ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಗಿ ಅಧಿಕಾರಿಗಳ ‘ಪರ್ಜನ್ಯ ಜಪ’

ತಾಯಿಯ ಪೂಜೆ ಮೌಢ್ಯವೇ: ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಪ್ರಶ್ನೆ
Last Updated 4 ಜೂನ್ 2017, 19:30 IST
ಅಕ್ಷರ ಗಾತ್ರ

ಮಡಿಕೇರಿ: ಉತ್ತಮ ಮುಂಗಾರು ಮಳೆಗೆ ಪ್ರಾರ್ಥಿಸಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕಾವೇರಿ ನದಿಯ ಉಗಮ ಸ್ಥಳವಾದ ತಲಕಾವೇರಿಯಲ್ಲಿ ಭಾನುವಾರ ಪರ್ಜನ್ಯ ಜಪ ನಡೆಸಿದರು.

ತೀವ್ರ ವಿರೋಧದಿಂದ ಸರ್ಕಾರದ ಅನುದಾನದಲ್ಲಿ ನಡೆಸಲು ಉದ್ದೇಶಿಸಿದ್ದ ಪರ್ಜನ್ಯ ಹೋಮ ಕೈಬಿಟ್ಟು ಜಪ ಹಾಗೂ ವಿಶೇಷ ಪೂಜೆಯನ್ನಷ್ಟೇ ನಡೆಸಲಾಯಿತು. ಬೆಳಿಗ್ಗೆ 8ಕ್ಕೆ ಅರ್ಚಕ ಪ್ರಶಾಂತ್‌ ಆಚಾರ್‌ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಬಸವರಾಜ್ ದಂಪತಿ ಸಮೇತ ಹಾಜರಿದ್ದರು. ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಮಾತ್ರ ಜಪದಲ್ಲಿ ಪಾಲ್ಗೊಂಡಿರಲಿಲ್ಲ.

ಬಾಗಿನ ಅರ್ಪಣೆ: ಮಧ್ಯಾಹ್ನ 3ಕ್ಕೆ ಪ್ರತ್ಯೇಕವಾಗಿ ಭಾಗಮಂಡಲಕ್ಕೆ ಆಗಮಿಸಿದ ಸಚಿವ ಪಾಟೀಲ, ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ತ್ರಿವೇಣಿ ಸಂಗಮದಲ್ಲಿ ಬಾಗಿನ ಸಲ್ಲಿಸಿದರು. ಬಳಿಕ ಭಂಗಡೇಶ್ವರ ದೇವಸ್ಥಾನ ಹಾಗೂ ತಲಕಾವೇರಿಯಲ್ಲಿ ಪೂಜೆ ನೆರವೇರಿಸಿ, ವರುಣನ ಕೃಪೆಗೆ ಪ್ರಾರ್ಥಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪಾಟೀಲ, ‘ತಾಯಿಯ ಪೂಜೆಯನ್ನೇ ಮೌಢ್ಯ, ತಪ್ಪು ಎನ್ನುವುದಾದರೆ ಇಂತಹ ಪೂಜೆಯನ್ನು ಲಕ್ಷ ಬಾರಿ ಬೇಕಾದರೂ ಮಾಡುತ್ತೇನೆ. ಕೆಲವರು ಜೀವವಿಲ್ಲದ ಕಲ್ಲನ್ನೇ ಪೂಜಿಸುತ್ತಾರೆ. ಕೋಟ್ಯಂತರ ಜನರಿಗೆ ಆಧಾರವಾಗಿರುವ ಕಾವೇರಿಗೆ ಪೂಜೆ ಸಲ್ಲಿಸುವುದಕ್ಕೆ ಏಕೆ ವಿರೋಧ’ ಎಂದು ಪ್ರಶ್ನಿಸಿದರು.

ಸರ್ಕಾರದ ಅನುದಾನದಲ್ಲಿ ಹೋಮ ನಡೆಸಲಾಗುತ್ತಿದೆ ಎಂಬ ವಿರೋಧ ವ್ಯಕ್ತವಾದ ಬಳಿಕ ನಾನು ಹಾಗೂ ನನ್ನ ಸ್ನೇಹಿತರೇ ಪೂಜೆ ಸಲ್ಲಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಶಾಸಕ ನರೇಂದ್ರಸ್ವಾಮಿ, ಸಚಿವರ ಪತ್ನಿ ಆಶಾ ಪಾಟೀಲ, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಅಧಿಕಾರಿಗಳಾದ ಗುರುಪಾದಸ್ವಾಮಿ, ಮಂಜುನಾಥ್‌, ರಂಗಸ್ವಾಮಿ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಸ್‌.ತಮ್ಮಯ್ಯ, ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಹಾಜರಿದ್ದರು.

ತಲಕಾವೇರಿಯಲ್ಲಿ ಮಳೆ: ಪೂಜೆಗೆ ಅಡ್ಡಿ
ಕಾಕತಾಳೀಯವಾಗಿ ಬಾಗಿನ ಅರ್ಪಿಸಿದ ಬಳಿಕ ಭಾಗಮಂಡಲ, ತಲಕಾವೇರಿಯಲ್ಲಿ ಸಂಜೆ ಮಳೆ ಸುರಿಯಿತು. ಸಚಿವರು ಹಾಗೂ ಸ್ವಾಮೀಜಿಗೆ ತಲಕಾವೇರಿಗೆ ತೆರಳಲೂ ಸಾಧ್ಯವಾಗಲಿಲ್ಲ. ಮಳೆಯ ಅಬ್ಬರ ಕಡಿಮೆಯಾದ ಬಳಿಕವಷ್ಟೇ ತೆರಳಿದರು.

* ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರ್ಜನ್ಯ ಹೋಮ, ಜಪದಲ್ಲಿ ನಂಬಿಕೆಯಿಲ್ಲ; ಮೌಢ್ಯ ಎನ್ನುತ್ತಾರೆ. ಆದರೆ, ಅವರ ಪತ್ನಿ ಸಾಕಷ್ಟು ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಿಲ್ಲವೇ?

-ಎಂ.ಬಿ. ಪಾಟೀಲ, ಜಲಸಂಪನ್ಮೂಲ ಸಚಿವ

‘ಪರ್ಜನ್ಯ ಹೋಮಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ’

ಮೈಸೂರು: ಮುಂಗಾರು ಮಳೆಗೆ ಪ್ರಾರ್ಥಿಸಿ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ನಡೆಯುತ್ತಿರುವ ಪರ್ಜನ್ಯ ಹೋಮಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಸ್ಪಷ್ಟನೆ ನೀಡಿದರು.

ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರು ವೈಯಕ್ತಿಕವಾಗಿ ಪೂಜೆ ಮಾಡುತ್ತಿದ್ದಾರೆ.  ನನಗೆ ಪ್ರಕೃತಿ ಮೇಲೆ ನಂಬಿಕೆ ಇದೆ. ಹೋಮ–ಪೂಜೆಗಳ ಮೇಲೆ ಅಲ್ಲ. ಎರಡು ವರ್ಷ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿ ರಾಜ್ಯವನ್ನು ಸಂಕಷ್ಟಕ್ಕೆ ದೂಡಿದೆ. ಈ ಬಾರಿ ಮುಂಗಾರು ಮಳೆ ಉತ್ತಮವಾಗಿ ಸುರಿಯುವ ನಿರೀಕ್ಷೆ ಇದೆ. ಇದು ಹುಸಿಯಾಗುವುದಿಲ್ಲ ಎಂಬುದು ನನ್ನ ನಂಬಿಕೆ ಎಂದು ಸುದ್ದಿಗಾರರಿಗೆ ಭಾನುವಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT