‘ಗೆಲ್ಲುವ ಶಾಸಕರಿಗಷ್ಟೇ ಟಿಕೆಟ್’

7

‘ಗೆಲ್ಲುವ ಶಾಸಕರಿಗಷ್ಟೇ ಟಿಕೆಟ್’

Published:
Updated:
‘ಗೆಲ್ಲುವ ಶಾಸಕರಿಗಷ್ಟೇ ಟಿಕೆಟ್’

ಬೆಂಗಳೂರು: ‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಶಕ್ತಿ ಇರುವ ಹಾಲಿ ಶಾಸಕರಿಗೆ ಮಾತ್ರ ಹೈಕಮಾಂಡ್ ಟಿಕೆಟ್‌ ನೀಡಲಿದೆ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಜಿ. ಪರಮೇಶ್ವರ್ ತಿಳಿಸಿದರು.

ಪ್ರೆಸ್‌ಕ್ಲಬ್‌ ಮತ್ತು ವರದಿಗಾರರ ಕೂಟ ಭಾನುವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘124 ಶಾಸಕರ ಕ್ಷೇತ್ರದಲ್ಲಿ   ಆಂತರಿಕ ಸಮೀಕ್ಷೆ ನಡೆಸಿ ವಿಶ್ಲೇಷಣೆ ಮಾಡಲಾಗುವುದು. ಎಲ್ಲ ಶಾಸಕರಿಗೂ ಟಿಕೆಟ್‌ ನೀಡಿ ಎಂದು ಕೆಪಿಸಿಸಿ ಶಿಫಾರಸು ಮಾಡಿದರೂ ಗೆದ್ದುಬರುವ ಅಭ್ಯರ್ಥಿಗಳಿಗಷ್ಟೇ ಟಿಕೆಟ್‌ ನೀಡುವ ತೀರ್ಮಾನವನ್ನು ಹೈಕಮಾಂಡ್‌ ಕೈಗೊಳ್ಳಲಿದೆ’ ಎಂದರು.

ಕೆಪಿಸಿಸಿ ಅಧ್ಯಕ್ಷರೇ ಸಿ.ಎಂ ಆಗುವುದು ವಾಡಿಕೆ: ‘ಕೆಪಿಸಿಸಿ ಅಧ್ಯಕ್ಷರಾದವರೇ ಚುನಾವಣೆ  ಬಳಿಕ ಮುಖ್ಯಮಂತ್ರಿಯಾಗುವುದು ವಾಡಿಕೆ. ಮುಖ್ಯಮಂತ್ರಿ ಸ್ಥಾನ ಸಿಗುತ್ತದೆ ಎಂದಾದರೆ ಯಾರು ಬೇಡ ಎನ್ನುತ್ತಾರೆ’ ಎಂದು ಪ್ರಶ್ನಿಸುವ ಮೂಲಕ ಮುಂದಿನ ಬಾರಿ ತಾವೂ ಕೂಡ ಮುಖ್ಯಮಂತ್ರಿ ಹುದ್ದೆಯ  ಆಕಾಂಕ್ಷಿ ಎಂಬ ಸುಳಿವು ನೀಡಿದರು.

‘2013ರ ಚುನಾವಣೆಯಲ್ಲಿ ಯಾರೂ ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರಲಿಲ್ಲ. ಆದರೆ, ಜನ ನನ್ನನ್ನು ತಿರಸ್ಕರಿಸಿದರು. ಅಲ್ಲಿಗೆ ಅದು ಮುಕ್ತಾಯ ಆಯಿತು. ಪಕ್ಷದ ಅಧ್ಯಕ್ಷನಾಗಿರುವ ಕಾರಣ  ಕೆಲವು ಚೌಕಟ್ಟುಗಳಿವೆ. ಅದನ್ನು ಮೀರಿ ಮಾತನಾಡಲಾರೆ  ಎಂದೂ ಹೇಳಿದರು. 

‘ದಲಿತ ಮುಖ್ಯಮಂತ್ರಿ ವಿಷಯದಲ್ಲಿ ನನ್ನಿಂದ ಗೊಂದಲ ಆಗಿಲ್ಲ.  ನಾನು ಅರ್ಜಿ ಹಾಕಿ ದಲಿತ ಸಮುದಾಯದಲ್ಲಿ ಹುಟ್ಟಿಲ್ಲ. ದಲಿತರಿಗೂ ಒಮ್ಮೆ ಅವಕಾಶ ಸಿಗಬೇಕು ಎಂಬುದು ಆ ಸಮುದಾಯದವರಿಗೆ ಮಾತ್ರವಲ್ಲ, ಬೇರೆಯವರಿಗೂ ಆಸೆ ಇದೆ. ಆದರೆ, ಈ ಚರ್ಚೆ ಈಗ ಅಪ್ರಸ್ತುತ’ ಎಂದು ಹೇಳಿದರು.

‘ಪಕ್ಷ ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯ  ಅವರೇ ಮುಂದುವರಿಯಲಿ ಎಂದು ಶಾಸಕಾಂಗ ಪಕ್ಷದ ಸಭೆ ತೀರ್ಮಾನಿಸಿದರೆ ಅದನ್ನು ಒಪ್ಪಲೇಬೇಕು. ಇದಕ್ಕೆ  ನನ್ನ ಅಭ್ಯಂತರವೂ ಇರುವುದಿಲ್ಲ. ಅದನ್ನೇ ಅವರೂ ಆಗಾಗ ಹೇಳುತ್ತಿದ್ದಾರೆ’ ಎಂದರು.

* ಜೆಡಿಎಸ್‌ ಜೊತೆ ಹೊಂದಾಣಿಕೆ ವಿಷಯ ಈಗ ಅಪ್ರಸ್ತುತ. ನಮ್ಮ ಗುರಿ 113 ಸಂಖ್ಯೆಯನ್ನು ದಾಟುವುದಾಗಿದೆ.  ಆ ಯಶಸ್ಸನ್ನು ಸಾಧಿಸುವ ವಿಶ್ವಾಸವೂ ಇದೆ.

-ಜಿ. ಪರಮೇಶ್ವರ್ , ಕೆಪಿಸಿಸಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry