂಧನೆಗಳನ್ನು ಪರಿಗಣಿಸದೇ ಶಿಕ್ಷಣ ಇಲಾಖೆ ಅನುಮತಿ ನೀಡುತ್ತಿದೆ. ಹೀಗೆ ತಲೆ ಎತ್ತುತ್ತಿರುವ ಆಂಗ್ಲ ಮಾಧ್ಯಮ ಶಾಲೆಗಳು ಅಕ್ಕಪಕ್ಕದ ಸರ್ಕಾರಿ ಶಾಲೆಗಳ ಪಾಲಿಗೆ ಮರಣಶಾಸನವಾಗುತ್ತಿವೆ ಎಂದೂ ಹೇಳಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಖಾಸಗಿ ಶಾಲೆಗಳಲ್ಲಿನ ಸೀಟುಗಳ ಹಂಚಿಕೆ ಮತ್ತು ಅವುಗಳಿಗೆ ಹಣ ಪಾವತಿಸುವುದರಲ್ಲೇ ಮಗ್ನರಾಗುತ್ತಾರೆ. ಸರ್ಕಾರಿ ಶಾಲೆಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಅವರು ಚಿಂತಿಸುವುದೇ ಇಲ್ಲ. ಆರ್‌ಟಿಇ ಅಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದ ಒಂದು ಲಕ್ಷ ವಿದ್ಯಾರ್ಥಿಗಳಿಗೆ 2015–16ರಲ್ಲಿ ಸರ್ಕಾರ ₹ 300 ಕೋಟಿ ವೆಚ್ಚ ಮಾಡಿದೆ. ಖಾಸಗಿ ಶಾಲೆಗಳು ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಅಡಿ ಉಚಿತವಾಗಿ ಸೀಟು ನೀಡುವಂತೆ ನಿಯಮ ರೂಪಿಸಬೇಕು. ಸರ್ಕಾರದ ಹಣವನ್ನು ಸರ್ಕಾರಿ ಶಾಲೆಗಳ ಉದ್ದಾರಕ್ಕೆ ಖರ್ಚು ಮಾಡಬೇಕು ಎಂಬ ವಾದವನ್ನೂ ಸಮಿತಿ ವರದಿಯಲ್ಲಿ ಮಂಡಿಸಲಿದೆ.

2015ರ ಶಿಕ್ಷಣ ಕಾಯ್ದೆ ಪ್ರಕಾರ ಸಿಬಿಎಸ್‌ಇ, ಐಸಿಎಸ್ಇ ಶಾಲೆಗಳಲ್ಲೂ ಒಂದು ಭಾಷೆಯಾಗಿ ಕನ್ನಡ ಕಲಿಸಬೇಕು. ಕೇರಳ ಸರ್ಕಾರ ಸುಗ್ರೀವಾಜ್ಞೆ ಮೂಲಕ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಒಂದು ಭಾಷೆಯಾಗಿ ಮಲಯಾಳ  ಕಡ್ಡಾಯಗೊಳಿಸಿದೆ. ರಾಜ್ಯದಲ್ಲಿ ಆ ಇಚ್ಛಾಶಕ್ತಿಯೇ ಇಲ್ಲ ಎಂದೂ ಸಮಿತಿ ಕಳವಳ ವ್ಯಕ್ತಪಡಿಸಿದೆ.

ಮಾರಕ ಮತ್ತು ಪೂರಕ!
ದಕ್ಷಿಣ ಕನ್ನಡದಲ್ಲಿ 19 ಮತ್ತು ಉಡುಪಿಯಲ್ಲಿ 14 ಸರ್ಕಾರಿ ಶಾಲೆಗಳಲ್ಲಿ ಖಾಸಗಿಯವರು ಕೊಠಡಿಗಳನ್ನು ಅನಧಿಕೃತವಾಗಿ ನಿರ್ಮಿಸಿಕೊಂಡು ಆಂಗ್ಲ ಮಾಧ್ಯಮದ ಪೂರ್ವ ಪ್ರಾಥಮಿಕ ತರಗತಿಗಳನ್ನು ನಡೆಸುತ್ತಿದ್ದಾರೆ. ಇದು ಸರ್ಕಾರಿ ಶಾಲೆಗಳ ಅಸ್ತಿತ್ವಕ್ಕೆ ಮಾರಕವಾಗಿದೆ.

ಆದರೆ, ತುಮಕೂರು, ಚಿತ್ರದುರ್ಗ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ‘ಚಿಣ್ಣರ ಅಂಗಳ’, ‘ಚಿಣ್ಣರ ಮನೆ’ ಹೆಸರಿನಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ನಡೆಯುತ್ತಿದೆ. ಇದು ಪೂರಕವಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಸಮಿತಿಯ ಪ್ರಮುಖ ಶಿಫಾರಸುಗಳು

*ಅಧಿಕೃತವಾಗಿ ಪೂರ್ವ ಪ್ರಾಥಮಿಕ ತರಗತಿ ಆರಂಭಿಸಬೇಕು
*ಮೂಲಸೌಲಭ್ಯ ಒದಗಿಸಲು ತುರ್ತುಕ್ರಮ
*ಮಂಜೂರಾದ ಶಿಕ್ಷಕರ ಹುದ್ದೆ ಭರ್ತಿ
*ಒಂದು ಭಾಷೆಯಾಗಿ ಕನ್ನಡ ಕಲಿಕೆ ಕಡ್ಡಾಯ
*ಆರ್‌ಟಿಇ ವೆಚ್ಚ ಕನ್ನಡ ಶಾಲೆಗಳ ಅಭಿವೃದ್ಧಿಗೆ ಬಳಕೆ
*ಸಾರ್ವಜನಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯಲ್ಲಿ ಆರ್‌ಟಿಇ ಸೀಟು

ಸಮಿತಿಯಲ್ಲಿದ್ದವರು
ಅಧ್ಯಕ್ಷ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್‌.ಜಿ. ಸಿದ್ದರಾಮಯ್ಯ
ಸದಸ್ಯರು: ಚಂದ್ರಶೇಖರ ದಾಮ್ಲೆ, ಪ. ಮಲ್ಲೇಶ, ಗಂಗಾಧರ ಕುಷ್ಟಗಿ, ಬಾನು ಮುಷ್ತಾಕ್
ವಿಶೇಷ ತಜ್ಞರು: ಡಾ. ವಿ.ಪಿ. ನಿರಂಜನ ಆರಾಧ್ಯ ಮತ್ತು ಟಿ.ಎಂ. ಕುಮಾರ್
ಸದಸ್ಯ ಕಾರ್ಯದರ್ಶಿ: ಪ್ರಾಧಿಕಾರದ ಕಾರ್ಯದರ್ಶಿ ಕೆ. ಮುರುಳೀಧರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT